ಕೊಡಗು ಮರುನಿರ್ಮಾಣ: ಭೂಒಡಲು ಸೇರಿದ ವಾಹನ ಹೊರ ತೆಗೆಯಲೂ ಆಗಿಲ್ಲ

7
ಕಾರು, ಜೀಪು, ಬೈಕ್‌ ಅನ್ನು ಮತ್ತೆ ಬಳಸಲು ಆಗದ ಸ್ಥಿತಿ: ಕೈಚೆಲ್ಲಿದ ಮಾಲೀಕರು

ಕೊಡಗು ಮರುನಿರ್ಮಾಣ: ಭೂಒಡಲು ಸೇರಿದ ವಾಹನ ಹೊರ ತೆಗೆಯಲೂ ಆಗಿಲ್ಲ

Published:
Updated:
Deccan Herald

ಗೋಣಿಕೊಪ್ಪಲು: ಕೊಡಗು ಜಿಲ್ಲೆಯಲ್ಲಿ ಬೆಟ್ಟಗುಡ್ಡಗಳ ಕುಸಿತದಿಂದ ಹತ್ತಾರು ಬೈಕ್, ಕಾರು, ಜೀಪು ಭೂಗರ್ಭದಲ್ಲಿ ಮುಚ್ಚಿ ಹೋಗಿವೆ. ಮಿನಿ ಲಾರಿಗಳೂ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಮನೆಯಲ್ಲಿದ್ದ ಪಾತ್ರೆಗಳು ಭೂಒಡಲು ಸೇರಿವೆ. ಭೂಗರ್ಭ ಸೇರಿದ ಚಿನ್ನಾಭರಣಗಳಿಗೆ ಲೆಕ್ಕವೇ ಇಲ್ಲ. ಇದ್ಯಾವುದನ್ನೂ ಇದುವರೆಗೂ ಹೊರೆ ತೆಗೆಯಲು ಸಾಧ್ಯವಾಗಿಲ್ಲ.

ಮದೆನಾಡು ಸಮೀಪದ ಮೊಣ್ಣಂಗೇರಿಯ ರಿವರ್ ರಾಕ್ ರೆಸಾರ್ಟ್‌ನ ಕಾರ್ ಶೆಡ್‌ನಲ್ಲಿ ನಿಲ್ಲಿಸಿದ್ದ ಮಹೇಂದ್ರ ಜೀಪು, ಮನೆ ಕುಸಿದು ಮಣ್ಣಿನಲ್ಲಿ ಹೂತು ಹೋಗಿದೆ. 22 ದಿನಗಳು ಕಳೆದರೂ ಇವುಗಳನ್ನು ಹೊರ ತೆಗೆಯುವುದಕ್ಕೆ ಯಾರೂ ಮುಂದಾಗಿಲ್ಲ. ಇಡೀ ಬದುಕೇ ಕೊಚ್ಚಿ ಹೋಗಿರು ವಾಗ ಜಜ್ಜಿ ಹೋಗಿರುವ ವಾಹನಗಳನ್ನು ತೆಗೆದು ಪ್ರಯೋಜನವಾದರೂ ಏನು ಎಂಬ ನಿಲುವಿಗೆ ಅವುಗಳ ಮಾಲೀಕರು ಬಂದಂತಿದೆ.

ಆ.16ರಂದು ಮಳೆ ವಿಪರೀತವಾಗಿ ಪಯಸ್ವಿನಿ ನದಿ ನೀರು ತೀವ್ರಗೊಂಡಾಗ ರೆಸಾರ್ಟ್‌ನಲ್ಲಿದ್ದವರು ಹೆದರಿ ವಾಹನಗಳನ್ನು ಬಿಟ್ಟು ಸುರಕ್ಷಿತ ಸ್ಥಳಕ್ಕೆ ಓಡಿ ಹೋಗಿದ್ದರು. ಮರು ದಿವಸ ನೋಡಿದರೆ ಜೀಪು, ಕಾರು, ಮಿನಿ ಲಾರಿ ಮಾಯವಾಗಿದ್ದವು. ಅವುಗಳ ಮೇಲೆ ಮರದ ರಾಶಿಗಳು ಬಿದ್ದು, ಮಣ್ಣು ಮುಚ್ಚಿ ಇಡೀ ರೆಸಾರ್ಟ್ ಚಿತ್ರಣವೇ ಬದಲಾಗಿತ್ತು ಎಂದು ಭಯಾನಕ ಚಿತ್ರಣವನ್ನು ತೆರೆದಿಟ್ಟರು ಮದೆನಾಡಿನ ಮುಕ್ಕಾಟಿ ಪುಷ್ಪಾ ಗಣೇಶ್.

ಮನೆ ಮುಂದೆ ನಿಲ್ಲಿಸಿದ್ದ ಕಾಲೂರಿನ ರಘೋತ್ತಮ ಅವರ 800 ಕಾರು ಕೂಡ ಗುರುತೇ ಸಿಗದಂತೆ ಮಾಯವಾಗಿದೆ. ಅಲ್ಲಿ ಈಗ ಮನೆಯ ಜಾಗವನ್ನೂ ಪತ್ತೆ ಹಚ್ಚಲಾಗುತ್ತಿಲ್ಲ. ಈ ಜಾಗದಲ್ಲಿ ನೂರಾರು ಲೋಡ್‌ನಷ್ಟು ಬೆಟ್ಟದ ಮಣ್ಣು ಕವುಚಿಕೊಂಡಿದೆ.

ಗುಡ್ಡಗಾಡು ಪ್ರದೇಶವಾಗಿರುವ ಕೊಡಗಿನಲ್ಲಿ ಕಾಫಿ ತೋಟ, ಬೆಟ್ಟಗುಡ್ಡಗಳ ನಡುವೆ ಮನೆಯಿರುವುದರಿಂದ, ತುರ್ತು ಸಂದರ್ಭದಲ್ಲಿ ಪ್ರಯಾಣಿಸುವುದಕ್ಕೆ ಅನುಕೂಲವಾಗಲೆಂದು, ಸಾಮಾನ್ಯ ವರ್ಗದವರು ಕೂಡ, ಜೀಪು ಹಾಗೂ ಸಣ್ಣಪುಟ್ಟ ಕಾರುಗಳನ್ನು ಹೊಂದುವುದು ಬದುಕಿನ ಒಂದು ಭಾಗವಾಗಿದೆ. ಹಾನಿಗೊಳಗಾದ ಭಾಗದಲ್ಲಿ ಈಗ ಅವೆಲ್ಲ ಭೂಗರ್ಭ ಸೇರಿವೆ. ಮೊಣ್ಣಂಗೇರಿಯ ರಶೀದ್ ಅವರ ಮನೆಯಲ್ಲಿದ್ದ 60 ಗ್ರಾಮ ಚಿನ್ನ ಮತ್ತಿತರ ಬೆಲೆಬಾಳುವ ವಸ್ತುಗಳೆಲ್ಲ ಮಣ್ಣಿನಲ್ಲಿ ಹೂತುಹೋಗಿವೆ.  

'ಆ. 14ರಂದು ಮನೆಗೆ ಬೀಗ ಹಾಕಿ ತಮ್ಮ ಪತ್ನಿಯ ಜತೆ ಕುಶಾಲನಗರಕ್ಕೆ ಹೋಗಿದ್ದೆ. ಮಳೆ ಜೋರಾದ ಹಿನ್ನೆಲೆಯಲ್ಲಿ ಮರಳಿ ಬರಲಾಗಲಿಲ್ಲ. ಆ. 16ರಂದು ನಮ್ಮ ಅಕ್ಕಪಕ್ಕದ ಮನೆಗಳೆಲ್ಲ ಕುಸಿದು ಬಿದ್ದಿದ್ದವು. ನಮ್ಮ ಮನೆ ಏನಾಗಿದೆಯೋ ಎಂದು ಸುರಿಯುವ ಮಳೆಯ ನಡುವೆಯೇ ಬೆಟ್ಟಗುಡ್ಡಗಳನ್ನು ಹತ್ತಿ ಕಾತರತೆಯಿಂದ ಬಂದು ನೋಡಿದೆ. ಅಲ್ಲಿ ಮನೆಯೇ ಇರಲಿಲ್ಲ. ಮನೆಯ ಮುಂದೆ ಸುಮಾರು 300 ವರ್ಷಗಳಷ್ಟು ಹಳೆಯದಾದ ಬೃಹತ್ ಗಾತ್ರದ ಮಾವಿನ ಮರ ಕೂಡ ಬುಡ ಸಮೇತ ಪಕ್ಕದಲ್ಲಿದ್ದ ಪಯಸ್ವಿನಿ ನದಿ ಸೇರಿತ್ತು. ಮನೆಯಿದ್ದ ಜಾಗದಲ್ಲಿ ಬೃಹತ್ ಕಂದಕ ನಿರ್ಮಾಣಗೊಂಡಿತ್ತು’ ಎಂದು ಹೇಳುವಲ್ಲಿ ರಶೀದ್ ಅವರ ಮನದಲ್ಲಿ ಆತಂಕ ಮೂಡಿ ಕಣ್ಣಾಲಿಗಳು ತೇವಗೊಂಡವು.

ಮತ್ತೆ ಹಿಂದುರುಗಿ ಇಲ್ಲಿಗೆ ಬರಲಾರೆವು. ಎಲ್ಲವೂ ಕೊಚ್ಚಿಹೋಗಿ ಮಣ್ಣುಪಾಲಾಗಿರುವಾಗ ಬದುಕು ಕಟ್ಟಿಕೊಳ್ಳುವುದಕ್ಕೆ ದಾರಿಯೇ ತೋರುತ್ತಿಲ್ಲ. ತಂದೆ, ತಾಯಿ, ಪತ್ನಿ ಮಕ್ಕಳೊಂದಿಗೆ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಬೇರೆ ಎಲ್ಲಿಯದರೂ ನೆಲೆ ಕಂಡುಕೊಳ್ಳುತ್ತೇವೆ ಎಂದು ದುಃಖದಿಂದ ನುಡಿದರು ರಶೀದ್.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !