ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ವರ್ಣಮಯ ಪುಷ್ಪಲೋಕ ಅನಾವರಣ

ರಾಜಾಸೀಟ್ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಸಚಿವ ಎನ್.ಎಸ್.ಭೋಸರಾಜು ಚಾಲನೆ
Published 26 ಜನವರಿ 2024, 16:11 IST
Last Updated 26 ಜನವರಿ 2024, 16:11 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ರಾಜಾಸೀಟ್ ಉದ್ಯಾನದಲ್ಲಿ ವರ್ಣಮಯ ಪುಷ್ಪಲೋಕ ಧರೆಗಿಳಿದಿದೆ. ಹೂಗಳಿಂದಲೇ ಅರಳಿದ ಕೊಡಗಿನ ಕುಲದೇವತೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಮಾದರಿ, ‘ಸೀಡ್‌ ಟು ಕಪ್‌’ ಎಂಬ ಕಾಫಿ ಮಂಡಳಿಯ ವಿನೂತನ ಮಾದರಿ ಜೊತೆಗೆ ಸಾವಿರಾರು ಪುಷ್ಪಗಳು ಕೈಬೀಸಿ ಕರೆಯುತ್ತಿವೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ವತಿಯಿಂದ ಇಲ್ಲಿ ಏರ್ಪಡಿಸಲಾಗಿರುವ 3 ದಿನಗಳ ಕಾಲದ ಫಲಪುಷ್ಪ ಪ್ರದರ್ಶನಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಶುಕ್ರವಾರ ಚಾಲನೆ ನೀಡುವ ಮೂಲಕ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ವೈವಿಧ್ಯಮಯವಾದ ಪುಷ್ಪಗಳ ಲೋಕವನ್ನು ಅನಾವರಣಗೊಳಿಸಿದರು.

ಈ ವೇಳೆ ಮಾತನಾಡಿದ ಅವರು, ‘ಇದೊಂದು ಉತ್ತಮವಾದ ಪ್ರದರ್ಶನ. ಆದರೆ, ಇದು ಕೇವಲ ಮೂರೇ ದಿನಗಳಿಗೆ ಸೀಮಿತವಾಗಿದೆ. ಇದನ್ನು ಇನ್ನಷ್ಟು ದಿನಗಳಿಗೆ ವಿಸ್ತರಿಸಬೇಕಿತ್ತು’ ಎಂದರು.

ಇದೇ ಅಭಿಪ್ರಾಯ ವ್ಯಕ್ತಪಡಿಸಿದ ಶಾಸಕ ಡಾ.ಮಂತರ್ ಗೌಡ ಅವರು ತೋಟಗಾರಿಕಾ ಇಲಾಖೆಯ ಪ್ರಯತ್ನವನ್ನು ಶ್ಲಾಘಿಸಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ‘ಹಾಪ್‌ಕಾಮ್ಸ್’ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಾಚೇಟ್ಟಿರ ಚೋಟು ಕಾವೇರಪ್ಪ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್.ಆರ್.ಯೋಗೇಶ್, ಹಿರಿಯ ಸಹಾಯಕ ನಿರ್ದೇಶಕ ಮುತ್ತಪ್ಪ ಭಾಗವಹಿಸಿದ್ದರು.

ಮಡಿಕೇರಿಯ ರಾಜಾಸೀಟ್ ಉದ್ಯಾನದಲ್ಲಿ ಶುಕ್ರವಾರ ಆರಂಭವಾದ ಫಲಪುಷ್ಪ ಪ್ರದರ್ಶನದಲ್ಲಿ ಕಾಫಿ ಮಂಡಳಿ ವತಿಯಿಂದ ಅಳವಡಿಸಿರುವ ‘ಸೀಡ್ ಟು ಕಪ್’ ಮಾದರಿಯ ಚಿತ್ರವನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ತಮ್ಮ ಮೊಬೈಲ್‌ನಲ್ಲಿ ಕ್ಲಿಕ್ಕಿಸಿಕೊಂಡರು
ಮಡಿಕೇರಿಯ ರಾಜಾಸೀಟ್ ಉದ್ಯಾನದಲ್ಲಿ ಶುಕ್ರವಾರ ಆರಂಭವಾದ ಫಲಪುಷ್ಪ ಪ್ರದರ್ಶನದಲ್ಲಿ ಕಾಫಿ ಮಂಡಳಿ ವತಿಯಿಂದ ಅಳವಡಿಸಿರುವ ‘ಸೀಡ್ ಟು ಕಪ್’ ಮಾದರಿಯ ಚಿತ್ರವನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ತಮ್ಮ ಮೊಬೈಲ್‌ನಲ್ಲಿ ಕ್ಲಿಕ್ಕಿಸಿಕೊಂಡರು
ಮಡಿಕೇರಿಯ ರಾಜಾಸೀಟ್ ಉದ್ಯಾನದಲ್ಲಿ ಪುಷ್ಪದಲ್ಲಿ ಅರಳಿರುವ ಕಲಾಕೃತಿಗಳು
ಮಡಿಕೇರಿಯ ರಾಜಾಸೀಟ್ ಉದ್ಯಾನದಲ್ಲಿ ಪುಷ್ಪದಲ್ಲಿ ಅರಳಿರುವ ಕಲಾಕೃತಿಗಳು

28 ರವರೆಗೂ ಇರಲಿದೆ ಫಲಪುಷ್ಪ ಪ್ರದರ್ಶನ 15 ಸಾವಿರ ಹೂಗಳ ರಾಶಿ ಅರಳಿವೆ 20 ಜಾತಿಯ ಹೂಗಳು

5 ಲಕ್ಷ ಹೂಗಳಿಂದ ಅರಳಿದ ಕಲಾಕೃತಿ

ಫಲಪುಷ್ಪ ಪ್ರದರ್ಶನದ ಪ್ರಧಾನ ಆಕರ್ಷಣೆ ಎನಿಸಿದ ಕೊಡಗಿನ ಕುಲದೇವತೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಕಲಾಕೃತಿಯು ವಿವಿಧ ಬಣ್ಣದ ಸುಮಾರು 5 ಲಕ್ಷ ಹೂವುಗಳಿಂದ ಅರಳಿದೆ. ಇಲ್ಲಿ 15 ಅಡಿ ಎತ್ತರದಲ್ಲಿ 48 ಅಡಿ ಉದ್ದ 28 ಅಡಿ ಅಗಲದಲ್ಲಿ ಗುಲಾಬಿ ಸೇವಂತಿಗೆ ಆಸ್ಟರ್ ಹೂವುಗಳ ವಿವಿಧ ಬಣ್ಣದ ಸುಮಾರು 5 ಲಕ್ಷ ಹೂವುಗಳಿಂದ  ಇಗ್ಗುತ್ತಪ್ಪ ದೇವಾಲಯದ ಮಾದರಿಯನ್ನು ಅಲಂಕರಿಸಿ ನಿರ್ಮಾಣ ಮಾಡಲಾಗಿದ್ದು ಆಕರ್ಷಣೀಯವಾಗಿದೆ.  ಗಣರಾಜ್ಯೋತ್ಸವ ಅಂಗವಾಗಿ ಯೋಧ ಪಿರಂಗಿ ಹಾಗೂ ರಾಷ್ಟ್ರದ್ವಜದ ಕಲಾಕೃತಿಯನ್ನು ವಿವಿಧ ಬಣ್ಣದ ಹೂವುಗಳಿಂದ ಅಲಂಕರಿಸಲಾಗಿದೆ. ತ್ರಿವರ್ಣ ದ್ವಜದ ಕಲಾಕೃತಿ ಅಣಬೆ ಹಾಗೂ ಬಲೂನು ಮಾದರಿಯ ಕಲಾಕೃತಿಗಳೂ ಗಮನಸೆಳೆಯುತ್ತಿವೆ. ಮಕ್ಕಳಿಗೆ ಮನರಂಜನೆ ನೀಡುವಂತಹ ಚೋಟಾ ಭೀಮ್ ಬಾರ್ಬಿ ಡಾಲ್ ಸ್ಪೈಡರ್ ಮ್ಯಾನ್ ಬ್ಯಾಟ್ ಮ್ಯಾನ್ ಅಣಬೆ ಕಲಾಕೃತಿಗಳನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿದ್ದರೆ ಫೋಟೊಫ್ರೇಮ್ ಸೆಲ್ಫಿ ಜೋನ್ ಮಾದರಿಗಳೂ ಚಿಣ್ಣರನ್ನು ಬರಸೆಳೆಯುವಂತಿವೆ. ವಿವಿಧ ಕ್ಷೇತ್ರಗಳ ಗಣ್ಯರ ಕಲಾಕೃತಿಗಳನ್ನು ಹಣ್ಣು ತರಕಾರಿಗಳಿಂದ ಕೆತ್ತನೆ ಮಾಡಿ ಪ್ರದರ್ಶಿಸಲಾಗಿದೆ. ವಿವಿಧ ಅಲಂಕಾರಿಕ ಗಿಡಗಳು ಬೋನ್ಸಾಯ್ ಗಿಡಗಳ ಪ್ರದರ್ಶನ ಇಕೆಬಾನೆ ಹೂವಿನ ಜೋಡಣೆಯ ಪ್ರದರ್ಶನಗಳೂ ಮನ ಸೆಳೆಯುವಂತಿವೆ. ಫಲಪುಷ್ಪ ಪ್ರದರ್ಶನದಲ್ಲಿ ಸುಮಾರು 15 ಸಾವಿರ ಸಂಖ್ಯೆಯ 20 ಜಾತಿಯ ಹೂವುಗಳಾದ ಸಾಲ್ವಿಯ ಸೇವಂತಿಗೆ ಚಂಡು ಹೂ ಜೀನಿಯಾ ಡಯಾಂಥಸ್ ಆಸ್ಟರ್ ವಿಂಕಾ ರೋಸಿಯಾ ಕಾಕ್ಸ್ ಕೋಂಬ್ ಡೇಲಿಯಾ ಮತ್ತಿತರ ಪಾತಿಯಲ್ಲಿ ಹಾಗೂ ಕುಂಡಗಳಲ್ಲಿ ಬೆಳೆಯಲಾಗಿದೆ. ಫಲಪುಷ್ಪ ಪ್ರದರ್ಶನದ ವೀಕ್ಷಣೆಗೆ ಸಾರ್ವಜನಿಕರಿಗೆ ₹ 20 ಪ್ರವೇಶ ಶುಲ್ಕ ಹಾಗೂ ಶಾಲೆಯಿಂದ ಭಾಗವಹಿಸುವ ಶಾಲಾ ಮಕ್ಕಳಿಗೆ ಉಚಿತವಾಗಿ ಪ್ರವೇಶ ನೀಡಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಯೋಗೇಶ್ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT