ಮುಂಗಾರು ಮಳೆಯ ನೋವು, ನಲಿವು...

7
ಕೊಡಗಿನಲ್ಲಿ ವಾಡಿಕೆಗೂ 1,000 ಮಿ.ಮೀ. ಅಧಿಕ ಮಳೆ, ಜಿಲ್ಲೆಯತ್ತ ಮುಖ ಮಾಡಿದ ಪ್ರವಾಸಿಗರು

ಮುಂಗಾರು ಮಳೆಯ ನೋವು, ನಲಿವು...

Published:
Updated:
Deccan Herald

ಮಡಿಕೇರಿ: ಮುಂಗಾರು ಮಳೆ ಯಾರಿಗೆ ಇಷ್ಟವಿಲ್ಲ ಹೇಳಿ, ಮಳೆಯ ನೆನಪುಗಳು ಹಾಗೆ. ಮಧುರ ಅನುಭೂತಿ. ಆದರೆ, ಕೊಡಗು ಜಿಲ್ಲೆಯಲ್ಲಿ ಈ ಬಾರಿ ಸುರಿದ ಮಳೆಯು ಸಾಕಷ್ಟು ನೋವು– ನಲಿವುಗಳಿಗೆ ಕಾರಣವಾಗಿದ್ದು ವಿಶೇಷ. ಮುಂಗಾರು ಜಿಲ್ಲೆಗೆ ಕಾಲಿಟ್ಟಾಗ ಕಾವೇರಿ ಕಣಿವೆಯ ರೈತರ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ದಿನ ಕಳೆದಂತೆಲ್ಲಾ ಮಳೆಯು ಸಾಕಷ್ಟು ಅವಘಡಗಳನ್ನೇ ಸೃಷ್ಟಿಸುವ ಮೂಲಕ ಜಿಲ್ಲೆಯ ಕಾಫಿ ಬೆಳೆಗಾರರಿಗೆ ನೋವು ತರಿಸಿತು.  

ಎರಡು ವರ್ಷ ಕೊಡಗಿನಲ್ಲಿ ಕೈಕೊಟ್ಟಿದ್ದ ಮುಂಗಾರು, ಈ ಬಾರಿ ಉತ್ತಮ ನಿರೀಕ್ಷೆ ಹುಟ್ಟಿಸಿತ್ತು. ಆದರೆ, ಜುಲೈನಲ್ಲಿ ಮಳೆಯ ಅಬ್ಬರಕ್ಕೆ ರಸ್ತೆಗಳು ಕುಸಿಯುವ ಜತೆಗೆ, ಕಾಫಿ ಹಾಗೂ ಕಾಳುಮೆಣಸಿಗೆ ಕೊಳರೋಗ ತಗಲುವಂತೆ ಮಾಡಿತು. ಈಗಾಗಲೇ ಶೇ 50ರಷ್ಟು ಬೆಳೆ ನಷ್ಟವಾಗಿದ್ದು, ಇನ್ನೂ ಕೆಲವು ದಿನಗಳ ಕಾಲ ಮಳೆಯ ಅಬ್ಬರ ಮುಂದುವರಿದರೆ, ಬೆಳೆ ಸಂಪೂರ್ಣ ನೆಲಕಚ್ಚಲಿದೆ ಎಂದು ರೈತರು ಅಲವತ್ತುಕೊಳ್ಳುತ್ತಿದ್ದಾರೆ. ಕಾಫಿ ಮಂಡಳಿ ಅಧಿಕಾರಿಗಳು ಬೆಳೆ ನಷ್ಟದ ವಿವರವನ್ನು ಕಲೆ ಹಾಕುತ್ತಿದ್ದಾರೆ.

ತಲಕಾವೇರಿ, ಭಾಗಮಂಡಲ ಹಾಗೂ ನಾಪೋಕ್ಲು ಭಾಗದಲ್ಲಿ ವಾಡಿಕೆಗೂ ಅಧಿಕ ಮಳೆಯಾಗಿದೆ. ಈ ಭಾಗದಲ್ಲಿ ನೂರಾರು ಎಕರೆಯಲ್ಲಿ ಮಾಡಿದ್ದ ಭತ್ತದ ಸಸಿ ಮಡಿಯೂ ನೀರುಪಾಲಾಗಿದ್ದು, ಭತ್ತದ ನಾಟಿಗೂ ಸಸಿಯ ಕೊರತೆ ಎದುರಾಗಿದೆ.

ಕಾವೇರಿ ಕಣಿವೆಯ ಹಾರಂಗಿ ಜಲಾಶಯವು ಸಹಜವಾಗಿ ಜುಲೈ ಕೊನೆಯಲ್ಲಿ ಭರ್ತಿ ಆಗುತ್ತಿತ್ತು. ಈ ಬಾರಿ ಜುಲೈ ಮಧ್ಯದಲ್ಲೇ ಭರ್ತಿಯಾಗುವ ಮೂಲಕ ಅಚ್ಚುಕಟ್ಟು ವ್ಯಾಪ್ತಿಯ ರೈತರಲ್ಲಿ ಮಂದಹಾಸ ಮೂಡಿಸಿತ್ತು. ಅಲ್ಲದೇ, ಕೆಆರ್‌ಎಸ್‌ಗೂ ಸಾಕಷ್ಟು ಪ್ರಮಾಣದ ನೀರು ಹರಿದು ಅದೂ ಬಹುಬೇಗ ಭರ್ತಿ ಆಯಿತು. ತಮಿಳುನಾಡಿಗೂ ಸಾಕಷ್ಟು ನೀರು ಹರಿದು ‘ಕಾವೇರಿ ವಿವಾದ’ ತಣ್ಣಗಾಗುವಂತೆ ಮಾಡಿತು. ಆದರೆ, ಕಾವೇರಿ ನಾಡಿನಲ್ಲಿ ಮಾತ್ರ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು ಬೆಳೆಗಾರರಲ್ಲಿ ನೋವು ತರಿಸಿತು.  

ರಸ್ತೆಗಳ ಸ್ಥಿತಿ ನೋಡುವಂತಿಲ್ಲ: ಜೂನ್‌ ಆರಂಭದಲ್ಲಿ ಸುರಿದ ಮಳೆಗೆ ಕೊಣನೂರು– ಮಾಕುಟ್ಟ ರಾಜ್ಯ ಹೆದ್ದಾರಿಯಲ್ಲಿ 60 ಕಡೆ ಕುಸಿದಿತ್ತು. ಕೇರಳ ಸಂಪರ್ಕ ಬಂದ್‌ ಆಗಿದ್ದು, ಪರ್ಯಾಯ ಮಾರ್ಗದ ಮೂಲಕ ವಾಹನಗಳು ಕೇರಳಕ್ಕೆ ತೆರಳುತ್ತಿವೆ. ಇನ್ನೂ ಮಡಿಕೇರಿ ಮೂಲಕ ಹಾದು ಹೋಗಿರುವ ಮೈಸೂರು– ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಸ್ಥಳದಲ್ಲಿ ಕುಸಿದಿದೆ. ಆರಂಭದಲ್ಲಿ ಕಾಟಕೇರಿ ಬಳಿ ದೊಡ್ಡ ಪ್ರಮಾಣದಲ್ಲಿ ಕುಸಿತ ಉಂಟಾಗಿದ್ದರೆ, ಇದೀಗ ಮಡಿಕೇರಿ ಸಮೀಪವೇ ಕುಸಿದಿದ್ದು ಭಾರಿ ವಾಹನಗಳ ಸಂಚಾರವನ್ನೂ ಈ ಮಾರ್ಗದಲ್ಲಿ ನಿರ್ಬಂಧಿಸಲಾಗಿದೆ. ಇನ್ನು ಗ್ರಾಮೀಣ ರಸ್ತೆಗಳು ಕೆಸರುಮಯವಾಗಿವೆ. ರಸ್ತೆಗಳ ದುರಸ್ತಿಗೆ ಕನಿಷ್ಠ ನಾಲ್ಕೈದು ತಿಂಗಳು ಬೇಕಾಗಲಿದೆ.

ಪ್ರವಾಸೋದ್ಯಮಕ್ಕೆ ವರ: ಕೊಡಗಿನ ಮಳೆಯ ಸವಿ ಸವಿಯಲು ಸಾವಿರಾರು ಸಂಖ್ಯೆಯ ಪ್ರವಾಸಿಗರು ಜಿಲ್ಲೆಯತ್ತ ಲಗ್ಗೆ ಇಡುತ್ತಿದ್ದಾರೆ. ಮಳೆಗಾಲದಲ್ಲೂ ಹೋಂಸ್ಟೇಗಳು ಭರ್ತಿಯಾಗುತ್ತಿವೆ. ವಾರ್ಷಿಕವಾಗಿ ಜಿಲ್ಲೆಗೆ 18 ಲಕ್ಷದಷ್ಟು ಪ್ರವಾಸಿಗರು ಬರುತ್ತಾರೆ. ಜೂನ್‌ ಮೊದಲ ವಾರದಿಂದ ಆ. 10ರವರೆಗೆ 2 ಲಕ್ಷ ಪ್ರವಾಸಿಗರು ಜಿಲ್ಲೆಯ ವಿವಿಧ ಪ್ರವಾಸಿ ಕ್ಷೇತ್ರಗಳಿಗೆ ಭೇಟಿ ನೀಡಿ ತೆರಳಿದ್ದಾರೆ. ಜಿಲ್ಲೆಯಲ್ಲಿ ಸುರಿಯುವ ಮಳೆಯ ಸೊಬಗೇ ಅಂಥದ್ದು. ಕಾಫಿ ತೋಟ, ಬೆಟ್ಟಗುಡ್ಡಗಳ ನಡುವೆ ಜಲಪಾತಗಳು ಹಾಲ್ನೊರೆಯಾಗಿ ಧುಮ್ಮಿಕ್ಕುತ್ತಿವೆ. ಭಾಗಮಂಡಲದಿಂದ ಕರಿಕೆಗೆ ತೆರಳುವ ಮಾರ್ಗದಲ್ಲಿ 30 ಜಲಪಾತಗಳು ಸಿಗುತ್ತವೆ. ಮಳೆಗೆ ಎಲ್ಲವೂ ಭೋರ್ಗರೆಯುತ್ತಿವೆ. ಇಲ್ಲಿ ಪ್ರವಾಸಿಗರು, ಪ್ರೇಮಿಗಳು ಮೈಮರೆತು ವಿಹರಿಸುತ್ತಿರುವ ದೃಶ್ಯ ಕಣ್ಣಿಗೆ ಬೀಳುತ್ತಿವೆ.

ವಾಡಿಕೆಗೂ ಅಧಿಕ ಮಳೆ: ಜನವರಿಯಿಂದ ಆಗಸ್ಟ್‌ 10ರ ತನಕ ಕೊಡಗಿನ ವಾಡಿಕೆಯ ಮಳೆಯ ಪ್ರಮಾಣವು 1,800 ಮಿ.ಮೀ. ಆದರೆ, 2,800 ಮಿ.ಮೀ. ಮಳೆಯಾಗಿದೆ. ವಾಡಿಕೆಗೂ 1,000 ಮಿ.ಮೀ. ಮಳೆ ಹೆಚ್ಚಾಗಿದೆ. 2016ರಲ್ಲಿ ಇದೇ ವೇಳೆಗೆ 1,344 ಮಿ.ಮೀ. ಮಳೆಯಾಗಿತ್ತು.

ವಿರಾಜಪೇಟೆ ತಾಲ್ಲೂಕಿನಲ್ಲಿ 3,949 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 1,909 ಮಿ.ಮೀ. ಮಾತ್ರ ಮಳೆ ಸುರಿದಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ 2,228 ಮಳೆಯಾಗಿದ್ದು, ಕಳೆದ ವರ್ಷ 1,088 ಮಿ.ಮೀ ಮಳೆ ಬಿದ್ದಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ 2,248 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ 1,035 ಮಿ.ಮೀ. ಮಳೆ ಸುರಿದಿತ್ತು. ಇನ್ನೂ ಮುಂಗಾರು ಮಳೆಯ ಅವಧಿ ಮುಗಿದಿಲ್ಲ. ಇನ್ನೂ ಭಾರಿ ಮಳೆ ಮುನ್ಸೂಚನೆಯಿದ್ದು, ಮತ್ತಷ್ಟು ಅನಾಹುತ ಸೃಷ್ಟಿಸದಿದ್ದರೆ ಸಾಕಪ್ಪ ಎಂದು ಜಿಲ್ಲೆಯ ಜನರು ಬೇಡಿಕೊಳ್ಳುತ್ತಿದ್ದಾರೆ. 

ಕೊನೆಗೂ ₹ 20 ಕೋಟಿ ಬಂತು!

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಕೊಡಗು ಜಿಲ್ಲೆಯಲ್ಲಿ ಮಳೆಯ ಪರಿಹಾರಕ್ಕೆ ₹ 100 ಕೋಟಿಯ ಪ್ಯಾಕೇಜ್‌ ಘೋಷಣೆ ಮಾಡಿದ್ದರು. ಆದರೆ, ಇದುವರೆಗೂ ಅದು ಬಿಡುಗಡೆ ಆಗಿರಲಿಲ್ಲ. ಜಿಲ್ಲೆಯ ಜನರ ಆಕ್ರೋಶಕ್ಕೂ ಕಾರಣವಾಗಿತ್ತು. ಆದರೆ, ಎರಡು ದಿನಗಳ ಹಿಂದೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ₹ 20 ಕೋಟಿ ಬಿಡುಗಡೆ ಮಾಡಲಾಗಿದ್ದು, ತುರ್ತು ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಆದೇಶ ನೀಡಲಾಗಿದೆ. ಅಲ್ಲದೇ, ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರ ಖಾತೆಯಲ್ಲೂ ₹ 10 ಕೋಟಿ ಅನುದಾನ ಲಭ್ಯವಿದ್ದು ತುರ್ತು ಪರಿಹಾರ ಕಾಮಗಾರಿಗಳಿಗೆ ಜಿಲ್ಲಾಡಳಿತ ಬಳಕೆ ಮಾಡಲು ಮುಂದಾಗಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !