ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ಹಾವಳಿ: ಗ್ರಾಮಸ್ಥರ ಆತಂಕ

ಕಾಫಿ ತೋಟವನ್ನೇ ಕಾಡು ಮಾಡಿಕೊಂಡ ಗಜ‍ಪಡೆ; ಶಾಶ್ವತ ಪರಿಹಾರಕ್ಕೆ ರೈತರ ಆಗ್ರಹ
Last Updated 30 ಜೂನ್ 2021, 4:54 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ದಕ್ಷಿಣ ಕೊಡಗಿನಲ್ಲಿ ಇತ್ತೀಚೆಗೆ ಕಾಡಾನೆ ಹಾವಳಿ ಹೆಚ್ಚಾಗಿದೆ. ಹೆದ್ದಾರಿ, ಕಾಫಿ ತೋಟದ ರಸ್ತೆಗಳಲ್ಲೇ ಕಂಡುಬರುತ್ತಿದ್ದು, ಇದರಿಂದ ಸಾರ್ವಜನಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ನಾಗರಹೊಳೆ ಅರಣ್ಯದಿಂದ 25 ಕಿ.ಮೀ ದೂರದವರೆಗೂ ಕಾಫಿ ತೋಟದಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿವೆ. ತೋಟವನ್ನೇ ಕಾಡು ಮಾಡಿಕೊಂಡಿವೆ. ಆಹಾರ ಹುಡುಕಿಕೊಂಡು ತೋಟದಿಂದ ತೋಟಕ್ಕೆ ಆನೆಗಳು ಅಲೆದಾಡುತ್ತಿವೆ.

ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಹೆದ್ದಾರಿ ಮತ್ತು ಕಾಫಿ ತೋಟದ ರಸ್ತೆಗಳಲ್ಲಿ ಜನರು ಹಾಗೂ ವಾಹನಗಳ ಓಡಾಟ ಕಡಿಮೆಯಿತ್ತು. ಈ ಸಂದರ್ಭದಲ್ಲಿ ಆನೆಗಳು ನಾಡಿನತ್ತ ಬಂದವು.

ಕಾಡಿನಲ್ಲಿ ಬಿದಿರು ಒಣಗಿದ ಮೇಲೆ ಇಡೀ ಕಾಡು ಬರಡಾಯಿತು. ನಾಗರಹೊಳೆಯ ಬಹುಪಾಲು ಅರಣ್ಯ ನೆಡುತೋಪಾಗಿದೆ. ಇಲ್ಲಿ ತೇಗ ಮತ್ತು ಲಂಟಾನ ಬಿಟ್ಟರೆ ಇತರೆ ಗಿಡಮರಗಳು ಕಡಿಮೆ. ಇದರಿಂದ ಆನೆಗಳಿಗೆ ಕಾಡಿನಲ್ಲಿ ಆಹಾರ ಕೊರತೆ
ಕಾಡುತ್ತಿದೆ.

ವನ್ಯಜೀವಿ ತಜ್ಞರ ಪ್ರಕಾರ ಆನೆಗಳಿಗೆ ದಿನಕ್ಕೆ 200 ಕೆ.ಜಿ. ಆಹಾರ ಬೆಕಾಗಿದೆ. ಬಿದಿರು ಒಣಗಿದ ಮೇಲೆ ಈ ಪ್ರಮಾಣದ ಆಹಾರ ಅರಣ್ಯದಲ್ಲಿ ಲಭಿಸುತ್ತಿಲ್ಲ. ಹೀಗಾಗಿ ಬಾಳೆ, ತೆಂಗು, ಅಡಿಕೆ ಮೊದಲಾದ ಯೆಥೇಚ್ಛವಾಗಿ ಬೆಳೆದಿರುವ ಕಾಫಿ ತೋಟ ಅವುಗಳಿಗೆ ಸಮೃದ್ಧವಾದ
ತಾಣವಾಗಿವೆ.

ಸಾರ್ವಜನಿಕರ ಒತ್ತಾಯದಿಂದ ಅರಣ್ಯ ಇಲಾಖೆಯವರು ಆನೆಗಳನ್ನು ಕಾಡಿನತ್ತ ಓಡಿಸಿದರೂ ಅವು ಒಂದೆರಡು ದಿನಗಳಲ್ಲಿ ಮರಳಿ ಕಾಫಿ ತೋಟದತ್ತ ಬರುತ್ತಿವೆ. ಆನೆಗಳು ತೋಟದತ್ತ ನುಸುಳದಂತೆ ತಡೆಯಲು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅರಣ್ಯದಂಚಿನಲ್ಲಿ ಬೃಹತ್ ರೈಲು ಕಂಬಿಗಳ ಬೇಲಿ ಹಾಕಲಾಗಿದೆ. ಆದರೆ, ಹೊಟ್ಟೆಪಾಡಿಗಾಗಿ ರೈಲ್ವೆ ಕಂಬಿಗಳನ್ನೂ ಬೀಳಿಸಿ ಅಥವಾ ಅವುಗಳ ಮೇಲೆಯೇ ಹತ್ತಿ ಬರುತ್ತಿವೆ.

ಕಾಫಿ ತೋಟದ ಮಾರ್ಗದಲ್ಲಿ ಓಡಾಡುವ ಕಾಡಾನೆಗಳಿಗೆ ಬಹಳಷ್ಟು ಜನರು ಬಲಿಯಾಗುತ್ತಿದ್ದಾರೆ. ತಿತಿಮತಿಯ ದೇವಮಚ್ಚಿಯಲ್ಲಿ ಈಚೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ತಿತಿಮತಿ ಅಂಗಡಿಗೆ ಬರುತ್ತಿದ್ದ 60ರ ಪ್ರಾಯದ ವ್ಯಕ್ತಿಯೊಬ್ಬರನ್ನು ಆನೆ ತುಳಿದು ಸಾಯಿಸಿತ್ತು. 15 ದಿನದ ಹಿಂದೆ ಪೊನ್ನಂಪೇಟೆ –ಗೋಣಿಕೊಪ್ಪಲು ಹೆದ್ದಾರಿಯಲ್ಲಿರುವ ಪಿಎಚ್ಎಸ್ ಕಾಲೊನಿಯಲ್ಲಿ ವಾಯುವಿಹಾರ ನಡೆಸುತ್ತಿದ್ದ ಮತ್ತೊಬ್ಬ ವ್ಯಕ್ತಿಯನ್ನು ಮನೆಯ ಅನತಿ ದೂರದಲ್ಲಿಯೇ ಕೊಂದುಹಾಕಿತ್ತು. ಈ ಘಟನೆ ನಡೆದ ಮಾರನೇ ದಿನವೇ ಗೋಣಿಕೊಪ್ಪಲು ಪೊನ್ನಂಪೇಟೆ ಹೆದ್ದಾರಿಯಲ್ಲಿ ಹಾಡಹಗಲಿನಲ್ಲಿಯೇ 13 ಆನೆಗಳು ರಾಜ ಗಾಂಭೀರ್ಯದಿಂದ ಹೆಜ್ಜೆಹಾಕಿ ಇನಷ್ಟು ಆತಂಕ ಮೂಡಿಸಿದ್ದವು. ಈಗಲೂ ಇವುಗಳ ಓಡಾಟ
ತಪ್ಪಿಲ್ಲ.

‘ನಾಗರಹೊಳೆ ಅರಣ್ಯದಿಂದ 20 ಕಿ.ಮೀ ದೂರದಲ್ಲಿರುವ ಪಿಎಚ್ಎಸ್ ಕಾಲೊನಿ ಪಕ್ಕದ ತೋಟದಲ್ಲಿಯೇ ಆನೆಗಳು ಹಲವು ವರ್ಷದಿಂದ ತಂಗುತ್ತಿವೆ. ಇವುಗಳ ನಿಯಂತ್ರಣಕ್ಕೆ ಆನೆ ಬರುವ ದಾರಿಯಲ್ಲಿ ಸೋಲಾರ್ ಬೇಲಿ ನಿರ್ಮಾಣ ಮಾಡಬೇಕು. ಈ ಮೂಲಕ ಪ್ರಾಣ ಹಾನಿಯನ್ನು ತಡೆಗಟ್ಟಬೇಕು’ ಎಂದು ಪಿಎಚ್ಎಸ್ ಕಾಲೊನಿ ನಿವಾಸಿ ಕಂದ ದೇವಯ್ಯ ಆಗ್ರಹಿಸುತ್ತಾರೆ.

‘ಮಾಯಮುಡಿ ಭಾಗದ ಕಾಫಿ ತೋಟದಲ್ಲಿ ಈಗಲೂ ಕಾಡಾನೆ ಹಿಂಡು ತಂಗಿವೆ. ಅರಣ್ಯ ಇಲಾಖೆಯವರು ಅವುಗಳನ್ನು ಕಾಡಿಗಟ್ಟಿದರೂ ಅರ್ಧ ಗಂಟೆಯಲ್ಲಿ ಮತ್ತೆ ಮರಳಿ ಬರುತ್ತವೆ. ತಮ್ಮ ಮಕ್ಕಳ ಜೀವ ಭಯದಿಂದ ಕಾಡಾನೆಗಳಿಗೆ ಹೆದರಿ ಬಹಳ ಜನ ಊರು ಬಿಟ್ಟಿದ್ದಾರೆ’ ಎಂದು ಮಾಯಮುಡಿ ಗ್ರಾಮ ಪಂಚಾಯಿತಿ ಸದಸ್ಯ ಆಪಟ್ಟೀರ ಟಾಟು ಮೊಣ್ಣಪ್ಪ ಹೇಳಿದರು.

‘ಕಾಫಿ ತೋಟಕ್ಕೆ ನುಸುಳುವ ಕಾಡಾನೆಗಳನ್ನು ನಿತ್ಯವೂ ಮರಳಿ ಕಾಡಿಗಟ್ಟಲು ಕ್ರಮ ಕೈಗೊಳ್ಳಬೇಕು. ಜೀವಹಾನಿ ಆಗದಂತೆ ಎಚ್ಚರವಹಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಎನ್.ಪೃಥ್ಯು ಸಲಹೆ ನೀಡುತ್ತಾರೆ.

‘ಅರುವತ್ತೊಕ್ಕಲು ಸುತ್ತಮುತ್ತ ಕಾಡಾನೆ ಹಾವಳಿ ಅತಿಯಾಗಿದೆ. ಇವುಗಳನ್ನು ನಿಯಂತ್ರಿಸದಿದ್ದರೆ ಅರಣ್ಯ ಇಲಾಖೆ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು’ ಎಂದು ಅರುವತ್ತೊಕ್ಕಲು ಗ್ರಾಮ ಪಂಚಾಯಿತಿ ಸದಸ್ಯ ಎ.ಎ. ಸಜನ್ ಚಂಗಪ್ಪ ಎಚ್ಚರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT