ವೇಮಗಲ್: ವೇಮಗಲ್ ಪಟ್ಟಣ ವ್ಯಾಪ್ತಿಯ ಪುರಹಳ್ಳಿ ಗ್ರಾಮದ ಯುವ ರೈತ ರೇಷ್ಮೆ ಕೃಷಿಯಲ್ಲಿ ಸಾವಯವ ಕೃಷಿ ಪದ್ಧತಿ ಮತ್ತು ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
ಎಂಬಿಎ ಪದವೀಧರನಾಗಿರುವ ಯುವರೈತ ಬೈರೇಗೌಡ, ಕೈತುಂಬಾ ಹಣ ಸಿಗುವ ಯಾವುದೇ ಕೆಲಸಕ್ಕೆ ಹೋಗದೆ, ತಮ್ಮ ತಂದೆಯ ಮುಖಾಂತರ ಬಂದ ನಾಲ್ಕು ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ನಾಲ್ಕು ಎಕರೆ ಪೈಕಿ ಎರಡು ಎಕರೆಯಲ್ಲಿ ಹಿಪ್ಪುನೇರಳೆ ಸೊಪ್ಪು ಬೆಳೆದು ರೈತರಿಗೆ ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ, ತಿಂಗಳಲ್ಲಿ 500 ಮೊಟ್ಟೆ ಚಾಕಿ ಮಾಡಿ ಮಾಸಿಕ ಲಕ್ಷಕ್ಕೂ ಹೆಚ್ಚು ಲಾಭ ಗಳಿಸುತ್ತಿದ್ದಾರೆ.
ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಯಿಸಿಕೊಂಡಿರುವ ಬೈರೇಗೌಡ ಅವರು ಕೃಷಿಹೊಂಡವನ್ನೂ ನಿರ್ಮಿಸಿಕೊಂಡಿದ್ದಾರೆ. ಇದರಿಂದ ತಾವು ಬೆಳೆದ ಬೆಳೆಗಳಿಗೆ ಹನಿ ನೀರಾವರಿ ಮೂಲಕ ನೀರು ಹಾಯಿಸುತ್ತಿದ್ದಾರೆ. ಎರಡು ಎಕರೆ ವಿಸ್ತೀರ್ಣದಲ್ಲಿ ಸಾವಯವ ಕೃಷಿ ಪದ್ಧತಿ ಮೂಲಕ ಎರಡು ಹಂತದಲ್ಲಿ ಹಿಪ್ಪು ನೇರಳೆ ಸೊಪ್ಪು ಬೆಳೆದಿದ್ದಾರೆ. 10 ಅಡಿಗೆ ಒಂದರಂತೆ ಹಿಪ್ಪು ನೇರಳೆ ಬೆಳೆ ನಾಟಿ ಮಾಡಿದ್ದು, ಒಟ್ಟಾರೆ 830 ಗಿಡಗಳನ್ನು ಬೆಳೆದಿದ್ದಾರೆ. ಹೆಚ್ಚಿನ ಸೊಪ್ಪನ್ನು ರೈತರಿಗೆ ಮಾರಾಟ ಮಾಡುವುದನ್ನೂ ಆದಾಯದ ಮೂಲವಾಗಿಸಿಕೊಂಡಿದ್ದಾರೆ. ರೇಷ್ಮೆ ಕೃಷಿ ಜೊತೆಗೆ ಹೈನುಗಾರಿಕೆ ಮತ್ತು ಕೋಳಿ ಸಾಕಾಣಿಕೆಯನ್ನೂ ಮೈಗೂಡಿಸಿಕೊಂಡಿರುವ ಅವರು ನಾಲ್ಕು ಹಸುಗಳನ್ನು ಸಾಕಿದ್ದಾರೆ. ದಿನಕ್ಕೆ 20 ಲೀಟರ್ ಹಾಲನ್ನು ಮಾರಾಟ ಮಾಡುತ್ತಾರೆ. ತಮ್ಮ ಕೃಷಿ ಭೂಮಿಯಲ್ಲಿ ಕೈತೋಟಗಳನ್ನು ನಿರ್ಮಿಸಿದ್ದು, ಹೀರೇಕಾಯಿ, ನುಗ್ಗೆಕಾಯಿ, ಹಾಗಲಕಾಯಿ, ಸೋರೆ ಕಾಯಿ, ಪಪ್ಪಾಯಿ, ಸೀತಾಫಲ, ಜಂಬ ನೇರಳೆ, ಡ್ರ್ಯಾಗನ್ ಫ್ರೂಟ್ಸ್ ಸೇರಿದಂತೆ ಇನ್ನಿತರ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ಜೊತೆಗೆ ಸಾವಯವ ವಿಧಾನದಲ್ಲಿ ರಾಗಿ ಬೆಳೆದಿದ್ದಾರೆ. ಒಟ್ಟಾರೆ ಮಿಶ್ರತಳಿ ಬೇಸಾಯದ ಮೂಲಕ ಯುವ ರೈತರಿಗೆ ಇವರು ಮಾದರಿ ಯಾಗಿದ್ದಾರೆ.