ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ : ಮುಷ್ಕರದಿಂದ ಹಿಂದೆ ಸರಿದ ನೌಕರರು

Last Updated 27 ಏಪ್ರಿಲ್ 2018, 19:47 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶನಿವಾರ (ಏ.28) ಕರೆ ನೀಡಿದ್ದ ಮುಷ್ಕರದಿಂದ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ನೌಕರರ ಸಂಘ ಹಿಂದೆ ಸರಿದಿದೆ.

ಸಂಘ ಕರೆ ನೀಡಿದ್ದ ಮುಷ್ಕರ ತಡೆ ಹಿಡಿಯುವಂತೆ ಕೋರಿ ಮೆಟ್ರೊ ರೈಲು ನಿಗಮ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಎಲ್. ನಾರಾಯಣ ಸ್ವಾಮಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿದೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 28ರೊಳಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಿ’ ಎಂದು ಬಿಎಂಆರ್‌ಸಿಎಲ್ ಹಾಗೂ ನೌಕರರ ಸಂಘಕ್ಕೆ ಸಲಹೆ ನೀಡಿದ ನ್ಯಾಯಪೀಠ, ‘ನ್ಯಾಯಾಲಯದ ಗಮನಕ್ಕೆ ತಾರದೇ ಯಾವುದೇ ಮುಷ್ಕರಕ್ಕೆ ಕರೆ ನೀಡಬಾರದು’ ಎಂದು ನೌಕರರ ಸಂಘಕ್ಕೆ ಸೂಚಿಸಿ ವಿಚಾರಣೆ ಮುಂದೂಡಿದೆ.

ವಿಚಾರಣೆ ವೇಳೆ ಮೆಟ್ರೊ ನೌಕರರ ಸಂಘದ ಪರ ವಕೀಲರು ವಾದ ಮಂಡಿಸಿ, ‘ಹೈಕೋರ್ಟ್ ಆದೇಶದ ಅನುಸಾರ ಈ ಹಿಂದೆ ಮಾರ್ಚ್‌ 22ರಂದು ಕರೆಯಲಾಗಿದ್ದ ಮುಷ್ಕರವನ್ನು ಹಿಂಪಡೆಯಲಾಗಿತ್ತು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬಿಎಂಆರ್‌ಸಿಎಲ್ ಆಡಳಿತ ಮಂಡಳಿಯೊಂದಿಗೆ ಒಂದು ತಿಂಗಳ ಕಾಲ ಸಭೆಗಳನ್ನೂ ನಡೆಸಲಾಯಿತು. ಆದರೆ ಆ ಸಭೆಗಳು ಸಂಪೂರ್ಣ ವಿಫಲವಾಗಿವೆ. ಶೇ. 10ರಷ್ಟೂ ಬೇಡಿಕೆಗಳು ಈಡೇರಿಲ್ಲ’ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಮುಷ್ಕರ ನಡೆಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತೊಮ್ಮೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ನಿರ್ಧಾರಕ್ಕೆ ಬನ್ನಿ’ ಎಂದು ಸಲಹೆ ನೀಡಿತು.

ಇದಕ್ಕೆ ಒಪ್ಪಿಗೆ ಸೂಚಿಸಿದ ನೌಕರರ ಸಂಘ ಶನಿವಾರ (ಏ.28) ಕರೆ ನೀಡಿದ್ದ ಮುಷ್ಕರದಿಂದ ಹಿಂದೆ ಸರಿಯುವುದಾಗಿ ಕೋರ್ಟ್‌ಗೆ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT