ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ: ಜೀವಕ್ಕೆ ಎರವಾಗುತ್ತಿರುವ ವಿದ್ಯುತ್‌ ತಂತಿ

ಕೊಡಗಿನಲ್ಲಿ ವಿದ್ಯುತ್ ತಂತಿ ತಗುಲಿ ಹಲವು ಸಾವು: ನಿರ್ಲಕ್ಷ್ಯಕ್ಕೆ ಬಲಿಯಾಗುತ್ತಿವೆ ಬಡಜೀವಗಳು
Published 27 ನವೆಂಬರ್ 2023, 6:30 IST
Last Updated 27 ನವೆಂಬರ್ 2023, 6:30 IST
ಅಕ್ಷರ ಗಾತ್ರ

ಮಡಿಕೇರಿ: ಬೆಳಕು ನೀಡಬೇಕಾದ ವಿದ್ಯುತ್ ತಂತಿಗಳು ಕೊಡಗು ಜಿಲ್ಲೆಯಲ್ಲಿ ಯಮಪಾಶಗಳಾಗುತ್ತಿವೆ. ನಿರ್ಲಕ್ಷ್ಯ ಹಾಗೂ ಉದಾಸೀನದಿಂದ ಇವುಗಳಿಗೆ ಸಿಲುಕಿ ಬಡವರು ಮೃತಪಡುತ್ತಿದ್ದಾರೆ. ಸಾವು– ನೋವನ್ನು ನಿಯಂತ್ರಿಸಲು ಜಿಲ್ಲಾಡಳಿತ ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿಲ್ಲ.

ವಿದ್ಯುತ್ ತಂತಿಗೆ ಸಿಲುಕಿ ಮೃತಪಡುತ್ತಿರುವವರಲ್ಲಿ ಹೆಚ್ಚಾಗಿ ಬಡ ಕಾರ್ಮಿಕರು, ಲೈನ್‌ಮನ್‌ಗಳೇ ಆಗಿದ್ದಾರೆ. ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ತೋಟಗಳಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳಿಂದ ಜೀವಭಯದಲ್ಲೇ ಕೆಲಸ ಮಾಡುವಂತಾಗಿದೆ.

ಸುರಿಯುವ ಮಳೆಯಲ್ಲೇ ಕಂಬ ಹತ್ತಿ ವಿದ್ಯುತ್ ಸಂಪರ್ಕ ನೀಡುವ ಲೈನ್‌ಮೆನ್‌ಗಳ ಪಾಡಂತೂ ಶೋಚನೀಯವಾಗಿದೆ. ಮಳೆ ನಿಂತ ಮೇಲೆ ಸಂಪರ್ಕ ಕಲ್ಪಿಸುವುದಿರಲಿ, ಸ್ವಲ್ಪ ತಡವಾದರೂ ಸಾಕು, ಬಾಯಿಗೆ ಬಂದಂತೆ ತೆಗಳುವವರೇ ಅಧಿಕ. ಜನರ ಬೈಗುಳ ತಡೆಯಲಾರದೇ ಲೈನ್‌ಮೆನ್‌ಗಳು ಸುರಿಯುವ ಮಳೆಯಲ್ಲೇ ಕಂಬ ಹತ್ತಿ ದುರಸ್ತಿ ಮಾಡಬೇಕಿದೆ. ಇಂತಹ ಹೊತ್ತಿನಲ್ಲಿ ಸಣ್ಣ ನಿರ್ಲಕ್ಷ್ಯ ವಹಿಸಿದರೂ ಅಪಾಯ ಕಟ್ಟಿಟ್ಟ ಬುತ್ತಿ.

ಇನ್ನು ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಮುಂದೆಯೇ ಚರಂಡಿಯೊಳಗೆ ವಿದ್ಯುತ್ ಕಂಬಗಳಿವೆ. ಕಾಲೇಜ್ ರಸ್ತೆಯ ಕೆಲವೆಡೆ ವಿದ್ಯುತ್ ಕಂಬಗಳಿಗೆ ಬಳ್ಳಿಗಳು ಹಬ್ಬಿವೆ. ಅನೇಕ ಕಡೆ ವಿದ್ಯುತ್ ಪರಿವರ್ತಕಗಳಿಗೆ ತಂತಿ ಬೇಲಿಗಳಿಲ್ಲ. ರಸ್ತೆಯಲ್ಲೇ ಇರುವ ವಿದ್ಯುತ್ ಕಂಬವೊಂದಕ್ಕೆ ಕಾರೊಂದು ಡಿಕ್ಕಿ ಹೊಡೆದು ಈಚೆಗಷ್ಟೇ ವ್ಯಕ್ತಿಯೊಬ್ಬರು ಮಡಿಕೇರಿಯ ಮುತ್ತಪ್ಪ ದೇಗುಲದ ರಸ್ತೆಯಲ್ಲಿ ಮೃತಪಟ್ಟಿದ್ದರು. ಇಂತಹ ಅಪಾಯಕಾರಿ ಸ್ಥಿತಿಯಲ್ಲಿರುವ ಕಂಬಗಳು ಸಾಕಷ್ಟಿವೆ.

ನಾಪೋಕ್ಲು ಭಾಗದಲ್ಲೂ ಸಮಸ್ಯೆ: ನಾಪೋಕ್ಲು ವ್ಯಾಪ್ತಿಯಲ್ಲಿ ವಿದ್ಯುತ್ ವಿತರಣ ಕೇಂದ್ರ ಇಲ್ಲ. ಮೂರ್ನಾಡಿನಲ್ಲಿ ವಿದ್ಯುತ್ ಪೂರೈಕೆ ಕೇಂದ್ರ ಇದ್ದು, ಮಳೆಗಾಲದಲ್ಲಿ ಈ ವ್ಯಾಪ್ತಿಯಲ್ಲಿ ಯಾವುದೇ ಭಾಗದಲ್ಲಿ ಮರದ ಕೊಂಬೆ ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದರೂ ಪೂರ್ಣ ನಾಲ್ಕುನಾಡಿಗೆ ವಿದ್ಯುತ್ ಸಮಸ್ಯೆ ಕಾಡುತ್ತದೆ.

ಧಾರಾಕಾರ ಮಳೆಗೆ ಪ್ರವಾಹಕ್ಕೆ ತುತ್ತಾಗುವ ಚೆರಿಯಪರಂಬು ಸೇರಿದಂತೆ ಕೆಲವು ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜು ತಂತಿಗಳು ಗದ್ದೆ ಮತ್ತು ತೋಟಗಳಲ್ಲಿ ಕಡಿಮೆ ಎತ್ತರದಲ್ಲಿ ಹಾದುಹೋಗಿವೆ. ಈ ತಂತಿಗಳು ಮಳೆಗಾಲದಲ್ಲಿ ಪ್ರವಾಹದಿಂದ ಬಹು ಬೇಗನೆ ಮುಳುಗಡೆಯಾಗುತ್ತಿವೆ. ಇಲ್ಲಿನ ಗ್ರಾಮಸ್ಥರು ಪ್ರವಾಹ ಭೀತಿಯ ನಡುವೆಯೂ ಅದೆಷ್ಟೋ ದಿನಗಳು ಕತ್ತಲೆಯಲ್ಲಿ ಕಳೆಯುವ ಪರಿಸ್ಥಿತಿ ಇದೆ. ಮಳೆಗಾಲದಲ್ಲಿ ಅಗಾಗ್ಗೆ ಬೀಸುವ ಗಾಳಿ-ಮಳೆಗೆ ಮರ ಹಾಗೂ ಮರದ ಕೊಂಬೆಗಳು ವಿದ್ಯುತ್‌ ಕಂಬ ಹಾಗೂ ತಂತಿಗಳ ಮೇಲೆ ಬಿದ್ದು, ಅವುಗಳು ತುಂಡಾಗಿ ನೆಲಕ್ಕುರುಳುತ್ತವೆ.

ಇದರ ದುರಸ್ತಿಕಾರ್ಯವನ್ನು ವಹಿಸವುದು ಇಲ್ಲಿನ ಸೆಸ್ಕ್ ಕಚೇರಿಯಲ್ಲಿ ಬೆರಳೆಣಿಕೆಯ ಸಿಬ್ಬಂದಿಯಿಂದ ಸಾಧ್ಯವಾಗುತ್ತಿಲ್ಲ. ಇರುವ ಲೈನ್‌ಮೆನ್‌ಗಳು ಮಳೆ- ಚಳಿಯಲ್ಲಿ ಕಷ್ಟಪಟ್ಟು ದುರಸ್ತಿಗೆ ಮುಂದಾದರೂ ಯಥಾಸ್ಥಿತಿಗೆ ಬರಲು ದಿನಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದ್ದು ಇದರಿಂದ ಹಳ್ಳಿ ಪ್ರದೇಶಗಳ ಜನತೆ ವಾರಗಟ್ಟಲೆ ಕತ್ತಲೆಯಲ್ಲಿ ದಿನ ದೂಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಗ್ರಾಮದ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೂರ್ನಾಡು-ನಾಪೋಕ್ಲು ನಡುವೆ ಎಕ್ಸ್ ಪ್ರೆಸ್ ಲೈನ್ ಅಳವಡಿಸಿದರೂ ಜನರ ವಿದ್ಯುತ್ ಬವಣೆ ನೀಗಿಲ್ಲ. ನೂತನವಾಗಿ ಆಯ್ಕೆಯಾಗಿರುವ ಶಾಸಕರು ವಿದ್ಯುತ್ ಸಮಸ್ಯೆ ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಗ್ರಾಮದ ಜನರು ಹೊಂದಿದ್ದಾರೆ.  

ಮಡಿಕೇರಿಯ ವಿದ್ಯುತ್ ಪರಿವರ್ತಕಗಳ ಸುತ್ತ ಗಿಡಗಂಟಿಗಳು ಬೆಳೆದಿರುವುದು ಚಿತ್ರ: ರಂಗಸ್ವಾಮಿ
ಮಡಿಕೇರಿಯ ವಿದ್ಯುತ್ ಪರಿವರ್ತಕಗಳ ಸುತ್ತ ಗಿಡಗಂಟಿಗಳು ಬೆಳೆದಿರುವುದು ಚಿತ್ರ: ರಂಗಸ್ವಾಮಿ

ಜೀವ ಹೀರುವ ಅಲ್ಯುಮಿನಿಯಂ ಏಣಿಗಳು:

ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕಿನಾದ್ಯಂತ ಹೆಚ್ಚಿನ ವಿದ್ಯುತ್ ಮಾರ್ಗಗಳು ಕಾಫಿ ತೋಟದ ನಡುವೆಯೇ ಹಾದು ಹೋಗಿವೆ. ಹೀಗಾಗಿ ಕಾಫಿ, ಮೆಣಸು ಕೊಯ್ಯುವಾಗ ಅಲ್ಯುಮಿನಿಯಂ ಏಣಿ ವಿದ್ಯುತ್ ತಂತಿಗೆ ಸ್ಪರ್ಶಿಸಿ ವರ್ಷದಲ್ಲಿ 5ರಿಂದ 6 ಮಂದಿ ಸಾವನ್ನಪ್ಪುತ್ತಿದ್ದಾರೆ. ಜತೆಗೆ, ಬಹಳಷ್ಟು ಕಡೆಗಳಲ್ಲಿ ಭತ್ತದ ಗದ್ದೆಯಲ್ಲಿಯೂ ವಿದ್ಯುತ್ ಮಾರ್ಗ ಹಾದು ಹೋಗಿದೆ. ಈ ಎಲ್ಲ ಕಂಬಗಳು ಒಂದೊಂದು ಕಡೆಗೆ ವಾಲಿ ಕೊಂಡಿವೆ. ಕೃಷಿ ಮಾಡುವಾಗ ರೈತರು ಭತ್ತದ ಗದ್ದೆಯಲ್ಲಿ ಭೀತಿಯಿಂದ ಉಳುಮೆ ಮಾಡುವಂತಾಗಿದೆ.

ಅಲ್ಲದೆ, ಕೆಲವು ವಿದ್ಯುತ್ ಮಾರ್ಗಗಳು ರಸ್ತೆ ಬದಿಯಲ್ಲಿಯೇ ಹೋಗಿವೆ. ವಾಹನಗಳು ಚಲಿಸುವಾಗ ತುಸು ರಸ್ತೆ ಬದಿಗೆ ಸರಿದರೂ ಕಂಬಕ್ಕೆ ಗುದ್ದಲಿವೆ. ಬಾಳೆಲೆ, ಕಿರುಗೂರು. ಪೊನ್ನಂಪೆಟೆ, ಕುಂದ ಮಾರ್ಗಗಳಲ್ಲಿ ಇದು ಸಾಮಾನ್ಯವಾಗಿದೆ.

ವಿದ್ಯುತ್ ಪರಿವರ್ತಕಗಳಿಗೆ ಇಲ್ಲ ತಂತಿಬೇಲಿ:

ವಿರಾಜಪೇಟೆ: ಪಟ್ಟಣ ಹಾಗೂ ಸುತ್ತಮುತ್ತಲಿನ ಕೆಲವೆಡೆ ವಿದ್ಯುತ್ ಕಂಬಗಳು ದುಸ್ಥಿಯಲ್ಲಿದ್ದರೆ, ಕೆಲವೆಡೆ ತಂತಿಗಳು ತೀರಾ ಕೆಳಮಟ್ಟದಲ್ಲಿ ಹಾದುಹೋಗಿವೆ. ಇನ್ನು ಕೆಲವೆಡೆ ವಿದ್ಯುತ್ ಪರಿವರ್ತಕಗಳಿಗೆ ಸೂಕ್ತ ರೀತಿಯಲ್ಲಿ ತಂತಿಬೇಲಿಯನ್ನು ಅಳವಡಿಸಲಾಗಿಲ್ಲ. ಜತೆಗೆ, ವಿರಾಜಪೇಟೆ ವ್ಯಾಪ್ತಿಯಲ್ಲಿ ಕೆಲ ತಿಂಗಳುಗಳ ಅಂತರದಲ್ಲಿ ಇಬ್ಬರು ಸೆಸ್ಕ್ ಸಿಬ್ಬಂದಿ ಕರ್ತವ್ಯದಲ್ಲಿದ್ದ ಸಂದರ್ಭ ಮೃತಪಟ್ಟಿರುವುದು ಆತಂಕ ಮೂಡಿಸಿದೆ.

ಶನಿವಾರಸಂತೆ ಸಮೀಪ ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ಕಂಬ
ಶನಿವಾರಸಂತೆ ಸಮೀಪ ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ಕಂಬ

ಸಮೀಪದ ಕುಟ್ಟಂದಿಯಲ್ಲಿ ಕೆಲ ತಿಂಗಳ ಹಿಂದೆ ಹಾಗೂ ಸಮೀಪದ ಆರ್ಜಿಯ ಸರ್ಕಾರಿ ಶಾಲೆಯ ಮುಂಭಾಗದಲ್ಲಿನ ಕಂಬವೊಂದರ ಬಳಿ ಲೈನ್ ಚಾರ್ಚ್ ಮಾಡಲು ತೆರಳಿದ್ದ ಸೆಸ್ಕ್ ಸಿಬ್ಬಂದಿ ಅನಿಲ್ ಎಂಬುವವರು ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದರು.

ಪಟ್ಟಣದ ಸಂತ ಅನ್ನಮ್ಮ ಶಾಲೆಯ ಬಳಿಯಿರುವ ವಿದ್ಯುತ್ ಪರಿವರ್ತಕವನ್ನು ಅಳವಡಿಸಲಾಗಿರುವ ಕಂಬದ ಸಲಾಕೆಯೊಂದು ಸುತ್ತಲು ಅಳವಡಿಸಿರುವ ತಂತಿಬೇಲಿಯ ಮೇಲ್ಭಾಗಕ್ಕೆ ತಾಗಿಕೊಂಡಿದೆ. ಸಮೀಪದಲ್ಲೆ ಶಾಲೆ-ಕಾಲೇಜುಗಳಿರುವುದರಿಂದ ನಿತ್ಯ ನೂರಾರು ವಿದ್ಯಾರ್ಥಿಗಳು ವಿದ್ಯುತ್ ಪರಿವರ್ತಕದ ಸಮೀಪದಲ್ಲೆ ಹಾದುಹೋಗುತ್ತಿರುತ್ತಾರೆ.

ವಿರಾಜಪೇಟೆ ಸಮೀಪದ ಆರ್ಜಿಯ ಸರ್ಕಾರಿ ಶಾಲೆಯ ಮುಂಭಾಗದಲ್ಲಿರುವ ಅನಾಹುತ ನಡೆದ ಕಂಬ. ಇಲ್ಲಿ ಸೆಸ್ಕ್ ಸಿಬ್ಬಂದಿ ಈಚೆಗೆ ಮೃತಪಟ್ಟಿದ್ದರು. ನಂತರವೂ ಕಂಬದ ಸ್ಥಿತಿ ಹೀಗಿದೆ.
ವಿರಾಜಪೇಟೆ ಸಮೀಪದ ಆರ್ಜಿಯ ಸರ್ಕಾರಿ ಶಾಲೆಯ ಮುಂಭಾಗದಲ್ಲಿರುವ ಅನಾಹುತ ನಡೆದ ಕಂಬ. ಇಲ್ಲಿ ಸೆಸ್ಕ್ ಸಿಬ್ಬಂದಿ ಈಚೆಗೆ ಮೃತಪಟ್ಟಿದ್ದರು. ನಂತರವೂ ಕಂಬದ ಸ್ಥಿತಿ ಹೀಗಿದೆ.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜಿನ ಸಮೀಪದಲ್ಲಿರುವ ವಿದ್ಯುತ್ ಪರಿವರ್ತಕ್ಕೆ ಒತ್ತಿಕೊಂಡಿರುವ ಕಂಬವೊಂದು ಶಿಥಿಲಾವಸ್ಥೆಯಲ್ಲಿದೆ. ಜತೆಗೆ, ಕಂಬದ ಸಮೀಪದಲ್ಲೆ ಮಣ್ಣು ಕೂಡ ಕುಸಿದು ಕಂಬ ಬೀಳುವ ಅಪಾಯ ಹೆಚ್ಚಿದೆ. ಇದರೊಂದಿಗೆ ಕೆಲವೆಡೆಗಳಲ್ಲಿ ವಿದ್ಯುತ್ ಕಂಬಗಳು ಶಿಥಿಲಾವಸ್ಥೆಯಲ್ಲಿದ್ದರೆ, ಮತ್ತೆ ಕೆಲವೆಡೆ ವಾಲಿಕೊಂಡು ಬೀಳುವ ಸ್ಥಿತಿಯಲ್ಲಿದೆ.

ನಿರ್ವಹಣೆ: ಕೆ.ಎಸ್.ಗಿರೀಶ

ಮಾಹಿತಿ: ಜೆ.ಸೋಮಣ್ಣ, ಸಿ.ಎಸ್.ಸುರೇಶ್, ಹೇಮಂತ್, ಡಿ.ಪಿ.ಲೋಕೇಶ್, ಶರಣ್.

ವಿರಾಜಪೇಟೆಯ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಬಳಿಯಿರುವ ವಿದ್ಯುತ್ ಪರಿವರ್ತಕವನ್ನು ಅಳವಡಿಸಲಾಗಿರುವ ಕಂಬದ ಸಲಾಕೆಯೊಂದು ಸುತ್ತಲು ಅಳವಡಿಸಿರುವ ತಂತಿಬೇಲಿಯ ಮೇಲ್ಭಾಗಕ್ಕೆ ತಾಗಿಕೊಂಡಿರುವುದು
ವಿರಾಜಪೇಟೆಯ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಬಳಿಯಿರುವ ವಿದ್ಯುತ್ ಪರಿವರ್ತಕವನ್ನು ಅಳವಡಿಸಲಾಗಿರುವ ಕಂಬದ ಸಲಾಕೆಯೊಂದು ಸುತ್ತಲು ಅಳವಡಿಸಿರುವ ತಂತಿಬೇಲಿಯ ಮೇಲ್ಭಾಗಕ್ಕೆ ತಾಗಿಕೊಂಡಿರುವುದು
ಎಚ್.ಎಂ.ಬೆನ್ನಿ ಆರ್ಜಿ ಗ್ರಾಮ.
ಎಚ್.ಎಂ.ಬೆನ್ನಿ ಆರ್ಜಿ ಗ್ರಾಮ.
ದುರ್ಘಟನೆ ಸಂಭವಿಸುವ ಮೊದಲೇ ಎಚ್ಚೆತ್ತುಕೊಳ್ಳಿ
ಈಚೆಗೆ ದುರ್ಘಟನೆ ನಡೆದ ವಿರಾಜಪೇಟೆ ಸಮೀಪದ ಆರ್ಜಿಯ ಶಾಲೆಯ ಸಮೀಪದಲ್ಲೆ ಇರುವ 11 ಕೆ.ವಿ ಸಾಮರ್ಥ್ಯದ  ಕಂಬದ ಸುತ್ತಲು ಯಾವುದೇ ರಕ್ಷಣಾ ಬೇಲಿ ಇಲ್ಲ. ಜತೆಗೆ ಸುತ್ತಲೂ ಗಿಡಗಂಟಿಗಳಿಂದ ಆವರಿಸಿದ್ದು ಹೆಚ್ಚಿನ ಆತಂಕ ಮೂಡಿಸಿದೆ. ಪ್ರಾಥಮಿಕ ಶಾಲೆ ಸಮೀಪದಲ್ಲೆ ಇರುವುದರಿಂದ ಪುಟ್ಟ ಮಕ್ಕಳು ಇದೇ ಭಾಗದಲ್ಲಿ ಓಡಾಡುತ್ತಿರುತ್ತಾರೆ. ಮತ್ತಷ್ಟು ಅನಾಹುತ ಸಂಭವಿಸುವ ಮೊದಲು ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕಿದೆ- ಎಚ್.ಎಂ.ಬೆನ್ನಿ ಆರ್ಜಿ ಗ್ರಾಮ.
ಎಸ್.ಪಿ.ಸತೀಶ್ ಕಾಫಿ ಬೆಳೆಗಾರರು.
ಎಸ್.ಪಿ.ಸತೀಶ್ ಕಾಫಿ ಬೆಳೆಗಾರರು.
ವಿದ್ಯುತ್ ತಂತಿಗಳು ಕೆಳಕ್ಕೆ ಬಾಗಿವೆ
ಸೋಮವಾರಪೇಟೆ ತಾಲ್ಲೂಕಿನ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗುಳ ಗ್ರಾಮದ ಮಾಲಂಬಿ ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ವಿದ್ಯುತ್ ತಂತಿಗಳು ಕೆಳಕ್ಕೆ ಬಾಗಿವೆ. ಯಾವುದಾದರೂ ದೊಡ್ಡ ವಾಹನಗಳು ಇಲ್ಲಿ ಸಂಚರಿಸಿದರೆ ಅದಕ್ಕೆ ತಾಗುತಿವೆ. ಇದನ್ನು ಸರಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಇಂದಿಗೂ ಸರಿಪಡಿಸಲು ಮುಂದಾಗುತ್ತಿಲ್ಲ. ಅನಾಹುತ ನಡೆಯುವುದಕ್ಕೂ ಮುನ್ನ ಇದನ್ನು ಸರಿಪಡಿಸಲು ಇಲಾಖೆ ಮುಂದಾಗಬೇಕಿದೆ-ಎಸ್.ಪಿ.ಸತೀಶ್ ಕಾಫಿ ಬೆಳೆಗಾರರು.
ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಿ
ನಾಪೋಕ್ಲು ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ಕೇಂದ್ರವನ್ನು ಸ್ಥಾಪಿಸಬೇಕು ಅದರಂತೆ ಕಚೇರಿಯಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಈ ವ್ಯಾಪ್ತಿಯಲ್ಲಿ ಜನರು ಅನುಭವಿಸುತ್ತಿರುವ ನಿರಂತರ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಸಂಬಂಧಪಟ್ಟ ಸೆಸ್ಕ್ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಪರವಂಡ ಸಿರಾಜ್ ನಾಪೋಕ್ಲು.
ಟಿ.ಆರ್.ವಿನೋದ್
ಟಿ.ಆರ್.ವಿನೋದ್
ಅಪಾಯಕಾರಿ ವಿದ್ಯುತ್ ಕಂಬಗಳು:
ಗೋಣಿಕೊಪ್ಪಲು ಪಟ್ಟಣದ ಬೈಪಾಸ್ ತೋಡಿನ ಒಂದು ಬದಿಯಲ್ಲಿ ನೆಟ್ಟಿರುವ ವಿದ್ಯುತ್ ಕಂಬಗಳು ನೇರವಾಗಿ ನಿಂತೇ ಇಲ್ಲ. ಈ ಬಗ್ಗೆ ಸೆಸ್ಕ್‌ಗೆ ಹಲವು ಬಾರಿ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು -ಪುಳಿಂಜನ ಪೂವಯ್ ಪೊನ್ನಂಪೇಟೆಯ ವಿನೋದ್
ಎಚ್ಚರಿಕೆ ವಹಿಸಲಾಗಿದೆ ಸೂಚನೆ ನೀಡಲಾಗಿದೆ...: ಕಾಫಿ ತೋಟದ ಒಳಗೆ ಹಾದು ಹೋಗಿರುವ ವಿದ್ಯುತ್ ಮಾರ್ಗದಲ್ಲಿ ಮರದ ರೆಂಬೆಗಳನ್ನು ಕಡಿದು ಮಾರ್ಗ ಸ್ವಚ್ಚಗೊಳಿಸಲಾಗಿದೆ. ತೋಟದ ಮಾಲೀಕರು ಹಾಗೂ ಕಾರ್ಮಿಕರು ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ. ಕಾಳು ಮೆಣಸು ಕೊಯ್ಯಲು ಬಿದಿರಿನ ಏಣಿ ಬಳಸುವಂತೆ ಕಟ್ಟು ನಿಟ್ಟಾಗಿ ಸೂಚಿಸಲಾಗಿದೆ. ರಸ್ತೆ ಬದಿಯಲ್ಲಿ ಮತ್ತು ಬೈಪಾಸ್ ತೋಡುಗಳ ಬದಿಯಲ್ಲಿ ಸತ್ವ ಕಳೆದುಕೊಂಡಿರುವ ವಿದ್ಯುತ್ ಕಂಬಗಳ ಬದಲಾವಣೆ ಮಾಡಲಾಗುವುದು.
ನೀಲಶೆಟ್ಟಿ, ಸಹಾಯಕ ನಿರ್ವಾಹಕ ಎಂಜಿನಿಯರ್ ಸೆಸ್ಕ್ ಗೋಣಿಕೊಪ್ಪಲು ಉಪವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT