ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರಾಮಸಿರಿ’ಯ ಉಯ್ಯಾಲೆಯಲ್ಲಿ ತೂಗಿತು ಹೆಬ್ಬಾಲೆ

ಕಲಾಭವನಕ್ಕೆ ಸಿಕ್ಕಿತು ₹ 1 ಕೋಟಿಯ ಭರವಸೆ; ವಿವಿಧ ತಂಡಗಳಿಂದ ಕಲಾ ಪ್ರದರ್ಶನ
Published 7 ಮಾರ್ಚ್ 2024, 5:29 IST
Last Updated 7 ಮಾರ್ಚ್ 2024, 5:29 IST
ಅಕ್ಷರ ಗಾತ್ರ

ಕುಶಾಲನಗರ: ಉತ್ತರ ಕೊಡಗಿನ ಹಾರಂಗಿ ನೀರಾವರಿ ಅಚ್ಚುಕಟ್ಟು ಪ್ರದೇಶದ ಬಯಲುಸೀಮೆ ಎನಿಸಿದ ಹೆಬ್ಬಾಲೆ ಗ್ರಾಮ ಅಕ್ಷರಶಃ ‘ಜಾನಪದ ಗ್ರಾಮಸಿರಿ’ಯಲ್ಲಿ ತೂಗಿತು.

ವೈವಿಧ್ಯಮಯ ಜನಪದ ಕಲಾತಂಡಗಳ ಪ್ರದರ್ಶನ, ಕಳಸ ಹೊತ್ತ ಮಹಿಳೆಯರ ಮೆರವಣಿಗೆ, ಪುರಾತನ ಕಾಲದ ಅಪರೂಪದ ವಸ್ತುಗಳ ಪ್ರದರ್ಶನ, ಹಲವು ವಿಚಾರಗಳ ಮಂಥನ... ಹೀಗೆ ಹಲವು ಬಗೆಯ ಕಾರ್ಯಕ್ರಮಗಳು ಬುಧವಾರ ಒಂದೆಡೆ ನಡೆದು, ಸೇರಿದ್ದ ಜನರಿಗೆ ರಸಗವಳ ಎನಿಸಿತು.

ಈ ಎಲ್ಲ ದೃಶ್ಯಗಳು ಒಂದಕ್ಕೊಂದು ಮಿಳಿತವಾದಂತೆ ಕಂಡು ಬಂದಿದ್ದು, ಇಲ್ಲಿನ ಹೆಬ್ಬಾಲೆ ಗ್ರಾಮದಲ್ಲಿ. ಇಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಮತ್ತು ಕುಶಾಲನಗರ ತಾಲ್ಲೂಕು ಘಟಕಗಳು, ಹೆಬ್ಬಾಲೆ, ತೊರೆನೂರು ಮತ್ತು ಶಿರಂಗಾಲ ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ಹೆಬ್ಬಾಲೆ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ‘ಜಾನಪದ ಗ್ರಾಮ ಸಿರಿ’ ಕಾರ್ಯಕ್ರಮದ‌ಲ್ಲಿ ಕಂಡು ಬಂತು.

ಗ್ರಾಮದ ಬಸವೇಶ್ವರ ದೇವಾಲಯದ ಬಳಿಯಿಂದ ಆರಂಭಗೊಂಡ ‘ಗ್ರಾಮಸಿರಿ’ ಮೆರವಣಿಗೆಯನ್ನು ನಿವೃತ್ತ ಎಂಜಿನಿಯರ್ ಜಿ.ಎಲ್.ರಾಮಪ್ಪ ಉದ್ಘಾಟಿಸಿದರು. ಮೆರವಣಿಗೆಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕಲಾವಿದ ‌ಮಧು ಮತ್ತು ತಂಡದ ವತಿಯಿಂದ ಜಾನಪದ ಕಲಾತಂಡಗಳ ಕಲಾ ಪ್ರದರ್ಶನ ಜನರ ಗಮನ ಸೆಳೆಯಿತು.

ಪೂಜಾ ಕುಣಿತ, ಪಟ್ಟದ ಕುಣಿತ, ಡೊಳ್ಳು ಕುಣಿತ ಹಾಗೂ ಗಲಿ ಗೊಂಬೆ ನೃತ್ಯ ಪ್ರದರ್ಶನ ಸೂಜಿಗಲ್ಲಿನಂತೆ ಸೆಳೆದವು. ಎತ್ತಿನ ಗಾಡಿ, ಕಲಶ ಹೊತ್ತ ಮಹಿಳೆಯರ ಮೆರವಣಿಗೆ ಆಕರ್ಷಣೀಯವಾಗಿತ್ತು. ಮೆರವಣಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಸಾಗಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಂತ್ಯಗೊಂಡಿತು.

‘ಗ್ರಾಮಸಿರಿ’ ಅಂಗವಾಗಿ ಏರ್ಪಡಿಸಿದ್ದ ವಸ್ತುಪ್ರದರ್ಶನದಲ್ಲಿ ಪೂರ್ವಿಕರ ಕಾಲದಲ್ಲಿ ಬಳಸುತ್ತಿದ್ದ ಪರಿಕರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಜೊತೆಗೆ, ರೈತರು ತಮ್ಮ ರಾಸುಗಳನ್ನು ತಂದು ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು.

ಸಾಹಿತಿ ಕಣಿವೆ ಭಾರದ್ವಾಜ್ ಕೆ.ಆನಂದತೀರ್ಥ ಅಧ್ಯಕ್ಷತೆಯಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಕೊಡಗು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಜಮೀರ್ ಅಹಮ್ಮದ್ ಅವರು ‘ಗ್ರಾಮೀಣ ಜನರ ಬದುಕು ಮತ್ತು ಬವಣೆ’ ಕುರಿತು ವಿಚಾರ ಮಂಡಿಸಿದರು.

ನಿವೃತ್ತ ಪ್ರಾಂಶುಪಾಲ ಎಚ್.ಎಚ್.ಸುಂದರ್ ಆಶಯ ನುಡಿಗಳನ್ನಾಡಿದರು. ಈ ವೇಳೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಎಚ್.ಎಸ್.ಚೇತನ್, ಶಿಕ್ಷಕ ರಮೇಶ್, ಟಿ.ಬಿ.ಜಗದೀಶ್ ಭಾಗವಹಿಸಿದ್ದರು.

ಮೆರವಣಿಗೆಯಲ್ಲಿ ಗಮನ ಸೆಳೆದ ಪೂಜಾ ಕುಣಿತ
ಮೆರವಣಿಗೆಯಲ್ಲಿ ಗಮನ ಸೆಳೆದ ಪೂಜಾ ಕುಣಿತ
ರಾಸುಗಳ ಪ್ರದರ್ಶನ
ರಾಸುಗಳ ಪ್ರದರ್ಶನ
ಪೂರ್ವಿಕರು ಬಳಸುತ್ತಿದ್ದ ಪರಿಕರಗಳ ವಸ್ತು ಪ್ರದರ್ಶನ
ಪೂರ್ವಿಕರು ಬಳಸುತ್ತಿದ್ದ ಪರಿಕರಗಳ ವಸ್ತು ಪ್ರದರ್ಶನ
ಕುಶಾಲನಗರ ಸಮೀಪದ ಹೆಬ್ಬಾಲೆ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಕುಶಾಲನಗರ ತಾಲ್ಲೂಕು ಘಟಕದ ವತಿಯಿಂದ ಹೆಬ್ಬಾಲೆ ತೊರೆನೂರು ಮತ್ತು ಶಿರಂಗಾಲ ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ಬುಧವಾರ ನಡೆದ ‘ಜಾನಪದ ಗ್ರಾಮ ಸಿರಿ’ ಕಾರ್ಯಕ್ರಮವನ್ನು ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೇಶವ ಕಾಮತ್ ಮಾಜಿ‌ ಅಧ್ಯಕ್ಷ ಟಿ.ಪಿ.ರಮೇಶ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರುಣಾ ಕುಮಾರಿ ಭಾಗವಹಿಸಿದ್ದರು.
ಕುಶಾಲನಗರ ಸಮೀಪದ ಹೆಬ್ಬಾಲೆ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಕುಶಾಲನಗರ ತಾಲ್ಲೂಕು ಘಟಕದ ವತಿಯಿಂದ ಹೆಬ್ಬಾಲೆ ತೊರೆನೂರು ಮತ್ತು ಶಿರಂಗಾಲ ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ಬುಧವಾರ ನಡೆದ ‘ಜಾನಪದ ಗ್ರಾಮ ಸಿರಿ’ ಕಾರ್ಯಕ್ರಮವನ್ನು ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೇಶವ ಕಾಮತ್ ಮಾಜಿ‌ ಅಧ್ಯಕ್ಷ ಟಿ.ಪಿ.ರಮೇಶ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರುಣಾ ಕುಮಾರಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT