ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಳ್ಗಿಚ್ಚಿನ ಆತಂಕ, ಪ್ರಾಣಿಗಳಿಗೆ ನೀರಿಗೆ ಬರ

ದೂರವಾದ ಮಳೆ : ಹೆಚ್ಚಿದ ಬಿಸಿಲಿನ ತಾಪ, ನಾಗರಹೊಳೆ ಅರಣ್ಯದಲ್ಲಿ ಆತಂಕ
Published 3 ಮೇ 2024, 6:17 IST
Last Updated 3 ಮೇ 2024, 6:17 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಮೇ ತಿಂಗಳು ಬಂದರೂ ಧರೆಗೆ ಹನಿಯದ ಮಳೆ ಒಂದೆಡೆಯಾದರೆ,  ಬಿರುಬಿಸಿಲಿನ ತಾಪ ಅತಿಯಾಗಿ ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಮತ್ತೆ ಕಾಳ್ಗಿಚ್ಚಿನ ಆತಂಕ ಎದುರಾಗಿದೆ.

 ಬಿಸಿಲಿನ ತಾಪ ಏರುತ್ತಿದ್ದು, ಅರಣ್ಯದಲ್ಲಿನ ತೇವಾಂಶ ಕ್ಷೀಣಿಸುತ್ತಿದೆ. ಇದರಿಂದ ಗಿಡಗಂಟಿಗಳು ಚಿಗುರೊಡೆಯಲು ಏದುಸಿರು ಬಿಡುತ್ತಿವೆ. ಭೂಮಿಯಲ್ಲಿನ ತೇವಾಂಶವನ್ನು ಹೀರಿಕೊಂಡು ಚಿಗುರೊಡೆದಿದ್ದ ಗಿಡಮರಗಳ ಹಸಿರು ಬಾಡ ತೊಡಗಿದೆ. ಹಸಿರೊಡೆದಿದ್ದ ಲಂಟಾನಗಳು ಮತ್ತೆ ಒಣಗುತ್ತಿವೆ. ಅರಣ್ಯದೊಳಗೆ ಒಣಗಿದ್ದ ಕಸಕಡ್ಡಿಗಳ ನಡುವೆ ಹಸಿರು ಕಾಣದಿರುವುದರಿಂದ ಅರಣ್ಯಕ್ಕೆ ಮತ್ತೆ ಕಾಳ್ಚಿನ ಆತಂಕ ಎದುರಾಗಿದೆ. ಹೀಗಾಗಿ ಈಗಲೂ ಕಾಳ್ಗಿಚ್ಚು ನಿವಾರಣಾ ಕಾವಲುಗಾರರು ಗ್ರಾಮಗಳ ಗಡಿಗಳಲ್ಲಿ,ರಸ್ತೆ ಬದಿಯಲ್ಲಿ ಕಾವಲು ಕಾಯುತ್ತಿದ್ದಾರೆ.

ನಾಗರಹೊಳೆ ಅರಣ್ಯ ಭಾಗಕ್ಕೆ ವಾಡಿಕೆಯಂತೆ ಮಾರ್ಚ್‌ ಅಥವಾ ಏಪ್ರಿಲ್‌ನಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಬೀಳುತ್ತಿತ್ತು. ಇದರಿಂದ ಮೇ ಆರಂಭವಾಗುವ ವೇಳೆಗೆ ಅರಣ್ಯ ಚಿಗುರಿ ಕಾಳ್ಚಿನ ಆತಂಕ ದೂರವಾಗುತ್ತಿತ್ತು. ಗಿಡಮರಗಳು ಚಿಗುರಿ ಕಂಗೊಳಿತ್ತಿದ್ದವು. ಗುಲ್ ಮೋಹರ್ ಕೂಡ ಸಮೃದ್ಧವಾಗಿ ಅರಳಿ ಇಡೀ ಅರಣ್ಯಕ್ಕೆ ಸೊಬಗು ತುಂಬುತ್ತಿತ್ತು. ಆದರೆ ಈ ಬಾರಿ ಹವಾಗುಣದ ವೈಪರೀತ್ಯದಿಂದ ಮೇ ಕಾಲಿಟ್ಟರೂ ಅರಣ್ಯಕ್ಕೆ ಮಳೆ ಹನಿ ಬಿದ್ದಿಲ್ಲ.

ನಾಗರಹೊಳೆಯ ಆನೆಚೌಕೂರು ವಲಯದ ಮಾವಕಲ್ಲು ಅರಣ್ಯ ಈಗಲೂ ಒಣಗಿದಂತೆಯೇ ಇದೆ. ಗೋಣಿಕೊಪ್ಪಲು, ಆನೆಚೌಕೂರು, ಪಿರಿಯಾಪಟ್ಟಣ ಅರಣ್ಯದ ಹೆದ್ದಾರಿ ಬದಿಯಲ್ಲಿರುವ ಗುಲ್ ಮೋಹರ್ ಹೂವು ಮಾತ್ರ ಬಿರುಬಿಸಿಲಿನ ನಡುವೆ ಅರಳಿದ್ದರೂ ಬಿಸಿಲಿನ ತಾಪಕ್ಕೆ ಬಳಲಿದಂತಿದೆ.

ಒಣಗಿದ ಕೆರೆಗಳು : ಮತ್ತೊಂದು ಕಡೆ ಅರಣ್ಯದಂಚಿನ ಕೆರೆಗಳು ನೀರಿನಲ್ಲದೆ ಬಣಗುಡುತ್ತಿವೆ. ಬೂದಿತಿಟ್ಟು, ಮುಮ್ಮುಡಿಕಾವಲು, ಅಳ್ಳೂರು, ಮುತ್ತೂರು, ಮಾಲ್ದಾರೆ ಮೊದಲಾದ ಭಾಗದ ಅರಣ್ಯದೊಳಗಿನ ಕೆರೆಗಳು ಸಂಪೂರ್ಣವಾಗಿ ಒಣಗಿ ಹೋಗಿವೆ.

ನಾಗರಹೊಳೆ ವನ್ಯಜೀವಿ ವಿಭಾಗದ ಕೆರೆಯೊಂದು ಬೂದಿತಿಟ್ಟು ಬಳಿ ಸಂಪೂರ್ಣವಾಗಿ ಒಣಗಿರುವುದು.
ನಾಗರಹೊಳೆ ವನ್ಯಜೀವಿ ವಿಭಾಗದ ಕೆರೆಯೊಂದು ಬೂದಿತಿಟ್ಟು ಬಳಿ ಸಂಪೂರ್ಣವಾಗಿ ಒಣಗಿರುವುದು.
ಆನೆಚೌಕೂರು ಪಿರಿಯಾಪಟ್ಟಣ ಹೆದ್ದಾರಿಯಲ್ಲಿ ಒಣಿಗಿರುವ ಅರಣ್ಯ.
ಆನೆಚೌಕೂರು ಪಿರಿಯಾಪಟ್ಟಣ ಹೆದ್ದಾರಿಯಲ್ಲಿ ಒಣಿಗಿರುವ ಅರಣ್ಯ.

Cut-off box - ‘ಇಲಾಖೆ ಎಚ್ಚರ’ ಅರಣ್ಯದೊಳಗಿನ ಹೆಚ್ಚಿನ ಕೆರೆಗಳಲ್ಲಿ ಹಳೆಯ ನೀರಿದೆ. ಬತ್ತಿಹೋಗಿರುವ ಕೆಲವೇ ಕೆರೆಗಳಿಗೆ ಮಾತ್ರ ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿದೆ. ವನ್ಯಜೀವಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಲಾಗಿದೆ ಎಂದು ಮತ್ತಿಗೋಡು ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ದೇವರಾಜು ಹೇಳಿದರು.

Cut-off box - ‘ಪ್ರಾಣಿಗಳ ಅಲೆದಾಟ’ ಕಳೆದ ವರ್ಷ ಈ ಕೆರೆಗಳಲ್ಲಿ ಇದೇ ಅವಧಿಯಲ್ಲಿ ನೀರು ತುಂಬಿ ಪ್ರಾಣಿಗಳ ದಾಹ ನೀಗಿಸುತ್ತಿತ್ತು. ಸಂಜೆ ವೇಳೆಯಲ್ಲಿ ವನ್ಯ ಜೀವಿಗಳು ನೀರು ಕುಡಿಯಲು ಗುಂಪು ಗುಂಪಾಗಿ ಬರುತ್ತಿದ್ದವು. ಕೆರೆಗಳ ಬಳಿ ಈಗ ಅವುಗಳ ಸುಳಿವೇ ಇಲ್ಲದಾಗಿದೆ. ಕೆರೆದಡದ ಗಿಡಮರಗಳು ಒಣಗಿ ಬರಡಾಗಿವೆ. ಕಾಡೊಳಗೆ ನೀರಿರುವ ಕೆರೆಗಳತ್ತ ಪ್ರಾಣಿಗಳು ಸಾಗಿವೆ ಎನ್ನುತ್ತಾರೆ ಕಾಡಂಚಿನ ಗ್ರಾಮಸ್ಥರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT