ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಂಡ್ಯೋಳಂಡ ಹಾಕಿ ಹಬ್ಬಕ್ಕೆ ಇನ್ನು ಎಂಟೇ ದಿನ ಬಾಕಿ!

360 ತಂಡಗಳು ನೋಂದಣಿಯಾಗಿ ದಾಖಲೆ, ಮಾರ್ಚ್ 30ರಂದು ನಾಪೋಕ್ಲುವಿನಲ್ಲಿ ಉದ್ಘಾಟನೆ
Published 23 ಮಾರ್ಚ್ 2024, 5:59 IST
Last Updated 23 ಮಾರ್ಚ್ 2024, 5:59 IST
ಅಕ್ಷರ ಗಾತ್ರ

ಮಡಿಕೇರಿ: ಬಹು ನಿರೀಕ್ಷಿತ ಕೊಡವ ಕುಟುಂಬಗಳ ನಡುವಿನ ಪ್ರತಿಷ್ಠಿತ ಕುಂಡ್ಯೋಳಂಡ ಹಾಕಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಇನ್ನು ಎಂಟೇ ದಿನದಲ್ಲಿ ಅಂದರೆ ಮಾರ್ಚ್ 30ರಂದು ಉದ್ಘಾಟನೆಗೊಳ್ಳಲಿದ್ದು, ಏಪ್ರಿಲ್ 28ರವರೆಗೂ ಹಾಕಿ ಪ್ರಿಯರಿಗೆ ರಸದೌತಣ ನೀಡಲಿದೆ.

ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಭಾಗವಹಿಸಲು 360 ತಂಡಗಳು ನೋಂದಣಿ ಮಾಡಿಕೊಂಡಿರುವುದು ದಾಖಲೆ ಎನಿಸಿದೆ. ಉದ್ಘಾಟನಾ ಪಂದ್ಯವು ಕೂರ್ಗ 11 ಮತ್ತು ಇಂಡಿಯನ್ ನೇವಿ ಮಧ್ಯೆ ನಡೆಯಲಿದ್ದು, ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಹ ಪಾಲ್ಗೊಳ್ಳುತ್ತಿರುವುದು ಮತ್ತೂ ವಿಶೇಷ ಎನಿಸಿದೆ.

ಹೀಗೆ ಅನೇಕ ವಿಶೇಷಗಳು, ದಾಖಲೆಗಳನ್ನು ಒಳಗೊಂಡಿರುವ ಪ್ರತಿಷ್ಠಿತ ಟೂರ್ನಿಯ ಕುರಿತು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಾಲು ಸಾಲು ಮಾಹಿತಿಗಳನ್ನು ನೀಡಿದ ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ, ‘ಪಾಂಡಂಡ ಕುಟ್ಟಣ್ಣಿ ಹಾಗೂ ಅವರ ಸೋದರ ಕಾಶಿ ಅವರಿಂದ ಕೊಡವ ಹಾಕಿ ಉತ್ಸವ ಆರಂಭವಾಯಿತು. 1997ರಲ್ಲಿ ಕರಡದಲ್ಲಿ ಪಾಂಡಂಡ ಕುಟುಂಬ ಮೊದಲ ಬಾರಿಗೆ ಆಯೋಜಿಸಿದ್ದ ಹಾಕಿಹಬ್ಬದಲ್ಲಿ 60 ತಂಡಗಳು ಪಾಲ್ಗೊಂಡಿದ್ದವು. ಈ ಬಾರಿ 360 ತಂಡಗಳು ನೋಂದಣಿಯಾಗಿವೆ’ ಎಂದು ಹೇಳಿದರು.

ಕ್ರೀಡಾಕೂಟದ ಸಂಚಾಲಕ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ಮಾತನಾಡಿ, ‘24ನೇ ಹಾಕಿ ಹಬ್ಬವನ್ನು ಕುಂಡ್ಯೋಳಂಡ ಕುಟುಂಬದ ಸಾರಥ್ಯದಲ್ಲಿ ನಡೆಸಲಾಗುತ್ತಿದೆ. ಕೊಡವ ಹಾಕಿ ಅಕಾಡೆಮಿ, ಹಾಕಿ ಕೂರ್ಗ್, ಹಾಕಿ ಕರ್ನಾಟಕ ಹಾಗೂ ಸ್ಥಳೀಯ ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ವಿಜೇತ ತಂಡಕ್ಕೆ ₹ 4 ಲಕ್ಷ, ದ್ವಿತೀಯ ₹ 3 ಲಕ್ಷ, ತೃತೀಯ ₹ 2 ಲಕ್ಷ ಮತ್ತು ನಾಲ್ಕನೇ ಸ್ಥಾನದ ತಂಡಕ್ಕೆ ₹ 1 ಲಕ್ಷ ನಗದು ಮಾತ್ರವಲ್ಲದೆ ಬಹುಮಾನಗಳನ್ನು ನೀಡಲಾಗುವುದು. ಶಾಸಕ ಎ.ಎಸ್.ಪೊನ್ನಣ್ಣ ಹಾಕಿ ಹಬ್ಬವನ್ನು ಉದ್ಘಾಟಿಸಲಿದ್ದು, ಬರಹಗಾರರಾದ ಕಂಬೇರಂಡ ಕಾವೇರಿ ಪೊನ್ನಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ’ ಎಂದು ಹೇಳಿದರು.

ಖಜಾಂಚಿ ಕುಂಡ್ಯೋಳಂಡ ವಿಶು ಪೂವಯ್ಯ ಮಾತನಾಡಿ, ‘ಟೂರ್ನಿಗೆ ₹ 2 ಕೋಟಿ ಖರ್ಚಾಗುತ್ತಿದ್ದು, ಕುಂಡ್ಯೋಳಂಡ ಕುಟುಂಬಸ್ಥರಿಂದ ₹ 30 ಲಕ್ಷ ಸಂಗ್ರಹಿಸಲಾಗಿದೆ. ಕಳೆದ ವರ್ಷದ ಹಾಕಿ ಹಬ್ಬಕ್ಕೆ ಸರ್ಕಾರ ₹ 1 ಕೋಟಿ ನೀಡಿತ್ತು. ಈ ಬಾರಿ ಸರ್ಕಾರದ ಅನುದಾನ ಶೀಘ್ರ ದೊರೆತರೆ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.

ಅಧ್ಯಕ್ಷ ರಮೇಶ್ ಮುದ್ದಯ್ಯ ಮಾತನಾಡಿ, ‘ಕ್ರೀಡೆಯೊಂದಿಗೆ ವೃತ್ತಿ ಮಾರ್ಗದರ್ಶನ, ಮ್ಯಾರಥಾನ್, ವಧುವರರ ಸಮಾವೇಶ, ಆಹಾರ ಉತ್ಸವ, ಆರೋಗ್ಯ ಶಿಬಿರ, ಹಾಕಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಆಟಗಾರರ ಪುನರ್ ಮಿಲನ ಮತ್ತು ಬಾಳೋಪಾಟ್ ತರಬೇತಿ ಮತ್ತಿತರ ಕಾರ್ಯಕ್ರಮಗಳು ಕೂಡ ನಡೆಯಲಿದೆ. ಅನೇಕ ಆಕರ್ಷಕ ಮಳಿಗೆಗಳು ಇಲ್ಲಿ ಗಮನ ಸೆಳೆಯಲಿವೆ’ ಎಂದರು.

ಕೊಡವ ಹಾಕಿ ಅಕಾಡೆಮಿ ಕಳೆದ ವರ್ಷದಿಂದ ಒಂದು ಕೆಜಿ ಬೆಳ್ಳಿಯ ರೋಲಿಂಗ್ ಟ್ರೋಫಿ ನೀಡಿದೆ. ಈ ಬಾರಿ ‘ಮ್ಯಾನ್ ಆಫ್ ದಿ ಫೆಸ್ಟಿವಲ್’ ಆಟಗಾರನಿಗೆ ‘ಏತರ್’ ಸ್ಕೂಟರ್ ಸಂಸ್ಥೆ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಬಹುಮಾನವಾಗಿ ನೀಡಲಿದೆ. ಬೆಂಗಳೂರಿನ ಪ್ರತಿಷ್ಠಿತ ಆರ್.ವಿ ವಿಶ್ವವಿದ್ಯಾನಿಲಯವು ಅಕಾಡೆಮಿ ಶಿಫಾರಸ್ಸು ಮಾಡುವ ಹಾಕಿಪಟುವಿಗೆ ಕಾಲೇಜಿನಲ್ಲಿ ಓದಲು ವಿದ್ಯಾರ್ಥಿ ವೇತನ ಸಹಿತ ಅವಕಾಶ ನೀಡಲಿದೆ’ ಎಂದು ತಿಳಿಸಿದರು.

ಹಾಕಿ ಅಕಾಡೆಮಿಯ ಉಪಾಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಮಾತನಾಡಿ, ‘ಹಾಕಿ ಅಕಾಡೆಮಿಯು 2025ರಲ್ಲಿ 25ನೇ ಆವೃತ್ತಿಯ ಕೊಡವ ಕುಟುಂಬಗಳ ನಡುವಿನ ಹಾಕಿಹಬ್ಬ ನಡೆಸಲು ಮುದ್ದಂಡ ಕುಟುಂಸ್ಥರಿಗೆ ಅವಕಾಶ ನೀಡಿದೆ. ಈ ಹಾಕಿಹಬ್ಬ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವುದು ವಿಶೇಷ’ ಎಂದು ತಿಳಿಸಿದರು.

ಕಾರ್ಯಾಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT