ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡ ಸಾಹಿತ್ಯಕ್ಕೆ ಕೊಡಗಿನ ಕೊಡುಗೆ ಅಪಾರ

ಕಸಾಪ ವತಿಯಿಂದ ಕೆ.ಟಿ.ಸುಬ್ಬರಾವ್ ದತ್ತಿ ಉಪನ್ಯಾಸ: ವೆಂಕಟನಾಯಕ್
Published 30 ಏಪ್ರಿಲ್ 2024, 5:09 IST
Last Updated 30 ಏಪ್ರಿಲ್ 2024, 5:09 IST
ಅಕ್ಷರ ಗಾತ್ರ

ಕುಶಾಲನಗರ: ಕನ್ನಡವನ್ನು ಶ್ರೀಮಂತ ಭಾಷೆ ಮಾಡುವಲ್ಲಿ ಕೊಡಗಿನ ಕವಿಗಳು ಮತ್ತು ಸಾಹಿತಿಗಳ ಕೊಡುಗೆ ಅಪಾರ. ಕೊಡಗಿನ ಜನರು ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕನ್ನಡ ಅಧ್ಯಾಪಕ ಎಂ.ಎನ್.ವೆಂಕಟನಾಯಕ್ ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಕುವೆಂಪು ಕನ್ನಡ ಭಾಷಾ ಸಂಘದ ಆಶ್ರಯದಲ್ಲಿ ಕೂಡ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ನಡೆದ ಕರ್ನಾಟಕ ಸುವರ್ಣ ಸಂಭ್ರಮ ಹಾಗೂ ಕೆ.ಟಿ.ಸುಬ್ಬರಾವ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯಕ್ಕೆ ಕೊಡಗಿನವರ ಕೊಡುಗೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಜಿಲ್ಲೆಯ ಇಂದಿನ ಉದಯೋನ್ಮುಖ ಕವಿಗಳು ಮತ್ತು ಲೇಖಕರು ಕೂಡ ಉತ್ತಮ ಸಾಹಿತ್ಯ ರಚನೆಯಲ್ಲಿ ತೊಡಗಿರುವುದರಿಂದ ಕೊಡಗಿನ ಸಾಹಿತ್ಯಕ್ಕೆ ವಿಶೇಷ ಮನ್ನಣೆ ಲಭಿಸಿದೆ ಎಂದರು. ನಾಡಿನ ಹಿರಿಯ ಕಥೆಗಾರ್ತಿ ಕೊಡಗಿನ ಗೌರಮ್ಮ ಶ್ರೇಷ್ಠ ಕಥೆಗಾರ್ತಿಯಾಗಿ, ಕನ್ನಡದಲ್ಲಿ ಮಹತ್ವದ ಕಥೆಗಳನ್ನು ರಚಿಸಿದ್ದಾರೆ. ಡಿಕೇರಿಯಂಡ ಚಿಣ್ಣಪ್ಪ ಅವರ ಪಟ್ಟೋಲೆ ಪಳಮೆ ಕೃತಿಯು ಕನ್ನಡ ಜಾನಪದ ಸಂಗ್ರಹ ಕೃತಿಗಳಲ್ಲೇ ಅಮೂಲ್ಯವಾದುದು
ಎಂದು ಬಣ್ಣಿಸಿದರು.

ಹೊರ ಜಿಲ್ಲೆಗಳಿಂದ ಬಂದು ಕೊಡಗಿನಲ್ಲಿ ನೆಲೆಸಿದವರೂ ಕನ್ನಡಕ್ಕೆ ವಿಶೇಷ ಕೊಡುಗೆ ಕೊಟ್ಟಿದ್ದಾರೆ. ಅವರಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಪಂಜೆ ಮಂಗೇಶರಾಯರ ಕೊಡುಗೆ ಅಪಾರ ಎಂದ ಅವರು, ಪಂಜೆ ಮಂಗೇಶರಾಯರ ‘ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಭಿಮ್ಮನೆ ಬಂದಳೋ, ಎಲ್ಲಿ ಮೋಹನ ಗಿರಿಯ ಬೆಡಗಿನ ರೂಪಿನಿಂದಲಿ ನಿಂದಳೋ’ ಎಂಬ ಅವರ ಹುತ್ತರಿ ಹಾಡು ಕೃತಿಯ ಪದ್ಯವನ್ನು ಉಲ್ಲೇಖಿಸಿದರು.

ಕನ್ನಡ ಹೆಸರಾಂತ ಕಾದಂಬರಿಗಾರರಾಗಿದ್ದ ಭಾರತೀಸುತ, ಕೋಡಿ ಕುಶಾಲಪ್ಪ, ಡಿ.ಎನ್.ಕೃಷ್ಣಯ್ಯ ಯದುರ್ಕಲ ಶಂಕರನಾರಾಯಣ ಭಟ್, ಬಿ.ಡಿ.ಸುಬ್ಬಯ್ಯ, ಕುಶಾಲನಗರದ ವಿ.ಎಸ್.ರಾಮಕೃಷ್ಣ , ಸುಂಟಿಕೊಪ್ಪದ ಅಬ್ದುಲ್ ರಶೀದ್, ಕಣಿವೆ ಭಾರದ್ವಾಜ ಕೆ.ಆನಂದ ತೀರ್ಥ ಮೊದಲಾದವರ ಕೊಡುಗೆಯನ್ನು ವೆಂಕಟನಾಯಕ್ ಸ್ಮರಿಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ನಾಗೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಜಿಲ್ಲೆಯ ಅನೇಕ ಕವಿಗಳು, ಸಾಹಿತಿಗಳು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ನಾವು ಇಂದಿನ ಯುವ ಪೀಳಿಗೆ ಹಾಗೂ ವಿದ್ಯಾರ್ಥಿ ಸಮುದಾಯಕ್ಕೆ ತಿಳಿಸಿದಾಗ ಅವರು ಸಾಹಿತ್ಯ ಪ್ರೇಮ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಪ್ರತಿನಿತ್ಯವೂ ಕನ್ನಡ ಪುಸ್ತಕಗಳನ್ನು ಓದಲು ಒಂದಿಷ್ಟು ಸಮಯ ಮೀಸಲಿಟ್ಟು ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದರು.

ತಾಲ್ಲೂಕು ಕಸಾಪ ಗೌರವ ಕೋಶಾಧಿಕಾರಿ ಕೆ.ವಿ.ಉಮೇಶ್, ಪದಾಧಿಕಾರಿ ಡಿ.ಆರ್.ಸೋಮಶೇಖರ್, ಕಸಾಪ ಹೆಬ್ಬಾಲೆ ಹೋಬಳಿ ಘಟಕದ ಅಧ್ಯಕ್ಷ ಎಂ.ಎನ್.ಮೂರ್ತಿ, ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಎಚ್.ಎಸ್.ಸುಜಾತ, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT