ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

12 ವರ್ಷದ ಬಳಿಕ ಕಾಂಗ್ರೆಸ್ ಬೆಂಬಲಿತ ಸದಸ್ಯರ ಮೇಲುಗೈ

ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ: ಪ್ರಮೋದ್ ಗಣಪತಿ ಅಧ್ಯಕ್ಷ, ಮಂಜುಳಾ ಉಪಾಧ್ಯಕ್ಷೆ,
Published 29 ಜನವರಿ 2024, 16:28 IST
Last Updated 29 ಜನವರಿ 2024, 16:28 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಇಲ್ಲಿನ ಗ್ರಾಮ ಪಂಚಾಯಿತಿಯ 2ನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರಮೋದ್ ಗಣಪತಿ ಹಾಗೂ ಉಪಾಧ್ಯಕ್ಷರಾಗಿ ಮಂಜುಳಾ ಆಯ್ಕೆಗೊಂಡರು. ಈ ಮೂಲಕ ಬರೋಬರಿ 12 ವರ್ಷಗಳ ನಂತರ ಪಂಚಾಯಿತಿಯಲ್ಲಿ ಅಧಿಕಾರವು ಕಾಂಗ್ರೆಸ್ ಬೆಂಬಲಿತ ಸದಸ್ಯರ ‘ಕೈ’ ವಶವಾಯಿತು.

ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ರಾಜೇಶ್ ಹಾಗೂ ಗೀತಾ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಕುಲ್ಲಚಂಡ ಪ್ರಮೋದ್ ಗಣಪತಿ ಮತ್ತು ಮಂಜುಳಾ ನಾಮಪತ್ರ ಸಲ್ಲಿಸಿದ್ದರು.

ಬಳಿಕ, ನಡೆದ ಚುನಾವಣೆಯಲ್ಲಿ ಪ್ರಮೋದ್ ಗಣಪತಿ 11 ಮತಗಳನ್ನು ಪಡೆದು ಜಯಶೀಲರಾದರೆ ರಾಜೇಶ್ 10 ಮತಗಳನ್ನು ಪಡೆದು ಒಂದು ಮತದಿಂದ ಪರಾಭವಗೊಂಡರು. ಅಂತೆಯೇ ಉಪಾಧ್ಯಕ್ಷ ಸ್ಥಾನದ ಮಂಜುಳಾ ಅವರು 11 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ ಪ್ರತಿಸ್ಪರ್ಧಿ ಗೀತಾ 9 ಮತಗಳನ್ನು ಪಡೆದು ಸೋಲನುಭವಿಸಿದರು. ಒಂದು ಮತ ತಿರಸ್ಕೃತಗೊಂಡಿತು.

12 ವರ್ಷದ ನಂತರ ‘ಕೈ’ ವಶ

ಈ ಮೂಲಕ 12 ವರ್ಷದ ಬಳಿಕ ಕಾಂಗ್ರೆಸ್ ಬೆಂಬಲಿತ ಸದಸ್ಯರ ತೆಕ್ಕೆಗೆ ಗ್ರಾಮ ಪಂಚಾಯಿತಿ ಆಡಳಿತ ಬಂದಂತಾಯಿತು.

ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 21 ಸದಸ್ಯರಿದ್ದು ಇವರಲ್ಲಿ 12 ಸದಸ್ಯರು ಬಿಜೆಪಿ ಬೆಂಬಲಿತರಾಗಿದ್ದರೆ, 9 ಸದಸ್ಯರು ಕಾಂಗ್ರೆಸ್ ಬೆಂಬಲಿತರಾಗಿದ್ದರು. ದಕ್ಷಿಣ ಕೊಡಗಿನ ಪ್ರಮುಖ ವಾಣಿಜ್ಯ ಪಟ್ಟಣದ ಗ್ರೇಡ್ 1 ಪಂಚಾಯಿತಿಯಾಗಿರುವ ಇದು 12 ವರ್ಷಗಳಿಂದ ಬಿಜೆಪಿ ಬೆಂಬಲಿತ ಸದಸ್ಯರ ಆಡಳಿತಕ್ಕೆ ಒಳಪಟ್ಟಿತ್ತು. ಇದನ್ನು ಭೇದಿಸಿರುವ ಕಾಂಗ್ರೆಸ್ ಬೆಂಬಲಿತ ಸದಸ್ಯರು ಬಿಜೆಪಿ ಬೆಂಬಲಿತ ಮೂವರು ಸದಸ್ಯರ ಮತವನ್ನು ಸೆಳೆಯುವ ಮೂಲಕ ಪಂಚಾಯಿತಿ ಆಡಳಿತವನ್ನು ಮರಳಿ ತಮ್ಮ ತೆಕ್ಕೆಗೆ ಪಡೆದುಕೊಳ್ಳಲು ಯಶಸ್ವಿಯಾದರು.

ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ ನೂತನ ಅಧ್ಯಕ್ಷ ಪ್ರಮೋದ್ ಗಣಪತಿ, ‘ಪಟ್ಟಣದಲ್ಲಿ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ, ಕುಡಿಯುವ ನೀರಿನ ಸಮಸ್ಯೆ ಇದೆ. ಇದನ್ನು ಶಾಸಕರ ನೆರವಿನೊಂದಿಗೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ಉಪಾಧ್ಯಕ್ಷೆ ಮಂಜುಳಾ ಮಾತನಾಡಿ, ‘ಎಲ್ಲ ಸದಸ್ಯರ ನೆರವಿನೊಂದಿಗೆ ಗ್ರಾಮ ಪಂಚಾಯಿತಿ ಆಡಳಿತವನ್ನು ಸುಸೂತ್ರವಾಗಿ ನಿರ್ವಹಿಸಲಾಗುವುದು. ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಕಾಣುವಂತೆ ಪಕ್ಷ ಕಟ್ಟಲಾಗುವುದು’ ಎಂದು ಹೇಳಿದರು.

ಗೆಲುವು ಪಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷೆಗೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿ ಜಯಕಾರ ಹಾಕಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಖೆ ಸಹಾಯಕ ನಿರ್ದೇಶಕ ರಾಜೇಶ್ ಚುನಾವಣಾಧಿಕಾರಿಯಾಗಿದ್ದರು. ಕಾಂಗ್ರೆಸ್ ಮುಖಂಡರಾದ ಕೊಳ್ಳಿಮಾಡ ಅಜಿತ್ ಅಯ್ಯಪ್ಪ, ಬಾಬು, ಡ್ಯಾಡು ಜೋಸೆಫ್, ಶರತ್ ಕಾಂತ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT