ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುನಿವರ್ಸಲ್‌ ಹೆಲ್ತ್‌ ಕಾರ್ಡ್‌ ಪಡೆಯಲು ಗಡುವು ನಿಗದಿ ವದಂತಿ: ನೂಕು ನುಗ್ಗಲು

ಸಾರ್ವತ್ರಿಕ ಆರೋಗ್ಯ ರಕ್ಷಣೆ ಯೋಜನೆ ಸ್ಮಾರ್ಟ್‌ ಕಾರ್ಡ್‌ ಸೌಲಭ್ಯ
Last Updated 29 ಆಗಸ್ಟ್ 2018, 14:06 IST
ಅಕ್ಷರ ಗಾತ್ರ

ಕೋಲಾರ: ಸಾರ್ವತ್ರಿಕ ಆರೋಗ್ಯ ರಕ್ಷಣೆ ಯೋಜನೆಯ ಸ್ಮಾರ್ಟ್‌ ಕಾರ್ಡ್‌ (ಯುನಿವರ್ಸಲ್‌ ಹೆಲ್ತ್‌ ಕಾರ್ಡ್‌) ಪಡೆಯಲು ಗಡುವು ನಿಗದಿಪಡಿಸಲಾಗಿದೆ ಎಂಬ ವದಂತಿ ಹಬ್ಬಿದ್ದು, ಇಲ್ಲಿನ ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆಯಲ್ಲಿ ನೂಕು ನುಗ್ಗಲು ಉಂಟಾಗಿದೆ.

ಯಶಸ್ವಿನಿ, ವಾಜಪೇಯಿ ಆರೋಗ್ಯಶ್ರೀ ಸೇರಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಏಳು ಪ್ರಮುಖ ಆರೋಗ್ಯ ಯೋಜನೆಗಳನ್ನು ಸಾರ್ವತ್ರಿಕ ಆರೋಗ್ಯ ರಕ್ಷಣೆ ಯೋಜನೆ ವ್ಯಾಪ್ತಿಗೆ ತರಲಾಗಿದೆ. ಹಿಂದಿನ ಕಾಂಗ್ರೆಸ್‌ ಸರ್ಕಾರವು ಎಲ್ಲರಿಗೂ ಆರೋಗ್ಯ ರಕ್ಷಣೆ ಒದಗಿಸುವ ಉದ್ದೇಶಕ್ಕಾಗಿ ಮಾರ್ಚ್‌ನಲ್ಲಿ ಈ ಯೋಜನೆ ಜಾರಿಗೊಳಿಸಿತ್ತು.

ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳು, ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬಗಳು ಹಾಗೂ ಸರ್ಕಾರಿ ನೌಕರರು ಸೇರಿದಂತೆ ಎಲ್ಲಾ ವರ್ಗದವರಿಗೂ ಸ್ಮಾರ್ಟ್‌ ಕಾರ್ಡ್ ವಿತರಿಸಲಾಗುತ್ತಿದೆ. ಕಾರ್ಡ್‌ ವಿತರಣೆಗಾಗಿ ಜಿಲ್ಲಾ ಕೇಂದ್ರದ ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ವಿಶೇಷ ಕೌಂಟರ್‌ ತೆರೆಯಲಾಗಿದೆ.

ಆ.31ರವರೆಗೆ ಮಾತ್ರ ಸ್ಮಾರ್ಟ್‌ ಕಾರ್ಡ್‌ ವಿತರಿಸುವುದಾಗಿ ಸರ್ಕಾರ ಆದೇಶ ಹೊರಡಿಸಿದೆ ಎಂಬ ವದಂತಿ ಹಬ್ಬಿದ್ದು, ಕಾರ್ಡ್‌ಗಾಗಿ ಜನ ಆಸ್ಪತ್ರೆಗೆ ಮುಗಿಬಿದ್ದಿದ್ದಾರೆ. ಕೌಂಟರ್‌ಗಳಲ್ಲಿ ದಿನಗಟ್ಟಲೇ ಸಾಲುಗಟ್ಟಿ ನಿಂತು ಕಾರ್ಡ್‌ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ 6 ಕೌಂಟರ್‌ಗಳಿದ್ದು, ದಿನಕ್ಕೆ ಸುಮಾರು 300 ಕಾರ್ಡ್‌ ವಿತರಿಸಲಾಗುತ್ತಿದೆ. ಆದರೆ, ನಿರೀಕ್ಷೆಗೂ ಮೀರಿ ಜನ ಬರುತ್ತಿರುವುದರಿಂದ ಸಿಬ್ಬಂದಿಗೆ ಅವರನ್ನು ನಿಯಂತ್ರಿಸುವುದೇ ದೊಡ್ಡ ಸಮಸ್ಯೆಯಾಗಿದೆ.

ಸರ್ಕಾರ ಭರಿಸುತ್ತದೆ: ಆಧಾರ್‌ ಕಾರ್ಡ್‌ ಹೊಂದಿರುವವರು ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಸರು ನೋಂದಾಯಿಸಿದರೆ ಆರೋಗ್ಯ ಇಲಾಖೆಯಿಂದ ಯುನಿವರ್ಸಲ್‌ ಹೆಲ್ತ್‌ ಕಾರ್ಡ್‌ ನೀಡಲಾಗುವುದು. ಈ ಕಾರ್ಡ್ ಬಳಸಿ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ಲಭ್ಯವಿಲ್ಲದ ಸಂದರ್ಭದಲ್ಲಿ ವೈದ್ಯರು ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಿದರೆ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ.

ಸರ್ಕಾರಿ ನೌಕರರು ಮತ್ತು ಜನಪ್ರತಿನಿಧಿಗಳನ್ನು ಹೊರತುಪಡಿಸಿ ಎಲ್ಲಾ ವರ್ಗ ಹಾಗೂ ಜಾತಿಯವರಿಗೂ ಏಕರೂಪದ ಸ್ಮಾರ್ಟ್‌ ಕಾರ್ಡ್‌ ನೀಡಲಾಗುತ್ತಿದೆ. ಪ್ರಮುಖವಾಗಿ 7 ಗಂಭೀರ ಕಾಯಿಲೆಗಳಿಗೆ ₹ 2 ಲಕ್ಷದವರೆಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು.

ತಾಲ್ಲೂಕಿನಲ್ಲೂ ಆರಂಭ: ‘ಸರ್ಕಾರ ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೊಳಿಸಿದೆ. ಸ್ಮಾರ್ಟ್‌ ಕಾರ್ಡ್‌ ಪಡೆಯಲು ಆ.31 ಕೊನೆ ದಿನವೆಂಬ ವದಂತಿ ಹಬ್ಬಿರುವುದರಿಂದ ಕಾರ್ಡ್‌ಗಾಗಿ ನೂಕು ನುಗ್ಗಲು ಉಂಟಾಗಿದೆ’ ಎಂದು ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ಡಾ.ಹೇಮಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲಾ ಆಸ್ಪತ್ರೆಯಲ್ಲಿ ಸ್ಮಾರ್ಟ್‌ ಕಾರ್ಡ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಹೀಗಾಗಿ ಸದ್ಯದಲ್ಲೇ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಫಲಾನುಭವಿಗಳ ನೋಂದಣಿ ಪ್ರಕ್ರಿಯೆ ಆರಂಭಿಸಲಾಗುತ್ತದೆ. ನಂತರ ಜಿಲ್ಲಾ ಆಸ್ಪತ್ರೆಯಲ್ಲಿ ಒತ್ತಡ ಕಡಿಮೆಯಾಗಲಿದೆ’ ಎಂದು ಹೇಳಿದರು.

ಚಿಕಿತ್ಸಾ ಸೌಲಭ್ಯ: ಯೋಜನೆಯ ಅರ್ಹತಾ ವರ್ಗದ ರೋಗಿಗಳಿಗೆ ನಿಗದಿತ ದ್ವಿತೀಯ ಹಂತದ ಚಿಕಿತ್ಸೆಗಳಿಗೆ ಐದು ಸದಸ್ಯರ ಕುಟುಂಬಕ್ಕೆ ವಾರ್ಷಿಕ ₹ 30 ಸಾವಿರವರೆಗೆ ಚಿಕಿತ್ಸಾ ಸೌಲಭ್ಯವಿದೆ. ನಿಗದಿತ ತೃತೀಯ ಹಂತದ ಚಿಕಿತ್ಸೆಗಾಗಿ ಪ್ಯಾಕೇಜ್‌ ಆಧಾರದಲ್ಲಿ ಕುಟುಂಬಕ್ಕೆ ವಾರ್ಷಿಕ ₹ 1.50 ಲಕ್ಷದವರೆಗೆ ಮತ್ತು ಹಣ ಮುಗಿದ ನಂತರ ತುರ್ತು ಚಿಕಿತ್ಸೆಗಾಗಿ ಹೆಚ್ಚುವರಿಯಾಗಿ ₹ 50 ಸಾವಿರದವರೆಗೂ ಹಣ ಸಿಗಲಿದೆ.


* 59,580 ಮಂದಿಗೆ ಸ್ಮಾರ್ಟ್‌ ಕಾರ್ಡ್‌ ವಿತರಣೆ
* 15 ಲಕ್ಷ ಮಂದಿಗೆ ಕಾರ್ಡ್‌ ವಿತರಿಸುವ ಗುರಿ
* 6 ವಿಶೇಷ ಕೌಂಟರ್‌ಗಳಲ್ಲಿ ನೋಂದಣಿ
* 300 ಮಂದಿಗೆ ನಿತ್ಯ ಕಾರ್ಡ್‌ ವಿತರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT