ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಸ್ವಾವಲಂಬನೆ ನಾಶದಿಂದ ಆತಂಕ: ಎಂ.ಕೆ.ನಾಯಕ

Published 8 ಡಿಸೆಂಬರ್ 2023, 3:55 IST
Last Updated 8 ಡಿಸೆಂಬರ್ 2023, 3:55 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಏರುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಸ್ವಾವಲಂಬನೆಯಲ್ಲಿ ಸುಸ್ಥಿರತೆ ಕಾಪಾಡಿಕೊಳ್ಳದಿದ್ದರೆ ದೇಶ ಭಿಕ್ಷೆ ಬೇಡಬೇಕಾಗುತ್ತದೆ ಎಂದು ಶಿವಮೊಗ್ಗ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಎಂ.ಕೆ.ನಾಯಕ ಎಚ್ಚರಿಸಿದರು.

ಪೊನ್ನಂಪೇಟೆ ಅರಣ್ಯ ಕಾಲೇಜಿನಲ್ಲಿ ಎರಡು ದಿನಗಳ ಕಾಲ ಅಂತರರಾಷ್ಟ್ರೀಯ ಮಟ್ಟದ ‘ಜೀವವೈವಿಧ್ಯತೆ ಸಂರಕ್ಷಣೆ ಮತ್ತು ಸಂಪನ್ಮೂಲಗಳ ಸುಸ್ಥಿರ ಬಳಕೆ’ ಕುರಿತ ವಿಚಾರ ಸಂಕಿರಣವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ‘ಜೈ ಜವಾನ್ ಜೈ ಕಿಸಾನ್’ ಘೋಷಣೆಯೊಂದಿಗೆ ದೇಶ ಇಂದು ಹಸಿರು ಕ್ರಾಂತಿ ಕಂಡಿದೆ. ಇದು ಸಾಧ್ಯವಾದದ್ದು ಭೂಮಿಯ ಮೇಲಿನ ಜೀವ ವೈವಿಧ್ಯತೆಯಿಂದಾಗಿ. ಇದನ್ನು ಕಳೆದುಕೊಂಡರೆ ಭವಿಷ್ಯದಲ್ಲಿ ಭಾರಿ ಗಂಡಾಂತರ ಎದುರಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಪಂಚದ 400 ರಾಷ್ಟ್ರಗಳು ಬಳಸುವಷ್ಟು ಆಹಾರವನ್ನು ಭಾರತ ಒಂದೇ ಬಳಸುತ್ತಿದೆ. 1.42 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಭಾರತಕ್ಕೆ ಆಹಾರದ ಅಭದ್ರತೆ ಕಾಡದಂತೆ ನೋಡಿಕೊಳ್ಳಬೇಕಾದರೆ ಇಲ್ಲಿನ ಮಣ್ಣಿನ ಸಂರಕ್ಷಣೆ ಮತ್ತು ಪರಿಸರದ ಸಂಪನ್ಮೂಲವನ್ನು ಸಂರಕ್ಷಿಸಬೇಕಾಗಿದೆ ಎಂದು ಪ್ರತಿಪಾದಿಸಿದರು.

ಮಣ್ಣಿನಲ್ಲಿ ಎಲ್ಲ ರೀತಿಯ ರೋಗ ನಿರೋಧಕ ಶಕ್ತಿ ಇದೆ. ಸಮೃದ್ಧವಾದ ಮಣ್ಣಿನಲ್ಲಿ ಬೆಳೆದ ಸಸ್ಯಗಳಿಂದ ಆಹಾರ ಪಡೆದುಕೊಳ್ಳುವುದೇ ಅಲ್ಲದೆ ಅನೇಕ ಬಗೆಯ ಔಷಧಿಗಳನ್ನೂ ತಯಾರಿಸಲಾಗಿದೆ. ದೇಶ ಇಂದು ಪೊಲಿಯೋ ಮುಕ್ತವಾಗಿರಬೇಕಾದರೆ ಅದಕ್ಕೆ ಕಾರಣ ಸಸ್ಯದಿಂದ ಕಂಡು ಹಿಡಿದ ಪೆನ್ಸಿಲ್ವೆನಿಯಾ ಔಷಧಿ ಕಾರಣ. ಇಂಥ ಅಮೂಲ್ಯ ಆಹಾರ ಮತ್ತು ಸಸ್ಯ ಸಂಪತ್ತನ್ನು ಹೊಂದಿರುವ ಪರಿಸರವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವ ಹೊಣೆ ನಮ್ಮ ಮೇಲಿದೆ ಎಂದು ಹೇಳಿದರು.

‘ವಿಶ್ವ ಸಂಸ್ಥೆ 2023’ ಅನ್ನು ಅಂತರರಾಷ್ಟ್ರೀಯ ಜೀವ ವೈವಿಧ್ಯತೆಯ ವರ್ಷವಾಗಿ ಆಚರಿಸುತ್ತಿದೆ. ಎಲ್ಲದಕ್ಕೂ ಕ್ರಿಮಿನಾಶಕ ಬಳಸುವ ಮೂಲಕ ಮಣ್ಣಿ ಸಾರ ಕಳೆದುಕೊಳ್ಳುವುದರ ಜತೆಗೆ ಅಮೂಲ್ಯ ಪರಿಸರವನ್ನು ಹಾಳು ಮಾಡಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಗಂಭೀರವಾಗಿ ಚಿಂತಿಸಿ ಜೀವ ವೈವಿಧ್ಯತೆಯನ್ನು ಕಾಪಾಡಿ ಪರಿಸರದಲ್ಲಿ ಸಿಗುವ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ವಿಶ್ವವಿದ್ಯಾನಿಲಯದ ಕುಲ ಸಚಿವ ಡಾ.ಕೆ.ಸಿ.ಶಶಿಧರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು, ಮುಂದಿನ ಪೀಳಿಗೆಗೆ ಪರಿಸರದ ಸಂಪನ್ಮೂಲವನ್ನು ಉಳಿಸುವುದು ಹೇಗೆ ಎಂಬುದರ ಬಗ್ಗೆ ಚಿಂತಿಸಬೇಕಾಗಿದೆ. ಭೂಮಿಯ ಮೇಲಿನ ಸಂಪನ್ಮೂಲದ ಆಧಾರದ ಮೇಲೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು. ಭೂಮಿಯ ಮೇಲಿನ ಮಣ್ಣನ್ನು ಸಂರಕ್ಷಿಸಬೇಕು. ಇಲ್ಲದಿದ್ದರೆ, ಜನಸಂಖ್ಯೆ ಮತ್ತು ಆಹಾರ ಸಂಪನ್ಮೂಲಗಳ ನಡುವೆ ಸಮತೋಲನ ಕಾಪಾಡಿಕೊಳ್ಳುವುದು ಕಷ್ಟವಾಗಲಿದೆ ಎಂದು ಹೇಳಿದರು.

ನರ್ಸರಿಗಳಲ್ಲಿ ಬಿಸಿಲಿನ ತಾಪ ಕಡಿಮೆ ಮಾಡಲು ಪಾಲಿಹೌಸ್ ಬಳಸುತ್ತಿದ್ದೇವೆ. ಇದರಿಂದ ಶೇ 60 ಸೌರಶಕ್ತಿ ಪೋಲಾಗುತ್ತಿದೆ. ಪಾಲಿಹೌಸ್ ಬದಲು ಸೋಲಾರ್ ಪ್ಯಾನಲ್ ಬಳಸಿದರೆ ಅಷ್ಟು ಪ್ರಮಾಣದ ಸೌರಶಕ್ತಿಯನ್ನು ಬಳಸಿಕೊಳ್ಳಬಹುದು. ಈ ಮೂಲಕ ವಿದ್ಯುತ್ ಬಳಕೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಅರಣ್ಯ ಕಾಲೇಜಿನ ಡೀನ್ ಡಾ.ದೇವಗಿರಿ ಮಾತನಾಡಿ, ‘ಎರಡು ದಿನಗಳ ಕಾಲ ನಡೆಯುವ ವಿಚಾರ ಸಂಕಿರಣದಲ್ಲಿ ದೇಶ ವಿದೇಶಗಳ ಪರಿಸರ ಮತ್ತು ಕೃಷಿ ವಿಜ್ಞಾನಿಗಳು ಪಾಲ್ಗೊಂಡು ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ’ ಎಂದರು.

ಕಾರ್ಯಕ್ರಮ ಕಾರ್ಯದರ್ಶಿ ಡಾ.ಬಿ.ಎನ್ ಸತೀಶ್ ಪ್ರಸ್ತಾವಿಕವಾಗಿ ಮಾತನಾಡಿ, ‘ಜೀವವೈವಿಧ್ಯ ಸಮ್ಮೇಳನದಲ್ಲಿ ದೇಶ ವಿದೇಶಗಳ 110 ವಿಜ್ಞಾನಿಗಳು ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ 56 ಮಂದಿ ನೇರವಾಗಿ ಪ್ರಬಂಧ ಮಂಡನೆ ಮತ್ತು ಸಂವಾದ ನಡೆಸಿದರೆ ಉಳಿದವರು ಆನ್‌ಲೈನ್‌ ಮೂಲಕ ವಿಷಯ ಮಂಡಿಸಲಿದ್ದಾರೆ. ಒಟ್ಟು 5 ವಿಭಾಗಗಳಲ್ಲಿ ಸಂವಾದ ನಡೆಯಲಿದೆ’ ಎಂದು ತಿಳಿಸಿದರು.

ಅರಣ್ಯ ಕಾಲೇಜಿನ ಪ್ರೊ.ಕೆಂಚರೆಡ್ಡಿ, ನಿವೃತ್ತ ಡೀನ್ ಪ್ರೊ.ಸಿ.ಜಿ.ಕುಶಾಲಪ್ಪ ಪಾಲ್ಗೊಂಡಿದ್ದರು.

ಸಮ್ಮೇಳನದಲ್ಲಿ 110 ವಿಜ್ಞಾನಿಗಳು ಭಾಗಿ 56 ವಿಜ್ಞಾನಿಗಳಿಂದ ನೇರವಾಗಿ ಪ್ರಬಂಧ ಮಂಡನೆ ನಡೆಯಲಿದೆ ಒಟ್ಟು 5 ವಿಭಾಗಗಳಲ್ಲಿ ಸಂವಾದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT