ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೊನ್ನಂಪೇಟೆ | 'ಅಣುಕು ಶವಸಂಸ್ಕಾರ ನಡೆಸಿ ಹೋರಾಟ'

ಪೊನ್ನಂಪೇಟೆ: ಮುಂದುವರಿದ ಅರಣ್ಯ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ
Published 20 ಫೆಬ್ರುವರಿ 2024, 15:32 IST
Last Updated 20 ಫೆಬ್ರುವರಿ 2024, 15:32 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ 12 ದಿನಗಳಿಂದ ಪೊನ್ನಂಪೇಟೆ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ನಡೆಸುತ್ತಿರುವ ಪ್ರತಿಭಟನೆ ಮಂಗಳವಾರವೂ ಮುಂದುವರಿಯಿತು.

ಕಾಲೇಜಿನ ಮುಂಭಾಗದಲ್ಲಿ ಸೇರಿದ ವಿದ್ಯಾರ್ಥಿಗಳು ಘೋಷಣೆ ಕೂಗುತ್ತಾ ಧರಣಿ ನಡೆಸಿದರು. 12 ದಿನವಾದರೂ ತಮ್ಮ ಬೇಡಿಕೆಯತ್ತ ಕಿಂಚಿತ್ತು ಗಮನಹರಿಸದ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವಿದ್ಯಾರ್ಥಿಗಳು, ಬಯಲಿನಲ್ಲಿ ಮಲಗಿ ಅಣುಕು ಶವ ಪ್ರದರ್ಶನ ಮಾಡಿದರು. ಐವರು ವಿದ್ಯಾರ್ಥಿಗಳು ಮೈತುಂಬ ಬಿಳಿ ಬಟ್ಟೆ ಹೊದ್ದು ಮಲಗಿ ಶವ ಸಂಸ್ಕಾರ ಮಾಡುವ ದೃಶ್ಯ ಪ್ರದರ್ಶಿಸಿದ್ದು ವಿದ್ಯಾರ್ಥಿಗಳಲ್ಲಿ ಮಡುಗಟ್ಟಿದ್ದ ನೋವಿನ ಸೂಚಕವಾಗಿತ್ತು.

ಈ ಬಗ್ಗೆ ಮಾತನಾಡಿದ ವಿದ್ಯಾರ್ಥಿ ನಾಯಕ ಕಿಶಾನ್ ಗೌಡ, ‘ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಸ್ಥಳಕ್ಕೆ ಬಂದು ನಮ್ಮ ಬೇಡಿಕೆ ಈಡೇರಿಕೆ ಬಗ್ಗೆ ಭರವಸೆ ನೀಡುವವರೆಗೂ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವುದಿಲ್ಲ’ ಎಂದು ದೃಢವಾಗಿ ನುಡಿದರು.

‘ಸೆಮಿಸ್ಟರ್ ಪರೀಕ್ಷೆ ಇದ್ದರೂ ನಮ್ಮ ತರಗತಿ ಹಾಗೂ ಪಾಠ ಪ್ರವಚನಗಳಿಗೆ ತೊಂದರೆಯಾಗುತ್ತಿದೆ. ಆದರೂ ಇದು ನಮ್ಮ ಜೀವನದ ಪ್ರಶ್ನೆ. ನಮಗಾದ ಅನ್ಯಾಯವನ್ನು ಸರಿಪಡಿಸಿಕೊಳ್ಳುವವರೆಗೂ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಹೇಳಿದರು.

ಮೂರು ದಿನಗಳ ಹಿಂದೆ ಮಡಿಕೇರಿ ಜಿಲ್ಲಾ ಕೇಂದ್ರಕ್ಕೆ ತೆರಳಿ ಬೀದಿ ನಾಟಕದ ಮೂಲಕ ಸರ್ಕಾರದ ಗಮನ ಸೆಳೆದಿದ್ದರು. ಇದೀಗ ಅಣುಕು ಶವ ಸಂಸ್ಕಾರದ ಪ್ರತಿಭಟನೆ ನಡೆಸಿ ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರ ಗೊಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT