ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ ಜಿಲ್ಲೆಯಲ್ಲಿ 600 ಮಂದಿಯಲ್ಲಿ ಕ್ಯಾನ್ಸರ್‌!

ಬಾಯಿ ಕ್ಯಾನ್ಸರ್‌ ಪ್ರಕರಣಗಳೇ ಅಧಿಕ–ತಂಬಾಕು ಪದಾರ್ಥ ತ್ಯಜಿಸುವಂತೆ ಜಾಗೃತಿ
Published 4 ಫೆಬ್ರುವರಿ 2024, 6:44 IST
Last Updated 4 ಫೆಬ್ರುವರಿ 2024, 6:44 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಒಟ್ಟು 650 ಮಂದಿಯಲ್ಲಿ ವಿವಿಧ ಕ್ಯಾನ್ಸರ್‌ ರೋಗ ಪ್ರಕರಣ ಇರುವುದು ಗೊತ್ತಾಗಿದ್ದು, ಆತಂಕ ಮೂಡಿಸಿದೆ.

ಕ್ಯಾನ್ಸರ್‌ನಿಂದ ಈ ಮೊದಲೇ 303 ಮಂದಿ ಚಿಕಿತ್ಸೆ ಪಡೆಯುತ್ತಿದ್ದರೆ, 2023–24ನೇ ಸಾಲಿನಲ್ಲಿ ಈ ವರೆಗೆ ಹೊಸದಾಗಿ 347 ಪ್ರಕರಣಗಳು ಪತ್ತೆಯಾಗಿವೆ.

ಅದರಲ್ಲೂ 317 ಮಂದಿಯಲ್ಲಿ ಬಾಯಿ ಕ್ಯಾನ್ಸರ್‌ ಪ್ರಕರಣಗಳು ಇರುವುದು ಮತ್ತಷ್ಟು ಆತಂಕ ತಂದೊಡ್ಡಿದೆ. 112 ಮಂದಿ ಸ್ತನ ಕ್ಯಾನ್ಸರ್‌ ಹಾಗೂ 221 ಮಂದಿ ಗರ್ಭಕಂಠ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ.

ಕ್ಯಾನ್ಸರ್‌ ಪ್ರಕರಣಕ್ಕೆ ಗಡಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ತಂಬಾಕು ಸೇವನೆ ಪ್ರಮುಖ ಕಾರಣ ಎನ್ನಲಾಗಿದೆ. ವೈದರೇ ಹೇಳುವ ಪ್ರಕಾರ ತಂಬಾಕು ಪದಾರ್ಥ ತ್ಯಜಿಸುವುದರಿಂದ 19 ವಿವಿಧ ರೀತಿಯ ಕ್ಯಾನ್ಸರ್‌ನಿಂದ ಪಾರಾಗಬಹುದು. ಕ್ಯಾನ್ಸರ್‌ಗೆ ಶೇ 35ರಷ್ಟು ಕಾರಣ ತಂಬಾಕು ಸೇವನೆ, ಶೇ 30ರಷ್ಟು ಆಹಾರ ಪದ್ಧತಿ ಎನ್ನಲಾಗುತ್ತಿದೆ. ಆದರೆ, ಈ ಸಂಬಂಧ ಜಿಲ್ಲೆಯಲ್ಲಿ ಯಾವುದೇ ಸಂಶೋಧನೆ ನಡೆದಿಲ್ಲ.‌

ಆರೈಕೆಯ ಅಂತರ ಮುಚ್ಚಿ’ ಎಂಬ ಘೋಷವಾಕ್ಯದೊಂದಿಗೆ ಭಾನುವಾರ (ಫೆ.4) ವಿಶ್ವ ಕ್ಯಾನ್ಸರ್‌ ದಿನ ಆಚರಿಸಲಾಗುತ್ತಿದೆ.

‘ಕ್ಯಾನ್ಸರ್‌ ರೋಗ ಪತ್ತೆಗೆ ಹಾಗೂ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮ ಹಾಗೂ ಜಾಗೃತಿ ನಡೆಸುತ್ತಿದ್ದೇವೆ. ಮನೆಮನೆಗೆ ಭೇಟಿ ನೀಡಿ 30 ವರ್ಷಕ್ಕೆ ಮೇಲಿನ ವ್ಯಕ್ತಿಗಳನ್ನು ಆಶಾ ಕಾರ್ಯಕರ್ತರು ಏನಾದರೂ ಸಮಸ್ಯೆ ಇದೆಯೇ ಎಂದು ಪ್ರಶ್ನೆ ಮೂಲಕ ಮಾಹಿತಿ ಪಡೆಯುತ್ತಿದ್ದಾರೆ. ಸಮಸ್ಯೆ ಇದ್ದರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಪಾಸಣೆ ನಡೆಸಿ ಮುಂದಿನ ಚಿಕಿತ್ಸೆಗೆ ಕ್ರಮ ವಹಿಸಲಾಗುತ್ತಿದೆ’ ಎಂದು ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಘಟಕದ ಅಧಿಕಾರಿ ಡಾ.ಚಾರಿಣಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿರುವ ಬಾಯಿ ಕ್ಸಾನ್ಸರ್‌ ಸೇರಿದಂತೆ ವಿವಿಧ ಕ್ಯಾನ್ಸರ್‌ ಪ್ರಕರಣಗಳಿಗೆ ಇಂಥದ್ದೇ ಅಂಶ ಕಾರಣ ಎಂಬುದಕ್ಕೆ ಯಾವುದೇ ನಿರ್ದಿಷ್ಟ ಸಂಶೋಧನೆ, ಸಮೀಕ್ಷೆ ನಡೆದಿಲ್ಲ’ ಎಂದರು.

‘ಬಿಪಿಎಲ್‌ ಕಾರ್ಡ್‌ದಾರರಿಗೆ ಹಾಗೂ ಶಿಫಾರಸ್ಸು ಮಾಡಿದವರಿಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರೆಯುತ್ತದೆ. ಕೊನೆಯ ಸ್ಟೇಜ್‌ನ ಕ್ಯಾನ್ಸರ್‌ ರೋಗಿಗಳಿಗೆ ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಯಲ್ಲಿ ಆರು ಹಾಸಿಗೆಯ ಉಪಶಮನ ಆರೈಕೆ ಕೇಂದ್ರವಿದೆ’ ಎಂದು ಮಾಹಿತಿ ನೀಡಿದರು.

ತಂಬಾಕು ಪದಾರ್ಥ ಸೇವನೆ ಬಿಡಿ

ಕೋಲಾರ ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಬಾಯಿ–ಗಂಟಲು ಕ್ಯಾನ್ಸರ್‌ ಪ್ರಕರಣಗಳೇ ಹೆಚ್ಚಿವೆ. ಬಹು ಕಾರಣಗಳಿಂದಲೂ ಕ್ಯಾನ್ಸರ್‌ ಬರಬಹುದು. ಆದರೆ, ಪ್ರಮುಖ ಕಾರಣ ತಂಬಾಕು ಪದಾರ್ಥ ಸೇವನೆ. ಇದು ಜಿಲ್ಲೆಯ ಬಹುತೇಕ ಜನರ ಜೀವನದ ಭಾಗವಾಗಿಬಿಟ್ಟಿದೆ. ಹೀಗಾಗಿ, ತಂಬಾಕು, ಧೂಮಪಾನ ಬಿಟ್ಟರೆ ಅರ್ಧದಷ್ಟು ಮಂದಿ ಕ್ಯಾನ್ಸರ್‌ನಿಂದ ಪಾರಾಗಬಹುದು.

ಹೆಚ್ಚಿನವರು ಆಸ್ಪತ್ರೆಗೆ ಮೂರು ಹಾಗೂ ನಾಲ್ಕನೇ ಸ್ಟೇಜ್‌ನ ಕ್ಯಾನ್ಸರ್‌ ಹೊತ್ತು ಬರುತ್ತಾರೆ. ಆಗ ಚಿಕಿತ್ಸೆ ಕಷ್ಟವಾಗುತ್ತದೆ. ಮೊದಲ ಸ್ಟೇಜ್‌ನಲ್ಲಿ ಶಸ್ತ್ರಚಿಕಿತ್ಸೆ ಸಾಕು. 2 ಹಾಗೂ 3ನೇ ಸ್ಟೇಜ್‌ನಲ್ಲಿ ಶಸ್ತ್ರಚಿಕಿತ್ಸೆ ಜೊತೆಗೆ ರೇಡಿಯೊಥೆರಪಿ ಮಾಡಬೇಕಾಗುತ್ತದೆ. 4ನೇ ಸ್ಟೇಜ್‌ ತಲುಪಿದರೆ ಕಿಮಿಯೋಥೆರಪಿ ಮಾಡಬೇಕಾಗುತ್ತದೆ
ಡಾ.ಮಂಜುನಾಥ್‌, ರೆಡಿಯೇಷನ್‌ ಆಂಕೊಲಜಿಸ್ಟ್‌, ದೇವರಾಜು ಅರಸು ವೈದ್ಯಕೀಯ ಕಾಲೇಜು, ಕೋಲಾರ
ಕ್ಯಾನ್ಸರ್‌ ಪತ್ತೆ ವಿಳಂಬದಿಂದ ಹೆಚ್ಚು ಅಪಾಯ ಸಂಭವಿಸುತ್ತಿದೆ. ನಿಗದಿತ ಸಮಯದಲ್ಲಿ ಕ್ಯಾನ್ಸರ್‌ ತಪಾಸಣೆ ಮಾಡಿಸಿಕೊಂಡರೆ ಈ ಕಾಯಿಲೆಯಿಂದ ಮುಕ್ತರಾಗಬಹುದು
ಡಾ.ಚಾರಿಣಿ, ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಘಟಕ, ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT