ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Lok Sabha Election | ವಾರವಿಡೀ ಹಬ್ಬಗಳು, ಪ್ರಚಾರಕ್ಕೆ ತಡೆ?

ಒಂದೇ ವಾರದಲ್ಲಿ ಬರಲಿವೆ ಚಾಂದ್ರಮಾನ ಯುಗಾದಿ, ಸೌರಮಾನ ಯುಗಾದಿ, ಈದ್ ಉಲ್ ಫಿತರ್, ಕೊಡವರ ಎಡಮ್ಯಾರ್
Published 7 ಏಪ್ರಿಲ್ 2024, 4:55 IST
Last Updated 7 ಏಪ್ರಿಲ್ 2024, 4:55 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಒಂದೇ ವಾರದಲ್ಲಿ ಸರಣಿಯಂತೆ 4 ದೊಡ್ಡ ಹಬ್ಬಗಳು ಹಾಗೂ ವಿವಿಧ ಬಗೆಯ ಉತ್ಸವಗಳು ಬರುತ್ತಿವೆ. ಬಿಸಿಲಿನ ಬೇಗೆ ದಿನೇ ದಿನೇ ಹೆಚ್ಚುತ್ತಿದೆ. ಇವುಗಳ ಮಧ್ಯೆ ಚುನಾವಣಾ ಕಾವೂ ಏರುತ್ತಿದೆ.

ವಿವಿಧ ಪಕ್ಷಗಳ ಕಾರ್ಯಕರ್ತರಿಗೆ ಮಾತ್ರವಲ್ಲ, ಮುಖಂಡರಿಗೂ ಈ ಸಾಲು ಸಾಲು ಹಬ್ಬಗಳು, ಉತ್ಸವಗಳ ಮಧ್ಯೆ ಚುನಾವಣಾ ಪ್ರಚಾರಕ್ಕೆ ಹೇಗೆ ಹೋಗುವುದು ಎಂಬ ಪ್ರಶ್ನೆ ಕಾಡುತ್ತಿದೆ. ಹಲವು ಮುಖಂಡರು ಸ್ಥಳೀಯ ದೇಗುಲಗಳ ಉತ್ಸವ ಸಮಿತಿಯಲ್ಲಿ ಪ್ರಮುಖ ಸ್ಥಾನದಲ್ಲಿದ್ದಾರೆ. ಇದರಿಂದ ಅವರು ಒಂದೆಡೆ ಉತ್ಸಗಳು ಹಾಗೂ ಮತ್ತೊಂದೆಡೆ ಚುನಾವಣಾ ಪ್ರಚಾರ ಎರಡರ ಕಡೆಗೂ ಕೆಲಸ ಮಾಡುವಂತಹ ಒತ್ತಡಕ್ಕೆ ಸಿಲುಕಿದ್ದಾರೆ.

ಮುಂದಿನ ವಾರದಲ್ಲಿ ಚಾಂದ್ರಮಾನ ಯುಗಾದಿ ಮೊದಲಿಗೆ ಬರಲಿದೆ. ಈ ಹಬ್ಬವನ್ನು ಬಹುತೇಕ ಹಿಂದೂಗಳು ವಿಜೃಂಭಣೆಯಿಂದ ಆಚರಿಸುತ್ತಾರೆ. ಕೆಲವು ದೇಗುಲಗಳಲ್ಲಿ ಯುಗಾದಿ ನಿಮಿತ್ತ ಜಾತ್ರೋತ್ಸವವೂ ಇರಲಿದೆ. ಈ ಹಬ್ಬದ ನಂತರ ಈದ್ ಉಲ್ ಫಿತರ್ ಹಬ್ಬವು ಬರಲಿದ್ದು, ಜಿಲ್ಲೆಯಲ್ಲಿರುವ ಎಲ್ಲ ಮುಸ್ಲಿಮರೂ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ಹಬ್ಬಕ್ಕಾಗಿ ಈಗಾಗಲೇ ಸಿದ್ಧತೆಗಳೂ ನಡೆದಿವೆ.

ಇದರ ನಂತರ, ಸೌರಮಾನ ಯುಗಾದಿ ಹಬ್ಬ ಬರಲಿದೆ. ‘ವಿಶು’ ಎಂದು ಕರೆಯಲಾಗುವ ಈ ಹಬ್ಬವನ್ನು ದಕ್ಷಿಣ ಕನ್ನಡಕ್ಕೆ ಹೊಂದಿಕೊಂಡಂತಿರುವ ಕೊಡಗಿನಲ್ಲೂ ಹೆಚ್ಚಿನ ಜನರು ಆಚರಿಸುತ್ತಾರೆ. ಏ. 14ರಂದು ಕೊಡವರು ಆಚರಿಸುವ ಹೊಸ ವರ್ಷ ಎಡಮ್ಯಾರ್ ಹಬ್ಬವೂ ಇದೆ. ನಂತರ 17ರಂದು ರಾಮನವಮಿಯನ್ನೂ ಇಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಸಾರ್ವತ್ರಿಕವಾಗಿ ಆಚರಿಸಲಾಗುವ ಈ ಹಬ್ಬಗಳ ಜೊತೆಜೊತೆಯಲ್ಲೇ ಹಲವು ಬಗೆಯ ನೂರಾರು ಉತ್ಸವಗಳು ನಡೆಯುತ್ತಿವೆ. ಯುಗಾದಿ ಪ್ರಯುಕ್ತ ಜಾತ್ರೆಗಳಿವೆ. ವಿವಿಧ ದೇವಸ್ಥಾನಗಳ ವಾರ್ಷಿಕೋತ್ಸವಗಳು ನಿಗದಿಯಾಗಿವೆ. ಇಲ್ಲೆಲ್ಲ ಸಾವಿರಾರು ಮಂದಿ ಭಾಗಿಯಾಗುತ್ತಾರೆ.

ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಇಂತಹ ಸಮಿತಿಗಳ ಉಸ್ತುವಾರಿ ಹೊತ್ತಿದ್ದಾರೆ. ಸಾಮಾನ್ಯ ಕಾರ್ಯಕರ್ತರೂ ಸಹ ಸಮಿತಿಗಳಲ್ಲಿ ಸಕ್ರಿಯರಾಗಿದ್ದಾರೆ. ಈ ಮಧ್ಯೆ ಬಂದಿರುವ ಚುನಾವಣೆ ರಾಜಕೀಯ ವಲಯದಲ್ಲಿ ಒತ್ತಡ ಸೃಷ್ಟಿಸಿದೆ.

ಬಿಜೆಪಿಯಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬರುವ ಸಾಧ್ಯತೆಗಳಿವೆ. ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹ ಬರುವ ಸಂಭವವಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರ ಚುನಾವಣಾ ಪ್ರಚಾರ ಒಂದು ವೇಳೆ ಈ ವಾರದಲ್ಲಿ ನಿಗದಿಯಾಗದರೆ ಜನರನ್ನು ಸೇರಿಸುವುದರಲಿ ತಮ್ಮ ತಮ್ಮ ಪಕ್ಷಗಳ ಕಾರ್ಯಕರ್ತರನ್ನು ಸೇರಿಸುವುದೂ ಉಭಯ ರಾಜಕೀಯ ಪಕ್ಷಗಳಿಗೆ ದೊಡ್ಡ ಸವಾಲಿನ ಕೆಲಸವೇ ಆಗಲಿದೆ.

ಮೇಲ್ನೋಟಕ್ಕೆ ಉಭಯ ಪಕ್ಷಗಳ ಮುಖಂಡರೂ ತಮ್ಮ ತಮ್ಮ ಪಕ್ಷದ ಕಾರ್ಯಕರ್ತರು ಪಕ್ಷಕ್ಕೆ ನಿಷ್ಠಾವಂತರು ಹೇಳಿಕೊಂಡರೂ ಕೊಡಗಿನ ಬಹುತೇಕ ಮಂದಿ ದೈವಿಕ ಆರಾಧನೆ ಮಾಡುವ ಮನಸ್ಸುಳ್ಳವರೇ ಆಗಿದ್ದಾರೆ. ದೇವರ ಆರಾಧಾನೆಗೆ ಸಾಕಷ್ಟು ಹಣವನ್ನೂ ವ್ಯಯಿಸುತ್ತಾರೆ. ಇಂತಹವರಿಗೆ ಈಗ ಬಂದಿರುವ ಚುನಾವಣೆ ಬಿಸಿತುಪ್ಪದಂತಾಗಿದೆ.

ಇಲ್ಲಿನ ಜಿಲ್ಲಾ ಮುಖಂಡರು ಇಲ್ಲಿ ಒಂದು ವಾರಗಳ ಕಾಲ ನಡೆಯುವ ಉತ್ಸವಗಳು ಹಾಗೂ ಹಬ್ಬಗಳ ಬಗ್ಗೆ ರಾಜ್ಯಮಟ್ಟದ ನಾಯಕರಿಗೆ ಮನವರಿಕೆ ಮಾಡಬೇಕಿದೆ. ಒಂದು ವೇಳೆ ಈ ಕಾರ್ಯ ಯಶಸ್ವಿಯಾದರೆ ಈ ವಾರ ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳ ಚಟುವಟಿಕೆಗಳು ನೀರಸಗೊಳ್ಳುವ ಅಥವಾ ಕಡಿಮೆಯಾಗುವ ಸಂಭವವೂ ಇದೆ. 

ಸರಣಿ ಹಬ್ಬಗಳು ಹಾಗೂ ಉತ್ಸವಗಳಿಂದ ಬಹಿರಂಗ ಸಮಾವೇಶದಲ್ಲಿ ಜನರು ಪಾಲ್ಗೊಳ್ಳುವಿಕೆಗೆ ಸ್ವಲ್ಪ ತೊಂದರೆಯಾಗಬಹುದು. ಈ ಅವಧಿಯಲ್ಲಿ ನಾವು ಮನೆಮನೆ ಪ್ರಚಾರ ಮಾಡುತ್ತೇವೆ
–ನಾಪಂಡ ರವಿ ಕಾಳಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ .
ಹಬ್ಬಗಳ ದಿನಾಂಕವನ್ನು ಹೊರತುಪಡಿಸಿ ಕಾರ್ಯಕ್ರಮ ರೂಪಿಸುತ್ತೇವೆ. ಬಹಿರಂಗ ಸಮಾವೇಶಕ್ಕಿಂತ ಹೆಚ್ಚು ಮನೆಮನೆಗೆ ಭೇಟಿ ನೀಡುತ್ತೇವೆ. ಹಾಗಾಗಿ ಈ ಹಬ್ಬಗಳು ಅಡ್ಡಿಯಾಗುವುದಿಲ್ಲ. ಕಾರ್ಯಕರ್ತರು ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡುತ್ತಾರೆ.
–ಟಿ.ಪಿ.ರಮೇಶ್, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಚಾರ ಸಮಿತಿ ಅಧ್ಯಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT