ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಸರ್ಕಾರಿ ಶಾಲೆ ಮಕ್ಕಳು ಕೀಳರಿಮೆಯಿಂದ ಹೊರ ಬನ್ನಿ’

‘ಮಕ್ಕಳ ಸಾಹಿತ್ಯ ಸಂಭ್ರಮ’ಕ್ಕೆ ತೆರೆ; ಸಮಾರೋಪ ನುಡಿಗಳನ್ನಾಡಿದ ಝೀವಲ್ ಖಾನ್
Published 7 ಮಾರ್ಚ್ 2024, 5:26 IST
Last Updated 7 ಮಾರ್ಚ್ 2024, 5:26 IST
ಅಕ್ಷರ ಗಾತ್ರ

ಸೋಮವಾರಪೇಟೆ: ಇಲ್ಲಿ ಕಳೆದ 3 ದಿನಗಳಿಂದ ನಡೆಯುತ್ತಿದ್ದ ‘ಮಕ್ಕಳ ಸಾಹಿತ್ಯ ಸಂಭ್ರಮ’ಕ್ಕೆ ಬುಧವಾರ ಸಂಭ್ರಮದ ತೆರೆ ಬಿತ್ತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಚನ್ನಬಸಪ್ಪ ಸಭಾಂಗಣದಲ್ಲಿ ಬುಧವಾರ ನಡೆದ 'ಮಕ್ಕಳ ಸಾಹಿತ್ಯ ಸಂಭ್ರಮ' ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್, ‘ಸರ್ಕಾರಿ ಶಾಲೆಯ ಮಕ್ಕಳು ಕೀಳರಿಮೆಯಿಂದ ಹೊರ ಬರಬೇಕು’ ಎಂದು ಕಿವಿಮಾತು ಹೇಳಿದರು.

‘ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲೂ ಸಿಗುತ್ತಿದೆ ಎಂಬುದನ್ನು ಮರೆಯಬಾರದು. ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ಶಿಕ್ಷಣ ಪಡೆದ ಶೇ 80ರಷ್ಟು ಮಂದಿ ಸರ್ಕಾರಿ ಕೆಲಸದಲ್ಲಿದ್ದಾರೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಿದೆ. ಮಕ್ಕಳ ಇಂತಹ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಹೇಳಿದರು.

‘ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು ಮತ್ತು ಮಕ್ಕಳನ್ನು ಗ್ರಂಥಾಲಯದ ಕಡೆಗೆ ಸೆಳೆಯಬೇಕು ಎಂಬ ಉದ್ದೇಶದಿಂದ ಸರ್ಕಾರ ‘ಮಕ್ಕಳ ಸಾಹಿತ್ಯ ಸಂಭ್ರಮ’ವನ್ನು ಆಯೋಜಿಸಿದೆ’ ಎಂದರು.

‘ಪ್ರತಿ ಮಕ್ಕಳಲ್ಲೂ ಪ್ರತಿಭೆ ಇದೆ. ಪ್ರತಿಭಾ ಪ್ರದರ್ಶನಕ್ಕೆ ಅವಕಾಶಗಳನ್ನು ಸೃಷ್ಟಿಸಿಕೊಡಬೇಕಾಗಿದೆ. ‘ಮಕ್ಕಳ ಸಾಹಿತ್ಯ ಸಂಭ್ರಮ’ದಲ್ಲಿ ಮಕ್ಕಳು ಸಾಕಷ್ಟು ಕಲಿತ್ತಿದ್ದಾರೆ. ಇದೊಂದು ಉತ್ತಮ ಕಾರ್ಯಕ್ರಮವಾಗಿ ಹೊರಹೊಮ್ಮಿದೆ. ಸಂಪನ್ಮೂಲ ಮತ್ತು ಸಹಸಂಪನ್ಮೂಲ ವ್ಯಕ್ತಿಗಳು ಶ್ರಮಪಟ್ಟಿದ್ದಾರೆ. ಅವರ ಶ್ರಮ ಸಾರ್ಥಕವಾಗಿದೆ. ಮಕ್ಕಳು ಕವನ ಬರೆದಿದ್ದಾರೆ. ನಾಟಕ ರಚನೆ ಮಾಡಿ ಪ್ರದರ್ಶನ ಮಾಡಿದ್ದಾರೆ. ಸಂದರ್ಶನ ಮಾಡಿದ್ದಾರೆ. ಮಕ್ಕಳು ಶಿಬಿರದಲ್ಲಿ ಕಲಿತ ವಿಷಯವನ್ನು ಬೇರೆಯವರಿಗೆ ಹೇಳಿಕೊಟ್ಟಲ್ಲಿ ಕಾರ್ಯಕ್ರಮದ ಯೋಜನೆ ಈಡೇರಿದಂತಾಗುತ್ತದೆ’ ಎಂದು ಹೇಳಿದರು.

ಕಾರ್ಯಕ್ರಮದ ರಾಜ್ಯ ಸಂಪನ್ಮೂಲ ವ್ಯಕ್ತಿ ತನ್ವೀರ್ ಮಾತನಾಡಿ, ‘ರಾಜ್ಯ ಸರ್ಕಾರದ ‘ಮಕ್ಕಳ ಸಾಹಿತ್ಯ ಸಂಭ್ರಮ’ ಇಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಯೋಜನೆ ಗ್ರಾಮ ಪಂಚಾಯಿತಿ ಮಕ್ಕಳ ಸ್ನೇಹಿಯಾಗಿ ಕೆಲಸ ಮಾಡುತ್ತಿದೆ. ಈ ಕಾರ್ಯಕ್ರಮದಲ್ಲಿ ಕಲಿತ ಮಕ್ಕಳು ಮುಂದೊಂದು ದಿನ ಕವಿಗಳಾಗಿ, ಸಮಾಜಸೇವಕರಾಗಿ, ಕಲಾವಿದರಾಗಿ ಹೊರಹೊಮ್ಮಿ ಸಮಾಜದ ಆಸ್ತಿಯಾಗಿ ಹೊರಹೊಮ್ಮಲು ಅವಕಾಶವಾಗಿದೆ’ ಎಂದರು.

‘ಇಲ್ಲಿ ವಿದ್ಯಾರ್ಥಿಗಳಿಂದ ರಚಿತವಾದ ಕಥೆ, ಕವನ, ನಾಟಕ ಸೇರಿದಂತೆ ಎಲ್ಲವನ್ನು ಜಿಲ್ಲಾ ಮಟ್ಟದಲ್ಲಿ ಕ್ರೋಡೀಕರಿಸಿ ಆಯಾ ಶಾಲೆಗಳ ಗ್ರಂಥಾಲಯಗಳಿಗೆ ತಲುಪಿಸುವ ಕೆಲಸ ಮಾಡಲಾಗುವುದು. ಮಕ್ಕಳನ್ನು ಓದುವತ್ತ ಕೊಂಡೊಯ್ಯುವ ಸರ್ಕಾರದ ಕೆಲಸ ವಿದ್ಯಾರ್ಥಿಗಳು ಮತ್ತು ಆಯೋಜಕರಿಂದಾಗಬೇಕು’ ಎಂದು ಹೇಳಿದರು.

ವೇದಿಕೆಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಸದಸ್ಯ ಅಹಮ್ಮದ್ ಆಗ್ರೆ, ಮಕ್ಕಳ ಸಂಭ್ರಮ ಕಾರ್ಯಕ್ರಮದ ಜಿಲ್ಲಾ ಸಂಯೋಜಕಿ ಸುಮನಾ ಮ್ಯಾಥ್ಯೂ, ಸಂಪನ್ಮೂಲ ವ್ಯಕ್ತಿಗಳಾದ ಗೌತಮ್ ಕಿರಗಂದೂರು, ಶರ್ಮಿಳಾ ರಮೇಶ್, ಪೊನ್ನಪ್ಪ, ಹೇಮಂತ್ ಪಾರೇರ, ಸಹ ಸಂಪನ್ಮೂಲ ವ್ಯಕ್ತಿಗಳಾದ ಎಲ್.ಎಂ.ಪ್ರೇಮಾ ಭಾಗವಹಿಸಿದ್ದರು.

ನೋಡೆಲ್ ಅಧಿಕಾರಿ ಝೀವಲ್ ಖಾನ್ ಅವರ ಸಂದರ್ಶನವನ್ನು ದೀಪ್ತಿ ಮಾಡಿ ಗಮನ ಸೆಳೆದರು. ಮಕ್ಕಳು ತಾವೇ ರಚಿಸಿದ ಕವನ, ಕಥೆಗಳನ್ನು ವಾಚಿಸಿ, ಸೇರಿದ್ದವರ ಗಮನ ಸೆಳೆದರು.

ಸೋಮವಾರಪೇಟೆ ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ಮಕ್ಕಳ ಸಾಹಿತ್ಯ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್ ಮಾತನಾಡಿದರು. ತನ್ವೀರ್ ಸುಮನ ಅಹಮ್ಮದ್ ಗೌತಮ್ ಪ್ರೇಮ ಭಾಗವಹಿಸಿದ್ದರು
ಸೋಮವಾರಪೇಟೆ ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ಮಕ್ಕಳ ಸಾಹಿತ್ಯ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್ ಮಾತನಾಡಿದರು. ತನ್ವೀರ್ ಸುಮನ ಅಹಮ್ಮದ್ ಗೌತಮ್ ಪ್ರೇಮ ಭಾಗವಹಿಸಿದ್ದರು
ಸೋಮವಾರಪೇಟೆ ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ಮಕ್ಕಳ ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳು
ಸೋಮವಾರಪೇಟೆ ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ಮಕ್ಕಳ ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳು

Highlights - ಝೀವಲ್ ಖಾನ್  ಸಂದರ್ಶನ ಮಾಡಿದ ವಿದ್ಯಾರ್ಥಿನಿ ದೀಪ್ತಿ ತಾವೇ ರಚಿಸಿದ ಕವನ, ಕಥೆ ವಾಚಿಸಿದ ಮಕ್ಕಳು  ಮಕ್ಕಳನ್ನು ಗ್ರಂಥಾಲಯದ ಕಡೆಗೆ ಸೆಳೆಯಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT