ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿ: ಪ್ರಶಸ್ತಿ ಮುಡಿಗೇರಿಸಿಕೊಂಡ ನೆರವಂಡ,ಮಣವಟ್ಟೀರ

ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಗೆ ಸಂಭ್ರಮದ ತೆರೆ
Published 19 ಮೇ 2024, 16:29 IST
Last Updated 19 ಮೇ 2024, 16:29 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಸಮೀಪದ ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಭಾನುವಾರ ನಡೆದ ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಜಯಗಳಿಸಿದ ನೆರವಂಡ ಮತ್ತು ಮಹಿಳಾ ವಿಭಾಗದ ಮಣವಟ್ಟೀರ ತಂಡಗಳು ಪ್ರಶಸ್ತಿ ಮುಡಿಗೇರಿಸಿಕೊಂಡವು.

ಭಾನುವಾರ ಬೆಳಿಗ್ಗೆಯಂದಲೂ ಸುರಿದ ಭಾರಿ ಮಳೆಗೆ ಮೈದಾನದಲ್ಲಿ ನೀರು ತುಂಬಿತ್ತು. ಮಳೆ ನಿಂತ ಬಳಿಕ ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಭಿಸಲಾಯಿತು. ಸಮಯದ ಅಭಾವದಿಂದ ಉಭಯ ತಂಡಗಳೊಂದಿಗೆ ಚರ್ಚಿಸಿ ಪಂದ್ಯವನ್ನು ತಲಾ 6 ಓವರ್‌ಗಳಿಗೆ ನಿಗದಿಗೊಳಿಸಲಾಗಿತ್ತು.

ನೆರವಂಡ ಮತ್ತು ಅಚ್ಚಪಂಡ ತಂಡಗಳ ನಡುವೆ ನಡೆದ ಫೈನಲ್‌ ಪಂದ್ಯದಲ್ಲಿ ನೆರವಂಡ 9 ವಿಕೆಟ್‌ಗಳಿಂದ ಜಯ ಗಳಿಸಿ ಚಾಂಪಿಯನ್‌ ಆಗಿ ಹೊರ ಹೊಮ್ಮಿತು. ಮೊದಲು ಬ್ಯಾಟಿಂಗ್ ನಡೆಸಿದ ಅಚ್ಚಪಂಡ 7 ವಿಕೆಟ್ ನಷ್ಟಕ್ಕೆ ಕೇವಲ 36 ರನ್ ಗಳಿಸಿತ್ತು. ಗೆಲುವಿನ ಗುರಿ ಬೆನ್ನತ್ತಿದ ನೆರವಂಡ ಕೇವಲ 3.4 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 37 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.

ನೆರವಂಡ ತಂಡದ ಪ್ರಶಾಂತ್ 22, ಪೆಮ್ಮಯ್ಯ 12, ವರುಣ್ 4 ರನ್ ಗಳಿಸಿದರೆ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ನೆರವಂಡ ಪ್ರಶಾಂತ್ 3 ವಿಕೆಟ್ ಪಡೆದರು. ಈ ಮೂಲಕ ಪ್ರಶಾಂತ್ ಪಂದ್ಯ ಪುರುಷ ಗೌರವಕ್ಕೆ ಪಾತ್ರರಾದರು.

ಮಹಿಳಾ ವಿಭಾಗದಲ್ಲಿ ಮಣವಟ್ಟೀರಕ್ಕೆ ಪ್ರಶಸ್ತಿ: ಮಹಿಳಾ ವಿಭಾಗದ ಫೈನಲ್ ಪಂದ್ಯದಲ್ಲಿ ಮಣವಟ್ಟೀರ ತಂಡವು ಮುಕ್ಕಾಟೀರ (ಹರಿಹರ) ತಂಡದ ವಿರುದ್ಧ 25 ರನ್‌ಗಳಿಂದ ಜಯ ಗಳಿಸಿ ಪ್ರಥಮ ಮಹಿಳಾ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಮೊದಲು ಬ್ಯಾಟಿಂಗ್ ನಡೆಸಿದ ಮಣವಟ್ಟೀರ ತಂಡ ನಿಗದಿತ 6 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 60 ರನ್ ಗಳಿಸಿತು. ಇದನ್ನು ಬೆನ್ನತ್ತಿದ ಮುಕ್ಕಾಟೀರ ತಂಡ 3 ವಿಕೆಟ್ ಕಳೆದುಕೊಂಡು 34 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು.

ಮಣವಟ್ಟೀರ ತಂಡದ ಸಂಗೀತಾ 30, ಅರ್ಪಿತಾ 20 ರನ್ ಗಳಿಸಿದರೆ ಶೃತಿ 2 ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನ ರೂವಾರಿಯಾದರು. ಮಣವಟ್ಟೀರ ಸಂಗೀತ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

30 ದಿನಗಳಿಂದ ನಡೆದ ಕ್ರಿಕೆಟ್ ಟೂರ್ನಿಯ ಸಮಾರೋಪ ಸಮಾರಂಭವನ್ನು ಒಲಂಪಿಯನ್ ಅಶ್ವಿನಿ ನಾಚಪ್ಪ ಉದ್ಘಾಟಿಸಿದರು. ಅರಮಣಮಾಡ ಕುಟುಂಬದ ಅಧ್ಯಕ್ಷ ಹಾಗೂ ನಿವೃತ್ತ ಎಸ್.ಪಿ. ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ, ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ, ವೈದ್ಯ ಮಾಪಂಗಡ ಬೆಳ್ಳಿಯಪ್ಪ, ಮುಖಂಡರಾದ ಅರಮಣಮಾಡ ಸುಗುಣ ಪಾಲ್ಗೊಂಡಿದ್ದರು.

ಸಂಜೆ ಮತ್ತೆ ಮಳೆ ಅಡ್ಡಿ: ಸಮಾರೋಪ ಸಮಾರಂಭವನ್ನು ಕೊಡವ ಸಂಗೀತ ನೈಟ್ಸ್ ಮತ್ತು ಡಿಜೆ ನೃತ್ಯದೊಂದಿಗೆ ಸಂಭ್ರಮಿಸಲು ಅರಮಣಮಾಡ ಕುಟುಂಬಸ್ಥರು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಸಂಜೆ ಮತ್ತೆ ಆರಂಭಗೊಂಡ ಮಳೆಯಿಂದ ಎಲ್ಲವೂ ಸ್ಥಗಿತಗೊಂಡಿತು.

ಮಹಿಳಾ ವಿಭಾಗದಲ್ಲಿ ಮಣವಟ್ಟೀರ ತಂಡ ಪ್ರಶ್ತಸ್ತಿ ಗಳಿಸಿತು.
ಮಹಿಳಾ ವಿಭಾಗದಲ್ಲಿ ಮಣವಟ್ಟೀರ ತಂಡ ಪ್ರಶ್ತಸ್ತಿ ಗಳಿಸಿತು.
ಒಲಂಪಿಯನ್ ಅಶ್ವಿನಿ ನಾಚಪ್ಪ ಸಮಾರೋಪ ಸಮಾರಂಭ ಉದ್ಘಾಟಿಸಿದರು. ಎಸ್ ಪಿ ಸುರೇಶ್ ಐಮುಡಿಯಂಡ ರಾಣಿ ಮಾಚಯ್ಯ ಕೀತಿಯಂಡ ಕಾರ್ಸನ್ ಕಾರ್ಯಪ್ಪ  ಮಾಪಂಗಡ ಬೆಳ್ಳಿಯಪ್ಪ ಪಾಲ್ಗೊಂಡಿದ್ದರು
ಒಲಂಪಿಯನ್ ಅಶ್ವಿನಿ ನಾಚಪ್ಪ ಸಮಾರೋಪ ಸಮಾರಂಭ ಉದ್ಘಾಟಿಸಿದರು. ಎಸ್ ಪಿ ಸುರೇಶ್ ಐಮುಡಿಯಂಡ ರಾಣಿ ಮಾಚಯ್ಯ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಮಾಪಂಗಡ ಬೆಳ್ಳಿಯಪ್ಪ ಪಾಲ್ಗೊಂಡಿದ್ದರು

ಮುಂದಿನ ಟೂರ್ನಿ ಆತಿಥ್ಯ ಚೆಕ್ಕೇರ ಕುಟುಂಬಕ್ಕೆ

ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಯ 23ನೇ ವರ್ಷದ ಆತಿಥ್ಯವನ್ನು ಚೆಕ್ಕೇರ ಕುಟುಂಬ ವಹಿಸಿಕೊಂಡಿತು. ಈ ಸಂಬಂಧ 22ನೇ ಟೂರ್ನಿಯನ್ನು ಯಶಸ್ವಿಯಾಗಿ ನಡೆಸಿದ ಅರಮಣಮಾಡ ಕುಟುಂಬಸ್ಥರಿಂದ ಚೆಕ್ಕೇರ ಕುಟುಂಬಸ್ಥರು ಧ್ವಜ ಸ್ವೀಕರಿಸಿದರು. ಕೊಡವ ಸಾಂಪ್ರದಾಯಕ ಉಡುಪಿನಲ್ಲಿ ಕೊಡವ ವಾಲಗದೊಂದಿಗೆ ಮೈದಾನಕ್ಕೆ ಶಿಸ್ತುಬದ್ಧವಾಗಿ ಆಗಮಿಸಿದ ಚೆಕ್ಕೇರ ಕುಟುಂಬದವರಿಗೆ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕಾರ್ಸನ್ ಕಾರ್ಯಪ್ಪ ಧ್ವಜ ಹಸ್ತಾಂತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT