ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರಪೇಟೆ: ಅರಣ್ಯಕ್ಕೆ ಬೆಂಕಿ, ಭಾರಿ ನಷ್ಟ

ಕಿಡಿಗೇಡಿಗಳ ಕೃತ್ಯ ಶಂಕೆ: ಸ್ಥಳಕ್ಕೆ ಶಾಸಕ ಭೇಟಿ
Published 22 ಏಪ್ರಿಲ್ 2024, 7:43 IST
Last Updated 22 ಏಪ್ರಿಲ್ 2024, 7:43 IST
ಅಕ್ಷರ ಗಾತ್ರ

ಸೋಮವಾರಪೇಟೆ: ಜಿಲ್ಲೆಯಲ್ಲಿ ಬಿಸಿಲಿನ ಹೆಚ್ಚಳದಿಂದಾಗಿ ಶನಿವಾರ ರಾತ್ರಿ ಮಾದಾಪುರ ಮತ್ತು ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಸಿದ್ಧ ಪ್ರವಾಸಿ ತಾಣ ಕೋಟೆಬೆಟ್ಟಕ್ಕೆ ಹೊಂದಿಕೊಂಡಂತಿರುವ ಮೂವತ್ತೊಕ್ಲು ಸಮೀಪದ ಆರಂಗಲ್‌ ಬೆಟ್ಟ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು ಹರಡಿದ್ದು ಭಾರೀ ಪ್ರಮಾಣದಲ್ಲಿ ಅರಣ್ಯ ನಾಶವಾಗಿದೆ ಎನ್ನಲಾಗಿದೆ.

ರಾತ್ರಿ 8 ಗಂಟೆಯ ಸಮಯದಲ್ಲಿ ಬೆಂಕಿ ಜ್ವಾಲೆ ಆವರಿಸಿತು. ಶಾಸಕ ಡಾ. ಮಂತರ್‌ಗೌಡ ಅವರು ಅರಣ್ಯ ಇಲಾಖೆ, ಪೊಲೀಸ್‌ ಇಲಾಖೆ ಹಾಗೂ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳೊಂದಿಗೆ ರಾತ್ರಿ 10ರ ವೇಳೆಗೆ ಸ್ಥಳಕ್ಕೆ ಧಾವಿಸಿದರು. ಆದರೆ, ಸ್ಥಳದ ಸಮೀಪಕ್ಕೆ ಅಗ್ನಿಶಾಮಕ ದಳದ ವಾಹನ ತೆರಳಲು ಸಾಧ್ಯವಾಗಲಿಲ್ಲ. ನಂತರ ಮಾರುತಿ ಓಮ್ನಿ ಮತ್ತು ಪಿಕ್‌ಅಪ್‌ ವಾಹನದಲ್ಲಿ ಸುಮಾರು 5 ಕಿ.ಮೀ ತೆರಳಿ, ನಂತರ 1 ಕಿಮೀ ನಷ್ಟು ದೂರ ಕಾಲ್ನಡಿಗೆಯಲ್ಲಿ ತೆರಳಿ ಮಧ್ಯರಾತ್ರಿಯಾಗಿದ್ದರಿಂದ ಕಾರ್ಯಾಚರಣೆ ನಡೆಸಲು ಸಾಧ್ಯವಾಗದೆ ಹಿಂತಿರುಗಿದ್ದಾರೆ.

ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಭಾನುವಾರ ಕಾರ್ಯಾಚರಣೆ ನಡೆಸಲು ಶಾಸಕ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಕಾರ್ಯಾಚರಣೆ ನಡೆಸಿರುವ ಅರಣ್ಯ ಇಲಾಖಾ ಸಿಬ್ಬಂದಿ ಸ್ಥಳೀಯ ತೋಟದ ಮಾಲೀಕರ ಸಹಕಾರದೊಂದಿಗೆ ಬೆಂಕಿ ಜ್ವಾಲೆಯನ್ನು ಹತೋಟಿಗೆ ತಂದಿದ್ದಾರೆ. ಕಾರ್ಯಾಚರಣೆ ಸಂದರ್ಭ ಅರಣ್ಯ ಇಲಾಖೆಯ ಆರ್‌ಎಫ್‌ಒ ಚೇತನ್‌, ಡಿಆರ್‌ಎಫ್‌ಒ ಜಗದೀಶ್‌, ರಮೇಶ್‌ ಕುಮಾರ್‌ ಮತ್ತು ಸಿಬ್ಬಂದಿ, ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳಾದ ಈಶ್ವರ್‌, ನಾಗೇಶ್‌, ಚೇತನ್‌, ಪ್ರಕಾಶ್‌, ಚೇತನ್‌ಕುಮಾರ್‌, ಬರ್ಮಣ್ಣ ಪೂಜಾರಿ ಇದ್ದರು.

ಕಿಡಿಗೇಡಿಗಳ ಕೃತ್ಯ-ಅರಣ್ಯ ಇಲಾಖೆ ಶಂಕೆ?

ಬಿಸಿಲಿನ ಧಗೆ ಜಾಸ್ತಿಯಾಗುತ್ತಿದ್ದು, ಮಾದಾಪುರ ಸಮೀಪದ ಆರಂಗಲ್‌ ಬೆಟ್ಟ (ಆರಂಗಲ್‌ ಮಂಟಿ) ಪ್ರದೇಶದ ಅರಣ್ಯದಲ್ಲಿ ಶನಿವಾರ ರಾತ್ರಿ ಹೊತ್ತಿಕೊಂಡಿರುವ ಬೆಂಕಿ ಕಾಡ್ಗಿಚ್ಚಿನಿಂದ ಆಗಿಲ್ಲ. ಕಿಡಿಗೇಡಿಗಳು ಎಸಗಿರುವ ಕೃತ್ಯವಾಗಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲೊಂದಾದ ಪಶ್ಚಿಮಘಟ್ಟದಲ್ಲಿನ ಕೋಟೆ ಬೆಟ್ಟ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಹೊತ್ತಿಕೊಂಡಿರುವ ಬೆಂಕಿಯ ಜ್ವಾಲೆ ಇಡೀ ಅರಣ್ಯ ಪ್ರದೇಶ ಹಾಗೂ ಸುತ್ತಮುತ್ತಲಿನ ತೋಟಗಳಿಗೆ ಹರಡಿದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯವಿದೆ ಎಂದು ಸ್ಥಳೀಯರು ಹಾಗೂ ಪ್ರವಾಸಿಗರು ಆತಂಕ ವ್ಯಕ್ತಪಡಿಸುತ್ತಾರೆ. ಹಾಗೆಯೇ ಕಿಡಿಗೇಡಿಗಳ ಕೃತ್ಯವಾಗಿದ್ದರೆ ಅವರನ್ನು ಪತ್ತೆಹಚ್ಚಿ ಶಿಕ್ಷಿಸಬೇಕೆಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT