ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೈಲರ್‌‌‌‌‌ಗಳ ಬೇಡಿಕೆ ಈಡೇರಿಕೆಗೆ ಹೋರಾಟ: ಶೇಖ್ ಅಹಮ್ಮದ್

ಕುಶಾಲನಗರ ವಲಯ ಸಮಿತಿಯ ವಾರ್ಷಿಕೋತ್ಸವ.
Published 28 ಜನವರಿ 2024, 15:30 IST
Last Updated 28 ಜನವರಿ 2024, 15:30 IST
ಅಕ್ಷರ ಗಾತ್ರ

ಕುಶಾಲನಗರ: ‘ಟೈಲರ್‌‌‌ಗಳ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಸಂಘಟಿತ ಹೋರಾಟ ನಡೆಸಬೇಕು’ ಎಂದು ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಕೊಡಗು ಘಟಕದ ಜಿಲ್ಲಾಧ್ಯಕ್ಷ ಶೇಖ್ ಅಹಮ್ಮದ್ ಹೇಳಿದರು.

ಪಟ್ಟಣದ ಮಹಿಳಾ ಸಮಾಜದಲ್ಲಿ ಭಾನುವಾರ ಕರ್ನಾಟಕ ಟೈಲರ್ಸ್ ಅಸೋಸಿಯೇಷನ್ ಕುಶಾಲನಗರ ವಲಯ ಸಮಿತಿ ವಾರ್ಷಿಕೋತ್ಸವ ಹಾಗೂ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದರು.

‘ಆನ್‌‌‌ಲೈನ್ ವಹಿವಾಟು ಕಾರಣದಿಂದ ಬೇಡಿಕೆ ಕ್ಷೀಣಿಸುತ್ತಿದೆ. ಸಂಘಟಿತರಾಗುವ ಮೂಲಕ ಎಲ್ಲರೂ ತಮ್ಮ ಬೇಡಿಕೆ ಈಡೇರಿಕೆಗೆ ಮುಂದಾಗಬೇಕು. ಟೈಲರ್‌‌‌‌ಗಳ ಭವಿಷ್ಯ ಸುಭದ್ರವಾಗಿರಲು ಹೋರಾಟ ಅಗತ್ಯ. ಕಳೆದ ಎರಡು ದಶಕಗಳ ಹಿಂದೆ ಉಲ್ಲಾಳದಲ್ಲಿ ಬೆರಳೆಣಿಕೆ ಸದಸ್ಯರಿಂದ ಆರಂಭವಾದ ಸಂಘಟನೆ ಈಗ ರಾಜ್ಯಾದ್ಯಂತ ವಿಸ್ತರಿಸಿದೆ. ಸಂಘಟನೆ ರಜತಮಹೋತ್ಸವಕ್ಕೆ ಸಿದ್ಧವಾಗಿದೆ’ ಎಂದರು.

‘ಸಂಘಟನೆ 25ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಮಾವೇಶದಲ್ಲಿ  ಶಕ್ತಿ‌ ಪ್ರದರ್ಶನ ತೋರಿ‌ ಸರ್ಕಾರದ ಗಮನ‌ ಸೆಳೆಯಬೇಕಿದೆ’ ಎಂದರು.

ಶಾಸಕ ಡಾ.ಮಂತರ್ ಗೌಡ  ಮಾತನಾಡಿ, ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.  ಸರ್ಕಾರದಿಂದ ದೊರೆಯುವ ಸೌಲಭ್ಯ ಒದಗಿಸುವ ಭರವಸೆ ನೀಡಿದರು.

ಮುಖಂಡ ನಂದೀಶ್ ಮಾತನಾಡಿ, ‘ಗಣ್ಯ ವ್ಯಕ್ತಿಗಳ ವ್ಯಕ್ತಿತ್ವ ಬಿಂಬಿಸುವಲ್ಲಿ ಪ್ರಮುಖ‌ ಪಾತ್ರ ವಹಿಸುವ ಉಡುಪು ತಯಾರಿಸಿ ಕೊಡುವ ಟೈಲರ್ ಸ್ಥಿತಿಗತಿ ಉತ್ತಮವಾಗಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿ ಹೆಚ್ಚಾಗುತ್ತಿದೆ. ಟೈಲರಿಂಗ್ ಕ್ಷೇತ್ರದಲ್ಲಿ ಸಮಸ್ಯೆಗಳ‌ ಕಾರಣದಿಂದ
ಮುಂದಿನ ಪೀಳಿಗೆಗೆ ಈ ವೃತ್ತಿ ಹೊರತುಪಡಿಸಿ ಇತರೆ ಕ್ಷೇತ್ರಗಳನ್ನು ಅಯ್ದುಕೊಳ್ಳಲು ಪ್ರೋತ್ಸಾಹಿಸುತ್ತಿದ್ದು ಯುವ ಸಮೂಹ ಇದರಿಂದ ದೂರವಾಗುತ್ತಿದ್ದಾರೆ’ ಎಂದರು.

ಕುಶಾಲನಗರ ವಲಯ ಸಮಿತಿ ಅಧ್ಯಕ್ಷೆ ಭವಾನಿ ಲೋಕೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ‘ಸಂಘಟನೆಗಳು, ಅದರಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಎಲ್ಲರೂ ಅರಿತುಕೊಳ್ಳುವ ಅಗತ್ಯವಿದೆ. ಟೈಲರ್‌‌‌ಗಳಿಗೂ ಇತರೆ ಕ್ಷೇತ್ರದಂತೆ ಗೌರವ, ಮಾನ್ಯತೆ ಇದೆ ಎಂಬುದನ್ನು ಕೆ.ಎಸ್.ಟಿ.ಎ ತೋರಿಸಿಕೊಟ್ಟಿದೆ. ಆದ್ದರಿಂದ ಟೈಲರ್ ವೃತ್ತಿಯಲ್ಲಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಲು‌ ಮುಂದೆಬರಬೇಕು’ ಎಂದರು.

ಈ ಸಂದರ್ಭ ಕೆ.ಎಸ್.ಟಿ.ಎ.ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಕುಶಾಲನಗರ ವಲಯ ಸಮಿತಿ ಗೌರವಾಧ್ಯಕ್ಷ ಕೆ.ಎಂ.ವಿಜಯ, ಸೋಮವಾರಪೇಟೆ ಸಮಿತಿ ಗೌರವಾಧ್ಯಕ್ಷ ಮಂಜುನಾಥ್ ಬಿ.ಎನ್, ಮಡಿಕೇರಿ ಸಮಿತಿ ಅಧ್ಯಕ್ಷ ಸಂಜೀವ, ಗೋಣಿಕೊಪ್ಪ ಸಮಿತಿ ಅಧ್ಯಕ್ಷೆ ಅಬಿಬುನಿಸಾ, ಭಾಗಮಂಡಲ‌ ಸಮಿತಿ ಅಧ್ಯಕ್ಷ ನಾಗೇಂದ್ರ, ಮಡಿಕೇರಿ ಸಮಿತಿ ಅಧ್ಯಕ್ಷೆ ಜುಲೆಕಾಬಿ, ಮೂರ್ನಾಡು ಸಮಿತಿ ಅಧ್ಯಕ್ಷೆ ತುಳಸಿ, ಕುಶಾಲನಗರ ಸಮಿತಿ ಉಪಾಧ್ಯಕ್ಷ ನಾಗರಾಜು, ಖಜಾಂಚಿ ಫೈರೋಜ್ ಅಹಮ್ಮದ್, ಸಂಘಟನಾ ಕಾರ್ಯದರ್ಶಿ ಶಾರದಾ, ಜಯಂತ್, ಸಲಹೆಗಾರರಾದ ರೊನಾಲ್, ನಿಸಾರ್ ಅಹಮದ್ ಇದ್ದರು.

ಸಭೆಯ ಆರಂಭದಲ್ಲಿ‌ ಮೃತಪಟ್ಟ ಸದಸ್ಯರಿಗೆ ಶ್ರದ್ಧಾಂಜಲಿ ‌ಸಲ್ಲಿಸಲಾಯಿತು. ಸಂಘದ ಸಹ ಕಾರ್ಯದರ್ಶಿ ದಿವ್ಯ ವಾರ್ಷಿಕ ವರದಿ ವಾಚಿಸಿದರು. ಸದಸ್ಯೆ ಸಪ್ನಾ ಲೆಕ್ಕಪತ್ರ ಮಂಡಿಸಿದರು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ವೃತ್ತಿ ಬಾಂಧವರು ಸಂಘಟನೆ ಪ್ರಮುಖರೊಂದಿಗೆ ಸಂವಾದ ನಡೆಸಿ ಸಮಸ್ಯೆಗಳನ್ನು ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT