ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ, ಎಲೈಟ್ ಸ್ಕ್ವಾಡ್- 2 ತಂಡಕ್ಕೆ ಗೆಲುವು

ಮಳೆಯ ಕಾರಣ ರದ್ದಾದ ದಿ ಮರಗೋಡಿಯನ್ಸ್ ಮತ್ತು ಕಾಫಿ ಕ್ರಿಕೇಟರ್ಸ್ ನಡುವಿನ ಪಂದ್ಯ
Published 23 ಏಪ್ರಿಲ್ 2024, 4:02 IST
Last Updated 23 ಏಪ್ರಿಲ್ 2024, 4:02 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಪಟ್ಟಿ

ಮಡಿಕೇರಿ: ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗೌಡ ಲೆದರ್‌ಬಾಲ್ ಪ್ರೀಮಿಯರ್ ಲೀಗ್‌ನಲ್ಲಿ ಸೋಮವಾರ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ಹಾಗೂ ಎಲೈಟ್ ಸ್ಕ್ವಾಡ್-2 ತಂಡಗಳು ಗೆಲುವು ಸಾಧಿಸಿದವು. ಮಳೆಯ ಕಾರಣದಿಂದಾಗಿ ದಿ ಮರಗೋಡಿಯನ್ಸ್ ಮತ್ತು ಕಾಫಿ ಕ್ರಿಕೆಟರ್ಸ್ ತಂಡದ ನಡುವೆ ನಡೆಯಬೇಕಿದ್ದ ಪಂದ್ಯವನ್ನು ಏ.24ಕ್ಕೆ ಮುಂದೂಡಲಾಯಿತು.

ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ಮತ್ತು ದಿ ಮರಗೋಡಿಯನ್ಸ್ ನಡುವೆ ನಡೆದ ಪಂದ್ಯದಲ್ಲಿ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ 5 ವಿಕೆಟ್‌ಗಳ ಜಯ ಸಾಧಿಸಿತು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ದಿ ಮರಗೋಡಿಯನ್ಸ್ ನಿಗದಿತ 10 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿತು. ವರುಣ್ ರಾಜ್ ಬೇಕಲ್ 31 ಎಸೆತಗಳಿಗೆ 53 ರನ್ ಗಳಿಸುವ ಮೂಲಕ ಅರ್ಧ ಶತಕ ದಾಖಲಿಸಿದರು‌. ಪ್ಲಾಂಟರ್ಸ್ ಕ್ಲಬ್ ಪರ ತುಷಾರ್ ಮೂವನ ಮತ್ತು ಮಿತ್ರ ಪೂಜಾರಿರ ತಲಾ 2 ವಿಕೆಟ್ ಪಡೆದರು.

ಗುರಿ ಬೆನ್ನಟ್ಟಿದ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ 9.1 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿ ಜಯದ ನಗೆ ಬೀರಿತು. ಪರ್ಲಕೋಟಿ ಜಶ್ವಿತ್ ಬೋಪಣ್ಣ 19 ಎಸೆತಗಳಿಗೆ 27 ರನ್ ಗಳಿಸಿದರು. ದಿ ಮರಗೋಡಿಯನ್ಸ್ ಪರ ಹೊಸೊಕ್ಲು ಸುನಿಲ್ 2 ವಿಕೆಟ್ ಪಡೆದರು.

ಎಲೈಟ್ ಸ್ಕ್ವಾಡ್-2 ಮತ್ತು ಕೂರ್ಗ್ ಹಾಕ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಮಳೆಯಿಂದ ಡಿಎಲ್‌ಎಸ್ ನಿಯಮದ ಪ್ರಕಾರ ಎಲೈಟ್ ತಂಡ 29 ರನ್‌‌ಗಳಿಂದ ಗೆಲುವು ದಾಖಲಿಸಿತು‌.

ಟಾಸ್ ಗೆದ್ದ ಎಲೈಟ್ ತಂಡ ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಕೂರ್ಗ್ ಹಾಕ್ಸ್ ತಂಡ ನಿಗದಿತ 10 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿತು. ತಂಡದ ಪರ ಕಾಳಮನೆ ಕೀರ್ತನ್ 27 ಎಸೆತಗಳಲ್ಲಿ 37 ರನ್ ಗಳಿಸಿದರು. ಕೊಂಬಾರನ ಹರ್ಷ 13 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿದರು. ಎಲೈಟ್ ತಂಡದ ಪರವಾಗಿ ಮನ್ವಿತ್ ಕಲ್ಲುಗದ್ದೆ, ದೀಕ್ಷಿತ್ ಕುತ್ಯಾಳ ಮತ್ತು ರಾಹುಲ್‌.ಎ.ಎಸ್. ತಲಾ ಒಂದು ವಿಕೆಟ್ ಪಡೆದರು.

ನಂತರ ಬ್ಯಾಟ್ ಮಾಡಿದ ಎಲೈಟ್ ಸ್ಕ್ವಾಡ್-2 ತಂಡ 6.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 85 ರನ್ ಗಳಿಸಿತು. ಇದೇ ಸಂದರ್ಭದಲ್ಲಿ ಮಳೆ ಬಂದಿದ್ದರಿಂದ ಪಂದ್ಯ ನಡೆಸಲು ಆಗದೆ ಡಿ‌ಎಲ್‌ಎಸ್ ನಿಯಮದ ಪ್ರಕಾರ ಎಲೈಟ್ ತಂಡ 29 ರನ್‌ಗಳಿಂದ ಗೆಲುವು ದಾಖಲಿಸಿತು. ತಂಡದ ಪರ ರಾಹುಲ್ ಎಎಸ್ ಸತತ ಮೂರನೇ ಅರ್ಧಶತಕ ದಾಖಲಿಸಿದರು‌. ಅವರು 25 ಎಸೆತಗಳಲ್ಲಿ 54 ರನ್ ಗಳಿಸಿ, ಭಾರಿ ಮೆಚ್ಚುಗೆ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT