ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೋಮವಾರಪೇಟೆ | ಮದ್ಯ ವ್ಯಸನಿಗಳ ತಾಣ ಸರ್ಕಾರಿ ಕಟ್ಟಡ

ಚೌಡ್ಲು ಗ್ರಾಮದಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಅಧೀನದಲ್ಲಿರುವ ಕಟ್ಟಡ
Published 10 ಜೂನ್ 2024, 23:30 IST
Last Updated 10 ಜೂನ್ 2024, 23:30 IST
ಅಕ್ಷರ ಗಾತ್ರ

ಸೋಮವಾರಪೇಟೆ: ಪಟ್ಟಣಕ್ಕೆ ಹೊಂದಿಕೊಂಡಂತಿರುವ ಚೌಡ್ಲು ಗ್ರಾಮದಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಅಧೀನದಲ್ಲಿರುವ ಕಟ್ಟಡವೊಂದು ಹಾಳು ಸುರಿಯುತ್ತಿದ್ದು, ಪುಂಡ ಪೋಕರಿಗಳ ತಾಣವಾಗಿದೆ.

ಇಲ್ಲಿ ಈ ಹಿಂದೆ ತರಗತಿಗಳು ನಡೆಯುತ್ತಿದ್ದವು. ಅಂಬೇಡ್ಕರ್ ವಸತಿ ಶಾಲೆಯೂ ಇತ್ತು. ಜೊತೆಗೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯೂ ಕಾರ್ಯನಿರ್ವಹಿಸುತ್ತಿತ್ತು. ಇವೆಲ್ಲವೂ ತಮ್ಮ ತಮ್ಮ ಸ್ವಂತ ಕಟ್ಟಡಗಳಿಗೆ ಸ್ಥಳಾಂತರವಾದ ಬಳಿಕ ಈ ಕಟ್ಟಡ ಮದ್ಯವ್ಯಸನಿಗಳ ಪಾಲಿಗೆ ಸ್ವರ್ಗದಂತಾಗಿದೆ.

ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣಕ್ಕೆ ಹೊಂದಿಕೊಂಡಂತಿರುವ ಈ ಕಟ್ಟಡದಲ್ಲಿ ಈ ಹಿಂದೆ ಇದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯನ್ನು ಸ್ಥಳದ ಕೊರತೆಯಿಂದಾಗಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.  2023-24ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ ತೋಳೂರು ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಪಳ್ಳಿ ಗ್ರಾಮದಲ್ಲಿ ಸ್ವಂತ ಕಟ್ಟಡ ಪೂರ್ಣಗೊಂಡ ಬಳಿಕ ಅಂಬೇಡ್ಕರ್ ವಸತಿ ಶಾಲೆಯನ್ನೂ ಇಲ್ಲಿಂದ ಸ್ಥಳಾಂತರಿಸಲಾಯಿತು ಈಗ ಸಾಕಷ್ಟು ದೊಡ್ಡದಾಗಿರುವ ಈ ಕಟ್ಟಡ ಬಳಕೆಯಾಗದೇ ಉಳಿದಿದೆ.

ಈಗ ಇದು ಪುಂಡ ಪೋಕರಿಗಳ ಅವಸಸ್ಥಾನವಾಗಿ ಮಾರ್ಪಟ್ಟಿದೆ. ಸಂಜೆ ಮದ್ಯವ್ಯಸನಿಗಳು, ದೂಮಪಾನ, ಮದ್ಯಪಾನ ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ. ಕೊಠಡಿಗಳ ಒಳಗೆ ಎಲ್ಲೆಂದರಲ್ಲಿ ಕಾಣಸಿಗುವ ಮದ್ಯದ ಖಾಲಿ ಬಾಟಲಿಗಳು, ಇಸ್ಪೀಟಿನ ಎಲೆಗಳು, ಬೀಡಿ, ಸಿಗರೇಟು ತುಂಡುಗಳ ರಾಶಿಯೇ ಇದಕ್ಕೆ ಸಾಕ್ಷಿ ಎನಿಸಿದೆ. ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಬಳಕೆಯಾಗುತ್ತಿದ್ದ ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಯಾವುದೇ ಕೊಠಡಿಗಳಿಗೆ ಮತ್ತು ಗೇಟಿಗೆ ಬೀಗ ಹಾಕದಿರುವುದು ವ್ಯಸನಿಗಳಿಗೆ ವರದಾನವಾಗಿದೆ. 

ಇಲ್ಲಿ ಸುಸ್ಸಜ್ಜಿತ ಕೊಠಡಿಗಳು ಸಾಕಷ್ಟು ಇವೆ. ಇದನ್ನು ಯಾವುದಾದರೂ, ಇಲಾಖೆಗಳಿಗೆ ಅಥವಾ ಶಿಕ್ಷಣಕ್ಕೆ ಸಂಬಂಧಿಸಿದ ಕಚೇರಿಗಳ ಬಳಕೆಗೆ ಉಪಯೋಗಿಸಿಕೊಳ್ಳಬಹುದಾಗಿತ್ತು. ಆದರೆ, ಇಲಾಖೆಗಳು ಹೆಚ್ಚಿನ ಬಾಡಿಗೆ ನೀಡಿ ಖಾಸಗಿ ಕಟ್ಟಡಗಳಲ್ಲಿ ಇಂದಿಗೂ ಕೆಲಸ ಮಾಡುತ್ತಿರುವುದನ್ನು ಕಾಣಬಹುದು. ಇದರಿಂದಾಗಿ ಬ್ರಿಟೀಷರ ಕಾಲದ ಪೂರ್ತಿ ಕಟ್ಟಡ ಶಿಥಿಲಾವಸ್ಥೆಗೆ ತಲುಪುತ್ತಿದೆ. ಕೂಡಲೇ ಸಂಬಧಿಸಿದವರು ಈ ಕಟ್ಟಡದ ಉಪಯೋಗವನ್ನು ಮಾಡಿಕೊಳ್ಳಬೇಕೆಂದು ಪ್ರಗತಿಪರ ಕೃಷಿಕ ಕೆ.ಪಿ. ಪ್ರವೀಣ್ ಒತ್ತಾಯಿಸಿದರು.

‘ಈ ಕಟ್ಟಡದ ಸಮೀಪದ ಇರುವ  ಪದವಿಪೂರ್ವ ಕಾಲೇಜಿನ ಆಟದ ಮೈದಾನಕ್ಕೆ ಆಸ್ಟ್ರೋ ಟರ್ಫ್ ಹಾಕಿರುವುದರಿಂದ, ಇಲ್ಲಿನ ಕೊಠಡಿಗಳಲ್ಲಿ ಹಾಕಿ ತರಬೇತಿ ಶಾಲೆಗಳನ್ನು ಸರ್ಕಾರ ಪ್ರಾರಂಭಿಸಲು ಅವಕಾಶ ಇದೆ. ಇದರಿಂದ ಕ್ರೀಡಾ ಜಿಲ್ಲೆ ಕೊಡಗಿನಲ್ಲಿ ಕ್ರೀಡಾಪಟುಗಳಿಗೆ ಉತ್ತೇಜನ ಸಿಗಲಿದೆ. ಸ್ಥಳೀಯ ಶಾಸಕರು ಮತ್ತು ಸಂಬಂಧಿಸಿದ ಇಲಾಖೆ ಇತ್ತ ಗಮನ ಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ಕ್ರೀಡಾಭಿಮಾನಿ ಗಿರೀಶ್ ಹೇಳಿದರು.

ಇಲ್ಲಿ ಕೊಠಡಿಗಳೊಂದಿಗೆ ಸಾಕಷ್ಟು ಸ್ಥಳಾವಕಾಶ ಇರುವುದರಿಂದ ಖಾಸಗಿ ಕಟ್ಟಡದಲ್ಲಿರುವ ನಾಲ್ಕಾರು ಇಲಾಖೆಗಳನ್ನು ಇಲ್ಲಿ ಪ್ರಾರಂಭಿಸಲು ಅವಕಾಶ ಇದೆ. ಇದರಿಂದ ಸರ್ಕಾರಕ್ಕೆ ಬಾಡಿಗೆ ಹಣ ಉಳಿಯುವುದು. ಕಟ್ಟಡವನ್ನು ಉಳಿಸಿಕೊಳ್ಳಲು ಸಾಧ್ಯ. ಮೊದಲು ಇಲ್ಲಿನ ಕೊಠಡಿಗಳ ಬಾಗಿಲುಗಳಿಗೆ ಬೀಗ ಹಾಕುವ ಮೂಲಕ ಜನರ ದುರ್ಬಳಕೆ ಮಾಡುವುದನ್ನು ತಪ್ಪಿಸಬೇಕಿದೆ. ಕೂಡಲೇ ಸಂಬಂಧಿಸಿದವರು ಇತ್ತ ಗಮನ ಹರಿಸಬೇಕೆಂದು ಪಟ್ಟಣದ ನಿವಾಸಿ ಸತೀಶ್ ಹೇಳಿದರು.

ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಹಲವು ಸರ್ಕಾರಿ ಕಚೇರಿಗಳು ಬಾಡಿಗೆ ಆದಾರದಲ್ಲಿ ಖಾಸಗಿ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿರುವುದು ಇಂದಿಗೂ ಕಂಡು ಬರುತ್ತದೆ. ಆದರೆ, ಸರ್ಕಾರದ ಇರುವ ಕಟ್ಟಡಗಳನ್ನೇ ಸರಿಯಾಗಿ ಬಳಸಿಕೊಳ್ಳಲು ಕೆಲವು ಇಲಾಖೆಗಳು ವಿಫಲವಾಗಿವೆ.

ಸೋಮವಾರಪೇಟೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ನಡೆಸುತ್ತಿದ್ದ ಕಟ್ಟಡದಲ್ಲಿ ಮದ್ಯವ್ಯಸನಿಗಳು ಹಾಗೂ ಪುಂಡ ಪೋಕರಿಗಳ ಬಳಕೆಯಿಂದ ತ್ಯಾಜ್ಯ ತುಂಬಿರುವುದು.
ಸೋಮವಾರಪೇಟೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ನಡೆಸುತ್ತಿದ್ದ ಕಟ್ಟಡದಲ್ಲಿ ಮದ್ಯವ್ಯಸನಿಗಳು ಹಾಗೂ ಪುಂಡ ಪೋಕರಿಗಳ ಬಳಕೆಯಿಂದ ತ್ಯಾಜ್ಯ ತುಂಬಿರುವುದು.
ಸೋಮವಾರಪೇಟೆಯಲ್ಲಿ ಅಂಬೇಡ್ಕರ್ ವಸತಿ ಶಾಲೆ ನಡೆಯುತ್ತಿದ್ದ ಕಟ್ಟಡದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಬಿದ್ದಿರುವುದು.
ಸೋಮವಾರಪೇಟೆಯಲ್ಲಿ ಅಂಬೇಡ್ಕರ್ ವಸತಿ ಶಾಲೆ ನಡೆಯುತ್ತಿದ್ದ ಕಟ್ಟಡದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಬಿದ್ದಿರುವುದು.
ಸೋಮವಾರಪೇಟೆಯಲ್ಲಿ ಅಂಬೇಡ್ಕರ್ ವಸತಿ ಶಾಲೆ ನಡೆಯುತ್ತಿದ್ದ ಕಟ್ಟಡದಲ್ಲಿದ್ದ ಸುಸ್ಸಜ್ಜಿತ ಶೌಚಾಲಯ ಪುಂಡ ಪೋಕರಿಗಳ ಹಾವಳಿಯಿಂದ ಹಾಳಾಗುತ್ತಿರುವುದು.
ಸೋಮವಾರಪೇಟೆಯಲ್ಲಿ ಅಂಬೇಡ್ಕರ್ ವಸತಿ ಶಾಲೆ ನಡೆಯುತ್ತಿದ್ದ ಕಟ್ಟಡದಲ್ಲಿದ್ದ ಸುಸ್ಸಜ್ಜಿತ ಶೌಚಾಲಯ ಪುಂಡ ಪೋಕರಿಗಳ ಹಾವಳಿಯಿಂದ ಹಾಳಾಗುತ್ತಿರುವುದು.
ಚಂದ್ರಕಾಂತ್ ಡಿಡಿಪಿಐ
ಚಂದ್ರಕಾಂತ್ ಡಿಡಿಪಿಐ

ಅಂದು ವಿದ್ಯಾರ್ಥಿಗಳು ಪಾಠ ಕಲಿಯುತ್ತಿದ್ದ ಕಟ್ಟಡ ಇಂದು ಮದ್ಯವ್ಯಸನಿಗಳ ಮೋಜಿನ ತಾಣ ಕಟ್ಟಡದ ಸಮರ್ಪಕ ಬಳಕೆಗೆ ಒತ್ತಾಯ

ಈ ಕಟ್ಟಡದಲ್ಲಿ ಯಾವುದೇ ಅನೈತಿಕ ಚಟುವಟಿಕೆಗಳು ನಡೆಯದಂತೆ ಕ್ರಮ ವಹಿಸಲಾಗುವುದು. ಈ ಕುರಿತು ಸೂಚನೆ ನೀಡಲಾಗಿದೆ.

-ಎಂ.ಚಂದ್ರಕಾಂತ್ ಡಿಡಿಪಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT