ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಮತ್ತಷ್ಟು ರಂಗು ಪಡೆಯಲಿದೆ ಚುನಾವಣಾ ಕಣ: ಕಾಂಗ್ರೆಸ್, ಬಿಜೆಪಿ ಸಭೆ

ವಿವಿಧೆಡೆ ಕಾಂಗ್ರೆಸ್ ಸಭೆ ಇಂದು, ನಾಳೆಯಿಂದ ಬಿಜೆಪಿ ಬಹಿರಂಗ ಸಭೆಗಳ ಆರಂಭ
Published 6 ಏಪ್ರಿಲ್ 2024, 7:46 IST
Last Updated 6 ಏಪ್ರಿಲ್ 2024, 7:46 IST
ಅಕ್ಷರ ಗಾತ್ರ

ಮಡಿಕೇರಿ: ಕಳೆದೊಂದು ವಾರದಿಂದ ಕೊಡಗು ಜಿಲ್ಲೆಯಲ್ಲಿ ಅಬ್ಬರ ಕಡಿಮೆಯಾಗಿದ್ದ ಚುನಾವಣಾ ಪ್ರಚಾರ ಮತ್ತೆ ಶುರುವಾಗಲಿದೆ. ಶನಿವಾರದಿಂದಲೇ ಜಿಲ್ಲೆಯ ಚುನಾವಣಾ ಕಣ ರಂಗೇರಲಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ.

ಕಾಂಗ್ರೆಸ್‌ ಏಪ್ರಿಲ್ 6ರಿಂದ 8ರವರೆಗೂ ಹಾಗೂ ಬಿಜೆಪಿಯು ಏಪ್ರಿಲ್ 7ರಂದು ಜಿಲ್ಲೆಯ ವಿವಿಧೆಡೆ ಪ್ರಚಾರ ಕಾರ್ಯ ನಡೆಸಲಿದೆ.

ಕಾಂಗ್ರೆಸ್ ಪ್ರಚಾರ ತಂತ್ರದ ಭಾಗವಾಗಿ ಮೊದಲಿಗೆ ಪಕ್ಷದೊಳಗಿನ ಕಾರ್ಯಕರ್ತರ ಸಭೆಯನ್ನು ಬ್ಲಾಕ್‌ ಮಟ್ಟದಲ್ಲಿ ನಡೆಸಲಿದೆ. ಇಲ್ಲಿ ಪಕ್ಷದ ಪ್ರಚಾರದ ತಂತ್ರಗಾರಿಕೆಯನ್ನು ಮುಖಂಡರಿಗೆ, ಪ್ರಮುಖ ಕಾರ್ಯಕರ್ತರಿಗೆ ಹೇಳಲಾಗುತ್ತದೆ. ಜೊತೆಗೆ, ಜಿಲ್ಲೆಯಲ್ಲಿ ಪ್ರಚಾರ ನಡೆಸುವಾಗ ಹಾಗೂ ಮನೆಮನೆಗೆ ಭೇಟಿ ನೀಡುವಾಗ ಯಾವ ಯಾವ ವಿಷಯಗಳನ್ನು ಪ್ರಸ್ತಾಪಿಸಬೇಕು ಎನ್ನುವ ಮಾಹಿತಿಯನ್ನೂ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಇದೇ ಬಗೆಯಲ್ಲಿ ವ್ಯವಸ್ಥಿತವಾದ ಕಾರ್ಯತಂತ್ರ ಹೆಣೆದಿತ್ತು. ಈ ಬಾರಿಯೂ ವ್ಯವಸ್ಥಿತವಾಗಿ ಕಾರ್ಯಕರ್ತರು ಮತ್ತು ಬೂತ್ ಪ್ರಮುಖರ ಸಭೆಯನ್ನು ಆಯೋಜಿಸಿದೆ.

ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಹಾಗೂ 6 ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಬ್ಲಾಕ್ ಕಾಂಗ್ರೆಸ್ ಮಟ್ಟದ ಅಧ್ಯಕ್ಷರು, ಬಿಎಲ್‍ಎಗಳು, ವಲಯ ಅಧ್ಯಕ್ಷರು ಹಾಗೂ ಬೂತ್ ಪ್ರಮುಖರ ಸಭೆ ಏ.6 ರಿಂದ 9ರ ವರೆಗೆ ನಡೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಟಿ.ಪಿ.ರಮೇಶ್ ತಿಳಿಸಿದ್ದಾರೆ.

ಏ.6 ರಂದು ಮಧ್ಯಾಹ್ನ 2.30ಕ್ಕೆ ಮಡಿಕೇರಿ ನಗರ ಕಾಂಗ್ರೆಸ್ ಮತ್ತು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಭೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಲಿದೆ.

ಏ.7 ರಂದು ಬೆಳಿಗ್ಗೆ 10.30ಕ್ಕೆ ಗೋಣಿಕೊಪ್ಪಲು ಕಿತ್ತಳೆ ಸಹಕಾರ ಸಂಘದ ಸಭಾಂಗಣದಲ್ಲಿ ಪೊನ್ನಂಪೇಟೆ ಬ್ಲಾಕ್ ಸಭೆ, ಮಧ್ಯಾಹ್ನ 2.30ಕ್ಕೆ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಸಭೆ ಶಾಸಕ ಎ.ಎಸ್.ಪೊನ್ನಣ್ಣ ಅವರ ನಿವಾಸದ ಬಳಿ ನಡೆಯಲಿದೆ.

ಏ. 8ರಂದು ಬೆಳಿಗ್ಗೆ 10.30ಕ್ಕೆ ಸೋಮವಾರಪೇಟೆ ಕೊಡವ ಸಮಾಜದಲ್ಲಿ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಸಭೆ ಮತ್ತು ಮಧ್ಯಾಹ್ನ 2.30ಕ್ಕೆ ಕುಶಾಲನಗರ ಕಾಂಗ್ರೆಸ್ ಕಚೇರಿಯಲ್ಲಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಭೆ ನಡೆಯಲಿದೆ.

ಏ. 9ರಂದು ಮಧ್ಯಾಹ್ನ 2.30ಕ್ಕೆ ಕಾರುಗುಂದ ಗೌಡ ಸಮಾಜದಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಸಭೆಯನ್ನು ಆಯೋಜಿಸಲಾಗಿದೆ.

ಸಭೆಯಲ್ಲಿ ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಪಾಲ್ಗೊಳ್ಳಲಿದ್ದು, ಆಯಾ ಬ್ಲಾಕ್‌ನ ಬೂತ್ ಅಧ್ಯಕ್ಷರು, ಬಿಎಲ್‍ಎಗಳು, ವಲಯಾಧ್ಯಕ್ಷರು, ಹಿರಿಯ ನಾಯಕರು, ಕೆಪಿಸಿಸಿ ಸದಸ್ಯರು, ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗ ಹಾಗೂ ಮುಂಚೂಣಿ ಘಟಕಗಳ ಜಿಲ್ಲಾ ಮತ್ತು ಬ್ಲಾಕ್ ಅಧ್ಯಕ್ಷರುಗಳು ಸಭೆಗೆ ಹಾಜರಾಗುವಂತೆ ಟಿ.ಪಿ.ರಮೇಶ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT