ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಾಯುಕ್ತರ ವರ್ಗಾವಣೆಗೆ ನಗರಸಭೆ ವಿಶೇಷ ಸಭೆ ಶಿಫಾರಸ್ಸು!

ತಾರಕಕ್ಕೇರಿದ ಮಡಿಕೇರಿ ನಗರಸಭೆ, ಪೌರಾಯುಕ್ತರ ನಡುವಿನ ಮುಸುಕಿನ ಗುದ್ದಾಟ
Published 10 ಜನವರಿ 2024, 8:34 IST
Last Updated 10 ಜನವರಿ 2024, 8:34 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ನಗರಸಭೆಯ ಬಿಜೆಪಿ, ಎಸ್‌ಡಿಪಿಐ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲ 23 ನಗರಸಭೆ ಸದಸ್ಯರು ಪೌರಾಯುಕ್ತ ವಿಜಯ್ ಅವರ ವರ್ಗಾವಣೆಗೆ ಒಕ್ಕೊರಲಿನಿಂದ ನಿರ್ಣಯ ಅಂಗೀಕರಿಸಿದ್ದಾರೆ. ಈ ಮೂಲಕ ಸದಸ್ಯರಿಗೂ ಹಾಗೂ ಪೌರಾಯುಕ್ತರಿಗೂ ಇದುವರೆಗೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ತಾರಕಕ್ಕೇರಿದಂತಾಗಿದೆ.

ನಗರಸಭೆಯ ಎಲ್ಲ ಸದಸ್ಯರೂ ಮಂಗಳವಾರ ವಿಶೇಷ ತುರ್ತು ಸಭೆ ನಡೆಸಿ, ಪೌರಾಯುಕ್ತರ ವರ್ಗಾವಣೆಯ ವಿಷಯವೊಂದನ್ನೇ ಇಟ್ಟುಕೊಂಡು ಚರ್ಚೆ ನಡೆಸಿದರು. ಪಕ್ಷಾತೀತವಾದ ಒಗ್ಗಟ್ಟು ಪ್ರದರ್ಶಿಸಿದ ಎಲ್ಲ ಸದಸ್ಯರೂ, ಒಂದು ಸಾಲಿನ ನಿರ್ಣಯ ಅಂಗೀಕರಿಸಿ, ಪೌರಾಯುಕ್ತರನ್ನು ಕೂಡಲೇ ಬೇರೆಡೆ ವರ್ಗಾವಣೆ ಮಾಡಬೇಕು ಎಂದು ತೀರ್ಮಾನ ಕೈಗೊಂಡರು. ಈ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಿಕೊಡಲೂ ನಿರ್ಧರಿಸಿದರು.

ಸಭೆಯಲ್ಲಿ ಮೊದಲಿಗೆ ನಿರ್ಣಯ ಮಂಡಿಸಿದ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಈ ಕುರಿತು ಸದಸ್ಯರ ಅಭಿಪ್ರಾಯ ಕೋರಿದರು.

ಎಸ್‌ಡಿಪಿಐನ ಅಮಿನ್ ಮೊಯಿಸಿನ್‌ ಮಾತನಾಡಿ, ‘ಈ ವಿಚಾರದಲ್ಲಿ ಚರ್ಚೆ ಮಾಡುವಂತದ್ದು ಏನೂ ಇಲ್ಲ. ಮೊನ್ನೆ ತಾನೆ ಜಿಲ್ಲಾ ಉಸ್ತುವಾರಿ ಸಚಿವರೂ ನಗರಸಭೆಯಲ್ಲಿ ಕೆಲಸಗಳು ಆಗುತ್ತಿಲ್ಲ ಎಂದು ಹೇಳಿದ್ದಾರೆ. ಎಲ್ಲರೂ ಸರ್ವಾನುಮತದ ನಿರ್ಣಯ ಕೈಗೊಂಡು ವರ್ಗಾವಣೆಗೆ ಶಿಫಾರಸ್ಸು ಮಾಡಬೇಕು’ ಎಂದರು. ಇದಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿದರು.

ಎಲ್ಲರೂ ಕೈ ಎತ್ತುವ ಮೂಲಕ ಪೌರಾಯುಕ್ತರನ್ನು ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ನಿರ್ಣಯವನ್ನು ಅಂಗೀಕರಿಸಿದರು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ‘ಖಾತೆ ವರ್ಗಾವಣೆ ಸೇರಿದಂತೆ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿದೆ ಎಂಬ ದೂರುಗಳು ಬರುತ್ತಿದ್ದವು. ಸದಸ್ಯರ ಸಲಹೆ ಆಧರಿಸಿ ವಿಶೇಷ ಸಭೆ ಕರೆದು ಪೌರಾಯುಕ್ತರ ವರ್ಗಾವಣೆ ಮಾಡುವ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು’ ಎಂದು ಹೇಳಿದರು.

‘ಟೆಂಡರ್‌ ಅನ್ನು ನಾವು ಕರೆಯಲು ಆಗದು. ಅದನ್ನು ಅಧಿಕಾರಿಗಳೇ ಕರೆಯಬೇಕು. ಸದಸ್ಯರು ನಿರ್ಣಯ ಕೈಗೊಂಡರೆ ಅದನ್ನು ಅನುಷ್ಠಾನಕ್ಕೆ ತರುವುದು ಅಧಿಕಾರಿಗಳೆ. ಇದು ವಿಳಂಬವಾಗುತ್ತಿರುವುದರಿಂದ ಎಲ್ಲರಿಗೂ ಅಸಮಾಧಾನವಾಗಿದೆ. ನಗರಸಭೆಯಲ್ಲಿ ಆಡಳಿತ ಚೆನ್ನಾಗಿರುವುದರಿಂದಲೇ ಎಲ್ಲ 23 ಸದಸ್ಯರೂ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ’ ಎಂದರು.

ಶೇ 74ರಷ್ಟು ಸಿಬ್ಬಂದಿಯೇ ಇಲ್ಲ!

ಪೌರಾಯುಕ್ತ ವಿಜಯ್ ಸಭೆಯ ನಿರ್ಣಯ ಕುರಿತು ‘ಪ್ರಜಾವಾಣಿ’ ಪೌರಾಯುಕ್ತ ವಿಜಯ್ ಅವರನ್ನು ಸಂಪರ್ಕಿಸಿದಾಗ ಅವರು ‘ನಗರಸಭೆಯಲ್ಲಿ ಶೇ 74ರಷ್ಟು ಸಿಬ್ಬಂದಿ ಕೊರತೆ ಇರುವುದರಿಂದಲೇ ಎಲ್ಲೋ ಕೆಲವೊಂದು ಕೆಲಸಕಾರ್ಯಗಳು ನಿಧಾನಗತಿಯಲ್ಲಿ ನಡೆಯುತ್ತಿವೆ’ ಎಂದು ಹೇಳಿದರು. ‘ಮಡಿಕೇರಿ ನಗರಸಭೆಯ ಇತಿಹಾಸದಲ್ಲೇ ಅತ್ಯಂತ ಹೆಚ್ಚು ₹ 5 ಕೋಟಿಯಷ್ಟು ತೆರಿಗೆಯನ್ನು ಪ್ರಸಕ್ತ ಸಾಲಿನಲ್ಲಿ ಸಂಗ್ರಹಿಸಲಾಗಿದೆ. ‘ಟ್ರೇಡ್ ಲೈಸೆನ್ಸ್‌’ನಲ್ಲಿ ಶೇ 100ರಷ್ಟು ಪ್ರಗತಿ ಸಾಧಿಸಲಾಗಿದೆ. ಸಂಪನ್ಮೂಲ ಕ್ರೋಢೀಕರಣದಲ್ಲಿ ಮುಂದೆ ಇದ್ದೇವೆ’ ಎಂದು ತಿಳಿಸಿದರು. ‘ಈಚೆಗೆ ವಿಧಾನಸೌಧದಲ್ಲಿ ಪೌರಾಡಳಿತ ಸಚಿವರ ನಡೆಸಿದ ಪ್ರಗತಿಪರಿಶೀಲನಾ ಸಭೆಯಲ್ಲಿ ಯಾವುದೇ ಆಕ್ಷೇಪಗಳೂ ವ್ಯಕ್ತವಾಗಲಿಲ್ಲ. ನಗರಸಭೆ ಸದಸ್ಯರು ಏಕೆ ಈ ನಿರ್ಣಯ ಕೈಗೊಂಡರು ಎಂಬುದು ನನಗೆ ತಿಳಿದಿಲ್ಲ. ಕಾನೂನಿನ ಚೌಕಟ್ಟಿನೊಳಗೆ ಸರ್ಕಾರದ ನಿಯಮಗಳಂತೆ ಕಾರ್ಯನಿರ್ವಹಿಸುತ್ತಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT