ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ, ಅಮಿತ್ ಶಾ ಬಂದರೆ, ಕಾಂಗ್ರೆಸ್‌‌ಗೆ ಗೆಲುವು; ಶಾಸಕ ಡಾ. ಮಂತರ್ ಗೌಡ

ಕಾಂಗ್ರೆಸ್ ತರಬೇತಿ ಕಾರ್ಯಾಗಾರ
Published 9 ಏಪ್ರಿಲ್ 2024, 8:14 IST
Last Updated 9 ಏಪ್ರಿಲ್ 2024, 8:14 IST
ಅಕ್ಷರ ಗಾತ್ರ

ಸೋಮವಾರಪೇಟೆ: ‘ರಾಜ್ಯದಲ್ಲಿ ಎಲ್ಲೂ ಬಿಜೆಪಿ ಅಲೆ ಕಾಣುತ್ತಿಲ್ಲ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಮತ್ತು ಅಮಿತ್ ಶಾ ಬಂದು ಪ್ರಚಾರ ಮಾಡಿದ ಕ್ಷೇತ್ರಗಳಲ್ಲಿ ಸೋಲು ಕಾಣುವ ಮೂಲಕ ಕಾಂಗ್ರೆಸ್ 136 ಸ್ಥಾನಗಳಿಸಿ ಸರ್ಕಾರ ರಚಿಸಲು ಸಾಧ್ಯವಾಯಿತು’ ಎಂದು ಶಾಸಕ ಡಾ. ಮಂತರ್ ಗೌಡ ಅಭಿಪ್ರಾಯಪಟ್ಟರು.

ಇಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಜಿಲ್ಲಾ ಪ್ರಚಾರ ಸಮಿತಿ ಹಾಗೂ ಸೋಮವಾರಪೇಟೆ ಬ್ಲಾಕ್ ಸಮಿತಿ ಸಹಯೋಗದಲ್ಲಿ ವಲಯ ಅಧ್ಯಕ್ಷರು, ಬೂತ್ ಅಧ್ಯಕ್ಷರು ಮತ್ತು ಪ್ರಚಾರ ಸಮಿತಿ ಸದಸ್ಯರಿಗೆ ಸೋಮವಾರ ನಡೆದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಪಕ್ಷದ ಹಿರಿಯ ಸದಸ್ಯರು ಹೆಚ್ಚಿನ ಜವಾಬ್ದಾರಿ ಪಡೆದು ಬೂತ್ ಮಟ್ಟದಲ್ಲಿ ಕೆಲಸ ಮಾಡಿದಲ್ಲಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಲಕ್ಷ‌್ಮಣ್ ಹೆಚ್ಚಿನ ಮತ ಪಡೆಯಲು ಸಾಧ್ಯ. ಯಾವುದೇ ಚುನಾವಣೆಗಳು ಬೂತ್ ಮಟ್ಟದಲ್ಲಿ ನಡೆಯುವುದರಿಂದ, ಬೂತ್ ಸಮಿತಿಯೇ ಸುಪ್ರೀಂ ಆಗಿರುತ್ತದೆ. ರಾಜ್ಯ ಸರ್ಕಾರ ನೀಡುತ್ತಿರುವ ಗಾರಂಟಿ ಯೋಜನೆಗಳನ್ನು ಬೂತ್‌‌‌ನ ಎಲ್ಲಾ ಮತದಾರರಿಗೂ ತಿಳಿಹೇಳಿದಲ್ಲಿ ಹೆಚ್ಚಿನ ಮತಗಳಿಸಲು ಸಾಧ್ಯ’ ಎಂದರು.

‘ರಾಜ್ಯದಲ್ಲಿ ಎಲ್ಲೂ ಬಿಜೆಪಿ ಅಲೆ ಕಾಣುತ್ತಿಲ್ಲ. ನುಡಿದಂತೆ ಕಾಂಗ್ರೆಸ್ ಸಿದ್ಧರಾಮಯ್ಯ ಸರ್ಕಾರ ನಡೆದುಕೊಂಡಿದೆ. ಅದೇ ರೀತಿಯಲ್ಲಿ ಕೇಂದ್ರದಲ್ಲಿ ಇಂಡಿಯಾ ಅಧಿಕಾರಕ್ಕೆ ಬಂದಲ್ಲಿ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸುವುದು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸುಳ್ಳು ಭರವಸೆಗಳನ್ನು ನೀಡುತ್ತಿದೆ. ಜನಪ್ರತಿನಿಧಿಗಳು ಜನರಿಗೆ ಮೂಲಭೂತ ಸೌಕರ್ಯ ನೀಡಲು ಮೊದಲ ಆಧ್ಯತೆ ನೀಡಬೇಕು. ಆದರೆ, ಹಿಂದಿನ ಸಂಸದರು ಯಾವುದೇ ಅಭಿವೃದ್ಧಿ ಕೆಲಸ ಮಾಡದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಸದಸ್ಯರೇ ಅವರಿಗೆ ಟಿಕೇಟ್ ತಪ್ಪಿಸುವ ಕೆಲಸ ಮಾಡಿದರು. ಅರಮನೆಗೆ ತೆರಳಿ ಜನರ ಕಷ್ಟಗಳನ್ನು ಹೇಳಿಕೊಳ್ಳುವ ಕೆಲಸ ಬೇಡ, ನಮ್ಮ ಕೈಗೆಟುಕುವ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ಮತದಾರರಿಗೆ ಮನದಟ್ಟು ಮಾಡಿಕೊಡಬೇಕು’ಎಂದು ಕಾರ್ಯಕರ್ತರಿಗೆ ಕರೆನೀಡಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜಾ ಉತ್ತಪ್ಪ ಮಾತನಾಡಿ, ‘ಕಳೆದ 25 ವರ್ಷಗಳಿಂದ ಜಿಲ್ಲೆಯಲ್ಲಿ ನೆಲೆ ಕಂಡುಕೊಳ್ಳಲು ಪರದಾಡುತ್ತಿದ್ದ ಕಾಂಗ್ರೆಸ್ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಜಯಬೇರಿ ಬಾರಿಸುವ ಮೂಲಕ ಜಿಲ್ಲೆಯನ್ನು ನಮ್ಮ ಹಿಡಿತಕ್ಕೆ ಪಡೆಯಲಾಗಿದೆ. ಒಬ್ಬರು ವೈದ್ಯರು ಹಾಗೂ ಮತ್ತೊಬ್ಬರು ವಕೀಲರು ಜಿಲ್ಲೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದು, ಮತ್ತೊಬ್ಬ ಎಂಜಿನಿಯರ್ ಲಕ್ಷ್ಮಣ್ ಲೋಕಸಭೆಗೆ ಆಯ್ಕೆಯಾಗಲು ಬಯಸಿದ್ದಾರೆ. ಇಬ್ಬರೂ ಶಾಸಕರು ಕ್ಷೇತ್ರದಲ್ಲಿ ಕಳೆದ 10 ತಿಂಗಳಿನಲ್ಲಿ ಸುಮಾರು ‌₹290 ರಿಂದ ₹300 ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಗ್ಯಾರಂಟಿ ಕೊಡುಗೆ ಮತ್ತು ಅಭಿವೃದ್ಧಿ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. ಬೂತ್ ಸಮಿತಿಗಳು ಪೂರ್ಣಗೊಳ್ಳದ ಸ್ಥಳಗಳಲ್ಲಿ ಪಕ್ಷದ ಹಿರಿಯ ಸದಸ್ಯರು, ಮಹಿಳೆಯರು ಹಾಗೂ ಹಿಂದುಗಳಿದ ವರ್ಗದವರನ್ನು ಸೇರಿ 15 ಮಂದಿ ಸದಸ್ಯರನ್ನೊಳಗೊಂಡ ಬೂತ್ ಸಮಿತಿ ರಚಿಸಿ ಚುನಾವಣೆ ಪ್ರಚಾರ ಮಾಡಬೇಕು’ ಎಂದು ತಿಳಿಸಿದರು.

ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ‘ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿವಿಗಾಗಿ ಈ ಬಾರಿಯ ಲೋಕಸಭಾ ಚುನಾವಣೆ ನಡೆಯುತ್ತಿದೆ. ಇಂದು ದೇಶದಲ್ಲಿ ಜನಸಾಮಾನ್ಯರು ಮಾತನಾಡದಂತಹ ಸ್ಥಿತಿ ಇದ್ದು, ಸರ್ವಾಧಿಕಾರದ ಆಡಳಿತ ನಡೆಯುತ್ತಿದೆ. ಚುನಾವಣೆಯಲ್ಲಿ ಬೂತ್ ಸಮಿತಿ ಅಧ್ಯಕ್ಷರು ಯಜಮಾನನಿದ್ದಂತೆ. ಅಭ್ಯರ್ಥಿಯ ಗೆಲುವು ಮತ್ತು ಸೋಲು ಈ ಸಮಿತಿ ಕೈಯಲ್ಲಿದ್ದು, ಬೂತ್ ಸಮಿತಿ ಪದಾಧಿಕಾರಿಗಳು ರಾಜ್ಯ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ತಿಳಿಹೇಳುವ ಮೂಲಕ ಹೆಚ್ಚಿನ ಮತ ಪಕ್ಷಕ್ಕೆ ಬರುವಂತೆ ಮಾಡಬೇಕು’ ಎಂದರು.

ಕಾರ್ಯಾಗಾರದಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಕೆ.ಎಂ. ಲೋಕೇಶ್, ಕೆ.ಪಿ.ಸಿ.ಸಿ. ಸದಸ್ಯೆ ಕೆ.ಪಿ. ಚಂದ್ರಕಲಾ, ಬ್ಲಾಕ್ ಅಧ್ಯಕ್ಷ ಬಿ.ಬಿ. ಸತೀಶ್, ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ನಟೇಶ್ ಗೌಡ, ಬ್ಲಾಕ್ ಅಧ್ಯಕ್ಷ ಕೆ.ಎ. ಯಕೂಬ್, ಶೀಲಾ ಡಿಸೋಜ ಇದ್ದರು.

ಸೋಮವಾರಪೇಟೆ ಕೊಡವ ಸಮಾಜದಲ್ಲಿ ಕಾಂಗ್ರೆಸ್ ಬೂತ್ ಸಮಿತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವ ವಿವಿಧ ಘಟಕಗಳ ಪದಾಧಿಕಾರಿಗಳು.  
ಸೋಮವಾರಪೇಟೆ ಕೊಡವ ಸಮಾಜದಲ್ಲಿ ಕಾಂಗ್ರೆಸ್ ಬೂತ್ ಸಮಿತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವ ವಿವಿಧ ಘಟಕಗಳ ಪದಾಧಿಕಾರಿಗಳು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT