ಗುರುವಾರ , ಜನವರಿ 27, 2022
27 °C
ಕೊರೊನಾ ಸೋಂಕಿನ ಮಹಾ ಸ್ಫೋಟ: ಸೋಂಕಿತರ ಸಂಖ್ಯೆ 471ಕ್ಕೆ ಜಿಗಿತ

ಜಿಲ್ಲೆಗೆ ‘ಅಮಂಗಳ’ವಾರ: 139 ಮಂದಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲೆಯ ಪಾಲಿಗೆ ಮಂಗಳವಾರವು ‘ಅಮಂಗಳ’ವಾಗಿದ್ದು, ಕೊರೊನಾ ಸೋಂಕಿನ ಮಹಾ ಸ್ಫೋಟವಾಗಿದೆ. ಒಂದೇ ದಿನ 139 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 471ಕ್ಕೆ ಜಿಗಿದಿದೆ.

ಮತ್ತೊಂದೆಡೆ ಕೆಜಿಎಫ್‌ ತಾಲ್ಲೂಕಿನ ಕೊರೊನಾ ಸೋಂಕಿತರೊಬ್ಬರು ಮೃತಪಟ್ಟಿದ್ದು, ಸೋಂಕಿತರ ಸಾವಿನ ಸಂಖ್ಯೆ 647ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಆರೇಳು ತಿಂಗಳಿಂದ ಒಂದೇ ದಿನ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗಿರಲಿಲ್ಲ. ಜ.7ರಂದು 98 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿತು. ಇದೀಗ ಮಂಗಳವಾರ ಸೋಂಕಿನ ಮಹಾ ಸ್ಫೋಟವಾಗಿದ್ದು, ಸೋಂಕಿನ ನಾಗಾಲೋಟಕ್ಕೆ ಜನ ಬೆಚ್ಚಿಬಿದ್ದಿದ್ದಾರೆ.

ಕಳೆದೊಂದು ವಾರದಿಂದ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗಿರುವುದು ಆರೋಗ್ಯ ಇಲಾಖೆಯ ನಿದ್ದೆಗಡೆಸಿದೆ. ಕೋವಿಡ್‌ಗೆ ಚಿಕಿತ್ಸೆ ನೀಡುತ್ತಿರುವ ಜಿಲ್ಲಾ ಕೇಂದ್ರದ ಎಸ್‌ಎನ್‌ಆರ್‌ ಆಸ್ಪತ್ರೆ ಹಾಗೂ ಆರ್‌.ಎಲ್.ಜಾಲಪ್ಪ ಆಸ್ಪತ್ರೆಯು ಸೋಂಕಿತರಿಂದ ಭರ್ತಿಯಾಗುತ್ತಿದ್ದು, ಸೋಂಕಿತರ ಸಂಖ್ಯೆ ಇದೇ ರೀತಿ ಹೆಚ್ಚುತ್ತಾ ಹೋದರೆ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಸೃಷ್ಟಿಯಾಗುವ ಆತಂಕ ಎದುರಾಗಿದೆ.

ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆವರೆಗೆ ಸಕ್ರಿಯ ಸೋಂಕಿತರ ಸಂಖ್ಯೆ 353 ಇತ್ತು. ಜಿಲ್ಲಾ ಕೇಂದ್ರದ ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರ ಪೈಕಿ 21 ಮಂದಿ ಗುಣಮುಖರಾಗಿ ಬೆಳಿಗ್ಗೆಯಷ್ಟೇ ಮನೆಗೆ ಮರಳಿದ್ದರು. ಕೋಲಾರ ತಾಲ್ಲೂಕಿನ 3 ಮಂದಿ, ಮಾಲೂರು ತಾಲ್ಲೂಕಿನ 4 ಮಂದಿ, ಬಂಗಾರಪೇಟೆ ತಾಲ್ಲೂಕಿನ ಇಬ್ಬರು, ಕೆಜಿಎಫ್ ತಾಲ್ಲೂಕಿನ 6 ಮಂದಿ. ಮುಳಬಾಗಿಲು ತಾಲ್ಲೂಕಿನ 5 ಮಂದಿ ಮತ್ತು ಶ್ರೀನಿವಾಸಪುರ ತಾಲ್ಲೂಕಿನ ಒಬ್ಬರನ್ನು ಮನೆಗೆ ಕಳುಹಿಸಲಾಗಿತ್ತು.

ಇದರ ಬೆನ್ನಲ್ಲೇ ಸೋಂಕಿನ ಸುನಾಮಿ ಎದ್ದಿದ್ದು, ಗುಣಮುಖರಾದವರ ಸಂಖ್ಯೆಗೆ ಹೋಲಿಸಿದರೆ ಹೊಸದಾಗಿ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆಯೇ ಹೆಚ್ಚಿದೆ. ಕೋಲಾರ ತಾಲ್ಲೂಕಿನ 52 ಮಂದಿಗೆ, ಮಾಲೂರು ತಾಲ್ಲೂಕಿನ 27 ಮಂದಿಗೆ, ಬಂಗಾರಪೇಟೆ ತಾಲ್ಲೂಕಿನ 14 ಮಂದಿಗೆ, ಕೆಜಿಎಫ್‌ ತಾಲ್ಲೂಕಿನ 13 ಮಂದಿಗೆ, ಮುಳಬಾಗಿಲು ತಾಲ್ಲೂಕಿನ 23 ಮಂದಿಗೆ ಮತ್ತು ಶ್ರೀನಿವಾಸಪುರ ತಾಲ್ಲೂಕಿನ 10 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಈ ಸೋಂಕಿತರ ಮನೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಯಿತು. ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.