ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ವೈಜ್ಞಾನಿಕ ಸಾಕ್ಷ್ಯಾಧಾರಗಳಿಂದ ಆರೋಪಿಗಳು ಪೊಲೀಸರ ಬಲೆಗೆ

Published 5 ಮೇ 2024, 7:20 IST
Last Updated 5 ಮೇ 2024, 7:20 IST
ಅಕ್ಷರ ಗಾತ್ರ

ಮಡಿಕೇರಿ: ವೈಜ್ಞಾನಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಎರಡು ವರ್ಷಗಳ ಹಿಂದೆ ಡಕಾಯಿತಿ ನಡೆಸಿದ್ದ ಐವರು ಆರೋಪಿಗಳನ್ನು ಮಡಿಕೇರಿ ಉಪವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಚನ್ನಂಗಿ ನಿವಾಸಿ ಎಂ.ಕೆ.ಲವಕುಮಾರ್ (51), ಅಬ್ಬೂರು ನಿವಾಸಿಗಳಾದ ಎಚ್.ಸಿ.ವಿನೋದ್ (45), ಪ್ರವೀಣ್‌ಕುಮಾರ್ (46), ವಿರಾಜಪೇಟೆಯ ಅಯ್ಯಪ್ಪ ಬೆಟ್ಟ ನಿವಾಸಿ ಪಿ.ಎಸ್.ಅನೀಶ್ (33) ಹಾಗೂ ಭದ್ರಗೋಳ ನಿವಾಸಿ ಕೆ.ಈ.ರಫೀಕ್ (45) ಬಂಧಿತರು. ಇವರಿಂದ 7.9 ಗ್ರಾಂ ತೂಕದ ಚಿನ್ನದ ಸರ, ₹ 60 ಸಾವಿರ ನಗದು, ಕೃತ್ಯಕ್ಕೆ ಬಳಸಿದ ಕಾರು ಹಾಗೂ ಡಕಾಯಿತಿ ಮಾಡಿದ ಹಣದಲ್ಲಿ ಖರೀದಿಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಸುಳಿವು ನೀಡಿದ ಬೆರಳಚ್ಚು!

‘ಗೂಡ್ಲೂರು ಗ್ರಾಮದ ಚೆನ್ನಂಗಿ ನಿವಾಸಿ ಕೆ.ಕೆ.ತಂಗಪ್ಪನ್ ಅವರ ಮನೆಗೆ 2022ರ ಜೂನ್ 8ರಂದು ರಾತ್ರಿ 8.30ರ ಸಮಯದಲ್ಲಿ ಈ ಆರೋಪಿಗಳು ಮುಸುಕುಧಾರಿಗಳಾಗಿ ನುಗ್ಗಿ ತಂಗಪ್ಪನ್ ಹಾಗೂ ಅವರ ಪತ್ನಿಯ ಮೇಲೆ ಹಲ್ಲೆ ನಡೆಸಿ, ₹ 2 ಲಕ್ಷ ನಗದು, 8 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಸಾಕಷ್ಟು ಹುಡುಕಾಟ ನಡೆಸಿದರೂ, ಆರೋಪಿಗಳ ಸುಳಿವು ಪತ್ತೆಯಾಗಿರಲಿಲ್ಲ. ಈಚೆಗೆ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ ಅನೀಶ್ ಬೆರಳಚ್ಚು ಡಕಾಯಿತಿ ನಡೆದ ಸ್ಥಳದಲ್ಲಿ ಪತ್ತೆಯಾದ ಬೆರಳಚ್ಚಿಗೆ ಹೋಲಿಕೆಯಾಯಿತು. ನಂತರ, ಅನೀಶ್‌ನನ್ನು ವಿಚಾರಣೆ ನಡೆಸಿದಾಗ ಆತ ಉಳಿದ ಆರೋಪಿಗಳ ಕುರಿತು ಮಾಹಿತಿ ನೀಡಿದ’ ಎಂದು ಪೊಲೀಸರು ತಿಳಿಸಿದ್ದಾರೆ.

ಒಮ್ಮೆ ಡಕಾಯಿತಿ ನಡೆಸಿ ಸುಮ್ಮನಿದ್ದ ಆರೋಪಿಗಳು!

‘ಅನೀಶ್ ಬಿಟ್ಟು ಉಳಿದ ಎಲ್ಲ ಆರೋಪಿಗಳು ಈ ಡಕಾಯಿತಿ ನಡೆಸಿದ ನಂತರ ಬೇರೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದೇ ಸುಮ್ಮನಿದ್ದರು. ಆದರೆ, ಅನೀಶ್ ಮಾತ್ರ ಇತರೆ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ. ವಿರಾಜಪೇಟೆಯ ದರೋಡೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಅನೀಶ್ ಬೆರಳಚ್ಚು ಡಕಾಯಿತಿ ನಡೆದ ಸ್ಥಳದಲ್ಲಿ ಪತ್ತೆಯಾಗಿತ್ತು’ ಎಂದು ಅವರು ಹೇಳಿದ್ದಾರೆ.

ಮದ್ಯ ಸೇವನೆಗಾಗಿ ಡಕಾಯಿತಿ!

‘ಆರೋಪಿಗಳು 2022ರಲ್ಲಿ ಮದ್ಯ ಸೇವಿಸಲು ಹಣ ಇಲ್ಲದೇ ಪರದಾಡುತ್ತಿದ್ದರು. ಆಗ ಮನೆಯೊಂದನ್ನು ಡಕಾಯಿತಿ ನಡೆಸಿ ಅಲ್ಲಿ ಸಿಕ್ಕ ಹಣದಿಂದ ಮದ್ಯ ಸೇವಿಸಲು ನಿರ್ಧರಿಸಿದರು. ಹಾಗಾಗಿ, ಇವರು ಡಕಾಯಿತಿ ಮಾಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಮಡಿಕೇರಿ ಉಪವಿಭಾಗದ ಡಿವೈಎಸ್‌ಪಿ ಮಹೇಶ್‌ಕುಮಾರ್, ಸಿಪಿಐ ಪಿ.ಕೆ.ರಾಜು, ಪಿಎಸ್‌ಐಗಳಾದ ರಾಘವೇಂದ್ರ, ಹಾಲಪ್ಪ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತನಿಖಾ ತಂಡ ಈ ಕಾರ್ಯಾಚರಣೆ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT