ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತದ ಗದ್ದೆಯಲ್ಲಿ ಬಾಳೆ, ಅಡಿಕೆ: ಆರ್ಥಿಕ ಬೆಳೆಯತ್ತ ವಾಲುತ್ತಿರುವ ರೈತರು

Last Updated 3 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಹವಾಮಾನದ ವೈಪರೀತ್ಯ ಮತ್ತು ಕೃಷಿಯಲ್ಲಿ ಹೆಚ್ಚುತ್ತಿರುವ ನಷ್ಟದಿಂದ ಸಮೃದ್ಧವಾಗಿ ಭತ್ತ ಬೆಳೆಯುತ್ತಿದ್ದ ಗದ್ದೆಗಳು ಈಗ ಬಾಳೆ ಬೆಳೆಯುವ ತೋಟಗಳಾಗಿವೆ. ಕೃಷಿಯಲ್ಲಿನ ಇಂಥ ಪರಿವರ್ತನೆ ದಕ್ಷಿಣ ಕೊಡಗಿನೆಲ್ಲೆಡೆ ಕಂಡು ಬರುತ್ತಿದೆ. 20 ವರ್ಷಗಳ ಹಿಂದೆ ಭತ್ತದ ಕಣಜ ಖ್ಯಾತಿ ಪಡೆದಿದ್ದ ದಕ್ಷಿಣ ಕೊಡಗಿನಲ್ಲಿ ಬಹುತೇಕ ಗದ್ದೆಗಳು ಮಾಯವಾಗಿವೆ. ಭತ್ತದ ಜಾಗವನ್ನು ಕಾಫಿ, ಅಡಿಕೆ, ಬಾಳೆ ಆಕ್ರಮಿಸಿಕೊಂಡಿವೆ. ಇನ್ನೂ ಕೆಲವು ಗದ್ದೆಗಳು ಹೂಳು ತುಂಬಿ ದನ, ಎಮ್ಮೆ ಮೇಯುವ ಹುಲ್ಲುಗಾವಲಾಗಿವೆ.

ಭತ್ತದ ಕೃಷಿಯಲ್ಲಿ ಆದಾಯಕ್ಕಿಂತ ನಷ್ಟವೇ ಹೆಚ್ಚಾಗುತ್ತಿದೆ. ಹೀಗಾಗಿ, ರೈತರು ಆಹಾರ ಬೆಳೆಯಾದ ಭತ್ತ ಬಿಟ್ಟು ಆರ್ಥಿಕ ಬೆಳೆ ಕಡೆಗೆ ಗಮನ ಹರಿಸಿದ್ದಾರೆ ಎನ್ನುತ್ತಾರೆ ತೂಚಮಕೇರಿಯ ಕಾಫಿ ಬೆಳೆಗಾರ ಅರಸು ನಂಜಪ್ಪ.

ತಿತಿಮತಿ ಗೋಣಿಕೊಪ್ಪಲು ಮಾರ್ಗದ ಭದ್ರಗೋಳದ ಬಳಿ ಗದ್ದೆಯಲ್ಲಿ ಸಮೃದ್ಧವಾಗಿ ಬಾಳೆ ಬೆಳೆಯಲಾಗಿದೆ. ಹಸಿರಿನಿಂದ ಕಂಗೊಳಿಸುತ್ತಿರುವ ಬಾಳೆ ಮನ ಸೆಳೆಯುತ್ತಿದೆ. ಇದೇ ರೀತಿ ಪೊನ್ನಂಪೇಟೆಯಿಂದ ಶ್ರೀಮಂಗಲದ ವರೆಗೂ ರಸ್ತೆಯ ಎರಡು ಬದಿಯ ಗದ್ದೆಗಳಲ್ಲಿ ಬಾಳೆ, ಅಡಿಕೆ ತೋಟವೇ ಕಂಡು ಬರುತ್ತಿದೆ.

ಕೊಡಗಿನ ಹವಾಗುಣಕ್ಕೆ ನೇಂದ್ರ, ಕ್ಯಾವಂಡೀಸ್, ಏಲಕ್ಕಿ ಜಾತಿಯ ಹೂಬಾಳೆ ಹೊಂದಿಕೊಳ್ಳುತ್ತವೆ. ರೊಬೆಸ್ಟ ಬಾಳೆಯನ್ನು ಅಲ್ಪ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಫಲವತ್ತಾದ ಭೂಮಿಯಲ್ಲಿ ಬಾಳೆ ಹುಲುಸಾಗಿ ಬೆಳೆಯುತ್ತದೆ. ಖರ್ಚು ಕಡಿಮೆ. ಬೇಸಾಯವೂ ಕಡಿಮೆ. ಕೃಷಿ ಪದ್ಧತಿ ಗೊತ್ತಿಲ್ಲದವರೂ ಬಾಳೆ ಬೆಳೆಯಬಹುದು. ಇದನ್ನು ಕಲಿಕಾ ಬಾಳೆ ಕೃಷಿ ಎನ್ನಲಾಗುತ್ತದೆ ಎಂದು ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ವಿಜ್ಞಾನಿ ಪ್ರಭಾಕರ್ ಹೇಳುತ್ತಾರೆ.

ಭತ್ತ ಬೆಳೆಯಲು ಖರ್ಚ ದುಪ್ಪಟ್ಟಾಗಿದೆ. ಅದಕ್ಕೆ ತಕ್ಕಂತೆ ಬೆಳೆಗೆ ಬೆಲೆ ಸಿಗುತ್ತಿಲ್ಲ. ಹೀಗಾಗಿ, ರೈತರು ಭತ್ತ ಬೆಳೆಗೆ ಬೆನ್ನು ಮಾಡಿದ್ದಾರೆ. ಸರ್ಕಾರ ಭತ್ತದ ಕೃಷಿಗೆ ಸೂಕ್ತ ಬೆಲೆ ದೊರಕಿಸಿಕೊಟ್ಟರೆ ಮಾತ್ರ ಭತ್ತದ ಕೃಷಿ ಉಳಿಯಲಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಆಹಾರದ ಕೊರತೆ ತೀವ್ರವಾಗಲಿದೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಭತ್ತದ ಕೃಷಿಯಿಂದ ಅಂತರ್ಜಲ ಹೆಚ್ಚಳವಾಗಲಿದೆ. ಗದ್ದೆಯಲ್ಲಿ ಕಂದಕ ತೋಡಿ ತೋಟ ಮಾಡಿದರೆ ಅಂತರ್ಜಲಕ್ಕೆ ಸಮಸ್ಯೆ ಎದುರಾಗಲಿದೆ. ಭತ್ತದ ಕೃಷಿಯನ್ನು ಕೈಬಿಡದಂತೆ ಕೃಷಿ ಇಲಾಖೆ ರೈತರಿಗೆ ವಿವಿಧ ಸೌಲಭ್ಯಗಳನ್ನು ನೀಡಬೇಕು ಎಂಬ ಒತ್ತಾಯ ತಿತಿಮತಿಯ ಪ್ರಗತಿಪರ ಕೃಷಿಕ ಕಾರ್ಯಪ್ಪ ಅವರದ್ದು.

ಬಾಳೆಯ ಜೊತೆಗೆ ರೈತರು ಹೆಚ್ಚಾಗಿ ಅಡಿಕೆ ಬೆಳೆಯತ್ತ ವಾಲುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಡಿಕೆಗೆ ಉತ್ತಮ ಬೆಲೆ ಸಿಗುತ್ತಿದೆ. ಭತ್ತದ ಕೃಷಿಯಲ್ಲಿ ನಷ್ಟ ಅನುಭವಿಸಿದ ರೈತ ಈಗ ಅಡಿಕೆ ಬೆಳೆಯತ್ತ ವಾಲಿದ್ದಾನೆ. ಬಹಳಷ್ಟು ರೈತರು ಗದ್ದೆಗಳಲ್ಲಿ ಕಾಲುವೆ ತೋಡಿ ಅಡಿಕೆ ಸಸಿ ನೆಟ್ಟು ತೋಟಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT