ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಶಾಲನಗರ: ಮಂಟಿಗಮ್ಮದೇವಿ ಜಾತ್ರೋತ್ಸವ

ಶಿರಂಗಾಲದಲ್ಲಿ 2 ವರ್ಷಕ್ಕೊಮ್ಮೆ ನಡೆಯುವ ಜಾತ್ರೆ, ಸಾವಿರಾರು ಭಕ್ತರು ಬರುವ ನಿರೀಕ್ಷೆ
Last Updated 10 ಮಾರ್ಚ್ 2023, 6:08 IST
ಅಕ್ಷರ ಗಾತ್ರ

ಕುಶಾಲನಗರ: ಉತ್ತರ ಕೊಡಗಿನ ಗಡಿಗ್ರಾಮ ಶಿರಂಗಾಲ ಗ್ರಾಮದಲ್ಲಿ ಮಾರ್ಚ್ 10ರಂದು ಶುಕ್ರವಾರ ನಡೆಯುವ ಗ್ರಾಮ ದೇವತೆ ಶ್ರೀ ಮಂಟಿಗಮ್ಮ ದೇವಿಯ ದ್ವೈವಾರ್ಷಿಕ ಜಾತ್ರೋತ್ಸವಕ್ಕೆ ಗ್ರಾಮ ದೇವತಾ ಸಮಿತಿ ವತಿಯಿಂದ ಸಿದ್ಧತಾ ಕಾರ್ಯ ಪೂರ್ಣಗೊಂಡಿದೆ.

ಶಿರಂಗಾಲ ಗ್ರಾಮ ದೇವತೆ ಶ್ರೀ ಮಂಟಿಗಮ್ಮ ಜೀರ್ಣೋದ್ಧಾರ ಸಮಿತಿ ವತಿಯಿಂದ ದಾನಿಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ಸುಮಾರು ₹ 2 ಕೋಟಿ ವೆಚ್ಚದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಲಾಗಿದೆ. ಜತೆಗೆ, ಪ್ರವೇಶ ಗೋಪುರವನ್ನು ಕೂಡ ಹೊಸದಾಗಿ ನಿರ್ಮಾಣ ಮಾಡಲಾಗಿದೆ. ಹೊಸದಾಗಿ ದೇವಾಲಯ ನಿರ್ಮಾಣವಾದ ನಂತರ ನಡೆಯುತ್ತಿರುವ ಪ್ರಥಮ ಜಾತ್ರೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಗ್ರಾಮಸ್ಥರು ಸಜ್ಜಾಗಿದ್ದಾರೆ.

ಕೊಡಗು ಹಾಗೂ ಹಾಸನ ಜಿಲ್ಲೆಯ ಗಡಿ ಗ್ರಾಮಗಳ ವ್ಯಾಪ್ತಿಯಲ್ಲಿ ನಡೆಯುವ ಗ್ರಾಮೀಣ ಭಾಗದ ಅತಿ ದೊಡ್ಡ ಜಾತ್ರೆಗಳಲ್ಲಿ ಶ್ರೀ ಮಂಟಿಗಮ್ಮ ದೇವಿಯ ಉತ್ಸವವೂ ಒಂದು. ಮೈಸೂರು, ಹಾಸನ ಹಾಗೂ ಕೊಡಗು ಜಿಲ್ಲೆಯ ಗಡಿ ಗ್ರಾಮಗಳ ಜನರು ಸೇರಿದಂತೆ ವಿವಿಧೆಡೆಗಳಿಂದ ಅಪಾರ ಸಂಖ್ಯೆ ಭಕ್ತರು ಪಾಲ್ಗೊಳ್ಳುತ್ತಾರೆ.

ದೇವಿಯ ಬನದಲ್ಲಿ ಹಾಕಿರುವ ಅಗ್ನಿಕೊಂಡವನ್ನು ಹರಕೆ ಹೊತ್ತ ಭಕ್ತಾದಿಗಳು ತುಳಿದು ದೇವರ ದರ್ಶನ ಪಡೆಯುತ್ತಾರೆ. ಸಂತೆಮಾಳ ಮೈದಾನ ದಲ್ಲಿ ಆಕರ್ಷಕ ಮದ್ದುಗುಂಡುಗಳ ಪ್ರದರ್ಶನ ಏರ್ಪಡಿಸಲಾಗಿದೆ. ದೇವಸ್ಥಾನ ಮತ್ತು ಗ್ರಾಮವನ್ನು ತಳಿರು ತೋರಣಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗುತ್ತದೆ.

ದೇವಸ್ಥಾನ ಸಮಿತಿ ಅಧ್ಯಕ್ಷ ರುದ್ರಪ್ಪ ಮತ್ತು ಕಾರ್ಯದರ್ಶಿ ಎಸ್.ಎಸ್.ಮಹೇಶ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ. ಉತ್ಸವದ ಅಂಗವಾಗಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಿವಿಧ ಕ್ರೀಡಾಕೂಟ ಹಾಗೂ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಬನದಲ್ಲಿ ನಡೆಯುವ ಜಾತ್ರೆ ಗ್ರಾಮೀಣ ಸಂಸ್ಕೃತಿಯನ್ನು ಪ್ರತಿಬಿಂಬಿಸಲಿದೆ.

ಮಾರ್ಚ್ 13 ರಂದು ಬೆಳಿಗ್ಗೆ 8 ಗಂಟೆಗೆ ಉಮಾಮಹೇಶ್ವರ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ. ನಂತರ, ಮಧ್ಯಾಹ್ನ 12 ಗಂಟೆಗೆ ಮಂಗಳವಾದ್ಯ ಹಾಗೂ ಪೂಜಾ ಕುಣಿತ, ನಂದಿಧ್ವಜ ಕುಣಿತ, ವೀರಭದ್ರೇಶ್ವರ ಕುಣಿತ, ಕಂಸಾಳೆ, ಕೀಲು ಕುದುರೆಗಳೊಂದಿಗೆ ಉಮಾಮಹೇಶ್ವರ ರಥೋತ್ಸವ ಜರುಗಲಿದೆ.

ಮಾರ್ಚ್ 15 ರಂದು ಸಂಜೆ 6 ಗಂಟೆಗೆ ಉಮಾಮಹೇಶ್ವರಸ್ವಾಮಿ ತೆಪ್ಪೋತ್ಸವ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT