ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ಕೊರತೆ ನಡುವೆಯೂ ಅರಳಿದ ಪ್ರತಿಭೆ

ಆಲೂರು ಸಿದ್ಧಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳ ಸಾಧನೆ
Last Updated 2 ಜನವರಿ 2019, 17:06 IST
ಅಕ್ಷರ ಗಾತ್ರ

ಶನಿವಾರಸಂತೆ: ಶಿಕ್ಷಣ ಹಾಗೂ ಕ್ರೀಡೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ದೈಹಿಕ ಶಿಕ್ಷಣವನ್ನು ಶೈಕ್ಷಣಿಕ ಪಠ್ಯಕ್ರಮದೊಂದಿಗೆ ಕೈಗೊಂಡರೆ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಕ್ಕೆ ದಾರಿ ಆಗಲಿದೆ. ದೈಹಿಕ ಶಿಕ್ಷಣದಿಂದ ಮಗುವಿನ ಸಾರ್ವತ್ರಿಕ ಬೆಳವಣಿಗೆ ಸಾಧ್ಯವಾಗಲಿದೆ.

ಕೊಡಗು ಜಿಲ್ಲೆ ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಆಲೂರು ಸಿದ್ದಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯು ಶೈಕ್ಷಣಿಕ ಸಾಧನೆಯೊಂದಿಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಸಾಧನೆಯಲ್ಲೂ ಮುಂದಿದೆ.

ಕ್ರೀಡಾಂಗಣದ ಕೊರತೆಯಿದ್ದರೂ ಕ್ರೀಡಾಪಟುಗಳ ಸಾಧನೆಗೇನೂ ಕೊರತೆಯಿಲ್ಲ. 2016ರಿಂದ ಇಲ್ಲಿನ ವಿದ್ಯಾರ್ಥಿಗಳು ತಾಲ್ಲೂಕು, ಜಿಲ್ಲಾ, ರಾಜ್ಯಮಟ್ಟದಲ್ಲಿ ಪ್ರಶಸ್ತಿ ಗಳಿಸಿರುತ್ತಾರೆ.

ಓಟ, ರಿಲೆ, ಶಾಟ್‌ಪಟ್‌ನಲ್ಲಿ ಪ್ರೌಢಶಾಲಾ ವಿಭಾಗದ ಕ್ರೀಡಾಪಟುಗಳಾದ ಸಿಂಧೂ, ಪ್ರಿಯಾಂಕಾ, ಚಿತ್ರಾ, ಅಶ್ವಿತಾ, ಚೈತನ್ಯಾ, ಸಹನಾ, ಭೂಮಿಕಾ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ.

ಪ್ರಾಥಮಿಕ ಶಾಲಾ ವಿಭಾಗದ ಕೆ.ಎಚ್.ಪ್ರಜ್ಞಾ ಮತ್ತು ತಾರುಣ್ಯಾ, ಮಾನಸಾ, ಅರವಿಂದ್ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

ಪ್ರೌಢಶಾಲಾ ವಿದ್ಯಾರ್ಥಿ ಅಶ್ವಿತಾ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಮಾನಸಾ ಕ್ರೀಡಾ ಶಾಲೆಗೆ ಪ್ರವೇಶ ಪಡೆದಿದ್ದಾರೆ.

ಗುಂಪು ವಿಭಾಗದ ವಾಲಿಬಾಲ್, ಕಬಡ್ಡಿ, ಥ್ರೋಬಾಲ್, ಬ್ಯಾಡ್ಮಿಂಟನ್, ಕೊಕ್ಕೊ ಸ್ಪರ್ಧೆಗಳಲ್ಲೂ ವಸತಿ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.

ಈ ಶಾಲೆಯ ಬಾಲಕ–ಬಾಲಕಿಯರ ಕೊಕ್ಕೊ ತಂಡಗಳು ಮೂರು ವರ್ಷಗಳಿಂದ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸುತ್ತಿವೆ.

ವಿದ್ಯಾರ್ಥಿಗಳ ಕ್ರೀಡಾ ಸಾಧನೆಯ ಹಿಂದೆ ದೈಹಿಕ ಶಿಕ್ಷಣ ಶಿಕ್ಷಕ ವಿ.ಅಲೋಕ್ ಅವರ ಪರಿಶ್ರಮವಿದೆ. ಪ್ರಾಂಶುಪಾಲೆ ಕೆ.ಆರ್. ಭಾರತಿ, ಸಹ ಶಿಕ್ಷಕರಾದ ಡಿ.ಪಿ.ಸತೀಶ್, ಮಂಜು, ಯೋಗೇಂದ್ರಾಚಾರ್, ಲೋಲಾಕ್ಷಿ, ಮಂಜುಳಾ, ಮಮತಾ, ಪುನೀತಕುಮಾರಿ, ಸಿಬ್ಬಂದಿ ಮೀನಾ ಅವರ ಸಹಕಾರವಿದೆ.

ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ
2018ನೇ ಸಾಲಿನ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಸಿಂಧೂ 100, 200 ಮೀ. ಹಾಗೂ ಶ್ವೇತಾ 600 ಮೀ. ಓಟದ ಸ್ಪರ್ಧೆಯಲ್ಲಿ ಪ್ರತಿನಿಧಿಸಿದ್ದರು. ಜಿಲ್ಲಾಮಟ್ಟದ ಸ್ಪರ್ಧೆಯ 1,000 ಹಾಗೂ 3,000 ಮೀ. ಓಟದ ವಿಭಾಗದಲ್ಲಿ ಸ್ಪರ್ಧಿಸಿದ್ದ ಹಸ್ತವಿಗೌಡ ಗೆಲುವು ಸಾಧಿಸಿ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT