ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 100ರಷ್ಟು ಪ್ರಗತಿ ಸಾಧಿಸಲು ಡಿ.ಸಿ ಸೂಚನೆ

ಸೆ.26 ರಿಂದ ಜಾನುವಾರುಗಳಿಗೆ 4ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕೆ
Published 21 ಸೆಪ್ಟೆಂಬರ್ 2023, 16:48 IST
Last Updated 21 ಸೆಪ್ಟೆಂಬರ್ 2023, 16:48 IST
ಅಕ್ಷರ ಗಾತ್ರ

ಮಡಿಕೇರಿ: ‘ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ 3ನೇ ಸುತ್ತಿನಲ್ಲಿ ನಡೆದ ಲಸಿಕಾ ಕಾರ್ಯಕ್ರಮದಲ್ಲಿ ಶೇ 84ರಷ್ಟು ಪ್ರಗತಿ ಸಾಧಿಸಲಾಗಿತ್ತು. ಆದರೆ, ಸೆ. 26ರಿಂದ ಒಂದು ತಿಂಗಳು ನಡೆಯುವ 4ನೇ ಸುತ್ತಿನ ಲಸಿಕಾ ಕಾರ್ಯಕ್ರಮದಲ್ಲಿ ಶೇ 100ರಷ್ಟು ಪ್ರಗತಿ ಸಾಧಿಸಬೇಕು’ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮ ಸಂಬಂಧ ಗುರುವಾರ ನಡೆದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

‘ಯಾವುದೇ ಜಾನುವಾರು ಲಸಿಕಾ ಕಾರ್ಯಕ್ರಮದಿಂದ ಬಿಟ್ಟು ಹೋಗದಂತೆ ಗಮನಹರಿಸಬೇಕು. ಅದಕ್ಕಾಗಿ ಯಾವ ಯಾವ ದಿನಗಳಂದು ಯಾವ, ಯಾವ ಗ್ರಾಮದಲ್ಲಿ ಲಸಿಕೆ ನೀಡಲಾಗುತ್ತದೆ ಎಂಬುದರ ಬಗ್ಗೆ ಮುಂಚಿತವಾಗಿ ಪ್ರಚಾರ ಕಾರ್ಯ ನಡೆಸಬೇಕು’ ಎಂದು ನಿರ್ದೇಶನ ನೀಡಿದರು.

ಸರ್ಕಾರ 2030ರೊಳಗೆ ಜಾನುವಾರುಗಳ ಕಾಲುಬಾಯಿ ಜ್ವರವನ್ನು ನಿಯಂತ್ರಿಸುವಲ್ಲಿ ಹಲವು ಸುತ್ತಿನ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸುವಂತೆ ಹೇಳಿದರು.

ಪಶುಪಾಲನಾ ಇಲಾಖೆ ಉಪನಿರ್ದೇಶಕ ಲಿಂಗರಾಜು ದೊಡ್ಡಮನಿ ಮಾತನಾಡಿ, ‘3ನೇ ಸುತ್ತಿನ ಲಸಿಕಾ ಕಾರ್ಯಕ್ರಮದ ಸಂದರ್ಭದಲ್ಲಿ 76,920 ಜಾನುವಾರು ಸಂಖ್ಯೆ ಗುರಿ ಇತ್ತು. ಅವುಗಳಲ್ಲಿ 66,710 ಜಾನುವಾರುಗಳಿಗೆ ಲಸಿಕೆಯನ್ನು ನೀಡಿ ಶೇ 84ರಷ್ಟು ಪ್ರಗತಿ ಸಾಧಿಸಲಾಗಿದೆ’ ಎಂದರು.

‘ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಸಂಬಂಧಿಸಿದಂತೆ ಲಸಿಕೆ ನೀಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 2 ಎಂ.ಎಲ್.ಒಳಗೊಂಡ 75,325 ಸಿರೀಂಜ್‍ಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಪಶುಪಾಲನಾ ಇಲಾಖೆಯ 3 ಸಂಚಾರಿ ಪಶು ಚಿಕಿತ್ಸಾ ವಾಹನಗಳು ಹಾಗೂ 8 ಹಾಲು ಉತ್ಪಾದಕರ ಮಹಾ ಮಂಡಳದ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

‘ಈಗಾಗಲೇ ಪಶುಪಾಲನಾ ಇಲಾಖೆಯ ಆಯುಕ್ತಾಲಯದಿಂದ 77 ಸಾವಿರ ಡೋಸ್ ಲಸಿಕೆ ಸರಬರಾಜು ಆಗಿದೆ. ಒಂದು ವಾಕ್ ಇನ್ ಕೂಲರ್, 7 ಐಸ್ ಲೈನ್ ರೆಫ್ರಿಜರೇಟರ್, 5 ಐಎಲ್ ಆರ್‌ಎಫ್, 47 ಶೀತಲೀಕರಣಯಂತ್ರ ಹಾಗೂ 182 ವ್ಯಾಕ್ಸಿನ್ ಕ್ಯಾರಿಯರ್‌ಗಳನ್ನು ಸುಸ್ಥಿತಿಯಲ್ಲಿ ಇಡಲಾಗಿದೆ’ ಎಂದು ವಿವರಿಸಿದರು.

‘ಜಿಲ್ಲೆಯಲ್ಲಿ ಲಸಿಕೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ 14 ತಾಂತ್ರಿಕ ಸಿಬ್ಬಂದಿ, 33 ಅರೆ ತಾಂತ್ರಿಕ ಸಿಬ್ಬಂದಿ, 09 ಇಲಾಖಾ ಡಿ ದರ್ಜೆ ಸಿಬ್ಬಂದಿ, 12 ಬಾಹ್ಯ ಮೂಲದ ಡಿ ದರ್ಜೆ ಸಿಬ್ಬಂದಿ, 4 ಹೆಚ್ಚುವರಿ ಸಿಬ್ಬಂದಿ ಒಟ್ಟು 72 ಲಸಿಕಾ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ’ ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕರು ಮಾಹಿತಿ ನೀಡಿದರು.

ಪಾಲಿಕ್ಲಿನಿಕ್ ಉಪ ನಿರ್ದೇಶಕ ಡಾ.ತಿಮ್ಮಯ್ಯ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಸನ್ನ, ಡಾ.ಶಾಂತೇಶ್, ಡಾ.ನವೀನ್, ಡಾ.ಬಾದಾಮಿ, ಡಾ.ಶ್ರೀದೇವು, ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ.ಬಿ.ಎಲ್.ಪ್ರಸನ್ನ ಇದ್ದರು.

ಲಸಿಕೆಯು ಸಂಪೂರ್ಣವಾಗಿ ಉಚಿತವಾಗಿದೆ. ಇದೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಲಸಿಕಾದಾರರು ಜಾನುವಾರು ಮಾಲೀಕರ ಮನೆಗಳಿಗೆ ಬಂದಾಗ ಸಹಕಾರ ನೀಡಿ, 4 ತಿಂಗಳು ತುಂಬಿದ ಎಲ್ಲಾ ದನ, ಎಮ್ಮೆಗಳಿಗೆ ಲಸಿಕೆ ಹಾಕಿಸುವಂತೆ ಉಪ ನಿರ್ದೇಶಕರು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಲಿಂಗರಾಜ ದೊಡ್ಡಮನಿ ಮನವಿ ಮಾಡಿದರು.

Highlights - ಲಸಿಕೆಯಿಂದ ಜಾನುವಾರು ಹೊರಗುಳಿಯದಂತೆ ಎಚ್ಚರವಹಿಸಿ ಲಸಿಕೆ ನೀಡುವ ದಿನಾಂಕ ಮೊದಲೇ ತಿಳಿಸಿ ಹಲವು ಅಧಿಕಾರಿಗಳು ಸಭೆಯಲ್ಲಿ ಭಾಗಿ

Cut-off box - ಇನ್ಫೋಗ್ರಾಫ್‌ಗೆ... ಜಿಲ್ಲೆಯಲ್ಲಿರುವ ಜಾನುವಾರುಗಳ ಸಂಖ್ಯೆ;76920 ಲಸಿಕೆ ನೀಡಲು ರಚಿಸಿರುವ ತಂಡಗಳು;11 ಒಟ್ಟು ಲಸಿಕೆ ನೀಡುವವರು;67 ಲಸಿಕೆ ಹಾಕಿಸಬೇಕಾದ್ದು;6 ತಿಂಗಳಿಗೊಮ್ಮೆ ಲಸಿಕೆ ನೀಡುವ ಅವಧಿ;ಸೆ. 26ರಿಂದ ಅ. 25 *** ಪಟ್ಟಿ ಕಾಲುಬಾಯಿ ಜ್ವರದ ಲಸಿಕೆ ಕುರಿತ ಮಾಹಿತಿಗೆ ತಾಲ್ಲೂಕು;ಮೊಬೈಲ್ ಸಂಖ್ಯೆ ಮಡಿಕೇರಿ;9448647276 ಸೋಮವಾರಪೇಟೆ;9448655660 ವಿರಾಜಪೇಟೆ;9141093996 ಕುಶಾಲನಗರ;8951404025 ಪೊನ್ನಂಪೇಟೆ;9449081343 ***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT