ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಚಿತ ಆಪ್ತಸಮಾಲೋಚನೆ: ತಂಬಾಕು ವ್ಯಸನ ಮುಕ್ತಕ್ಕೆ ಇಲ್ಲಿದೆ ದಾರಿ

ಮಡಿಕೇರಿ, ವಿರಾಜಪೇಟೆಯಲ್ಲಿರುವ ಕೇಂದ್ರಗಳಲ್ಲಿ ಉಚಿತ ಆಪ್ತಸಮಾಲೋಚನೆ
Published 31 ಮೇ 2024, 7:03 IST
Last Updated 31 ಮೇ 2024, 7:03 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ತಂಬಾಕು ಚಟ ಬಿಡಬೇಕು ಎನ್ನುವವರಿಗೆ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿರುವ ಹಾಗೂ ವಿರಾಜಪೇಟೆಯ ಕೂರ್ಗ್ ದಂತ ವೈದ್ಯಕೀಯ ಕಾಲೇಜಿನಲ್ಲಿರುವ ತಂಬಾಕು ವ್ಯಸನಮುಕ್ತ ಕೇಂದ್ರವು ನೆರವಿಗೆ ಬರುತ್ತಿದೆ.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಈ ಕೇಂದ್ರವಿದೆ. ಇಲ್ಲಿ ಒಂದು ವರ್ಷದಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಮಂದಿ ಆಪ್ತಸಮಾಲೋಚನೆಗೆ ಒಳಗಾಗಿದ್ದಾರೆ. ಇವರಲ್ಲಿ ಶೇ 40ರಷ್ಟು ಮಂದಿ ತಂಬಾಕನ್ನು ಸಂಪೂರ್ಣ ತ್ಯಜಿಸಿದ್ದಾರೆ.

ಈ ಕೇಂದ್ರದಲ್ಲಿ ಆಪ್ತಸಮಾಲೋಚಕರು, ಮನರೋಗತಜ್ಞರು ಹಾಗೂ ಮನಶಾಸ್ತ್ರಜ್ಞರು ಇದ್ದು, ಪ್ರತಿಯೊಬ್ಬರನ್ನೂ ಆಪ್ತಸಮಾಲೋಚನೆ ಮಾಡಿ ಅವರನ್ನು ವ್ಯಸನ ಮುಕ್ತಗೊಳಿಸುತ್ತಿದ್ದಾರೆ.‌‌ 1 ತಿಂಗಳಿಗೆ 180ರಿಂದ 200 ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ.

ಈಗ ಸದ್ಯ ಔಷಧ ಅಂಗಡಿಗಳಲ್ಲಿ ಹಾಗೂ ಆನ್‌ಲೈನ್‌ನಲ್ಲಿ ತಂಬಾಕು ಬಿಡಲು ಕೆಲವೊಂದು ಪದಾರ್ಥಗಳು ಲಭ್ಯವಿವೆ. ಆದರೆ, ಇವುಗಳನ್ನು ನೇರವಾಗಿ ವೈದ್ಯರ ಸಲಹೆ ಇಲ್ಲದೇ ಸೇವಿಸಬಾರದು. ತಂಬಾಕು ವ್ಯಸನಮುಕ್ತ ಕೇಂದ್ರದವರ ಸಲಹೆ ಮೇರೆಗೆ ಸೇವಿಸಬೇಕು ಎಂದು ಅಲ್ಲಿನ ತಜ್ಞರು ಹೇಳುತ್ತಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶ್ರೀನಿವಾಸ್, ‘ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿರುವ ತಂಬಾಕು ವ್ಯಸನಮುಕ್ತ ಕೇಂದ್ರದಲ್ಲಿ ಉಚಿತವಾಗಿ ಚಿಕಿತ್ಸೆ ಲಭ್ಯವಿದೆ. ತಂಬಾಕು ಚಟ ಬಿಡಬೇಕು ಎಂದು ಮನಸ್ಸು ಮಾಡಿದವರು ಇದರ ಪ್ರಯೋಜನ ಪಡೆಯಬಹುದು’ ಎಂದು ಹೇಳಿದರು.

‘ಮೊದಲಿಗೆ ನಾವು ನೇರವಾಗಿ ಆಪ್ತಸಮಾಲೋಚನೆ ಮಾಡುತ್ತೇವೆ. ತಂಬಾಕು ಬಿಡಲು ನೆರವಿಗೆ ಬರುವ ಪದಾರ್ಥಗಳನ್ನು ನೀಡಲು ವ್ಯಕ್ತಿಯ ಆರೋಗ್ಯ ಸ್ಥಿತಿ ನೋಡಿಕೊಂಡು ನಿರ್ಧರಿಸುತ್ತೇವೆ. ಜೊತೆಗೆ, ವ್ಯಕ್ತಿಗೆ ಯಾವ ಬಗೆಯ ತಂಬಾಕಿನ ಚಟ ಇದೆ, ದಿನಕ್ಕೆ ಎಷ್ಟು ಬಾರಿ ತಂಬಾಕು ಸೇವಿಸುತ್ತಾರೆ ಮೊದಲಾದ ಅಂಶಗಳನ್ನು ಪರಿಗಣಿಸಿ ವೈಜ್ಞಾನಿಕವಾಗಿಯೇ ಚಿಕಿತ್ಸೆ ನೀಡುತ್ತೇವೆ’ ಎಂದು ತಿಳಿಸಿದರು.

ಒಮ್ಮೆ ಆಪ‍್ತಸಮಾಲೋಚನೆ ಪಡೆದು ಹೋದ ನಂತರ ಸುಮ್ಮನಾಗದ ಇಲ್ಲಿನ ತಜ್ಞರು ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿಚಾರಿಸುತ್ತಾರೆ. ನೇರವಾಗಿ ಮತ್ತೊಮ್ಮೆ ಆಪ್ತಸಮಾಲೋಚನೆಗೆ ಬಾರಲಾಗದವರಿಗೆ ದೂರವಾಣಿ ಮೂಲಕವೇ ಆಪ್ತಸಮಾಲೋಚನೆ ಮಾಡುತ್ತಾರೆ.

ಈ ಕೇಂದ್ರದಲ್ಲಿ ಆಪ್ತಸಮಾಲೋಚಕರಾಗಿ ಲಿಪಿ ಇದ್ದಾರೆ. ಚಟ ಹೊಂದಿರುವವರಿಗೆ ಮಾನಸಿಕ ಸಮಸ್ಯೆ ಇದ್ದರೆ, ಮಾನಸಿಕ ರೋಗ ತಜ್ಞರಾಗಿ ಡಾ.ಸತೀಶ್ ಮತ್ತು ಡಾ.ರೂಪೇಶ್, ಮನಶಾಸ್ತ್ರಜ್ಞರಾಗಿ ರಮೇಶ್ ಅವರಿಂದ ಚಿಕಿತ್ಸೆ ಕೊಡಿಸುತ್ತಾರೆ. ಈ ಕೇಂದ್ರವು ಜಿಲ್ಲಾಸ್ಪತ್ರೆಯ ಕೊಠಡಿ 14ರಲ್ಲಿ ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತಿದೆ.

ವಿರಾಜಪೇಟೆಯಲ್ಲಿನ ಕೂರ್ಗ್ ದಂತ ವೈದ್ಯಕೀಯ ಕಾಲೇಜಿನಲ್ಲೂ ತಂಬಾಕು ವ್ಯಸನಮುಕ್ತ ಕೇಂದ್ರದಲ್ಲೂ ಉಚಿತ ಆಪ್ತಸಮಾಲೋಚನೆ ಮತ್ತು ಚಿಕಿತ್ಸೆ ಲಭ್ಯವಿದೆ.

ಈ ಕೇಂದ್ರವು ಕೇವಲ ಆಪ್ತಸಮಾಲೋಚನೆಯಲ್ಲದೇ ಎಸ್ಟೇಟ್‌ ಕಾರ್ಮಿಕರಿಗಾಗಿ ಶಿಬಿರ ನಡೆಸುತ್ತಾರೆ. ಬೀದಿ ನಾಟಕ ನಡೆಸಿ, ತಂಬಾಕಿನಿಂದಾಗುವ ದುಷ್ಪರಿಣಾಮಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೇಂದ್ರ ಆಪ್ತಸಮಾಲೋಚಕಿ ಡಾ.ವಿಭಾ, ‘ವಿರಾಜಪೇಟೆಯಲ್ಲಿನ ಕೂರ್ಗ್ ದಂತ ವೈದ್ಯಕೀಯ ಕಾಲೇಜಿನಲ್ಲೂ ತಂಬಾಕು ವ್ಯಸನಮುಕ್ತ ಕೇಂದ್ರದಲ್ಲೂ ಉಚಿತ ಆಪ್ತಸಮಾಲೋಚನೆ, ಚಿಕಿತ್ಸೆ ಇದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದು. ಜೊತೆಗೆ, ನಾವು ಅನೇಕ ಕಡೆ ತಂಬಾಕಿನಿಂದಾಗುವ ದುಷ್ಪರಿಣಾಮಗಳನ್ನು ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT