ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪೋಕ್ಲು: ಹವಾಮಾನ ವೈಪರೀತ್ಯಕ್ಕೆ ಕಂಗೆಟ್ಟ ರೈತರು

Published 5 ಜನವರಿ 2024, 7:20 IST
Last Updated 5 ಜನವರಿ 2024, 7:20 IST
ಅಕ್ಷರ ಗಾತ್ರ

ನಾಪೋಕ್ಲು: ಒಂದೆಡೆ ಕಾಫಿಗೆ ನಿರೀಕ್ಷೆಗೂ ಮೀರಿದ ಬೆಲೆ, ಮತ್ತೊಂದೆಡೆ ಬಿಸಿಲಿನ ಕೊರತೆಯಿಂದ ಕಾಫಿ ಕೊಯ್ಲು ಮಾಡಲಾಗದ ಸ್ಥಿತಿ. ಎರಡು ಸನ್ನಿವೇಶಗಳ ನಡುವೆ ಸಿಲುಕಿ ಕಾಫಿ ಬೆಳೆಗಾರರು ತೊಳಲಾಡುವಂತಾಗಿದೆ.

50 ಕೆ.ಜಿ ಕಾಫಿಯ ಚೀಲವೊಂದಕ್ಕೆ ಪ್ರಸ್ತುತ ₹7000 ಕ್ಕೂ ಅಧಿಕ ದರ ಮಾರುಕಟ್ಟೆಯಲ್ಲಿ ಲಭಿಸುತ್ತಿದೆ. ಔಟ್ ಟರ್ನ್ 27 ಕ್ಕೂ ಅಧಿಕವಿದ್ದರೆ ಇನ್ನೂ ಉತ್ತಮ ದರ ಲಭಿಸುತ್ತಿದೆ. ಆದರೆ ಈ ದರ ಬೆಳೆಗಾರರ ಕೈಗೆಟುಕುತ್ತಿಲ್ಲ. ಇದುವರೆಗೆ ಇದ್ದ ದರಗಳಲ್ಲಿ ಅತಿ ಹೆಚ್ಚಿನ ದರ ಇದಾಗಿದ್ದು, ಫಸಲು ಕೈಸೇರುವ ವೇಳೆಗೆ ದರ ಕುಸಿದರೆ ಎಂಬ ಆತಂಕವೂ ಬೆಳೆಗಾರರನ್ನು ಕಾಡುತ್ತಿದೆ.

ಕಾಫಿ ಕೊಯ್ಲು ಬಿರುಸಿನಿಂದ ಸಾಗುವ ಈ ದಿನಗಳಲ್ಲಿ ಮೋಡ ಮುಸುಕಿದ ವಾತಾವರಣ, ಹನಿಮಳೆ ಬೆಳೆಗಾರರಿಗೆ ಆತಂಕ ತಂದೊಡ್ಡಿದೆ. ಹೋಬಳಿ ವ್ಯಾಪ್ತಿಯ ನೆಲಜಿ, ಕಕ್ಕಬ್ಬೆ, ಬಲ್ಲಮಾವಟಿ, ಪೇರೂರು,ಪುಲಿಕೋಟು, ಹೊದ್ದೂರು, ಬಲಮುರಿ ಸೇರಿದಂತೆ ಗ್ರಾಮೀಣ ಪ್ರದೇಶದ ಹಲವೆಡೆ ಕಾಫಿ ಕೊಯ್ಲು ಆರಂಭಗೊಂಡಿದೆ. ಬಿಸಿಲಿನ ಕೊರತೆಯಿಂದ ರೈತರು ಕಾಫಿ ಒಣಗಿಸಲು ಸಮಸ್ಯೆ ಎದುರಿಸುತ್ತಿದ್ದಾರೆ. ಮೂರು ದಿನಗಳಿಂದ ದಿನವಿಡೀ ಮೋಡದ ವಾತಾವರಣ ಇತ್ತು. ಎರಡು ದಿನಗಳಿಂದ ಹಲವೆಡೆ ಮಳೆಹನಿ ಯುತ್ತಿದ್ದು ಕಾಫಿ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಗುರುವಾರ ಬೆಳಗ್ಗಿನಿಂದಲೇ ನಾಪೋಕ್ಲು ವ್ಯಾಪ್ತಿಯಲ್ಲಿ ಮಳೆ ಸುರಿಯಿತು.

ಮನೆಯಂಗಳದಲ್ಲಿ, ಕಣದಲ್ಲಿ ಮಾತ್ರವಲ್ಲದೆ, ಬೆಳೆಗಾರರು ಕೊಯ್ಲು ಮಾಡಿದ ಕಾಫಿಯನ್ನು ಒಣಗಿಸಲು ಹುಲ್ಲುಗಾವಲು, ಮೈದಾನಗಳನ್ನೂ ಬಳಸುತ್ತಿದ್ದಾರೆ. ತುಂತುತು ನೀರಾವರಿ ಕೈಗೊಂಡ ರೈತರ ತೋಟಗಳಲ್ಲಿ ಕಾಫಿ ಬಹುತೇಕ ಹಣ್ಣಾಗಿವೆ. ಹಿಂದಿನ ವರ್ಷ ಮಳೆಯೂ ಬೇಗನೆ ಸುರಿದಿರುವುದರಿಂದ ಕಾಫಿ ಹಣ್ಣಾಗಿದ್ದು, ರೈತರು ಕೊಯ್ಲು ಕೆಲಸದಲ್ಲಿ ತೊಡಗಿದ್ದಾರೆ. ಆದರೆ ಒಣಗಿಸಲು ಬಿಸಿಲಿನ ಕೊರತೆ ಕಾಡುತ್ತಿದೆ. ವಾರಗಟ್ಟಲೆ ಬಿಸಿಲಿನ ತಾಪವೂ ಇಲ್ಲದೆ ಕಾಫಿಯನ್ನು ಒಣಗಿಸುವುದು ಕಷ್ಟಕರವಾಗಿದೆ. ರೋಬಸ್ಟಾ ಕಾಫಿ ಹಲವೆಡೆ ಹಣ್ಣಾಗಿದೆ. ಮಳೆಯಿಂದಾಗಿ ಹಣ್ಣಾದ ಕಾಫಿಗಳು ಉದುರುತ್ತಿವೆ. ಕಾಫಿನ ಕೊಯ್ಲಿನ ಜೊತೆಗೆ ಉದುರಿದ ಕಾಫಿ ಬೀಜಗಳನ್ನು ಹೆಕ್ಕುವುದು ಕಷ್ಟಕರವಾದ ಕೆಲಸ. ಬೇಗ ಕೊಯ್ಲು ಪೂರೈಸಿದರೂ ಒಣಗಿಸುವುದು ಕಷ್ಟಕರವಾಗುತ್ತಿದೆ ಎಂದು ಸ್ಥಳೀಯ ಬೆಳೆಗಾರರು ಹೇಳಿದರು.

‘ಕಳೆದ ವರ್ಷ ರೋಬಸ್ಟಾ ಕಾಫಿ ಧಾರಣೆ ಇದೇ ವೇಳೆಗೆ ಚೀಲವೊಂದಕ್ಕೆ ₹6 ಸಾವಿರ ಇತ್ತು. ಈ ವರ್ಷ ಕಾಫಿ ಕೊಯ್ಲಿನ ಅವಧಿಯಲ್ಲಿ ಮತ್ತಷ್ಟು ಏರಿಕೆ ಆಗಿದೆ. ವಾತಾವರಣದ ಏರುಪೇರಿನಿಂದ ಕೊಯ್ಲು ಕೆಲಸ ವಿಳಂಬವಾಗುತ್ತಿದೆ. ಒಣಗಿಸಲು ಬಹಳ ಕಾಲ ತೆಗೆದುಕೊಳ್ಳುತ್ತದೆ. ಕಣದಲ್ಲಿ ಹರವಿದ್ದ ಕಾಫಿಗೆ ಬಿಸಿಲು ತಾಕುವುದೇ ಇಲ್ಲ. ಪ್ರತಿದಿನ ಟಾರ್ಪಲಿನ್ ಎಳೆದು ಮುಚ್ಚುವ ಕೆಲಸ ಮಾಡಬೇಕಾಗುತ್ತದೆ’ ಎಂದು ಬೆಳಗಾರರು ಅಳಲು ತೋಡಿಕೊಂಡರು. ‘ಕಾಫಿ ಕೊಯ್ಲು ಪೂರೈಸಿ 15 ದಿನಗಳಾದರೂ ಕಾಫಿ ಒಣಗುವ ಹಂತಕ್ಕೆ ಬಂದಿಲ್ಲ. ಬಿಸಿಲಿನ ಪ್ರಖರತೆ ಇಲ್ಲದಿರುವುದು ಕಾಫಿ ಒಣಗಿಸಲು ತೊಡಕಾಗಿದೆ’ ಎಂದು ಬೇತು ಗ್ರಾಮದ ಬೆಳೆಗಾರ ಕಾಳಯ್ಯ ಹೇಳಿದರು.

‘ಕಾಫಿ ತೋಟದ ಕೊಯ್ಲು ನಿರ್ವಹಣೆ ಮಾಡಲಾಗದೆ, ಒಣಗಿಸಲು ಕಷ್ಟವಾದ್ದರಿಂದ ಕೆಲವು ವರ್ಷಗಳಿಂದ  ತೋಟವನ್ನು ಗುತ್ತಿಗೆಗೆ ಕೊಡುತ್ತಿದ್ದ ಬೆಳೆಗಾರರು, ಈ ವರ್ಷ ಅಧಿಕ ಧಾರಣೆ ಬಂದಿರುವುದರಿಂದ ಕಾರ್ಮಿಕರನ್ನು ಒಗ್ಗೂಡಿಸಿ ಕೊಯ್ಲು ಮಾಡಲು ನಿರ್ಧರಿಸಿದ್ದಾರೆ. ಆದರೆ ಕೊಯ್ಲಿಗೆ ತೊಡಕಾಗಿದೆ’ ಎಂದು ಚೋನಕೆರೆಯ ಮಹೇಶ್ ಹೇಳಿದರು.

‘ಕಳೆದ ವರ್ಷ ಜನವರಿಯಲ್ಲಿ ಮೊದಲ ಮಳೆಯಾಗಿದ್ದು ಡಿಸೆಂಬರ್ ಅಂತ್ಯದವರೆಗೂ ಇಲ್ಲಿ ಮಳೆ ಸುರಿದಿದೆ. ಈ ವರ್ಷ ಜನವರಿ ಮೊದಲ ವಾರದಲ್ಲಿ ತುಂತುರು ಮಳೆ ಆಗುತ್ತಿದೆ. ಇದು ಕಾಫಿ ಇಳುವರಿಯ ಮೇಲೆ ಪರಿಣಾಮ ಬೀರುತ್ತಿದೆ. ಹಣ್ಣು , ಕಾಯಿ, ಎಳತು ಕಾಫಿ ಸಮ್ಮಿಶ್ರವಾಗಿ ಕಂಡುಬರುತ್ತಿವೆ. ಏಕಕಾಲದಲ್ಲಿ ಕೊಯ್ಲು ಮಾಡುವುದು ಕಷ್ಟಕರವಾಗುತ್ತಿದೆ’ ಎಂದು ಕಿಗ್ಗಾಲು ಗ್ರಾಮದ ಗಿರೀಶ್ ಹೇಳಿದರು.

ಕಾರ್ಮಿಕರ ಕೊರತೆ, ಕಾಡುಪ್ರಾಣಿಗಳ ಉಪಟಳ ಮುಂತಾದ ಸಮಸ್ಯೆಗಳ ನಡುವೆ ನಲುಗುತ್ತಿದ್ದ ಕಾಫಿ ಬೆಳೆಗಾರರಿಗೆ ಬೆಲೆ ಏರಿಕೆ ಕಂಡಿದ್ದರೂ ಹವಾಮಾನ ವೈಪರೀತ್ಯದಿಂದಾಗಿ ಬವಣೆ ತಪ್ಪಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT