ಸೋಮವಾರ, ಏಪ್ರಿಲ್ 12, 2021
24 °C
ಬಿಸಿಲಿನ ಧಗೆ ತೀವ್ರ; ಕ್ಷೀಣಿಸುತ್ತಿರುವ ಕಾವೇರಿ ನದಿಯಲ್ಲಿ ನೀರು

ಕೊಡಗು ಪಟ್ಟಣದ ಜನರಿಗೆ ಕುಡಿಯುವ ನೀರಿನ ಅಭಾವ

ರಘು ಹೆಬ್ಬಾಲೆ Updated:

ಅಕ್ಷರ ಗಾತ್ರ : | |

ಕುಶಾಲನಗರ: ಕೊಡಗು ಜಿಲ್ಲೆಯಲ್ಲಿ ಶೀಘ್ರಗತಿಯಲ್ಲಿ ಹಾಗೂ ವಿಸ್ತಾರವಾಗಿ ಬೆಳವಣಿಗೆ ಹೊಂದುತ್ತಿರುವ ನೂತನ ತಾಲ್ಲೂಕು ಕುಶಾಲನಗರ ಪಟ್ಟಣದಲ್ಲಿ ಇದೀಗ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

ಪಟ್ಟಣದಲ್ಲಿ ಹಾದು ಹೋಗುವ ನಾಡಿನ ಜೀವನ ನದಿ ಕಾವೇರಿಯಲ್ಲಿ ಬಿಸಿಲಿನ ಧಗೆಯ ತೀವ್ರತೆಯಿಂದ ನೀರಿನ ಪ್ರಮಾಣ ಕ್ಷೀಣಿಸುತ್ತಿದೆ. ಪಟ್ಟಣದ ಜಲಮಂಡಳಿ ವತಿಯಿಂದ ಕುಶಾಲನಗರವೂ ಸೇರಿದಂತೆ ಮುಳ್ಳುಸೋಗೆ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿದೆ.

ಕುಶಾಲನಗರ ಪಟ್ಟಣದಲ್ಲಿ ವಿಸ್ತಾರವಾಗಿ ಬೆಳವಣಿಗೆ ಹೊಂದುತ್ತಿದ್ದು, 40ಕ್ಕೂ ಹೆಚ್ಚಿನ ಬಡಾವಣೆಗಳನ್ನು ಹೊಂದಿದೆ. ಹೊಸ ಬಡಾವಣೆಗಳಿಗೆ ಇಂದಿಗೂ ಕುಡಿಯುವ ನೀರಿನ ಪೈಪ್‌ಲೈನ್ ವ್ಯವಸ್ಥೆ ಆಗಿಲ್ಲ. ನೂತನವಾಗಿ ಬಡಾವಣೆ ಮಾಡುವಾಗ ಮಾಲೀಕರೇ ಬಡಾವಣೆಯ ಎಲ್ಲ ಕುಟುಂಬಗಳಿಗೂ ಕುಡಿಯುವ ನೀರಿನ ಪೈಪ್ ಅಳವಡಿಸಿ, ಬೋರ್‌ವೆಲ್ ತೆಗೆಸಿ ನೀರು ಪೂರೈಕೆ ಮಾಡಬೇಕು ಎಂಬ ನಿಯಮವಿದೆ. ಆದರೆ, ಬಡಾವಣೆ ಮಾಲೀಕರು ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

ಈಗಲೂ ಅನೇಕ ಬಡಾವಣೆಯಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಲ್ಲ. ಪಟ್ಟಣದಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಜೊತೆಗೆ, ಮುಳ್ಳುಸೋಗೆ ಸೇರಿ ಸುಮಾರು 25 ಸಾವಿರ ಜನಸಂಖ್ಯೆಯನ್ನು ದಾಟುತ್ತಿದೆ. ಜನಸಂಖ್ಯೆ ಆಧಾರದ ಮೇಲೆ ಪ್ರತಿ ನಿತ್ಯ ಸುಮಾರು 40 ಲಕ್ಷ ಲೀಟರ್ ನೀರಿನ ಅಗತ್ಯವಿದೆ. ಆದರೆ, ಜಲಮಂಡಳಿ ವತಿಯಿಂದ ಈಗ ಕೇವಲ 28 ಲಕ್ಷ ಲೀಟರ್ ನೀರು ಪೂರೈಕೆಯಾಗುತ್ತಿದ್ದು, ಇನ್ನು 12 ಲಕ್ಷ ಲೀಟರ್ ನೀರಿನ ಕೊರತೆ ಕಂಡು ಬರುತ್ತಿದೆ. ಜಲಮಂಡಳಿ ಕಚೇರಿ ಬಳಿ ತಲಾ 2.5 ಲಕ್ಷ ಸಾಮರ್ಥ್ಯದ ಎರಡು ಓವರ್ ಹೆಡ್‌ಟ್ಯಾಂಕ್ ಹಾಗೂ ಮುಳ್ಳುಸೋಗೆ ಶಕ್ತಿ ಬಡಾವಣೆಯಲ್ಲಿ 2.5 ಲಕ್ಷ ಹಾಗೂ ನೇತಾಜಿ 1.5 ಲಕ್ಷ ಸಾಮರ್ಥ್ಯ ನೀರಿನ ಓವರ್‌ ಹೆಡ್‌ಟ್ಯಾಂಕ್‌ಗಳು ಮಾತ್ರ ಇವೆ. 65 ಎಚ್.ಬಿ ಹಾಗೂ 25 ಎಚ್.ಬಿ ಮೋಟರ್ ಮೂಲಕ ನೀರು ಶೇಖರಣೆ ಮಾಡಲಾಗುತ್ತಿದೆ.

ನೀರಿನ ಅಗತ್ಯಕ್ಕೆ ಅನುಗುಣವಾಗಿ ಸಂಗ್ರಹ ಟ್ಯಾಂಕ್ ಕೊರತೆಯ ನಡುವೇ ಲಭ್ಯವಿರುವ ಟ್ಯಾಂಕ್‌ಗಳ ಮೂಲಕವೇ ನೀರು ಪೂರೈಸಲಾಗುತ್ತಿದೆ. ಬೇಸಿಗೆ ಅವಧಿಯಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮೂರು ದಿನಗಳಿಗೊಮ್ಮೆ ಎರಡು ತಾಸಿಗಳ ಕಾಲ ನೀರು ಪೂರೈಸಲಾಗುತ್ತಿದೆ.

ಬೇಸಿಗೆ ಅವಧಿಯಲ್ಲಿ ಬಿಸಿಲಿನ ಧಗೆ ತೀವ್ರಗೊಂಡಿದ್ದು, ಜಿಲ್ಲೆಯ ಪ್ರಮುಖ ನೀರಿನ ಮೂಲವಾದ ಕಾವೇರಿ ನದಿಯಲ್ಲಿ ನೀರಿನಲ್ಲಿ ಇಳಿಮುಖವಾಗುತ್ತಿದ್ದು, ಇದರಿಂದ ಜನ - ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಮುನ್ಸೂಚನೆ ಕಂಡುಬರುತ್ತಿದೆ.

ಕಾವೇರಿ ನದಿಯ ದಂಡೆಮೇಲಿರುವ ಬಹುತೇಕ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಏಕೈಕ ಆಸರೆಯಾಗಿದೆ. ನದಿಯನ್ನು ಅವಲಂಬಿಸಿಯೇ ಕುಡಿಯುವ ನೀರಿನ ಯೋಜನೆಗಳು ಕಾರ್ಯಗತವಾಗುತ್ತಿರುವ ಕಾರಣ ಕಾವೇರಿ ಮೇಲೆ ಹೊರೆ ಮತ್ತಷ್ಟು ಹೆಚ್ಚಿದೆ.

ಕೆರೆ–ಕಟ್ಟೆಗಳಿಗೆ ನೀರು ತುಂಬಿಸಲು ಒತ್ತಾಯ

ಬೇಸಿಗೆ ಅವಧಿಯಲ್ಲಿ ಕೆರೆ–ಕಟ್ಟೆಗಳಿಗೆ ನೀರು ತುಂಬಿಸಿ ಜಾನುವಾರುಗಳಿಗೆ ನೀರುಣಿಸುತ್ತಿದ್ದ ಹಾರಂಗಿ ಜಲಾಶಯದಲ್ಲೂ ಕೂಡ ನೀರಿನ ಸಂಗ್ರಹ ಕ್ಷೀಣಿಸಿದೆ. ಜೊತೆಗೆ, ನಾಲೆಗಳಿಗೂ ನೀರು ಹರಿಸುವುದನ್ನು ಸ್ಥಗಿತಗೊಳಿಸಿದೆ. ಇದು ಜನ– ಜಾನುವಾರುಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರಿಂದ ಈ ಬಾರಿ ಬೇಸಿಗೆ ಬೆಳೆಗೂ ನೀರಿಲ್ಲದೇ ರೈತರು ಹನಿ ನೀರಾವರಿಯನ್ನು ಅವಲಂಬಿಸಬೇಕಾದ ಪರಿಸ್ಥಿತಿ ಉಂಟಾಗಿದೆ.

ಅಲ್ಲದೆ, ನದಿಪಾತ್ರದಲ್ಲಿನ ರೈತರು ಕೈಗೊಂಡಿರುವ ಶುಂಠಿ ಕೃಷಿ ಹಾಗೂ ತೋಟಗಳಿಗೆ ಪಂಪ್‌ಸೆಟ್ ಮೂಲಕ ನೀರು ಎತ್ತುವುದು ಕುಡಿಯುವ ನೀರಿನ ಸಮಸ್ಯೆ ಉಲ್ಬಣಕ್ಕೆ ಕಾರಣವಾಗುತ್ತಿದೆ. ಕಾವೇರಿ ನದಿ ದಂಡೆ ಮೇಲಿರುವ ಪ್ರಮುಖ ಪಟ್ಟಣವಾದ ಕುಶಾಲನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಇದರ ಪರಿಹಾರಕ್ಕೆ ಜಿಲ್ಲಾಡಳಿತ ಗ್ರಾಮ ಪಂಚಾಯಿತಿಗಳ ಮೂಲಕ ವ್ಯಾಪಕ ಕ್ರಮ ಕೈಗೊಳ್ಳುತ್ತಿದ್ದರೂ, ಕೆಲ ಗ್ರಾಮಗಳಲ್ಲಿ ನೀರಿನ ಅಭಾವ ಕಾಡುಬರುತ್ತಿದೆ.

ಮರಳು ಚೀಲದ ನೆರವು

ಪ್ರತಿವರ್ಷ ಬೇಸಿಗೆಯಲ್ಲಿ ತಲೆದೋರುವ ಕುಡಿಯುವ ನೀರಿನ‌ ಸಮಸ್ಯೆ ಪರಿಹಾರಕ್ಕೆ ಕಾವೇರಿ ನದಿಗೆ ಅಡ್ಡಲಾಗಿ ಮರಳು ಚೀಲಗಳ ಮೂಲಕ ಬಂಡ್ ನಿರ್ಮಾಣಕ್ಕೆ ಪ.ಪಂ ಕ್ರಮ ಕೈಗೊಂಡಿದೆ.

ಕಳೆದ ವರ್ಷ ಜಲ ಮಂಡಳಿಯಿಂದ ನಿರ್ಮಾಣಗೊಂಡಿದ್ದ ಬಂಡ್‌ನ ಮರಳು ಚೀಲಗಳು ಕುಸಿತಗೊಂಡಿವೆ. ಈಗ ಶೇಖರಣೆ ಆಗಿರುವ ನದಿ ನೀರನ್ನು ಪಟ್ಟಣದ ಜನತೆಗೆ ನೀರು ಪೂರೈಕೆಗೆ ಜಲಮಂಡಳಿ ಕ್ರಮ ಕೈಗೊಂಡಿದೆ.

ಶಾಶ್ವತ ಯೋಜನೆಗೆ ಡಿ.ಪಿ.ಆರ್‌

ಪಟ್ಟಣಕ್ಕೆ ದಿನ 24 ಗಂಟೆಯೂ ನಿರಂತರ ಕುಡಿಯುವ ನೀರಿನ ಯೋಜನೆ ರೂಪಿಸುವ ಉದ್ದೇಶದಿಂದ ಜಲಮಂಡಳಿ ವತಿಯಿಂದ ₹ 85 ಕೋಟಿ ಕ್ರಿಯಾ ಯೋಜನೆಯ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಹಾರಂಗಿ ಜಲಾಶಯದಿಂದ ಕುಡಿಯುವ ನೀರಿನ ಪೂರೈಕೆ ಮಾಡಲು ಯೋಜನೆ ಸಿದ್ಧಪಡಿಸಲಾಗಿದೆ. ಈ ಯೋಜನೆಗೆ ಸರ್ಕಾರ ಮಂಜೂರಾತಿ ನೀಡಿದರೆ, ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆ ಹರಿಸಬಾಹುದಾಗಿದೆ.

ಜಲ್ ಜೀವನ್ ಮಿಷನ್ ಯೋಜನೆ ಅನುಷ್ಠಾನ

ಕೇಂದ್ರ ಸರ್ಕಾರದ ಜಲ್ ಜೀವನ್ ಮಿಷನ್ ಯೋಜನೆ ಅಡಿ ಪಟ್ಟಣದ ಎಲ್ಲ ಮನೆಗಳಿಗೆ ತಲಾ ಮೂರು ನಲ್ಲಿಗಳ ಸೌಲಭ್ಯ ಕಲ್ಪಿಸುವ ಮೂಲಕ ಶುದ್ಧ ಕುಡಿಯುವ ನೀರಿನ ಪೂರೈಕೆ ಕ್ರಮ ಕೈಗೊಳ್ಳಲಾಗಿದ್ದು, ಈ ಯೋಜನೆಗೆ ಕೇಂದ್ರದಿಂದ ₹ 2.5 ಕೋಟಿ ಅನುದಾನ ಬಿಡುಗಡೆಗೊಂಡಿದೆ.

ಅಂತರ್ಜಲ ಕುಸಿತ

ಬಿಸಿಲಿನ ಝಳಕ್ಕೆ ಕೊಳವೆಬಾವಿಗಳು ಬತ್ತಿ ಹೋಗುವ ಅಪಾಯ ಎದುರಾಗಿದೆ. ಪಟ್ಟಣದಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಅಂತರ್ಜಲ ಬಳಕೆ ಹೆಚ್ಚಾಗಿದೆ. ಸುತ್ತಮುತ್ತಲಿನ ಗ್ರಾ.ಪಂಗಳು ಕೂಡ ಕುಡಿಯುವ ನೀರು ಪೂರೈಕೆಗೆ ಕೊಳವೆ ಬಾವಿ ಅವಲಂಬಿಸಲಾಗಿದೆ. ಅಂತರ್ಜಲ ಬಳಕೆ ಮತ್ತು ಮರುಪೂರಣಕ್ಕೆ ಸಂಬಂಧಿಸಿದಂತೆ ಎಚ್ಚತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಆತಂಕ ತಪ್ಪಿದ್ದಲ್ಲ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.