ಶುಕ್ರವಾರ, ನವೆಂಬರ್ 22, 2019
20 °C
ಸಾಲ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸಗೌಡ ಮೆಚ್ಚುಗೆ

ಡಿಸಿಸಿ ಬ್ಯಾಂಕ್‌ ದೇಶದ ಗಮನ ಸೆಳೆದಿದೆ

Published:
Updated:
Prajavani

ಕೋಲಾರ: ‘ಡಿಸಿಸಿ ಬ್ಯಾಂಕ್‌ಗೆ ಹಿಂದಿನ ಪರಿಸ್ಥಿತಿ ಬಾರದಂತೆ ಆಡಳಿತ ಮಂಡಳಿ ಎಚ್ಚರ ವಹಿಸಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಸಲಹೆ ನೀಡಿದರು.

ಕಸಬಾ ದಕ್ಷಿಣ ರೇಷ್ಮೆ ಬೆಳೆಗಾರರ ಮತ್ತು ರೈತರ ಸೇವಾ ಸಹಕಾರ ಸಂಘವು ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ಸಾಲದ ಚೆಕ್‌ ವಿತರಿಸಿ ಮಾತನಾಡಿ, ‘ಈ ಹಿಂದೆ ಬ್ಯಾಂಕ್‌ನ ಆರ್ಥಿಕ ಪರಿಸ್ಥಿತಿ ಹದಗೆಡಲು ಕೆಲ ವ್ಯಕ್ತಿಗಳು ಕಾರಣರಾಗಿದ್ದರು. ಆ ವ್ಯಕ್ತಿಗಳು ಮತ್ತೆ ಬ್ಯಾಂಕ್‌ ಪ್ರವೇಶ ಮಾಡದಂತೆ ಆಡಳಿತ ಮಂಡಳಿ ಎಚ್ಚರ ವಹಿಸಬೇಕು’ ಎಂದರು.

‘ನಾನು ಸಹ ಈ ಹಿಂದೆ ಡಿಸಿಸಿ ಬ್ಯಾಂಕ್‌ನ ನಿರ್ದೇಶಕನಾಗಿದ್ದೆ. ಸಹಕಾರಿ ರಂಗದಲ್ಲಿ ರಾಜಕೀಯದಿಂದ ದೂರ ಉಳಿದು ಕೆಲಸ ಮಾಡಿದರೆ ಹೆಚ್ಚಿನ ಸಾಧನೆ ಮಾಡಬಹುದು. ಹಿಂದೆ ಕೆಲ ಮಹಾನುಭವರು ಮಾಡಿದ ತಪ್ಪಿನಿಂದ ಬ್ಯಾಂಕ್‌ಗೆ ಆಡಳಿತಾಧಿಕಾರಿ ನೇಮಕ ಆಯಿತು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಆಡಳಿತಾಧಿಕಾರಿ ನಂತರ ಬಂದ ಹೊಸ ಆಡಳಿತ ಮಂಡಳಿಯ ಪರಿಶ್ರಮದ ಫಲವಾಗಿ ಬ್ಯಾಂಕ್‌ ಆರ್ಥಿಕವಾಗಿ ಚೇತರಿಸಿಕೊಂಡು ಸಾವಿರಾರು ಕೋಟಿ ಸಾಲ ವಿತರಿಸುವ ಶಕ್ತಿ ಪಡೆದಿದೆ. ಈ ಸಾಧನೆಯಿಂದ ಬ್ಯಾಂಕ್‌ ದೇಶದ ಗಮನ ಸೆಳೆದಂತಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಸಹಕಾರಿ ಬ್ಯಾಂಕ್‌ಗಳು ಮಾತ್ರ ಸಂಕಷ್ಟದಲ್ಲಿರುವ ರೈತರ ಹಾಗೂ ಮಹಿಳೆಯರಿಗೆ ನೆರವು ನೀಡುತ್ತವೆ. ವಾಣಿಜ್ಯ ಬ್ಯಾಂಕ್‌ಗಳು ಕೊಟ್ಟ ಸಾಲಕ್ಕಿಂತ ಎರಡು ಪಟ್ಟು ಹೆಚ್ಚು ಬಡ್ಡಿ ವಸೂಲಿ ಮಾಡುತ್ತವೆ. ಆದ ಕಾರಣ ರೈತರು ಹಾಗೂ ಮಹಿಳೆಯರು ಸಾಲಕ್ಕಾಗಿ ಎಂದಿಗೂ ವಾಣಿಜ್ಯ ಬ್ಯಾಂಕ್‌ ಮತ್ತು ಲೇವಾದೇವಿದಾರರ ಬಳಿ ಹೋಗಬಾರದು’ ಎಂದು ಕಿವಿಮಾತು ಹೇಳಿದರು.

ಲಕ್ಷ ಮಂದಿಗೆ ಸಾಲ: ‘ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ಮಹಿಳೆಯರಿಗೆ ಸಾಲ ವಿತರಿಸುವ ಗುರಿಯಿದೆ. ಬ್ಯಾಂಕ್ ವತಿಯಿಂದ ಸಾಲ ವಿತರಣೆಗೆ ಮಿತಿಯಿಲ್ಲ. ಬೇಡಿಕೆ ಬಂದಷ್ಟು ಸಾಲ ಕೊಡುತ್ತೇವೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಭರವಸೆ ನೀಡಿದರು.

‘ಸಾಲದ ಹಣವನ್ನು ಸದುದ್ದೇಶಕ್ಕೆ ಬಳಕೆ ಮಾಡಬೇಕು ಮತ್ತು ಪ್ರಾಮಾಣಿಕವಾಗಿ ಮರುಪಾವತಿ ಮಾಡಬೇಕು. ಕೆಲ ದಲ್ಲಾಳಿಗಳು ಸಾಲ ಕೊಡಿಸುವುದಾಗಿ ಮಹಿಳಾ ಸಂಘಗಳನ್ನು ಸಂಪರ್ಕಿಸುತ್ತಾರೆ. ಅವರನ್ನು ನಂಬಿ ಮೋಸ ಹೋಗಬೇಡಿ’ ಎಂದು ಸಲಹೆ ನೀಡಿದರು.

‘ಈವರೆಗೆ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ₹ 1,200 ಕೋಟಿ ಸಾಲ ನೀಡಲಾಗಿದೆ. ರೈತರು, ಮಹಿಳೆಯರು ಉಳಿತಾಯದ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿಯಿಟ್ಟು, ಮತ್ತಷ್ಟು ಮಂದಿಗೆ ಸಾಲ ನೀಡಲು ನೆರವಾಗಬೇಕು’ ಎಂದು ಮನವಿ ಮಾಡಿದರು.

90 ಸ್ತ್ರೀಶಕ್ತಿ ಗುಂಪುಗಳ ಸದಸ್ಯರಿಗೆ ₹ 4.50 ಕೋಟಿ ಸಾಲ ವಿತರಿಸಲಾಯಿತು. ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸೋಮಣ್ಣ, ಎಂ.ಎಲ್.ಅನಿಲ್‌ಕುಮಾರ್, ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್‌) ನಿರ್ದೇಶಕ ಇ.ಗೋಪಾಲಪ್ಪ, ಕಸಬಾ ದಕ್ಷಿಣ ರೇಷ್ಮೆ ಬೆಳೆಗಾರರ ಮತ್ತು ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಸೀನಪ್ಪ ಹಾಜರಿದ್ದರು.

ಪ್ರತಿಕ್ರಿಯಿಸಿ (+)