ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಕಾಮಗಾರಿಯಲ್ಲಿ ಅಕ್ರಮದ ಗುಸು ಗುಸು

ಟೆಂಡರ್‌ ಕರೆಯದೆ ತುಂಡು ಗುತ್ತಿಗೆ ನೀಡಿಕೆ: ಅನುದಾನ ದುರ್ಬಳಕೆ
Last Updated 11 ಜೂನ್ 2020, 14:42 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾ ಪಂಚಾಯಿತಿ ಕಟ್ಟಡ ದುರಸ್ತಿ ಕಾಮಗಾರಿಯನ್ನು ತುಂಡು ಗುತ್ತಿಗೆ ನೀಡಿ ಅಕ್ರಮ ನಡೆಸಿರುವ ಆರೋಪ ಕೇಳಿಬಂದಿದ್ದು, ಲಕ್ಷಾಂತರ ರೂಪಾಯಿ ಸರ್ಕಾರದ ಅನುದಾನ ದುರ್ಬಳಕೆಯಾಗಿದೆ.

ರಾಜ್ಯ ಸರ್ಕಾರವು ಪ್ರತಿ ಹಣಕಾಸು ವರ್ಷದಲ್ಲಿ ಜಿ.ಪಂ ಕಟ್ಟಡ ದುರಸ್ತಿಗೆ ಅನುದಾನ ನೀಡುತ್ತದೆ. ಅದೇ ರೀತಿ ಈ ಬಾರಿಯೂ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಅಭಿವೃದ್ಧಿ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಲಾಗಿತ್ತು.

ಈ ಅನುದಾನವನ್ನು ಜಿ.ಪಂ ಆವರಣದಲ್ಲಿನ ಕಾಮಗಾರಿಗಳಿಗೆ ಮಾತ್ರ ಬಳಸಬೇಕೆಂಬ ನಿಯಮವಿದೆ. ಅನುದಾನ ಬಳಕೆ ಮಾಡದಿದ್ದರೆ ಸರ್ಕಾರಕ್ಕೆ ವಾಪಸ್‌ ಹೋಗುತ್ತದೆ. ಈ ಒಂದು ಕಾರಣಕ್ಕಾಗಿ ಜಿ.ಪಂ ಚುನಾಯಿತ ಮಂಡಳಿಯು ಹಾಗೂ ಅಧಿಕಾರಿಗಳು ಹಿಂದಿನ ವರ್ಷಗಳಲ್ಲಿ ಜಿ.ಪಂ ಕಟ್ಟಡದಲ್ಲಿ ಮಾಡಿದ್ದ ದುರಸ್ತಿ ಕಾಮಗಾರಿಗಳನ್ನೇ ಇದೀಗ ಮತ್ತೊಮ್ಮೆ ಮಾಡಿಸಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಕಟ್ಟಡ ದುರಸ್ತಿಗೆ ಬಿಡುಗಡೆಯಾಗಿದ್ದ ₹ 85 ಲಕ್ಷ ಅನುದಾನಕ್ಕೆ ಟೆಂಡರ್ ಕರೆಯದೆ ಒಂದೇ ಕಟ್ಟಡದಲ್ಲಿ 35 ಕಾಮಗಾರಿಗಳಾಗಿ ವಿಂಗಡಿಸಿ ತುಂಡು ಗುತ್ತಿಗೆ ನೀಡಲಾಗಿದೆ. ಕರ್ನಾಟಕ ಸಾರ್ವಜನಿಕ ಖರೀದಿಗಳಲ್ಲಿ ಪಾರದರ್ಶಕತೆ (ಕೆಟಿಟಿಪಿ) ಕಾಯ್ದೆ ಪ್ರಕಾರ ₹ 2.50 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳನ್ನು ಟೆಂಡರ್ ಮೂಲಕವೇ ನೀಡಬೇಕು.

ಹೀಗಾಗಿ ಟೆಂಡರ್‌ ಪ್ರಕ್ರಿಯೆ ತಪ್ಪಿಸಲು ಪ್ರತಿ ಕಾಮಗಾರಿ ವೆಚ್ಚವನ್ನು ₹ 2.50 ಲಕ್ಷವೆಂದು ತೋರಿಸಿ ಟೆಂಡರ್‌ ಕರೆಯದೆ ದುರಸ್ತಿ ಕಾಮಗಾರಿ ನಡೆಸಲಾಗಿದೆ. ಜಿ.ಪಂನ ಕೆಲ ಪ್ರಭಾವಿ ಸದಸ್ಯರು ತಮ್ಮ ಪರಮಾಪ್ತ ಗುತ್ತಿಗೆದಾರರಿಂದ ಕಾಮಗಾರಿ ಮಾಡಿಸಿದ್ದಾರೆ. ಈ ಬಗ್ಗೆ ಜಿ.ಪಂನ ಕೆಲ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದು, ಅಕ್ರಮದ ಆರೋಪ ಮಾಡಿದ್ದಾರೆ.

ಹೊರಗೆ ಬಳಕೆ: ಜಿ.ಪಂ ಕಟ್ಟಡ ದುರಸ್ತಿ ಅನುದಾನವನ್ನು ಶಾಲೆ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ದುರಸ್ತಿಗೆ ಬಳಸುವಂತೆ ಹಲವು ಸದಸ್ಯರು ಸಭೆಯಲ್ಲಿ ಮನವಿ ಮಾಡಿದ್ದರು. ಆದರೆ, ಅಧಿಕಾರಿಗಳು ಈ ಅನುದಾನವನ್ನು ಜಿ.ಪಂ ಆವರಣದ ಹೊರಗಿನ ಕಾಮಗಾರಿಗಳಿಗೆ ಖರ್ಚು ಮಾಡುವಂತಿಲ್ಲ ಎಂದು ಸಬೂಬು ಹೇಳಿ ಅನುದಾನ ನೀಡಲು ನಿರಾಕರಿಸಿದ್ದರು.

ಆದರೆ, ಅಧಿಕಾರಿಗಲೇ ಇದೀಗ ಸರ್ಕಾರದ ನಿಯಮ ಗಾಳಿಗೆ ತೂರಿ ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಎಂಜಿನಿಯರ್‌ರ ವಸತಿ ಗೃಹದ ದುರಸ್ತಿ ಕಾಮಗಾರಿಗೆ ಅನುದಾನ ಬಳಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT