ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಕರು ವೃತ್ತಿಯ ಬಗ್ಗೆ ಹೆಮ್ಮೆ, ಆತ್ಮ ವಿಶ್ವಾಸ ಹೊಂದಿರಲಿ: ಡಾ.ಪಿ.ಬಿ.ಕಿಶೋರ್

Published 27 ಮೇ 2024, 13:38 IST
Last Updated 27 ಮೇ 2024, 13:38 IST
ಅಕ್ಷರ ಗಾತ್ರ

ವಿರಾಜಪೇಟೆ: ‘ಶಿಕ್ಷಕ ವೃತ್ತಿಯು ಗಳಿಸುವುದಕ್ಕಲ್ಲ, ಬದಲಿಗೆ ಸಮಾಜಕ್ಕೆ ನೀಡುವುದಕ್ಕಾಗಿದೆ. ಶಿಕ್ಷಕರು ತಮ್ಮ ವೃತ್ತಿಯನ್ನು ಪ್ರೀತಿಸುವುದರೊಂದಿಗೆ ವೃತ್ತಿ ಬಗ್ಗೆ ಹೆಮ್ಮೆ ಹಾಗೂ ದೃಢವಾದ ಆತ್ಮ ವಿಶ್ವಾಸ ಹೊಂದಿರಬೇಕು’ ಎಂದು ಬೆಂಗಳೂರಿನ ಆರ್.ವಿ ಶಿಕ್ಷಕರ ತರಬೇತಿ ಕಾಲೇಜಿನ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ಪಿ.ಬಿ.ಕೆ.ಕಿಶೋರ್ ಅಭಿಪ್ರಾಯಪಟ್ಟರು.

ಪಟ್ಟಣದ ಪಂಜರುಪೇಟೆಯ ಸರ್ವೋದಯ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಈಚೆಗೆ ನಡೆದ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಶಿಕ್ಷಕರಿಗೆ ವೃತ್ತಿಯ ಮೇಲೆ ಬದ್ಧತೆ ಅತಿ ಅಗತ್ಯ. ಶಿಕ್ಷಕರು ಜ್ಞಾನವನ್ನು ಕ್ರಿಯಾತ್ಮಕವಾಗಿ ಹಂಚುವವರಾಗಬೇಕು. ಜ್ಞಾನವನ್ನು ಜನರಲ್ಲಿಗೆ ತರುವುದು ಶಿಕ್ಷಕರ ಕರ್ತವ್ಯವಾಗಿದೆ. ಶಿಕ್ಷಕರ ವೃತ್ತಿ ಜೀವನ ನಿವೃತ್ತಿಯೊಂದಿಗೆ ಕೊನೆಗೊಳ್ಳುವುದಿಲ್ಲ. ಕಲಿಕೆಯೆಂಬುದು ನಿರಂತರ ಪ್ರಕ್ರಿಯೆ. ಶಿಕ್ಷಕರು ವಿದ್ಯಾರ್ಥಿಗಳ ಬಗ್ಗೆ ಸದಾ ಆಶಾಭಾವವಿಟ್ಟುಕೊಳ್ಳಬೇಕು. ಶಿಕ್ಷಕ ಬೆಳೆಯುವುದರೊಂದಿಗೆ ಶಿಕ್ಷಣ ಕ್ಷೇತ್ರವೂ ಬೆಳೆಯುತ್ತದೆ. ಜೊತೆಯಲ್ಲಿಯೇ ವಿದ್ಯಾರ್ಥಿಯೂ ಬೆಳೆಯುತ್ತಾನೆ. ಪೂರಕವಾಗಿ ಸಮಾಜವೂ ಬೆಳೆಯುತ್ತದೆ’ ಎಂದರು.

ಮೈಸೂರಿನ ಆರ್.ಐ.ಇ ಕಾಲೇಜಿನ ಪ್ರಾಧ್ಯಾಪಕ ಡಾ.ಸೋಮಶೇಖರ್ ಮಾತನಾಡಿ,‘ಶಿಕ್ಷಕ ವೃತ್ತಿಯಲ್ಲಿ ಹೊಸ ಆವಿಷ್ಕಾರಗಳು ತುಂಬಿರಬೇಕು. ನೂತನ ವಿನ್ಯಾಸಗಳೊಂದಿಗೆ ವೃತ್ತಿಯನ್ನು ವಿನೂತನಗೊಳಿಸಲು ಶಿಕ್ಷಕರು ಪ್ರಯತ್ನಿಸಬೇಕು. ಶಿಕ್ಷಕನು ತಾನೊಬ್ಬ ಸಂಘಟನಾ ಚಾತುರ್ಯವಿರುವ ನಾಯಕ ಎಂಬ ಪ್ರಜ್ಞೆಯಿಟ್ಟುಕೊಳ್ಳಬೇಕು’ ಎಂದರು.

ಸರ್ವೋದಯ ಶಿಕ್ಷಣ ಸಂಸ್ಥೆ ಕೋಶಾಧಿಕಾರಿ ವಾಸಂತಿ ಶರತ್ಚಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷೆ ಸಿ.ಜಿ.ಸೂರ್ಯ ಕುಮಾರಿ ಉಪಸ್ಥಿತರಿದ್ದರು. ಪ್ರಾಂಶುಪಾಲೆ ಡಾ.ಎಂ.ವಾಣಿ, ಸಹಾಯಕ ಪ್ರಾಧ್ಯಾಪಕಿ ಸುಜಾತ, ವಿಮಲ, ನಾಝಿರಾ, ಪದ್ಮಲತಾ ಅರುಣ್ ಜೈನ್, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಹಾಗೂ ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT