ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಿನ ಕಳೆದಂತೆ ರಂಗು ಪಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿ

Published 2 ಏಪ್ರಿಲ್ 2024, 5:11 IST
Last Updated 2 ಏಪ್ರಿಲ್ 2024, 5:11 IST
ಅಕ್ಷರ ಗಾತ್ರ

ನಾಪೋಕ್ಲು: ಇಲ್ಲಿನ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿ ಕುಂಡ್ಯೋಳಂಡ ಕಪ್ ದಿನ ಕಳೆದಂತೆ ರಂಗು ಪಡೆಯುತ್ತಿದೆ.

ಟೂರ್ನಿಯ 3ನೇ ದಿನವೂ ತೀವ್ರ ಜಿದ್ದಾಜಿದ್ದಿನ ಹಣಾಹಣಿ ಕಂಡು ಬಂತು. ನಾಳಿಯಂಡ ತಂಡವಂತೂ ಪೂಲಂಡ ವಿರುದ್ಧ (5–0) ಗೋಲುಗಳ ಸುರಿಮಳೆಗರೆಯಿತು. ಬಾದುಮಂಡ ತಂಡವೂ ಚನ್ನಪಂಡ ತಂಡದ ವಿರುದ್ಧ (4–0) ಗೋಲುಗಳ ಹೊಳೆಯನ್ನೇ ಹರಿಸಿತು. ಈ ಎರಡೂ ತಂಡಗಳ ಆಟಗಾರರ ಪ್ರಬಲ ಪೈಪೋಟಿಯ ನಡುವೆ ಎದುರಾಳಿ ತಂಡಗಳು ಒಂದೇ ಒಂದು ಗೋಲುಗಳನ್ನು ಗಳಿಸಲು ಸಾಧ್ಯವಾಗಲಿಲ್ಲ. ಇದು ಸೋಮವಾರದ ಹೈಲೈಟ್ಸ್ ಎನಿಸಿತು.

ತಾಪಂಡ ಮತ್ತು ಚೋಕಿರ ತಂಡಗಳ ನಡುವೆ ನಡೆದ ಪಂದ್ಯ ಹಾಗೂ ಗಂಡಂಗಡ ಮತ್ತು ಮಚ್ಚುರ ತಂಡಗಳ ನಡುವೆ ನಡೆದ ಪಂದ್ಯಗಳೂ ಸಾಕಷ್ಟು ಗಮನ ಸೆಳೆದವು. ಹಣಾಹಣಿ ಹೇಗಿತ್ತೆಂದರೆ ಈ ನಾಲ್ಕೂ ತಂಡಗಳು ಸಮಬಲ ಸಾಧಿಸಿದವು. ಗೆಲುವಿಗೆ ಕೊನೆಗೆ ಪೆನಾಲ್ಟಿ ಕಾರ್ನರ್ ಮೊರೆ ಹೋಗಬೇಕಾಯಿತು.

ಪೆನಾಲ್ಟಿ ಸ್ಟ್ರೋಕ್‌ನಲ್ಲಿ ಚೋಕಿರ 3 ಗೋಲು ಗಳಿಸಿದರೆ ತಾಪಂಡ 2 ಗೋಲು ಗಳಿಸಿ, ಚೋಕಿರ ಮುಂದಿನ ಸುತ್ತು ಪ್ರವೇಶಿಸಿತು. ಮಚ್ಚುರ ತಂಡ 3 ಗೋಲು ಗಳಿಸಿದರೆ, ಗಂಡಂಗಡ ತಂಡ 4 ಗೋಲು ಗಳಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದವು.

ಸೋಮವಾರದ ಪಂದ್ಯದಲ್ಲೂ ಮಹಿಳೆಯರು ತಮ್ಮ ತಮ್ಮ ಕುಟುಂಬಗಳ ಪರವಾಗಿ ಆಡಿ ಗಮನ ಸೆಳೆದರು. ಉರಿಯುವ ಬಿಸಿಲಿನಲ್ಲೂ ಆಟಗಾರರು ಎದೆಗುಂದದೆ ಆಟವಾಡಿದ್ದು ವಿಶೇಷ ಎನಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT