ಅಜ್ಜಮಾಡ ದೇವಯ್ಯರ ಪುಣ್ಯ ಸ್ಮರಣೆ

ಮಡಿಕೇರಿ: ಕೊಡವ ಮಕ್ಕಡ ಕೂಟ ಹಾಗೂ ಅಜ್ಜಮಾಡ ಕುಟುಂಬಸ್ಥರ ಆಶ್ರಯದಲ್ಲಿ ಸ್ಕ್ವಾಡನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮವು ಶುಕ್ರವಾರ ನಗರದ ಖಾಸಗಿ ಬಸ್ ನಿಲ್ದಾಣದ ಅಜ್ಜಮಾಡ ದೇವಯ್ಯ ವೃತ್ತದಲ್ಲಿ ನಡೆಯಿತು.
ಈ ಸಂದರ್ಭ ಪಾಲ್ಗೊಂಡ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ಏರ್ಮಾರ್ಷಲ್ ಕಾರ್ಯಪ್ಪ ಮಾತನಾಡಿ, ‘1965ರಲ್ಲಿ ಸ್ಕ್ವಾಡನ್ ಲೀಡರ್ ದೇವಯ್ಯನವರು ಶತ್ರುಸೈನ್ಯದೊಂದಿಗೆ ಹೋರಾಡಿ ವೀರಮರಣವನ್ನಪ್ಪಿದರು. ಅವರು ಮಾಡಿದ ಸಾಧನೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಅವರಿಗೆ ಮರಣಾನಂತರ ಮಹಾವೀರ ಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ’ ಎಂದು ನೆನಪಿಸಿದರು.
ಮಾಜಿ ಸಚಿವ ಎಂ.ಸಿ.ನಾಣಯ್ಯ ಮಾತನಾಡಿ, ‘ದೇವಯ್ಯನವರು ಮಾಡಿದ ಕೆಲಸ ಇಂದಿಗೂ ಭಾರತ ಸೇನೆಯಲ್ಲಿ ಹೆಸರುವಾಸಿಯಾಗಿದೆ. ಸೇವೆಯನ್ನು ಪರಿಗಣಿಸಿ ಅವರಿಗೆ ಮಹಾವೀರಚಕ್ರ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ನೀಡಿದೆ. ಇವರ ಸೇವೆ ಜಿಲ್ಲೆಗೆ ಹೆಮ್ಮೆಯ ವಿಚಾರವಾಗಿದ್ದು ದೇಶದ ಸ್ವಾಯತ್ತತೆಯನ್ನು ದೇವಯ್ಯ ಕಾಪಾಡಿದ್ದರು’ ಎಂದು ಹೇಳಿದರು.
ಕರ್ನಲ್ ಕಂಡ್ರತಂಡ ಸುಬ್ಬಯ್ಯ ಮಾತನಾಡಿ, ‘ಪಾಕಿಸ್ತಾನದ ಯುದ್ಧ ವಿಮಾನಗಳ ಮೇಲೆ ದಾಳಿ ನಡೆಸಿ ಭಾರತ ದೇಶದ ಮೇಲೆ ಶತ್ರು ಸೈನ್ಯದ ಆಕ್ರಮಣವನ್ನು ತಡೆದರು. ಸುಮಾರು 90 ನಿಮಿಷಗಳ ಕಾಲ ಯುದ್ಧ ಮಾಡಿ ಹುತಾತ್ಮರಾದರು. ಇಂತಹ ವೀರಸೇನಾನಿಯ ಪುತ್ಥಳಿಯನ್ನು ನಗರಸಭೆ ಹಾಗೂ ಅಜ್ಜಮಾಡ ಕುಟುಂಬಸ್ಥರು ಆದಷ್ಟು ಶೀಘ್ರದಲ್ಲಿ ನೆರವೇರಿಸಬೇಕು’ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ ಹಾಜರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.