ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಲ್ಲಿ ಬಂಡಾಯ; ಶಮನಕ್ಕೆ ಯತ್ನ

ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ ಹರಪಳ್ಳಿ ರವೀಂದ್ರ
Last Updated 8 ಏಪ್ರಿಲ್ 2023, 6:40 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲಾ ಕಾಂಗ್ರೆಸ್‌ನಲ್ಲಿ ಮಂತರ್‌ಗೌಡ ಅವರಿಗೆ ಟಿಕೆಟ್ ಘೋಷಿಸಿದ ಬೆನ್ನಲ್ಲೇ ಅಸಮಾಧಾನ ಹೊಗೆಯಾಡಲಾರಂಭಿಸಿದೆ. ಪ್ರಮುಖ ಟಿಕೆಟ್ ಆಕಾಂಕ್ಷಿ ಹರಪಳ್ಳಿ ರವೀಂದ್ರ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಹೇಳುವ ಮೂಲಕ ಬಂಡಾಯದ ಕಿಡಿ ಹೊತ್ತಿಸಿದ್ದಾರೆ.

ಮಾರ್ಚ್ 29ರಂದೇ ಹಿರಿಯ ನಾಯಕ ಬಿ.ಎ.ಜೀವಿಜಯ ಅವರು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದರು. ಜತೆಗೆ, ಹೊರಗಿನವರಿಗೆ ಟಿಕೆಟ್ ನೀಡಬಾರದು ಎಂದೂ ಮನವಿ ಮಾಡಿದ್ದರು. ಆದರೆ, ಇವರ ಮನವಿಯನ್ನು ಪಕ್ಷದ ಹೈಕಮಾಂಡ್ ಗಣನೆಗೆ ತೆಗೆದುಕೊಂಡಿಲ್ಲ.

ಪ್ರಮುಖ ಟಿಕೆಟ್ ಆಕಾಂಕ್ಷಿಗಳಾದ ಹಾಗೂ ಹಿರಿಯ ನಾಯಕರೂ ಆದ ಚಂದ್ರಮೌಳಿ ಹಾಗೂ ಕೆ.ಪಿ.ಚಂದ್ರಕಲಾ ಅವರು ಮಂತರ್‌ಗೌಡ ಅವರಿಗೆ ಟಿಕೆಟ್ ನೀಡಿರುವುದನ್ನು ಸ್ವಾಗತಿಸಿದ್ದಾರೆ. ಪಕ್ಷಕ್ಕಾಗಿ ದುಡಿಯುವುದಾಗಿಯೂ ಹೇಳಿದ್ದಾರೆ. ಆದರೆ, ಅವರ ಬೆಂಬಲಿಗರಲ್ಲಿ ಬೇಸರದ ಛಾಯೆಯಂತೂ ಇದ್ದೇ ಇದೆ. ಮುಂದೆ ಇವರು ಯಾವ ರೀತಿ ಪ್ರಚಾರ ಕಾರ್ಯದಲ್ಲಿ ತೊಡಗುವರು ಎಂಬುದು ಪಕ್ಷದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸುವುದಂತೂ ಸತ್ಯ.

ಜೀವಿಜಯ ಹಾಗೂ ಹರಪಳ್ಳಿ ರವೀಂದ್ರ ಇಬ್ಬರನ್ನೂ ಜೆಡಿಎಸ್‌ ತನ್ನತ್ತ ಸೆಳೆಯುವ ತಂತ್ರಗಾರಿಕೆಯ ಮೊರೆ ಹೋಗಿದೆ. ಇಬ್ಬರಲ್ಲಿ ಯಾರೇ ಬಂದರೂ ಟಿಕೆಟ್ ನೀಡಲು ಸಿದ್ಧ ಎಂಬ ಮಾತುಗಳೂ ಜೆಡಿಎಸ್‌ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ. ಮುಂದಿನ ಕೆಲವೇ ದಿನಗಳಲ್ಲಿ ಈ ಕುರಿತು ಸ್ಪಷ್ಟ ಚಿತ್ರಣ ಹೊರ ಬೀಳುವ ಸಾಧ್ಯತೆ ಇದೆ.

ಮಂತರ್‌ಗೌಡ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಅಸಮಾಧಾನ ಇರುವಂತೆಯೇ ಕಾಂಗ್ರೆಸ್ ಪಕ್ಷದ ಮುಖಂಡರಿಂದ ಭರಪೂರ ಸ್ವಾಗತವೂ ದೊರಕಿದೆ. ಕೆಪಿಸಿಸಿ ಸದಸ್ಯ ಬಿ.ಎಸ್.ರಮಾನಾಥ್ ಅವರು ಮಂತರ್‌ಗೌಡ ಅವರಿಗೆ ಟಿಕೆಟ್ ಘೋಷಿಸಿರುವುದು ಸರಿಯಾದ ಕ್ರಮ ಎಂದು ಹೇಳಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜಾ ಉತ್ತಪ್ಪ, ‘ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಸಹಜವಾಗಿಯೇ ನಿರೀಕ್ಷೆ ಇಟ್ಟುಕೊಂಡಿರುವವರಿಗೆ ಅಸಮಾಧಾನವಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಇವುಗಳೆಲ್ಲ ನಿವಾರಣೆಯಾಗಿ, ಎಲ್ಲರೂ ಒಗ್ಗಟ್ಟಿನಿಂದ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡುತ್ತೇವೆ’ ಎಂದರು.

ಕಾಂಗ್ರೆಸ್‌ ಸಭೆ

ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್‌ ಎಲ್ಲ ಟಿಕೆಟ್ ಆಕಾಂಕ್ಷಿಗಳ ಸಭೆಯನ್ನು ಶುಕ್ರವಾರ ಕರೆದಿತ್ತು. ಇಲ್ಲಿ ಭಾಗವಹಿಸಿದ ಎಲ್ಲರೂ ಅಸಮಾಧಾನವನ್ನು ಬದಿಗೊತ್ತಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವ ವಾಗ್ದಾನ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ವೀಣಾ ಅಚ್ಚಯ್ಯ, ಕೆ.ಪಿ.ಚಂದ್ರಕಲಾ ಸೇರಿದಂತೆ ಹಲವು ಮುಖಂಡರು ಇದರಲ್ಲಿ ಭಾಗವಹಿಸಿದ್ದರು.

ಬಂಡಾಯ ಶಮನಕ್ಕೆ ಯತ್ನ

ಹರಪಳ್ಳಿ ರವೀಂದ್ರ ಅವರು ಬಂಡಾಯದ ಘೋಷಣೆ ಮಾಡುತ್ತಿದ್ದಂತೆ ಎಚ್ಚೆತ್ತ ಕಾಂಗ್ರೆಸ್ ಮುಖಂಡರು ಅವರೊಂದಿಗೆ ಮಾತನಾಡಲು ಸಿದ್ಧತೆ ನಡೆಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಂದಲೇ ಫೋನ್‌ ಮಾಡಿಸಿ ಅವರ ಅಸಮಾಧಾನ ಶಮನಗೊಳಿಸುವ ಯತ್ನಕ್ಕೂ ಕೈ ಹಾಕಿದ್ದಾರೆ.

ಒಂದೆಡೆ ಕಾಂಗ್ರೆಸ್‌ನಲ್ಲಿ ಇಷ್ಟೆಲ್ಲ ವಿದ್ಯಮಾನಗಳು ಜರುಗುತ್ತಿದ್ದರೂ ಬಿಜೆಪಿ ಪಾಳೆಯದಲ್ಲಿ ಯಾವುದೇ ಚಟುವಟಿಕೆಗಳೂ ನಡೆಯುತ್ತಿಲ್ಲ. ಪಕ್ಷದ ಟಿಕೆಟ್ ಆಕಾಂಕ್ಷಿಗಳು ಸೇರಿದಂತೆ ಮುಖಂಡರೆಲ್ಲ ಯಾವುದೇ ಹೇಳಿಕೆಗಳನ್ನು ನೀಡದೇ ತಮ್ಮ ಪಕ್ಷದ ಟಿಕೆಟ್ ಘೋಷಣೆಯನ್ನೇ ಎದುರು ನೋಡುತ್ತಿದ್ದಾರೆ. ಇನ್ನೂ ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT