ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಕ್ರಮಿಕ ರೋಗಗಳ ಚಿಕಿತ್ಸೆಗೆ ಅಣಿಯಾದ ಆರೋಗ್ಯ ಇಲಾಖೆ

ಸಾರ್ವಜನಿಕರಿಗೆ ಸಲಹೆ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ಸತೀಶ್‌ಕುಮಾರ್
Published 8 ಏಪ್ರಿಲ್ 2024, 5:26 IST
Last Updated 8 ಏಪ್ರಿಲ್ 2024, 5:26 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸುಡುತ್ತಿರುವ ಬಿಸಿಲು, ಏರುತ್ತಿರುವ ತಾಪಮಾನವು ಸಾಂಕ್ರಮಿಕ ರೋಗಗಳ ಭೀತಿಯನ್ನು ಮೂಡಿಸಿದೆ. ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಇಲ್ಲಿನ ಜಿಲ್ಲಾಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಬಿರುಸಿನ ಸಿದ್ಧತೆಗಳನ್ನು ಆರಂಭಿಸಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ಸತೀಶ್‌ಕುಮಾರ್, ‘ಕೊಡಗು ಜಿಲ್ಲೆಯಲ್ಲಿ ಶಾಖಾಘಾತ ಹಾಗೂ ಸಾಂಕ್ರಮಿಕ ರೋಗಗಳು ಪತ್ತೆಯಾಗಿಲ್ಲ. ಆದರೆ, ಏರುತ್ತಿರುವ ತಾಪಮಾನವನ್ನು ಗಮನಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ ಮೀಸಲಿಸಲಾಗುವುದು. ತಾಲ್ಲೂಕು ಆಸ್ಪತ್ರೆಗಳಲ್ಲೂ ಚಿಕಿತ್ಸೆಗೆ ಕ್ರಮ ವಹಿಸಲಾಗಿದೆ’ ಎಂದು ಹೇಳಿದರು.

ಕೊಡಗು ಜಿಲ್ಲೆಯಲ್ಲಿ ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಜಿಲ್ಲೆಗಳ ಹಳ್ಳಿ, ಪಟ್ಟಣಗಳಲ್ಲಿ ಜಾತ್ರೆ, ರಥೋತ್ಸವ, ದರ್ಗಾಗಳಲ್ಲಿ ಉರೂಸ್‍ಗಳು ಮತ್ತು ಊರ ಹಬ್ಬಗಳನ್ನು ಆಚರಿಸಲಾಗುತ್ತಿದೆ. ಈ ವೇಳೆ ಕಲುಷಿತ ನೀರು, ಕಲುಷಿತ ಆಹಾರ ಸೇವನೆಯಿಂದ ಕರುಳುಬೇನೆ, ಕಾಲರಾ, ವಿಷಮಶೀತ ಜ್ವರ, ಕಾಮಾಲೆ (ಜಾಂಡೀಸ್) ಮತ್ತಿತರ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳು ಅಧಿಕವಾಗಿದೆ. ಹಾಗಾಗಿ, ಎಲ್ಲರೂ ಸೂಕ್ತ ಮುನ್ನಚ್ಚರಿಕೆ ವಹಿಸಬೇಕು ಎಂದು ಅವರು ಮನವಿ ಮಾಡಿದರು.

ಸೂಕ್ತ ಚಿಕಿತ್ಸೆಗಾಗಿ ಅಗತ್ಯವಾದ ಜೀವರಕ್ಷಕ ಔಷಧಿಗಳನ್ನು ಎಲ್ಲಾ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಲಭ್ಯವಿರುವಂತೆ ಕ್ರಮ ಕೈಗೊಳ್ಳಲಾಗಿದೆ. ಜಾತ್ರೆ, ಊರುಸ್ ಹಾಗೂ ಸಾಮಾಜಿಕ ಉತ್ಸವಗಳ ಸಂದರ್ಭಗಳಲ್ಲಿ ಆರೋಗ್ಯ ಇಲಾಖೆಯಿಂದ ಆರೋಗ್ಯ ಮಾಹಿತಿ ನೀಡಲೂ ನಿರ್ಧರಿಸಲಾಗಿದೆ ಎಂದರು.

ಹೋಟೆಲ್‍ಗಳಲ್ಲಿ ಸಾರ್ವಜನಿಕರಿಗೆ ಶುದ್ದವಾದ ಬಿಸಿ ಆಹಾರ ಮತ್ತು ಕುಡಿಯಲು ಬಿಸಿ ನೀರನ್ನು ಉಪಯೋಗಿಸುವಂತೆ ಮತ್ತು ಹೋಟೆಲ್‍ಗಳಲ್ಲಿನ ಘನ ತ್ಯಾಜ್ಯ ಪದಾರ್ಥಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.

‘ಎಲ್ಲಾ ಕುಡಿಯುವ ನೀರಿನ ಮಾದರಿಗಳನ್ನು ಪರೀಕ್ಷಿಸಿ‘

ಪಂಚಾಯತಿ ವ್ಯಾಪ್ತಿಗಳಲ್ಲಿನ ಕುಡಿಯುವ ನೀರಿನ ಮೂಲಗಳ ಮಾಹಿತಿ ಕಲೆ ಹಾಕಿ, ಎಲ್ಲಾ ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಬೇಕು. ಎಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಪರೀಕ್ಷೆ ನಡೆಸಿದ ನೀರಿನ ಮೂಲಗಳ ಮಾಹಿತಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪ್ರಯೋಗಶಾಲೆಯಲ್ಲಿ ನಿರ್ವಹಣೆ ಮಾಡಬೇಕು. ಕುಡಿಯಲು ಯೋಗ್ಯವಲ್ಲವೆಂದು ಧೃಢಪಟ್ಟ ನೀರಿನ ಮೂಲಗಳನ್ನು ಕೂಡಲೇ ಸಂಬಂಧಪಟ್ಟ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳ ಸಹಕಾರದೊಂದಿಗೆ ಸ್ವಚ್ಛಗೊಳಿಸಿ ಕ್ಲೋರಿನೇಷನ್ ಮಾಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ಸತೀಶ್‌ಕುಮಾರ್ ಸೂಚಿಸಿದರು.

ಕುಡಿಯುವ ನೀರಿನ ಪೈಪ್ ಲೈನ್ ಒಡೆದುಹೋಗಿದ್ದರೆ ತಕ್ಷಣ ಸಂಬಂಧಪಟ್ಟ ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ದುರಸ್ತಿಗೊಳಿಸಬೇಕು ಮತ್ತು ನೀರುಗಂಟಿಗಳಿಗೆ ಕ್ಲೋರಿನೇಷನ್ ಮಾರ್ಗಸೂಚಿಯನ್ನು ಆರೋಗ್ಯ ಇಲಾಖಾ ವತಿಯಿಂದ ನೀಡಬೇಕು ಎಂದರು.

ಸ್ಥಳೀಯ ಆಹಾರ ಸುರಕ್ಷತಾ ಅಧಿಕಾರಿಗಳು ಹೋಟೆಲ್ ಮತ್ತು ಅಂಗಡಿಗಳ ತಪಾಸಣೆ ನಡೆಸಿ ಆಹಾರ ಮತ್ತು ನೀರಿನ ಗುಣಮಟ್ಟದ ಸುರಕ್ಷತೆಯ ಬಗ್ಗೆ ಪರಿಶೀಲಿಸಬೇಕು. ಮನೆ ಭೇಟಿ ಸಮೀಕ್ಷೆಯಲ್ಲಿ ವೈಯುಕ್ತಿಕ ಶುಚಿತ್ವ, ಪರಿಸರ ನೈರ್ಮಲ್ಯ, ಶುದ್ದ ಕುಡಿಯುವ ನೀರು, ಬಿಸಿಯಾದ ಆಹಾರ ಸೇವನೆ, ರಸ್ತೆ, ಬೀದಿ ಬದಿಯಲ್ಲಿ ಕತ್ತರಿಸಿ ಮಾರಾಟ ಮಾಡುವ ಹಣ್ಣು-ಹಂಪಲುಗಳನ್ನು ತೆರೆದ ಆಹಾರ ಪದಾರ್ಥಗಳನ್ನು ಸೇವಿಸದಂತೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಹೆಚ್ಚಿದ ತಾಪಮಾನ; ಮುಂಜಾಗ್ರತಾ ಕ್ರಮಗಳು ಭಾರತೀಯ ಹವಾಮಾನ ಇಲಾಖೆಯು ಪ್ರಸ್ತುತ ಹಾಗೂ ಮೇ ಅಂತ್ಯದವರೆಗೆ ಸೂರ್ಯನ ಬಿಸಿಲು ಮತ್ತು ಬಿಸಿಗಾಳಿ ಹೆಚ್ಚಾಗುವ ಬಗ್ಗೆ ಮುನ್ನೆಚ್ಚರಿಕೆಯನ್ನು ನೀಡಿದೆ. ಜಿಲ್ಲೆಯಲ್ಲಿ ಸೂರ್ಯನ ಶಾಖವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಖಾಘಾತದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ಹಾಗಾಗಿ ಎಲ್ಲಾ ಸಾರ್ವಜನಿಕರಿಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಸಲಹೆಗಳನ್ನು ನೀಡಿದೆ. * ಸಾಧ್ಯವಾದಷ್ಟು ಮಟ್ಟಿಗೆ ವಿಶೇಷವಾಗಿ ಗರಿಷ್ಠ ತಾಪಮಾನದ ಅವಧಿಯಲ್ಲಿ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಬೇಕು (ಬೆಳಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ) * ಕಾಲಕಾಲಕ್ಕೆ ಸಾಕಷ್ಟು ನೀರು ಕುಡಿಯುವುದು. ಮಜ್ಜಿಗೆ ಎಳನೀರು ಹಣ್ಣಿನ ರಸ ಗ್ಲೂಕೋಸ್ ಓಆರ್‌ಎಸ್‌ನಂತಹ ದ್ರವ ಪದಾರ್ಥಗಳನ್ನು ಹೆಚ್ಚು ಉಪಯೋಗಿಸಬೇಕು. * ಸಾರ್ವಜನಿಕರು ಬಿಸಿಲಿನ ದಿನಗಳಲ್ಲಿ ಕೊಡೆ ಹಾಗೂ ತಂಪು ಕನ್ನಡಕಗಳನ್ನು ಹೊಂದಿರಬೇಕು. ಸಾಧ್ಯವಾದಷ್ಟು ತಂಪಾದ ಸ್ಥಳಗಳಲ್ಲಿ ಉಳಿಯಬೇಕು ತೆಳುವಾದ ಸಡಿಲವಾದ ಹತ್ತಿಯ ಬಟ್ಟೆಯನ್ನು ಧರಿಸಬೇಕು. ಆದಷ್ಟು ಬಿಳಿ ಬಣ್ಣದ ಬಟ್ಟೆಗಳ ಬಳಕೆ ಒಳ್ಳೆಯದು. * ಹಿರಿಯ ನಾಗರಿಕರು ಹಾಗೂ ಮಕ್ಕಳು ಹೆಚ್ಚು ನೀರು ಕುಡಿಯಬೇಕು. ಕೊಠಡಿಯ ತಾಪಮಾನವನ್ನು ಕಡಿಮೆ ಮಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು * ಶಾಖಾಘಾತದ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯನ್ನು ತಂಪಾದ ಜಾಗಕ್ಕೆ ಸ್ಥಳಾಂತರಿಸಬೇಕು. ಅವರು ಕನಿಷ್ಠ ಬಟ್ಟೆಯನ್ನು ಹೊಂದಿರುವಂತೆ ನೋಡಿಕೊಂಡು ವ್ಯಕ್ತಿಗೆ ತಣ್ಣೀರಿನಿಂದ ಸ್ಪಾಂಜ್ ಬಾತ್ ಮಾಡಬೇಕು ಅಥವಾ ಐಸ್ ಪ್ಯಾಕ್‍ಗಳನ್ನು ಉಪಯೋಗಿಸಬೇಕು * ಶಾಖಾಘಾತಕ್ಕೆ ಒಳಗಾದ ವ್ಯಕ್ತಿಯಲ್ಲಿ ಯಾವುದೇ ಸುಧಾರಣೆ ಕಂಡು ಬರದಿದ್ದರೆ ಅವರನ್ನು ಕೂಲಿಂಗ್ ವ್ಯವಸ್ಥೆಯೊಂದಿಗೆ ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಬೇಕು. * ಹೊರಾಂಗಣದಲ್ಲಿ ಬಿಸಿಲಿನಲ್ಲಿ ಕೆಲಸ ಮಾಡುವವರಿಗೆ ಕಡ್ಡಾಯ ವಿರಾಮವನ್ನು ನಿಗದಿಪಡಿಸುವುದು ಆಹಾರದಲ್ಲಿ ಮಸಾಲೆ ಪದಾರ್ಥಗಳನ್ನು ಹೆಚ್ಚು ಬಳಸಬಾರದು. ಬೇಸಿಗೆ ದಿನಗಳಲ್ಲಿ ತಣ್ಣೀರಿನ ಸ್ನಾನ ಒಳ್ಳೆಯದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT