ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪೋಕ್ಲು: ಜೇನಿನೊಂದಿಗೆ ವೈವಿಧ್ಯಮಯ ಹಣ್ಣುಗಳನ್ನು ಬೆಳೆಯುವ ರೈತ ನಂದಕುಮಾರ್

ಸಿ.ಎಸ್.ಸುರೇಶ್
Published 5 ಏಪ್ರಿಲ್ 2024, 6:43 IST
Last Updated 5 ಏಪ್ರಿಲ್ 2024, 6:43 IST
ಅಕ್ಷರ ಗಾತ್ರ

ನಾಪೋಕ್ಲು: ಕೊಡಗಿನ ಶುದ್ಧ ಸವಿಜೇನು ಎಲ್ಲಿ ಸಿಗುತ್ತದೆ ಎಂಬ ಪ್ರಶ್ನೆಗೆ ಉತ್ತರವಾಗಿ ಚೇಲಾವರ ಗ್ರಾಮ ಇದೆ.

ಇಲ್ಲಿನ ಪ್ರಗತಿಪರ ರೈತ ನಂದಕುಮಾರ್ ಜೇನು ಕೃಷಿಯಲ್ಲಿ ಪರಿಣತಿ ಸಾಧಿಸಿದ್ದಾರೆ. ಪ್ರತಿ ವರ್ಷ ₹ 2-3 ಲಕ್ಷವನ್ನು ಜೇನಿನಿಂದ  ಗಳಿಸುತ್ತಿದ್ದಾರೆ.

ಇವರಲ್ಲಿ ಪೆಟ್ಟಿಗೆಜೇನು, ಮುಜೆಂಟಿ ಜೇನು ಎಂಬ 2 ತಳಿಗಳ ಜೇನುಪೆಟ್ಟಿಗೆಗಳಿವೆ. ಹವಾಮಾನಕ್ಕೆ ಅನುಗುಣವಾಗಿ ಅತಿ ಹೆಚ್ಚು ಜೇನು ಉತ್ಪಾದಿಸಿ ಲಾಭಗಳಿಸ ಬಹುದು ಎನ್ನುತ್ತಾರೆ ನಂದಕುಮಾರ್. ಜೇನು ಕೃಷಿಯಲ್ಲಿ 2019ರಲ್ಲಿ ಇವರಿಗೆ ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಜೇನು ಕೃಷಿಕ ಪ್ರಶಸ್ತಿಯೂ ದೊರೆತಿದೆ.

ನಂದಕುಮಾರ್ ಅವರ ಜೇನುಕೃಷಿಯನ್ನು ಮನಗಂಡು ಇವರ ತೋಟದಲ್ಲಿ ತೋಟಗಾರಿಕೆ ಇಲಾಖೆ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯಗಳ ಸಹಯೋಗದಲ್ಲಿ ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿತ್ತು. ನಂದಕುಮಾರ್ ಅವರ ಜೇನು ಕೊಡಗಿನಲ್ಲಿ ಮಾತ್ರವಲ್ಲದೆ ರಾಜ್ಯ, ಅಂತರ ರಾಜ್ಯ ಮಾರುಕಟ್ಟೆಯಲ್ಲಿಯೂ ಮಾರಾಟವಾಗುತ್ತಿದೆ. ಉತ್ತಮ ಗುಣಮಟ್ಟದ ಶುದ್ಧ ಜೇನು ಉತ್ಪಾದಿಸುವಲ್ಲಿ ನಂದಕುಮಾರ್ ಹೆಸರು ವಾಸಿಯಾಗಿದ್ದಾರೆ.

ತಮಗೆ ಇರುವ ಅಲ್ಪ ಪ್ರಮಾಣದ ಜಮೀನಿನಲ್ಲಿ ಇವರು ಹಲವು ರೀತಿಯ ಬೆಳೆ ಬೆಳೆದು ಪ್ರಗತಿಪರ ರೈತರಾಗಿ ಇತರರಿಗೂ ಮಾದರಿಯಾಗಿದ್ದಾರೆ. 5 ಎಕರೆ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಕಾಫಿ, ಕಾಳು ಮೆಣಸು, ಅಡಿಕೆ, ಬಾಳೆ, ಕಿತ್ತಳೆ, ಏಲಕ್ಕಿ, ಬೆಣ್ಣೆಹಣ್ಣು, ಲಿಚಿ, ಮಾವು ಕೋಕೋ, ವೆನಿಲಾ, ಸೀಬೆಹಣ್ಣು, ಅಗರ್ ವುಡ್, ನಿಂಬೆಹಣ್ಣು, ಚಕೋತ, ಹೇರಳೇಕಾಯಿ, ಮೂಸಂಬಿ ನೋನಿ, ಲಕ್ಷ್ಮಣ ಫಲ.. ಒಂದೇ ಎರಡೇ ಹಲವು ರೀತಿಯ ಹಣ್ಣುಗಳನ್ನು ಬೆಳೆಯುತ್ತಾ ಕೃಷಿಯನ್ನೇ ಉಸಿರಾಗಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ನಂದಕುಮಾರ್ 10ನೇ ತರಗತಿ ಉತ್ತೀರ್ಣರಾದವರು. ಹವಾಮಾನ ವೈಪರೀತ್ಯ, ಕಾಡಾನೆ –ಕಾಡುಹಂದಿಗಳ ಉಪಟಳ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ನಡುವೆಯೂ ಅವರು ಹಲವು ಬಗೆಯ ಬೆಳೆ ಹಾಗೂ ಹಣ್ಣುಗಳನ್ನು ಬೆಳೆದು ಕೃಷಿಯನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅರಣ್ಯ ಕಾಲೇಜು, ಡಿಪ್ಲೋಮಾ ಮತ್ತಿತರ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಪಿಎಚ್‌ಡಿ ಮಾಡುವ ವಿದ್ಯಾರ್ಥಿಗಳಿಗೆ ಇವರ ತೋಟದಲ್ಲಿ ಗಿಡಗಳ ಬಗ್ಗೆ ಮಾಹಿತಿ ನೀಡಿ ತರಬೇತಿ ಕೂಡ ನೀಡುತ್ತಿದ್ದಾರೆ. ಇವರಿಂದ ಮಾಹಿತಿ ಪಡೆದು ಪಿಎಚ್‌ಡಿ ಪಡೆದ ಹಲವು ವಿದ್ಯಾರ್ಥಿಗಳಿದ್ದಾರೆ. ಜೇನು ಕೃಷಿಯಲ್ಲಿ ಸಾಧನೆ ಮಾಡಿರುವ ನಂದಕುಮಾರ್ ಸುಮಾರು 20 ವರ್ಷಗಳಿಂದ ಜೇನು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ನಂದಕುಮಾರ್ ಚೀಲಾವರ ಗ್ರಾಮದಲ್ಲಿ ಹೈನುಗಾರಿಕೆಯನ್ನೂ ಮಾಡುತ್ತಿದ್ದಾರೆ. ಮಲೆನಾಡು ಗಿಡ್ಡದ 10 ರಾಸುಗಳನ್ನು ಇವರು ಸಾಗುತ್ತಿದ್ದಾರೆ. ಇದರಿಂದ ಸಗಣಿ ಗೊಬ್ಬರ ದೊರೆಯುತ್ತಿದೆ. ಇದನ್ನು ತೋಟಕ್ಕೆ ಉಪಯೋಗಿಸುತ್ತಿದ್ದಾರೆ. ಉಳಿದ ಗೊಬ್ಬರವನ್ನು ಮಾರಾಟ ಮಾಡುತ್ತಾರೆ. ಹಸುಗಳಿಂದ ದೊರೆಯುವ ಹಾಲು ಮನೆ ಬಳಕೆಗೆ ಉಪಯೋಗವಾಗುತ್ತಿದೆ.

ಅಜ್ಜಂದಿರ ಕಾಲದಿಂದ ಪರಂಪರೆಯಾಗಿ ಉಳಿಸಿಕೊಂಡು ಬಂದ ನಾಟಿ ವೈದ್ಯ ಪದ್ಧತಿಯನ್ನು ಇವರು ಮುಂದುವರಿಸುತ್ತಿದ್ದಾರೆ. ವಿಷಜಂತು ಕಡಿತ, ಕಿಡ್ನಿ ಸ್ಟೋನ್, ಸರ್ಪ ಸುತ್ತು, ಮೂಲವ್ಯಾಧಿ, ಹುಳಕಡ್ಡಿ, ಮಕ್ಕಳ ಕಾಯಿಲೆ, ಮೈಗ್ರೇನ್ ತಲೆನೋವು ಸೇರಿದಂತೆ ಹಲವು ಕಾಯಿಲೆಗಳಿಗೆ ನಾಟಿಮದ್ದು ನೀಡುತ್ತಾರೆ. ಗಿಡಮೂಲಿಕೆ, ತೋಟದಲ್ಲಿ ಬೆಳೆದ ಔಷಧಿ ಗಿಡಗಳನ್ನು ಉಪಯೋಗಿಸಿ ತಯಾರಿಸುವ ನಾಟಿ ಮದ್ದು ಇವರದ್ದು. ವರ್ಷಗಳಿಂದ ವಿವಿಧ ರೋಗಗಳಿಗೆ ಚಿಕಿತ್ಸೆ ನೀಡುತ್ತಿರುವ ಇವರ ಬಳಿ ವರ್ಷಕ್ಕೆ ಸಹಸ್ರಾರು ಮಂದಿ ಚಿಕಿತ್ಸೆಗೆ ಬರುತ್ತಾರೆ. ಗ್ರಾಮೀಣ ಜನರಲ್ಲದೆ ಹಲವು ಪ್ರದೇಶಗಳಿಂದ ಜನರು ಚಿಕಿತ್ಸೆಗಾಗಿ ಇವರ ಬಳಿ ಬರುತ್ತಾರೆ. ಚಿಕಿತ್ಸೆಗೆ ಇದುವರೆಗೆ ಇವರು ಯಾರಿಂದಲೂ ಹಣ ಪಡೆದಿಲ್ಲ ಎಂಬುದು ವಿಶೇಷ. ‘ಜನರಿಗೆ ಒಳಿತಾಗಲಿ  ಎಂಬುದಷ್ಟೇ ನನ್ನ ಆಸೆ’ ಎನ್ನುತ್ತಾರೆ ನಂದಕುಮಾರ್.

ಪತ್ನಿ ಜಯಮಣಿ ಹಾಗೂ ಪುತ್ರ ಪ್ರಶಾಂತ್ ಕೂಡ ಇವರಿಗೆ ಸಾಥ್ ನೀಡುತ್ತಿದ್ದಾರೆ.

ಪ್ರಗತಿಪರ ಜೇನು ಕೃಷಿಕ ದಂಪತಿ- ನಂದಕುಮಾರ್ ಮತ್ತು ಪತ್ನಿ ಜಯಮಣಿ.
ಪ್ರಗತಿಪರ ಜೇನು ಕೃಷಿಕ ದಂಪತಿ- ನಂದಕುಮಾರ್ ಮತ್ತು ಪತ್ನಿ ಜಯಮಣಿ.
ಜೇನು ಕೃಷಿಯಲ್ಲಿ ತೊಡಗಿರುವ ಚೇಲಾವರ ಗ್ರಾಮದ ಪ್ರಗತಿಪರ ರೈತ ನಂದಕುಮಾರ್.
ಜೇನು ಕೃಷಿಯಲ್ಲಿ ತೊಡಗಿರುವ ಚೇಲಾವರ ಗ್ರಾಮದ ಪ್ರಗತಿಪರ ರೈತ ನಂದಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT