ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಸುಗ್ಗಿ ಉತ್ಸವ ಸಂಪನ್ನ

ಅಪಾರ ಸಂಖ್ಯೆಯ ಭಕ್ತರು ಭಾಗಿ: ಹರಕೆ ಸಲ್ಲಿಕೆ
Published 30 ಏಪ್ರಿಲ್ 2024, 5:11 IST
Last Updated 30 ಏಪ್ರಿಲ್ 2024, 5:11 IST
ಅಕ್ಷರ ಗಾತ್ರ

ಸೋಮವಾರಪೇಟೆ: ತಾಲ್ಲೂಕಿನ ಶಾಂತಳ್ಳಿ ಹೋಬಳಿಯ ನಗರಳ್ಳಿ ಗ್ರಾಮದ ಐತಿಹಾಸಿಕ ಕೂತಿನಾಡು ಸುಗ್ಗಿ ಉತ್ಸವ ಅಪಾರ ಸಂಖ್ಯೆಯ ಭಕ್ತರ  ಸಮ್ಮುಖದಲ್ಲಿ ಸೋಮವಾರ ಶ್ರದ್ಧಾ–ಭಕ್ತಿಯಿಂದ ನಡೆಯಿತು.

ಪ್ರಕೃತ್ತಿಯ ಮಡಿಲಿನಲ್ಲಿರುವ ಕೂತಿನಾಡಿಗೆ ಸೇರಿದ 18 ಗ್ರಾಮಗಳ ನಿವಾಸಿಗಳು ನಗರಳ್ಳಿ ಸುಗ್ಗಿಕಟ್ಟೆಯಲ್ಲಿ ಸೇರಿ ಗ್ರಾಮ ದೇವತೆ ಸಬ್ಬಮ್ಮ ದೇವಿಗೆ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಕಳೆದ 15 ದಿನಗಳಿಂದ ಉತ್ಸವದ ಪ್ರಯುಕ್ತ ಹಲವು ವಿಧಿ ವಿಧಾನಗಳೊಂದಿಗೆ ಪೂಜಾ ಕಾರ್ಯಗಳು ನಡೆದಿದ್ದು, ಸುಗ್ಗಿ ಉತ್ಸವದ ಕೊನೆ ದಿನವಾದ ಸೋಮವಾರ ಸುಗ್ಗಿ ದೇವರ ಬನದಲ್ಲಿ ಅಳವಡಿಸಲಾಗಿರುವ ಬೃಹತ್ ಕಲ್ಲಿನ ಕಂಬದಲ್ಲಿ 4 ಮಂದಿ ದೇವರ ಒಡೆಕಾರರನ್ನು ಬೆತ್ತದ ಉಯ್ಯಾಲೆಯಲ್ಲಿ ತೂಗುವ ಮೂಲಕ ಸುಗ್ಗಿ ಉತ್ಸವಕ್ಕೆ ತೆರೆ ಬಿದ್ದಿತು.

ಸುಗ್ಗಿ ಕುಣಿತ, ಸುಗ್ಗಿ ಹಾಡು, ಬಿಲ್ಲು ತೂಗುವುದು ಸೇರಿದಂತೆ ವಿವಿಧ ಜಾನಪದ ನೃತ್ಯಗಳು ನಡೆದವು. 18 ಗ್ರಾಮಗಳ ನವ ದಂಪತಿಗಳು ಮದುವೆ ಕಾಣಿಕೆಯನ್ನು ದೇವರಿಗೆ ಸಲ್ಲಿಸಿದರು. ಹರಕೆ ತಿರಿಸುವುದು ಮತ್ತು ಹರಕೆ ಮಾಡಿಕೊಳ್ಳುವ ಕಾರ್ಯಗಳು ನಡೆದವು. ಕೂತಿ ನಾಡು ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಕೂತಿ, ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೀಕಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟದಕೊಪ್ಪ, ಹಳ್ಳಿಯೂರು, ಕೊತ್ತನಳ್ಳಿ, ಇನಕನಹಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡ್ನಳ್ಳಿ, ತಡ್ಡಿಕೊಪ್ಪ, ಓಡಳ್ಳಿ ಗ್ರಾಮಗಳ ಮುಖ್ಯಸ್ಥರು ಗ್ರಾಮದೇವತೆಗೆ ಪಟ್ಟ ಒಪ್ಪಿಸಿ, ಸಾಮೂಹಿಕ ಪೂಜೆ ನೆರವೇರಿಸಿದರು. ನಂತರ ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿದರು.

ಸುಗ್ಗಿ ಕಟ್ಟೆಯ ಮುಖ್ಯ ರಂಗದಲ್ಲಿ ಈಡುಗಾಯಿ ಒಡೆಯಲಾಯಿತು. ಭಕ್ತರಿಗೆ ಅನ್ನಸಂರ್ಪಣೆ ಏರ್ಪಡಿಸಲಾಗಿತ್ತು. ಸವಿನ್, ವಸಂತ್, ಇಂದ್ರೇಶ್, ಸಿಶಾಂತ್, ಶಶಿಕುಮಾರ್ ದೇವರ ಒಡೆಕಾರರಾಗಿ ಕಾರ್ಯನಿರ್ವಹಿಸಿದರು. ರಮೇಶ್, ಪ್ರಸನ್ನ, ಪ್ರಕಾಶ್ ದೇವರ ಸೇವೆ ಮಾಡಿದರು. ಉತ್ಸವದಲ್ಲಿ ಶಾಸಕ ಡಾ. ಮಂತರ್ ಗೌಡ, ಬಿಜೆಪಿ ಮುಖಂಡ ಎಂ.ಪಿ.ಅಪ್ಪಚ್ಚು ರಂಜನ್, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ ಭಾಗವಹಿಸಿ ಗ್ರಾಮಸ್ಥರ ಸನ್ಮಾನ ಸ್ವೀಕರಿಸಿದರು.

ಕೂತಿನಾಡು ಶ್ರೀ ಸಬ್ಬಮ್ಮ ದೇವರ ಸಮಿತಿ ಅಧ್ಯಕ್ಷ ಕೆ.ಬಿ.ಜಗದೀಶ್, ಉಪಾಧ್ಯಕ್ಷ ಸಿ.ಎಸ್.ಬೋಪಯ್ಯ, ಕಾರ್ಯದರ್ಶಿ ಕೆ.ಯು,ಜಗದೀಶ್, ಖಜಾಂಚಿ ಎನ್.ಬಿ.ಸುರೇಶ್ ಮತ್ತು ಗ್ರಾಮದ ಹಿರಿಯರು ಸುಗ್ಗಿಯ ಉಸ್ತುವಾರಿ ವಹಿಸಿದ್ದರು.

ಸೋಮವಾರಪೇಟೆ ತಾಲ್ಲೂಕಿನ ನಗರಳ್ಳಿ ಗ್ರಾಮದ್ಲಲಿ ನಡೆದ ಕೂತಿನಾಡು ಸುಗ್ಗಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಜನ
ಸೋಮವಾರಪೇಟೆ ತಾಲ್ಲೂಕಿನ ನಗರಳ್ಳಿ ಗ್ರಾಮದ್ಲಲಿ ನಡೆದ ಕೂತಿನಾಡು ಸುಗ್ಗಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಜನ
ಸೋಮವಾರಪೆಟೆ ತಾಲ್ಲೂಕಿನ ನಗರಳ್ಳಿ ಗ್ರಾಮದಲ್ಲಿ ನಡೆದ ಕೂತಿನಾಡು ಸುಗ್ಗಿಯಲ್ಲಿ 18 ಗ್ರಾಮಗಳ ನಾಯಕರು ಬಿಲ್ಲು ಪ್ರದರ್ಶನ ಮಾಡಿದರು
ಸೋಮವಾರಪೆಟೆ ತಾಲ್ಲೂಕಿನ ನಗರಳ್ಳಿ ಗ್ರಾಮದಲ್ಲಿ ನಡೆದ ಕೂತಿನಾಡು ಸುಗ್ಗಿಯಲ್ಲಿ 18 ಗ್ರಾಮಗಳ ನಾಯಕರು ಬಿಲ್ಲು ಪ್ರದರ್ಶನ ಮಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT