ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ | ಕುದಿಸಿದ ಶುದ್ಧವಾದ ನೀರು ನೀಡಲು ಸೂಚನೆ

Published 9 ಏಪ್ರಿಲ್ 2024, 8:11 IST
Last Updated 9 ಏಪ್ರಿಲ್ 2024, 8:11 IST
ಅಕ್ಷರ ಗಾತ್ರ

ಮಡಿಕೇರಿ: ರಾಜ್ಯದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದ್ದು, ಕಾಲರಾ ಮತ್ತು ವಾಂತಿ, ಬೇದಿ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ, ಕೊಡಗು ಜಿಲ್ಲೆಯಲ್ಲಿಯೂ ಹೋಟೆಲ್‌ಗಳು ಸೇರಿದಂತೆ ಎಲ್ಲೆಡೆ ಶುದ್ಧವಾದ ಕುದಿಸಿದ ಕುಡಿಯುವ ನೀರು ಒದಗಿಸುವಂತೆ ಸೂಚನೆ ನೀಡಲಾಗಿದೆ.

ಜಿಲ್ಲೆಯ ಎಲ್ಲಾ ರಸ್ತೆಬದಿ ವ್ಯಾಪಾರಿಗಳು, ಡಾಬಾ, ಸ್ವೀಟ್ ಸ್ಟಾಲ್, ಬೇಕರಿ, ಚಾಟ್ಸ್, ಮೆಸ್, ಕ್ಯಾಂಟೀನ್, ಕ್ಯಾಟರಿಂಗ್, ಸಮುದಾಯ ಭವನ, ಕಲ್ಯಾಣ ಮಂಟಪದವರು, ಪೇಯಿಂಗ್‍ಗೆಸ್ಟ್, ಹೋಮ್-ಸ್ಟೇ, ಹೊಟೇಲ್, ಬಾರ್ ಅಂಡ್ ರೆಸ್ಟೋರೆಂಟ್, ರೆಸಾರ್ಟ್, ಅಂಗನವಾಡಿ, ಮದ್ಯಾಹ್ನದ ಬಿಸಿಯೂಟ ಕಾರ್ಯಕ್ರಮ, ಸರ್ಕಾರಿ ಮತ್ತು ಸರ್ಕಾರೇತರ ವಸತಿನಿಲಯ ಮತ್ತು ಎಲ್ಲಾ ಆಹಾರ ತಯಾರಿಕಾದಾರರು ಸಾರ್ವಜನಿಕರ ಆರೋಗ್ಯದ ದೃಷ್ಠಿಯಿಂದ ಕಡ್ಡಾಯವಾಗಿ ಗ್ರಾಹಕರಿಗೆ ಕುದಿಸಿದ ಶುದ್ಧವಾದ ನೀರನ್ನು ನೀಡುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ(ಎಫ್‍ಎಸ್‍ಎಸ್‍ಎ) ಅಂಕಿತಾಧಿಕಾರಿ ಡಾ.ಇ.ಅನಿಲ್ ಧಾವನ್ ನಿರ್ದೇಶನ ನೀಡಿದ್ದಾರೆ.

ಆಹಾರ ತಯಾರಿಕಾ ಮತ್ತು ಸಂಗ್ರಹಣಾ ಸ್ಥಳಗಳಲ್ಲಿ ನೊಣಗಳು, ಸೊಳ್ಳೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು, ತ್ಯಾಜ್ಯ ವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದು ಮತ್ತು ತಯಾರಿಸಿರುವ ಎಲ್ಲಾ ಆಹಾರ ಪದಾರ್ಥಗಳನ್ನು ಸೂಕ್ತ ರೀತಿಯಲ್ಲಿ ಮುಚ್ಚಿಟ್ಟು ಸ್ವಚ್ಛವಾದ ವಿಧಾನದ ಮೂಲಕ ತಯಾರಿಕೆ ಮತ್ತು ವಿತರಣೆ ಮಾಡುವಂತೆ ತಿಳಿಸಿದ್ದಾರೆ.

ಎಲ್ಲಾ ಆಹಾರ ಉದ್ದಿಮೆದಾರರು ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳನ್ನು ಒಳಗೊಂಡಂತೆ ಆಹಾರ ಪದಾರ್ಥ ವ್ಯಾಪಾರಸ್ಥರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿಯಲ್ಲಿ ಆಹಾರ ನೋಂದಣಿ, ಪರವಾನಗಿಯನ್ನು ಪಡೆಯದೇ ವ್ಯಾಪಾರ ವಹಿವಾಟು ನಡೆಸುವವರು ತಕ್ಷಣದಲ್ಲೇ ಇಲಾಖೆಯಿಂದ ಆಹಾರ ನೋಂದಣಿ, ಪರವಾನಗಿಯನ್ನು ಪಡೆದುಕೊಳ್ಳಬೇಕು. ತಪ್ಪಿದ್ದಲ್ಲಿ ಕಾಯ್ದೆಯಡಿ ನೋಟೀಸ್ ಮತ್ತು ದಂಡವನ್ನು ವಿಧಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT