ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ.ಡಿ ಶೋಧ: ಕಾಗದ ಪತ್ರ, ಹಣ ಕೊಂಡೊಯ್ದರು– ಮಾಲೂರು ಶಾಸಕ ನಂಜೇಗೌಡ ಬೇಸರ

ಕೋಚಿಮುಲ್‌ ನೇಮಕಾತಿ, ದರಖಾಸ್ತು ಸಮಿತಿ, ವಹಿವಾಟಿನ ಬಗ್ಗೆ ವಿಚಾರಿಸಿದರು: ನಂಜೇಗೌಡ
Published 9 ಜನವರಿ 2024, 19:34 IST
Last Updated 9 ಜನವರಿ 2024, 19:34 IST
ಅಕ್ಷರ ಗಾತ್ರ

ಮಾಲೂರು (ಕೋಲಾರ ಜಿಲ್ಲೆ): ‘ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನನ್ನ ಆಸ್ತಿಗೆ ಸಂಬಂಧಿಸಿದ ಕೆಲವೊಂದು ದಾಖಲೆಗಳನ್ನು ಕೊಂಡೊಯ್ದಿದ್ದಾರೆ. ನನ್ನ ತಮ್ಮನ ಮಗಳಿಗೆ ಮಾರ್ಚ್‌ 31 ರಂದು ಮದುವೆ ಇದೆ. ಆಕೆಗೆ ಬಟ್ಟೆ ತರಲು ₹ 16 ಲಕ್ಷ ನಗದು ಮನೆಯಲ್ಲಿತ್ತು. ಅದನ್ನೂ ತೆಗೆದುಕೊಂಡು ಹೋಗಿದ್ದಾರೆ. ಹಣ ಕೊಂಡೊಯ್ಯದಂತೆ ಮನವಿ ಮಾಡಿದೆ. ಆದರೂ ಬಿಡಲಿಲ್ಲ’ ಎಂದು ಕಾಂಗ್ರೆಸ್‌ ಶಾಸಕ ನಂಜೇಗೌಡ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ತಮ್ಮ ನಿವಾಸದಲ್ಲಿ ಮಂಗಳವಾರ ರಾತ್ರಿ 10 ಗಂಟೆಗೆ ಜಾರಿ ನಿರ್ದೇಶನಾಲಯದ (ಇ.ಡಿ) ಶೋಧ ಕೊನೆಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಇ.ಡಿ ಅಧಿಕಾರಿಗಳು ಮೂರು ವಿಚಾರ ಪ್ರಸ್ತಾಪ ಮಾಡಿದ್ದಾರೆ. ಕೋಚಿಮುಲ್‌ ನೇಮಕಾತಿ ಬಗ್ಗೆ ಪ್ರಶ್ನೆ ಕೇಳಿದರು. ಏನು ಕೇಳಿದರೂ ಸಹಕಾರ ನೀಡಿದ್ದೇನೆ. ಮಾಲೂರು ತಾಲ್ಲೂಕಿನ ದರಖಾಸ್ತು ಸಮಿತಿ ಬಗ್ಗೆ ಪ್ರಸ್ತಾಪ ಮಾಡಿದರು. ಅದಕ್ಕೂ ವಿವರಣೆ ಕೊಟ್ಟಿದ್ದೇನೆ. ನನ್ನ ವಹಿವಾಟಿನ ಬಗ್ಗೆ ಕೇಳಿದ್ದು, ಮಾಹಿತಿ ನೀಡಿದ್ದೇನೆ’ ಎಂದರು.

‘ಮನೆಗೆ ಪ್ರವೇಶಿಸಿದ ಇ.ಡಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿ ನಾನು ಸೇರಿದಂತೆ ಕುಟುಂಬದ ಎಲ್ಲರೂ ಸಹಕಾರ ನೀಡಿದ್ದೇವೆ. ನಾನು ಏನೂ ಮಾಡಿಲ್ಲ, ಏನು ಆಗುವುದೂ ಇಲ್ಲ. ಏಕೆ ಬಂದರು ಎಂಬುದನ್ನು ನಾನು ಚರ್ಚೆ ಮಾಡಲು ಹೋಗುವುದಿಲ್ಲ. ಧೈರ್ಯವಾಗಿದ್ದು, ತಾಲ್ಲೂಕಿನ ಜನರಿಗೆ ಅವಮಾನವಾಗುವಂಥದ್ದನ್ನು ಮಾಡಿಲ್ಲ’ ಎಂದು ತಿಳಿಸಿದರು.

‘ಸಾಮಾನ್ಯ ಶಾಸಕನ ಮನೆಗೆ ಇ.ಡಿ ಬಂದು ಶೋಧಿಸಿರುವುದು ನನಗೆ ನೋವುಂಟು ಮಾಡಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮಾಲೂರು ತಾಲ್ಲೂಕಿನ ಜನಸಾಮಾನ್ಯರ ಮಧ್ಯೆ ಬೆಳೆದಿದ್ದೇನೆ. ಯಾರು ಏನೇ ತೊಂದರೆ ಕೊಟ್ಟರೂ, ನನ್ನನ್ನು ಮುಗಿಸಲು ಪ್ರಯತ್ನಿಸಿದರೂ ಜನರು ಹಾಗೂ ದೇವರು ನನ್ನ ಕೈಬಿಡುವುದಿಲ್ಲ. ಹೀಗಾಗಿ, ನನಗೆ ಏನೂ ಆಗುವುದಿಲ್ಲ’ ಎಂದು ಹೇಳಿದರು.

‘ವಿಚಾರಣೆಗೆ ಕರೆದಿದ್ದಾರೆ’

‘ಮುಂದಿನ ದಿನಗಳಲ್ಲಿ ತಿಳಿಸಿದಾಗ ವಿಚಾರಣೆಗೆ ಬರಬೇಕೆಂದು ಹೇಳಿದ್ದಾರೆ. ಯಾವುದೇ ಸಂದರ್ಭದಲ್ಲಿ ಬಂದು ಸಹಕಾರ ನೀಡುವುದಾಗಿ ಹೇಳಿದ್ದೇನೆ’ ಎಂದು ನಂಜೇಗೌಡ ಹೇಳಿದರು. ‘ಇ.ಡಿ ಬಿಟ್ಟು ಯಾವ ರೀತಿ ಕಾಂಗ್ರೆಸ್‌ ಮುಖಂಡರ ಮೇಲೆ ದಾಳಿ ಮಾಡಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ನಾನು ಈಗ ಏನೂ ಮಾತನಾಡಲ್ಲ’ ಎಂದರು. ‘ಈವರೆಗೆ ಕಾಂಗ್ರೆಸ್‌ ಮುಖಂಡರು ನನ್ನನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ನಾನು ಮನೆಯ ಒಳಗಡೆ ಇದ್ದೆ. ಹೆಣ್ಣು ಮಕ್ಕಳು ಅಳುತ್ತಿದ್ದಾರೆ. ಪತ್ನಿ ಸೇರಿದಂತೆ ಎಲ್ಲರಿಗೂ ತುಂಬಾ ನೋವಾಗಿದೆ. ಧೈರ್ಯದಿಂದ ಎದುರಿಸುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT