ಉತ್ತಮ ವ್ಯಕ್ತಿಗಳನ್ನು ರೂಪಿಸಲು ಪೂರಕ ವಾತಾವರಣ ನಿರ್ಮಿಸಿ

7
ಪ್ರತಿಭಾಪುರಸ್ಕಾರ ಸಮಾರಂಭದಲ್ಲಿ ಮಂಗಳಾನಂದನಾಥ ಸ್ವಾಮಿ ಸಲಹೆ

ಉತ್ತಮ ವ್ಯಕ್ತಿಗಳನ್ನು ರೂಪಿಸಲು ಪೂರಕ ವಾತಾವರಣ ನಿರ್ಮಿಸಿ

Published:
Updated:
ಕೋಲಾರದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದಿಂದ ಭಾನುವಾರ ನಡೆದ ಪ್ರತಿಭಾಪುರಸ್ಕಾರ ಮತ್ತು ಕೆಂಪೇಗೌಡ ಜಯಂತಿಯಲ್ಲಿ ಭಾಗವಹಿಸಿದ್ದ ಪಲ್ಲಕ್ಕಿಗಳಿಗೆ ಅಭಿನಂದನಾ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಪೀಠಾಧಿಪತಿ ಮಂಗಳಾನಂದನಾಥ ಸ್ವಾಮಿ ಆಶೀರ್ವಚನ ನೀಡಿ ಮಾತನಾಡಿದರು.

ಕೋಲಾರ: ‘ಮಕ್ಕಳು ಒಳ್ಳೆಯ ವ್ಯಕ್ತಿಗಳಾಗಿ ರೂಪುಗೊಳ್ಳಲು ಪೂರಕವಾದ ವಾತಾವರಣವನ್ನು ಪೋಷಕರು ಸೃಷ್ಟಿಸಬೇಕು’ ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಪೀಠಾಧಿಪತಿ ಮಂಗಳಾನಂದನಾಥ ಸ್ವಾಮಿ ಸಲಹೆ ನೀಡಿದರು.

ನಗರದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ವತಿಯಿಂದ ಭಾನುವಾರ ನಡೆದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರಿಕ್ಷೆಯಲ್ಲಿ ಶೇ.95ಕ್ಕಿಂತ ಅತಿಹೆಚ್ಚು ಅಂಕಗಳಿಸಿದ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಕೆಂಪೇಗೌಡ ಜಯಂತಿಯಲ್ಲಿ ಭಾಗವಹಿಸಿದ್ದ ಪಲ್ಲಕ್ಕಿಗಳಿಗೆ ಅಭಿನಂದನಾ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

‘ಮನೆಯಲ್ಲಿ ಹಿರಿಯರು ನಡೆದುಕೊಳ್ಳುವ ರೀತಿ, ನೀತಿ ಮಕಳ ಮೇಲೆ ಪರಿಣಾಮ ಬೀಳುತ್ತವೆ. ಹೀಗಾಗಿ ಸಂಸ್ಕಾರ ಮತ್ತು ಆದರ್ಶಮಯವಾಗಿ ಮಕ್ಕಳ ಎದುರು ನಡೆದುಕೊಂಡರೆ, ಅವರೂ ಸಹ ಅದನ್ನೇ ಅನುಕರಣೆ ಮಾಡುತ್ತಾರೆ’ ಎಂದು ತಿಳಿಸಿದರು.

‘ಕಡಿಮೆ ಅಂಕ ಪಡೆದ ಸಂದರ್ಭದಲ್ಲಿ ಪೋಷಕರು, ಗುರುಗಳು ಬುದ್ಧಿ ಹೇಳುವುದನ್ನು ತಪ್ಪಾಗಿ ತಿಳಿದುಕೊಳ್ಳುವುದಕ್ಕಿಂತ ಮೂರ್ಖತನ ಮತ್ತೊಂದಿಲ್ಲ. ವಿದ್ಯಾರ್ಥಿಗಳು ಚಂಚಲತೆಯ ವಯಸ್ಸಿನಲ್ಲಿ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಸೂಕ್ತ’ ಎಂದು ಸಲಹೆ ನೀಡಿದರು.

‘ಮೊಬೈಲ್, ಟಿವಿಗಳಿಂದಾಗಿ ನಾವು ಕೆಡುತ್ತಿದ್ದೇವೆ ಎನ್ನುವುದು ತಪ್ಪು ಕಲ್ಪನೆ. ಅವುಗಳು ನಮ್ಮನ್ನು ಎಂದಿಗೂ ಆಹ್ವಾನಿಸುವುದಿಲ್ಲ. ಆದರೆ, ಅವುಗಳನ್ನು ಉಪಯೋಗಿಸಿಕೊಳ್ಳುವ ರೀತಿಯನ್ನು ಅರ್ಥ ಮಾಡಿಕೊಳ್ಳದೆ ಕೆಡುತ್ತಿದ್ದು, ತಾಂತ್ರಿಕತೆಯನ್ನು ಬೈಯ್ಯುವುದು ಸರಿಯಲ್ಲ’ ಎಂದು ಹೇಳಿದರು.

‘ಇತ್ತೀಚಿಗೆ ತಾಂತ್ರಿಕತೆಯಿಂದಾಗಿ ಅನೇಕ ಸೌಕರ್ಯಗಳು ನಮಗೆ ಸಿಗುತ್ತಿವೆ. ಅದರಲ್ಲಿ ಒಳ್ಳೆಯದಷ್ಟೆ ಕೆಟ್ಟದ್ದೂ ಇದೆ. ಅದರ ಆಯ್ಕೆ ಉಪಯೋಗಿಸುವವರಿಗೆ ಬಿಟ್ಟ ವಿಚಾರ. ಮಕ್ಕಳಿಗೆ ಮೊಬೈಲ್ ಕೊಡಿಸಿದರೂ ಸಹ ಅವರ ಚಟುವಟಿಕೆಗಳ ಮೇಲೆ ಪೋಷಕರು ಗಮನ ಇಟ್ಟಿರಬೇಕು’ ಎಂದು ಎಚ್ಚರಿಸಿದರು.

‘ಒಕ್ಕಲಿಗ ಸಮುದಾಯದವರು ಭಿನ್ನಾಭಿಪ್ರಾಯಗಳನ್ನು ಮರೆತು ಸಂಘಟಿತರಾಗುವ ಮೂಲಕ ಇತರರಿಗೆ ಮಾದರಿಯಾಗಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು. ‘ಸಮಾಜದಲ್ಲಿ ಎಲ್ಲ ಸಮಾಜಗಳನ್ನು ಒಗೂಡಿಸಿಕೊಂಡು ಜೀವನ ನಡೆಸುವ ಸಮಾಜ ಒಕ್ಕಲಿಗರದ್ದಾಗಿದ್ದು, ಎಂದೂ ಸಹ ಇತರೆ ಸಮುದಾಯಗಳನ್ನು ದೂಷಿಸುವ ಕೆಲಸ ಮಾಡಿಲ್ಲ. ಬೆಂಗಳೂರನ್ನು ನಿರ್ಮಿಸಿದ ನಾಡಪ್ರಭು ಕೆಂಪೇಗೌಡರ ಕೀರ್ತಿ ಯಾರೂ ಮರೆಯುವಂತಿಲ್ಲ’ ಎಂದು ಹೇಳಿದರು.

‘ಬೆಂಗಳೂರನ್ನು ನಿರ್ಮಾಣ ಮಾಡಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಆದರೆ ಎಲ್ಲ ಸಮಾಜದವರು ಜೀವನ ನಡೆಸಿಕೊಳ್ಳಲು ವಿವಿಧ ಪೇಟೆಗಳನ್ನು ವಿಂಗಡಿಸಿದ್ದಾರೆ. ಒಕ್ಕಲಿಗರಿಗೆ ಮಾತ್ರ ಸಿಮೀತವಾಗಿಲ್ಲ. ನೀರಿನ ಅಭಾವದಿಂದ ಸ್ಥಗಿತಗೊಂಡಿರುವ ಒಕ್ಕಲುತನವನ್ನು ಮುಂದವರೆಸಿಕೊಂಡು ಹೋಗಬೇಕಾದ ಅಗತ್ಯವಿದೆ’ ಎಂದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ಶಂಕರಪ್ಪ ಮಾತನಾಡಿ, ‘ರೈತನ ಮೊದಲ ಶತ್ರು ವ್ಯವಸಾಯ ಎಂಬುದು ಇತ್ತೀಚೆಗೆ ಕೇಳಿಬರುತ್ತಿದೆ. ಸಾಲಮನ್ನಾ ಮಾಡುವುದಕ್ಕಿಂತ ಬೆಂಬಲ ಬೆಲೆ ಘೋಷಿಸುವುದು ಸೂಕ್ತ. ಆ ನಿಟ್ಟಿನಲ್ಲಿ ಸರ್ಕಾರಗಳು ಯೋಚಿಸಬೇಕಿದೆ’ ಎಂದು ಮನವಿ ಮಾಡಿದರು.

ಪ್ರತಿಭಾವಂತ ವಿದ್ಯಾರ್ಥಿಗಳ ಜವಾಬ್ದಾರಿ ಹೆಚ್ಚಿದೆ. ಉತ್ತಮ ಫಲಿತಾಂಶ ಪಡೆದವರನ್ನು ಪ್ರೋತ್ಸಾಹಿಸುವ ಜವಾಬ್ದಾರಿ ಸಂಘಸಂಸ್ಥೆಗಳ ಮೇಲಿದೆ. ಅದೇ ರೀತಿ ಸಮಾಜದ ಅಗತ್ಯತೆಗಳನ್ನು ವಿದ್ಯಾರ್ಥಿಗಳು ನೀಡುವಂತಾಗಬೇಕು’ ಎಂದರು. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರಿಕ್ಷೆಯಲ್ಲಿ ಶೇ.95ಕ್ಕಿಂತ ಅತಿಹೆಚ್ಚು ಅಂಕಗಳಿಸಿದ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು ಮತ್ತು ಕೆಂಪೇಗೌಡ ಜಯಂತಿಯಲ್ಲಿ ಭಾಗವಹಿಸಿದ್ದ ಪಲ್ಲಕ್ಕಿಗಳಿಗೆ ಅಭಿನಂದನಾ ಪ್ರಶಸ್ತಿ ವಿತರಿಸಲಾಯಿತು.

ಒಕ್ಕಲಿಗರ ಸಂಘದ ರಾಜ್ಯ ಘಟಕದ ನಿರ್ದೇಶಕರಾದ ರಾಮು, ಎಂ.ಎಲ್.ಸತೀಶ್‌ಕುಮಾರ್, ಕೋಚಿಮುಲ್ ನಿರ್ದೇಶಕ ರಾಮಕೃಷ್ಣೇಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗನಂದ ಕೆಂಪರಾಜು, ಕೃಷಿಕ ಸಮಾಜದ ಜಿಲ್ಲಾ ಘಟಕ ಅಧ್ಯಕ್ಷ ಡಿ.ಎಲ್.ನಾಗರಾಜ್, ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಿಸಪ್ಪಗೌಡ, ಪ್ರಧಾನ ಕಾರ್ಯದರ್ಶಿ ಡಾ.ಕೆಜೆಎಂ ಮೌನಿ, ನಿರ್ದೇಶಕರಾದ ಡಿ.ಕೃಷ್ಣಪ್ಪ, ಅ.ಮು.ಲಕ್ಷ್ಮಿನಾರಾಯಣ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !