ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೊರ ಬರಬೇಕಿದೆ ಸಂಶೋಧನಾ ಕೃತಿಗಳು’

ಕೊಡಗಿನ ಯುವ ಪೀಳಿಗೆಯಲ್ಲಿ ಮನವಿ ಮಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ
Published 21 ಮಾರ್ಚ್ 2024, 4:28 IST
Last Updated 21 ಮಾರ್ಚ್ 2024, 4:28 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗಿನಲ್ಲಿ ಸಂಶೋಧನಾ ಕೃತಿಗಳು ರಚನೆಯಾಗಬೇಕಿದೆ. ಈ ಕುರಿತು ಲೇಖಕರು ಗಮನ ಹರಿಸಬೇಕು ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ತಿಳಿಸಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಕೊಡವ ಮಕ್ಕಡ ಕೂಟದ 87ನೇ ಪುಸ್ತಕ ಹಾಗೂ ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಅವರು ರಚಿಸಿರುವ 7ನೇ ಕೊಡವ ಪುಸ್ತಕ ‘ಕೂಪದಿ’ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೊಡವ ಭಾಷೆಯಲ್ಲಿ ಪುಸ್ತಕ ಬರೆಯಲು ಯುವಪೀಳಿಗೆ ಮುಂದಾಗಬೇಕು. ವಿಶೇಷವಾಗಿ ಸಂಶೋಧನಾ ಕೃತಿಗಳು ಹೆಚ್ಚು ಹೆಚ್ಚು ಹೊರಬೇಕಾದ ಅನಿವಾರ್ಯತೆ ಇದೆ. ಕೊಡಗಿನಲ್ಲಿ ಸಂಶೋಧನೆಗೆ ವಿಫುಲವಾದ ಅವಕಾಶವೂ ಇದೆ. ಇವುಗಳನ್ನು ಅರಿತು ಯುವಪೀಳಿಗೆ ಸಂಶೋಧನೆಗೆ ಮುಂದಾಗಬೇಕು ಎಂದು ಹೇಳಿದರು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ 2024ರ ಕುಂಡ್ಯೋಳಂಡ ಹಾಕಿ ನಮ್ಮೆಯ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ‘ಸಾಹಿತ್ಯ ಕೃಷಿ ಉಳಿದೆಲ್ಲ ಕೃಷಿಗಿಂತ ಅತಿ ಕಠಿಣವಾದುದು. ಬೇರೆ ಕೃಷಿಯಲ್ಲಿ ತಪ್ಪಾದರೂ ಸರಿ ಮಾಡಿಕೊಳ್ಳುವ ಅವಕಾಶ ಇದೆ. ಆದರೆ, ಸಾಹಿತ್ಯ ಕೃಷಿಯಲ್ಲಿ ತಪ್ಪಾಗದಂತೆ ಬರೆಯಬೇಕಿದೆ. ಅದೊಂದು ಬಗೆಯ ತಪಸ್ಸು ಇದ್ದಂತೆ’ ಎಂದು ಹೇಳಿದರು.

ಬರೆಯುವುದು ಎಷ್ಟು ಮುಖ್ಯವೋ, ಅಷ್ಟೇ ಅದನ್ನು ಪ್ರಕಟಿಸುವುದೂ ಮುಖ್ಯ. ಈ ನಿಟ್ಟಿನಲ್ಲಿ ದಾನಿಗಳ ಸಹಕಾರ ತುಂಬಾ ಪ್ರಮುಖವಾದುದು ಎಂದರು.

ಲೇಖಕಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಮಾತನಾಡಿ, ‘ಬರಹಗಾರರಿಗೆ ದಾನಿಗಳ ಸಹಕಾರದ ಅಗತ್ಯವಿದೆ. ಇದು ನನ್ನ 7ನೇ ಪುಸ್ತಕ. ಪುಸ್ತಕವನ್ನು ಓದಿ ಅಭಿಪ್ರಾಯ ವ್ಯಕ್ತಪಡಿಸಿದರೆ ಮತ್ತಷ್ಟು ಪುಸ್ತಕಗಳನ್ನು ಬರೆಯಲು ಅದು ಪ್ರೇರಣೆ ನೀಡಿದಂತಾಗುತ್ತದೆ’ ಎಂದು ಹೇಳಿದರು.

ಕೊಡವ ಮಕ್ಕಡ ಕೂಟದ ಸಲಹೆಗಾರ ಕುಲ್ಲೇಟಿರ ಅಜಿತ್ ನಾಣಯ್ಯ ಮಾತನಾಡಿ, ‘ಬೊಳ್ಳಜಿರ ಬಿ.ಅಯ್ಯಪ್ಪ ಎಲ್ಲಿ ಸಿಗುತ್ತಾರೆ ಎಂದರೆ ಅದು ಪುಸ್ತಕ ಮುದ್ರಣಾಲಯದಲ್ಲಿ ಎಂಬ ಮಾತು ಜನಜನಿತವಾಗಿದೆ. ಪುಸ್ತಕ ಪ್ರಕಟಣೆಯಲ್ಲಿ ಅವರು ತಮ್ಮನ್ನು ಸರ್ವವಿಧದಲ್ಲೂ ತೊಡಗಿಸಿಕೊಂಡಿದ್ದು, ಕೊಡಗಿನ ಸಾಹಿತ್ಯ ಜಗತ್ತಿನಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ’ ಎಂದು ಶ್ಲಾಘಿಸಿದರು.

‘4 ಸಾವಿರ ಪುಸ್ತಕಗಳನ್ನು ಮಕ್ಕಳಿಗೆ ಉಚಿತವಾಗಿ ನೀಡಿರುವುದು, ಹೊಸ ಹೊಸ ಸಾಹಿತಿಗಳ ಪುಸ್ತಕಗಳನ್ನು ಬಿಡುಗಡೆಗೊಳಿಸುವುದು, 87 ‍ಪುಸ್ತಕಗಳನ್ನು ಹೊರತಂದಿರುವುದು ಸಣ್ಣ ವಿಷಯವಲ್ಲ. ಕೊಡವ ಸಂಘಟನೆ ಮತ್ತು ಕೊಡವ ಸಮಾಜಗಳು ಮಾಡಬೇಕಾದ ಕಾರ್ಯಕ್ರಮಗಳನ್ನು ಕೊಡವ ಮಕ್ಕಡ ಕೂಟ ಮಾಡುತ್ತಿದೆ ಎಂದರೆ ಅದು ಅತಿಶಯೋಕ್ತಿ ಅಲ್ಲ’ ಎಂದರು.

ದಾನಿಗಳಾದ ಚೀಯಕಪೂವಂಡ ಸಚಿನ್ ಪೂವಯ್ಯ, ಪೊನ್ನಚೆಟ್ಟಿರ ಪ್ರದೀಪ್ ಭಾಗವಹಿಸಿದ್ದರು.

ಕೊಡವ ಮಕ್ಕಡ ಕೂಟ; ಅತಿ ಶೀಘ್ರದಲ್ಲಿ ಶತಕ!

ಕೊಡವ ಮಕ್ಕಡ ಕೂಟ ಹೊರ ತರುತ್ತಿರುವ ಪುಸ್ತಕಗಳ ಸಂಖ್ಯೆ ಅತಿ ಶೀಘ್ರದಲ್ಲಿ 100ಕ್ಕೆ ತಲುಪಲಿದೆ ಎಂದು ಸಂಘಟನೆಯ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ತಿಳಿಸಿದರು. ದಾನಿಗಳ ಸಹಕಾರದಿಂದ ಕೊಡವ ಮಕ್ಕಡ ಕೂಟದ ವತಿಯಿಂದ ಇಲ್ಲಿಯವರೆಗೆ 87 ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗಿದೆ. ಇನ್ನೂ 13 ಪುಸ್ತಕಗಳು ಪ್ರಕಟಣೆಯ ಹಂತದಲ್ಲಿವೆ. ಈವರೆಗೆ ಪ್ರಕಟವಾದ 5 ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. 4 ಪುಸ್ತಕಗಳು ಕೊಡವ ಸಿನಿಮಾವಾಗಿವೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT