ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪೋಕ್ಲು | ಮಳೆ ಕೊರತೆ: ಅರಳದ ಕಾಫಿ ಹೂಗಳು

ಮಳೆಯ ನಿರೀಕ್ಷೆಯಲ್ಲಿ ಆಕಾಶದತ್ತ ದೃಷ್ಟಿ ನೆಟ್ಟಿರುವ ಬೆಳೆಗಾರರು
Published 3 ಏಪ್ರಿಲ್ 2024, 5:34 IST
Last Updated 3 ಏಪ್ರಿಲ್ 2024, 5:34 IST
ಅಕ್ಷರ ಗಾತ್ರ

ನಾಪೋಕ್ಲು: ನಾಲ್ಕು ನಾಡು ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಹೂಗಳು ಸಂಪೂರ್ಣವಾಗಿ ಅರಳದೆ ಬಿಸಿಲಿನ ಝಳಕ್ಕೆ ಮುದುಡುತ್ತಿವೆ. ಕೆಲವೆಡೆ ಹೂಗಳು ಅರ್ಧಂಬರ್ಧ ಅರಳಿ ಕೆಂಪಾಗಿವೆ.

ಹತ್ತು ದಿನಗಳ ಹಿಂದೆ ಬೆಳಗಿನ ಜಾವ ಹಲವಡೆ ತುಂತುರು ಮಳೆಯಾಗಿದೆ. ಕಾಫಿ ಹೂಗಳು ಅರಳುವ ಸಮಯ ಇದಾಗಿದ್ದು, ಬಿದ್ದ ಅಲ್ಪ ಮಳೆಯಿಂದ ಮೊಗ್ಗುಗಳು ಮುಂದೆ ಬಂದು ಕಮರುತ್ತಿವೆ. ಸಾಮಾನ್ಯವಾಗಿ ಫೆಬ್ರುವರಿ ಅಂತ್ಯಕ್ಕೆ ಅಥವಾ ಮಾರ್ಚ್ ತಿಂಗಳಲ್ಲಿ ಹೂ ಮಳೆಯಾದರೆ ಕಾಫಿಯ ಹೂಗಳು ಅರಳಿ ತೋಟಗಳಲ್ಲಿ ಘಮಘಮಿಸುತ್ತವೆ. ಇದೀಗ ಮಾರ್ಚ್ ಅಂತ್ಯಕ್ಕೆ ಬಂದಿದ್ದರೂ ಮಳೆಯಾಗಿಲ್ಲ. ಜಲ ಮೂಲಗಳೆಲ್ಲ ನೀರಿಲ್ಲದೆ ಬರಡಾಗಿವೆ. ಮುಂದಿನ ವರ್ಷದ ಫಸಲನ್ನು ನಿರ್ಧರಿಸುವ ಕಾಫಿಯ ಮೊಗ್ಗುಗಳು ಬಿಸಿಲಿನ ಝಳಕ್ಕೆ ಕರಕಲಾಗುತ್ತಿವೆ.

ಬಿಸಿಲಿನ ತಾಪ ತಾಳಲಾರದೇ ಕಾಳು ಮೆಣಸಿನ ಬಳ್ಳಿಗಳು ಒಣಗುತ್ತಿವೆ. ಎಲೆಗಳೆಲ್ಲ ಒಣಗಿ ಬಳ್ಳಿ ಸಂಪೂರ್ಣವಾಗಿ ನಾಶವಾಗುತ್ತಿವೆ. ಮಳೆಯ ಕೊರತೆಯಿಂದ ಕೃಷಿಕರಿಗೆ ಇನ್ನಿಲ್ಲದ ಸಮಸ್ಯೆ ಎದುರಾಗಿದೆ. ಕಾಳುಮೆಣಸಿನ ಬಳ್ಳಿಗಳು ಬಣ್ಣ ಕಳೆದುಕೊಂಡು ಎಲೆಗಳು ಸುಟ್ಟಂತಾಗಿ ಬಳ್ಳಿಗಳು ಒಣಗುತ್ತಿರುವುದು ಕಾಳುಮೆಣಸಿನ ಬಳೆಗಾರರನ್ನು ಕಂಗಡಿಸುತ್ತಿವೆ. ಬಹುತೇಕ ತೋಟಗಳಲ್ಲಿ ಕಾಳು ಮೆಣಸಿನ ಬಳ್ಳಿಗಳು ಒಣಗಿ ಹೋಗುತ್ತಿವೆ.

ಸುರಿದ ಅಲ್ಪ ಮಳೆಯಿಂದ ಕಾಫಿಯ ಮೊಗ್ಗುಗಳು ಹಲವೆಡೆ ಸಂಪೂರ್ಣವಾಗಿ ಅರಳದೆ ಕೆಂಪಾಗುತ್ತಿವೆ. ಬಲ್ಲಮಾವಟಿ ಗ್ರಾಮ ವ್ಯಾಪ್ತಿಯಲ್ಲಿ ತುಂತುರು ಮಳೆಯಾಗಿದ್ದು, ಕಾಫಿ ಹೂಗಳಿಗೆ ಸಾಕಾಗುವಷ್ಟು ಮಳೆ ಸುರಿದಿಲ್ಲ. ಮಳೆಯ ಕೊರತೆಯಿಂದ ಮುಂದಿನ ವರ್ಷದ ಫಸಲಿನ ಮೇಲೆ ತೀವ್ರ ಹೊಡೆತ ಬೀಳುತ್ತದೆ ಎಂದು ಬೆಳೆಗಾರರು ಆತಂಕದಲ್ಲಿದ್ದಾರೆ.

ಗ್ರಾಮದ ಕಾಫಿ ಬೆಳೆಗಾರ ಅಪ್ಪಚೆಟ್ಟೋಳಂಡ ಮಿಥುನ್ ಮಾಚಯ್ಯ ಮಾತನಾಡಿ, ‘10 ದಿನಗಳ ಹಿಂದೆ ಕೇವಲ 5 ಸೆಂಟ್ಸ್ ಮಳೆ ಸುರಿದಿದೆ. ಇದು ಹೂ ಅರಳಲು ಸಾಕಾಗುತ್ತಿಲ್ಲ. ಮೊಗ್ಗುಗಳು ಮುಂದೆ ಬಂದು ಸರಿಯಾಗಿ ಅರಳದೇ ಇಳುವರಿ ಮೇಲೆ ಭಾರಿ ಪರಿಣಾಮ ಬೀರಲಿದೆ’ ಎಂದರು.

ಕಾಫಿ ಬೆಳೆಗಾರ ಚಂಗೇಟಿರ ಕುಶಾಲಪ್ಪ ಮಾತನಾಡಿ, ‘ಜಲಮೂಲಗಳೆಲ್ಲ ಬತ್ತಿವೆ. ಗಿಡಗಳಿಗೆ ನೀರು ಹಾಯಿಸುವ ಪರಿಸ್ಥಿತಿಯಲ್ಲಿ ರೈತರು ಇಲ್ಲ. ಹೊಳೆಗಳಿಂದ ನೀರು ಹಾಯಿಸಲು ಜಿಲ್ಲಾಡಳಿತ ನಿರ್ಬಂಧ ಹೇರಿದೆ. ರೈತರು ಮುಂದಿನ ವರ್ಷ ತೀವ್ರ ಆರ್ಥಿಕ ದುಸ್ಥಿತಿಯನ್ನು ಅನುಭವಿಸಬೇಕಾದ ಪರಿಸ್ಥಿತಿ ಇದೆ’ ಎಂದರು.

ದೊಡ್ಡ ಪುಲಿಕೋಟು ಗ್ರಾಮದ ಕಾಫಿ ಬೆಳೆಗಾರ ಕರವಂಡ ರವಿ ಬೋಪಣ್ಣ ಮಾತನಾಡಿ, ‘ಬೆಳೆಗಾರರು ಈ ವರ್ಷ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಯ ಕೊರತೆ ಒಂದೆಡೆಯಾದರೆ ಏರುತ್ತಿರುವ ತಾಪಮಾನ ಕಾಫಿ ಗಿಡಗಳಿಗೆ ಸಮಸ್ಯೆಯಾಗಿದೆ. ಹೂ ಮಳೆ ಇದೀಗ ಆಗಬೇಕಿತ್ತು. ಎಲ್ಲಿಯೂ ಮಳೆಯಾಗಿಲ್ಲ. ಈ ಭಾಗದಲ್ಲಿ ಬಂದ ತುಂತುರು ಮಳೆಯಿಂದ ಕಾಫಿ ಹೂಗಳು ಅರಳುತ್ತಿಲ್ಲ. ನೀರು ಹಾಯಿಸಲು ನೀರಿನ ಮೂಲಗಳೆಲ್ಲ ಬತ್ತಿ ಹೋಗಿವೆ. ರೈತರ ಸಮಸ್ಯೆಗಳಿಗೆ ಸರ್ಕಾರ, ಕಾಫಿ ಮಂಡಳಿ ಸ್ಪಂದಿಸಬೇಕು’ ಎಂದರು.

ಮಳೆಯ ನಿರೀಕ್ಷೆಯಲ್ಲಿ ಸಣ್ಣ ಬೆಳೆಗಾರರು ತಲೆ ಮೇಲೆ ಕೈಹೊತ್ತು ಆಕಾಶದತ್ತ ದೃಷ್ಟಿ ಇಟ್ಟಿದ್ದಾರೆ.

ನಾಪೋಕ್ಲು ಸಮೀಪದ ಬೇತು ಗ್ರಾಮದಲ್ಲಿ ಕೃಷಿಹೊಂಡವೊಂದರಲ್ಲಿ ನೀರು ತಳ ತಲುಪಿರುವುದು
ನಾಪೋಕ್ಲು ಸಮೀಪದ ಬೇತು ಗ್ರಾಮದಲ್ಲಿ ಕೃಷಿಹೊಂಡವೊಂದರಲ್ಲಿ ನೀರು ತಳ ತಲುಪಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT