ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ: 42,375 ಮಕ್ಕಳಿಗೆ ಪಲ್ಸ್ ಪೋಲಿಯೊ ಗುರಿ

ಜಿಲ್ಲೆಯಲ್ಲಿ ನಡೆದಿದೆ ಭರದ ಸಿದ್ಧತೆ, ಪೂರ್ವಭಾವಿ ಸಭೆ ನಡೆಸಿದ ಜಿಲ್ಲಾಧಿಕಾರಿ
Published 7 ಫೆಬ್ರುವರಿ 2024, 15:38 IST
Last Updated 7 ಫೆಬ್ರುವರಿ 2024, 15:38 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಾರ್ಚ್ 3ರಿಂದ 5 ವರ್ಷದೊಳಗಿನ ಒಟ್ಟು 42,375 ಮಕ್ಕಳಿದ್ದು, ಅವರಿಗೆಲ್ಲ ಪಲ್ಸ್ ಪೋಲಿಯೊ ಹಾಕಲು ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ.

ಇದಕ್ಕೆ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಇಲ್ಲಿ ಬುಧವಾರ ಪೂರ್ವಭಾವಿಯಾಗಿ ಸಭೆ ನಡೆಸಿ, ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೆ.ಎಂ.ಸತೀಶ್ ಕುಮಾರ್, ‘ಜಿಲ್ಲೆಯಲ್ಲಿರುವ ಒಟ್ಟು 42,375 ಮಕ್ಕಳ ಪೈಕಿ 4,400 ನಗರ ಪ್ರದೇಶದಲ್ಲಿ ಹಾಗೂ 37,975 ಮಂದಿ ಗ್ರಾಮೀಣ ಪ್ರದೇಶದಲ್ಲಿ ಇದ್ದಾರೆ. ಜೊತೆಗೆ, ವಲಸೆ ಬಂದಿರುವ ಮಕ್ಕಳು ಸೇರಿದಂತೆ 5 ವರ್ಷದ ಒಳಗಿನ ಎಲ್ಲ ಮಕ್ಕಳಿಗೂ ಪೋಲಿಯೊ ಹನಿ ಹಾಕಲಾಗುತ್ತದೆ’ ಎಂದು  ಮಾಹಿತಿ ನೀಡಿದರು.

ಇದಕ್ಕಾಗಿ 464 ಬೂತ್‍ಗಳನ್ನು ಸ್ಥಾಪಿಸಲಾಗಿದೆ. 30 ಸಂಚಾರಿ ಬೂತ್‍ಗಳು, 6 ಮೊಬೈಲ್ ತಂಡಗಳನ್ನು ನಿಯೋಜಿಸಲಾಗುತ್ತದೆ. ಜೊತೆಗೆ, 1,928 ಲಸಿಕಾದಾರರು, 86 ಮಂದಿ ಮೇಲ್ವಿಚಾರಕರು, 924 ಮಂದಿ ಮನೆ ಮನೆಗೆ ಭೇಟಿ ನೀಡುವ ತಂಡವನ್ನು ನಿಯೋಜಿಸಲಾಗುತ್ತದೆ ಎಂದು ತಿಳಿಸಿದರು.

ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ 80 ವಾಹನಗಳು ಅಗತ್ಯವಿದ್ದು, ವಾಹನ ನಿಯೋಜನೆಗೆ ಸಹಕರಿಸುವಂತೆ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಯಲ್ಲಿ ಅವರು ಮನವಿ ಮಾಡಿದರು.

ಪ್ರವಾಸಿ ಸ್ಥಳಗಳು, ಬಸ್ ನಿಲ್ದಾಣಗಳಲ್ಲಿ ಪೋಲಿಯೊ ಬೂತ್ ತೆರೆಯಲು ಅವಕಾಶ ಮಾಡಿಕೊಡಬೇಕು. ಕಾರ್ಮಿಕರ ಮಕ್ಕಳು, ಕೊಳಗೇರಿ ಪ್ರದೇಶದಲ್ಲಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ಹಾಕಲು ಸಹಕರಿಸಬೇಕು ಕೋರಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಗ್ರಾಮೀಣ ಅಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ನಗರಾಭಿವೃದ್ಧಿ, ಕಾರ್ಮಿಕ, ಪೊಲೀಸ್, ವೈದ್ಯಕೀಯ ಶಿಕ್ಷಣ, ಸೆಸ್ಕ್, ಕೆಎಸ್‍ಆರ್‌ಟಿಸಿ, ಪ್ರವಾಸೋದ್ಯಮ ಹೀಗೆ ಎಲ್ಲಾ ಇಲಾಖೆಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ವಾಹನ ನೀಡುವೆ: ರೆಡ್‍ಕ್ರಾಸ್ ಸಂಸ್ಥೆಯ ಸಭಾಪತಿ ರವೀಂದ್ರ ರೈ ಮಾತನಾಡಿ, ‘ರೆಡ್‍ಕ್ರಾಸ್ ಸಂಸ್ಥೆಯಲ್ಲಿ ಒಂದು ವಾಹನವಿದ್ದು, ಅದನ್ನು ಈ ಕಾರ್ಯಕ್ಕೆ ನೀಡಲಾಗುವುದು’ ಎಂದರು. ರೋಟರಿ ಮಿಸ್ಟಿಹಿಲ್ಸ್ ನಿರ್ದೇಶಕ ಚೇತನ್, ರೋಟರಿ ಸಂಸ್ಥೆಯ ಅಚ್ಚಯ್ಯ, ರೋಟರಿಯನ್ ನಳಿನಿ, ಈ ಹಿಂದಿನಂತೆ ಪಲ್ಸ್ ಪೊಲಿಯೊ ಕಾರ್ಯಕ್ರಮಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ಆರ್‌ಸಿಎಚ್ ಅಧಿಕಾರಿ ಡಾ.ಮಧುಸೂದನ, ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಪುರುಷೋತ್ತಮ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಶ್ರೀನಿವಾಸ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಚೇತನ್, ಇಂಧುದರ್, ಪ್ರಮೋದ್ ರೈ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪುಟ್ಟರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಟರಾಜು, ಪೌರಾಯುಕ್ತ ವಿಜಯ್, ಜಿಲ್ಲಾ ಕಾರ್ಮಿಕ ಅಧಿಕಾರಿ ಹರ್ಷವರ್ಧನ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ಯೋಜನಾ ಸಮನ್ವಯಾಧಿಕಾರಿ ಎಂ.ಕೃಷ್ಣಪ್ಪ, ಪ್ರಾದೇಶಿಕ ಸಾರಿಗೆ ಕಚೇರಿಯ ಮೇಲ್ವಿಚಾರಕಿ ಸಲೀಮ ಭಾಗವಹಿಸಿದ್ದರು.

ಎಲ್ಲರೂ ಕೈಜೋಡಿಸಿ; ಜಿಲ್ಲಾಧಿಕಾರಿ

ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ಹಾಕುವ ಕಾರ್ಯಕ್ರಮವು ಮಾರ್ಚ್ 3ರಂದು ನಡೆಯಲಿದ್ದು ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳು ಅಗತ್ಯ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದರು. ಈ ವೇಳೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜೊತೆ ಪಂಚಾಯತ್ ರಾಜ್ ಸಾರ್ವಜನಿಕ ಶಿಕ್ಷಣ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಪ್ರಾದೇಶಿಕ ಸಾರಿಗೆ ಇಲಾಖೆಗಳು ಅಗತ್ಯ ಸಹಕಾರ ನೀಡುವಂತೆ  ಅವರು ಸೂಚಿಸಿದರು.

ಶಾಲೆಗಳು ಬಸ್ ನಿಲ್ದಾಣಗಳಲ್ಲಿ ಹಾಗೂ ಜನದಟ್ಟಣೆ ಪ್ರದೇಶಗಳಲ್ಲಿ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ಹಾಕಲು ಸಹಕಾರ ನೀಡಬೇಕು. ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಅಗತ್ಯ ವಾಹನ ನಿಯೋಜಿಸುವಂತೆಯೂ ನಿರ್ದೇಶನ ನೀಡಿದರು. ಪಲ್ಸ್ ಪೋಲಿಯೊ ಕಾರ್ಯಕ್ರಮ ದಿನದಂದು ವಿದ್ಯುತ್ ಸಂಪರ್ಕವನ್ನು ನಿರಂತರವಾಗಿ ಕಲ್ಪಿಸಬೇಕು. ರೋಟರಿ ಲಯನ್ಸ್ ರೆಡ್‍ಕ್ರಾಸ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಕಾರ ಪಡೆಯುವಂತೆ ಅವರು ಹೇಳಿದರು.

ಯಾವಾಗ?

ಅಭಿಯಾನ ಮಾರ್ಚ್ 3ರಂದು ಬೂತ್ ಮಟ್ಟದಲ್ಲಿ ನಡೆಯಲಿದೆ. ಮಾರ್ಚ್ 4 5 ಮತ್ತು 6ರಂದು ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಹಾಗೂ 4 ಮತ್ತು 5ರಂದು  ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ಪೋಲಿಯೊ ಹನಿ ಹಾಕಲಾಗುತ್ತದೆ ಎಂದು ಜಿಲ್ಲಾಧಿಕರಿ ವೆಂಕಟ್‌ರಾಜಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT